ಇದೊಂದು ಅಗ್ನಿ ಪರೀಕ್ಷೆ…
ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ.
ಬದುಕು ಮತ್ತು ಸಮಾಜ ತುಂಬಾ ಸಂಕೀರ್ಣವಾಗಿರುವಾಗ - ಸಂಪರ್ಕ ಮಾಧ್ಯಮ ಬಹುತೇಕ ಎಲ್ಲರಿಗೂ ಲಭ್ಯವಿರುವಾಗ ಯಾವುದನ್ನಾದರೂ ಮುಚ್ಚಿಡುವುದು ತುಂಬಾ ಕಷ್ಟ. ನಮಗೆ ಸಂಬಂಧಿಸಿಲ್ಲದ, ನಾವು ಅದರಲ್ಲಿ ಪಾಲುದಾರರಲ್ಲದ, ಅದಕ್ಕೆ ನಾವು ಅರ್ಹರು ಅಲ್ಲದ ವಿಷಯಗಳಲ್ಲಿ ಪ್ರಾಮಾಣಿಕತೆಯ ಬಗ್ಗೆ ಸಾಕಷ್ಟು ಮಾತನಾಡಬಹುದು. ಅಪ್ರಾಮಾಣಿಕರ ಬಗ್ಗೆ ಟೀಕಿಸುತ್ತಾ ಸಾಕಷ್ಟು ಪುಟಗಳನ್ನು ಬರೆಯಬಹುದು. ಸಲಹೆಗಳನ್ನು - ಶಿಕ್ಷಿಸುವ ವಿಧಾನಗಳಿಗಾಗಿ ಹೋರಾಟ ಮಾಡಬಹುದು. ಆದರೆ ವಾಸ್ತವದಲ್ಲಿ ನಾವು ಆ ಸ್ಥಾನದಲ್ಲಿ ಇರುವಾಗ ಎಷ್ಟು ಪ್ರಾಮಾಣಿಕತೆ ಉಳಿಸಿಕೊಳ್ಳಲು ಸಾಧ್ಯ ಎಂಬುದೇ ಒಂದು ಪ್ರಾಮಾಣಿಕತೆಯ ಪ್ರಾಯೋಗಿಕ ಅವಲೋಕನ. ಅದನ್ನು ಉದಾಹರಣೆಗಳ ಸಹಿತ ವಿವರಣೆ ನೀಡಬೇಕಾಗಿದೆ.
ಈಗಿನ ವಾತಾವರಣದಲ್ಲಿ ಪ್ರಾಮಾಣಿಕವಾಗಿ ಉಳಿಯಬೇಕು ಎನ್ನುವುದೇ ಅತ್ಯಂತ ಕಠಿಣ. ಅಪ್ರಾಮಾಣಿಕರಾಗುವುದು ಖಂಡಿತ ಸುಲಭ. ನಾವು ಸರ್ಕಾರಿ ಅಧಿಕಾರಿ ಅಥವಾ ಅಧಿಕಾರ ಇರುವ ರಾಜಕಾರಣಿ ಅಥವಾ ಲಂಚ ಸ್ವೀಕರಿಸುವ ಯಾವುದೇ ಹುದ್ದೆ ಅಥವಾ ಪರಿಸ್ಥಿತಿಯಲ್ಲಿ ಇಲ್ಲದಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡಬಹುದು. ಒಂದು ವೇಳೆ ನಾವೇ ಆ ಸ್ಥಾನದಲ್ಲಿ ಇರುವಾಗ ಯಾವ ರೀತಿ ವರ್ತಿಸಬಹುದು ಎಂಬ ಆತ್ಮಾವಲೋಕನ ಮಾಡಿಕೊಂಡಾಗ ಭ್ರಷ್ಟಾಚಾರಕ್ಕೆ ಒಂದು ಪರಿಹಾರ ದೊರಕಬಹುದು. ಅದೇ ಪ್ರಾಯೋಗಿಕ ಅವಲೋಕನ.
ಪರಿಸರ ಜಾಗೃತಿಯ ಬಗ್ಗೆ ಹೋರಾಟ ಮಾಡುವ ನಾವು ಕೆಲವು ಸಂದರ್ಭ ಸನ್ನಿವೇಶಗಳಲ್ಲಿ ನಮಗೆ ಹೆಚ್ಚು ಲಾಭವಾಗುತ್ತದೆ ಎನ್ನುವಾಗ ಪರಿಸರ ನಾಶಕ್ಕೆ ಕಾರಣವಾಗುತ್ತೇವೆ. ಅದಕ್ಕೆ ಬುದ್ದಿ ಪೂರ್ವಕ ಸಮರ್ಥನೆಯನ್ನು ಮಾಡಿಕೊಳ್ಳುತ್ತೇವೆ. ಇದನ್ನು ಎದುರಿಸುವುದು ಹೇಗೆ ಎಂಬುದೇ ಪ್ರಾಯೋಗಿಕ ಅವಲೋಕನ.
ತಟ್ಟೆ ಅಥವಾ ಎಲೆಯಲ್ಲಿ ಆಹಾರ ವ್ಯರ್ಥ ಮಾಡುವ ಬಗ್ಗೆ ಸದಾ ಮಾತನಾಡುವ ನಾವು ಕೆಲವು ಸಲ ಅನೇಕ ಕಾರಣಗಳಿಗಾಗಿ ಉದ್ದೇಶ ಪೂರ್ವಕವಲ್ಲದೆ ನಿರ್ಲಕ್ಷ್ಯದಿಂದ ಆಹಾರ ಪೋಲು ಮಾಡುತ್ತೇವೆ. ಇದು ಆಗಾಗ ನೆನಪಾಗಿ ನಮ್ಮನ್ನು ಚುಚ್ಚುತ್ತದೆ. ಆಗ ಅದನ್ನು ಪರಿಹರಿಸಿಕೊಳ್ಳುವುದು ಹೇಗೆ, ಅದೇ ಪ್ರಾಮಾಣಿಕತೆಯ ಪ್ರಾಯೋಗಿಕ ಅವಲೋಕನ.
ಹಣ ಅಧಿಕಾರ ಪ್ರಶಸ್ತಿ ಪ್ರಚಾರ ಸನ್ಮಾನಗಳಿಗೆ ನಾವು ಮಾರಾಟವಾಗುವುದಿಲ್ಲ ಎಂದು ಪ್ರಾರಂಭದ ಹಂತದಲ್ಲಿ ಹೇಳುವ ನಾವು ಅದು ಸಿಗುವ ಸಮಯ ಬಂದಾಗ ನಮ್ಮ ಮನಸ್ಸಿಗೇ ರಾಜಿ ಮಾಡಿಸಿ ಅದನ್ನು ಸ್ವೀಕರಿಸಿ ಅನುಭವಿಸುವ ಸಾಧ್ಯತೆಯೇ ಹೆಚ್ಚು. ಅದನ್ನು ಮೀರುವ ಪ್ರಯತ್ನವೇ ಪ್ರಾಮಾಣಿಕತೆಯ ಪ್ರಾಯೋಗಿಕ ಅವಲೋಕನ. ಹೀಗೆ ಅನೇಕ ಘಟನೆಗಳು ನಮ್ಮ ಪ್ರಾಮಾಣಿಕತೆಯ ಪರೀಕ್ಷೆಗಳಿಗೆ ಸವಾಲು ಒಡ್ಡುತ್ತದೆ. ಹಾಗೆಯೇ ನಮ್ಮನ್ನು ಪ್ರೋತ್ಸಾಹಿಸುವ ಜನರು ಕೂಡ ತುಂಬಾ ಬೇಗ ಮತ್ತು ವೇಗವಾಗಿ ಯಾವುದೋ ಒಂದು ಸಣ್ಣ ಪ್ರಮಾದವನ್ನೇ ದೊಡ್ಡದು ಮಾಡಿ ನಮ್ಮ ಒಟ್ಟು ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾರೆ. ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುದೇ ಪ್ರಾಯೋಗಿಕ ಅವಲೋಕನ.
ಸಾಮಾಜಿಕ ಪರಿವರ್ತನೆಯ ಹೋರಾಟದಲ್ಲಿ ಪ್ರಾಮಾಣಿಕತೆಯ ಬಗ್ಗೆ ಮಾತನಾಡಲೇ ಬೇಕಾಗುತ್ತದೆ. ಆದರೆ ಸಂಪೂರ್ಣ ಪ್ರಾಮಾಣಿಕತೆ ಅತ್ಯಂತ ಕಠಿಣ ಮತ್ತು ಹುಚ್ಚುತನ. ಅಲ್ಲದೆ ಆ ಕಠಿಣ ಪ್ರಾಮಾಣಿಕತೆ ಗುರಿ ಸಾಧನೆಗೆ ಅಡ್ಡಿಯೂ ಆಗಬಹುದು. ಏಕೆಂದರೆ ಕಾಠಿಣ್ಯ ಗುಣದಿಂದ ಹೊಂದಾಣಿಕೆ ಅಸಾಧ್ಯ. ಅದು ವಾಸ್ತವದಿಂದ ತುಂಬಾ ದೂರ. ಆದರೂ ಪ್ರಾಮಾಣಿಕತೆಯಿಂದಲೇ ಹೋರಾಟ ಮಾಡಬೇಕು. ಅಪ್ರಾಮಾಣಿಕತೆಯನ್ನು ಜನ ಒಪ್ಪುವುದಿಲ್ಲ. ಅದು ಹೇಗೆ ಎಂಬುದೇ ಪ್ರಾಯೋಗಿಕ ಅವಲೋಕನ.
ಪ್ರಾಮಾಣಿಕವಾಗಿರುವವರು ಬದುಕನ್ನು ಹೆಚ್ಚು ಸರಳಗೊಳಿಸಿಕೊಳ್ಳಬೇಕು. ಸರಳ ಜೀವನ ಪಾಲನೆಯಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳಲು ಹೆಚ್ಚು ಅವಕಾಶ ಇರುತ್ತದೆ. ಮನುಷ್ಯ ಸಂಬಂಧಗಳನ್ನು ಗಾಢವಾಗಿ ಪ್ರೀತಿಸುವ ಅಥವಾ ದ್ವೇಷಿಸುವ ಹಂತಕ್ಕೆ ಕೊಂಡೊಯ್ಯಬಾರದು. ಅದು ಯಾವುದೇ ಆಗಿರಲಿ ಒಂದು ಮಿತಿಯಲ್ಲಿಯೇ ಅದನ್ನು ನಿಯಂತ್ರಿಸಬೇಕು. ಬದುಕಿನಲ್ಲಿ ಜೆಚ್ವಿನ ನಿರೀಕ್ಷೆ ಇಟ್ಟುಕೊಳ್ಳಬಾರದು. ಮಹತ್ವಾಕಾಂಕ್ಷೆ ಇದ್ದರೂ ಜೊತೆಯಲ್ಲಿಯೇ ದಿವ್ಯ ನಿರ್ಲಕ್ಷ್ಯ ಸಹ ಹೊಂದಿರಬೇಕು.
ಜನರ ಅಭಿಪ್ರಾಯಗಳ ಬಗ್ಗೆ ಗೌರವ ಇರಬೇಕು ಮತ್ತು ಅದೇ ಸಮಯದಲ್ಲಿ ಜನರ ತಿಳಿವಳಿಕೆ ಹಾಗು ಅವರ ಪ್ರತಿಕ್ರಿಯೆಗಳ ಮಿತಿಯನ್ನು ಅರ್ಥಮಾಡಿಕೊಂಡು ಸ್ಥಿತಿ ಪ್ರಜ್ಞೆತೆ ಬೆಳೆಸಿಕೊಳ್ಳಬೇಕು. ಉದ್ದೇಶ ಪೂರ್ವಕವಲ್ಲದ, ಅನಿವಾರ್ಯ ಮತ್ತು ಆಕಸ್ಮಿಕ ಘಟನೆಗಳಲ್ಲಿ ಅಪ್ರಾಮಾಣಿಕತೆ ಸಂಭವಿಸಬಹುದು ಅಥವಾ ಹಾಗೆ ನಡೆದುಕೊಳ್ಳಬಹುದು. ಅದನ್ನು ಗುರುತಿಸುವ ಸ್ನೇಹಿತರು ಅಥವಾ ಟೀಕಾಕಾರರು ಅದನ್ನೇ ದೊಡ್ಡದು ಮಾಡಿ ನಮ್ಮ ನೈತಿಕತೆಯನ್ನು ಕುಗ್ಗಿಸಲು ಪ್ರಯತ್ನಿಸಬಹುದು. ಇದು ಅತ್ಯಂತ ಕಠಿಣ ಸವಾಲು.
ಆಗ ನಾವು ಮಾಡಬಹುದಾದ ಒಂದು ಪ್ರಯತ್ನವೆಂದರೆ, ಪ್ರಾಮಾಣಿಕತೆ ಎಂಬುದು ಒಂದು ದೀರ್ಘಕಾಲದ ಜೀವನಶೈಲಿ. ಕ್ಷಣಿಕವಾಗಿ ಯಾವುದೋ ಒಂದು ಸಂದರ್ಭದಲ್ಲಿ ಆಗಿರಬಹುದಾದ ತಪ್ಪುಗಳನ್ನು ಜನ ಮಾತನಾಡಿಕೊಂಡಾಗ ಅದು ಜನರ ಅಪ್ರಬುದ್ದತೆಯನ್ನು ತೋರಿಸುತ್ತದೆ. ಆತುರವನ್ನು ಹೇಳುತ್ತದೆ. ಆಗ ಮೌನವಾಗಿ ಸಹಿಸಿಕೊಳ್ಳಬೇಕು. ಮತ್ತೊಂದು ಅವಕಾಶ ದೊರೆತಾಗ ನಮ್ಮ ನಿಜವಾದ ಪ್ರಾಮಾಣಿಕತೆ ಖಂಡಿತ ಅವರಿಗೆ ಅರ್ಥವಾಗುತ್ತದೆ. ಅಲ್ಲಿಯವರೆಗೂ ಕಾಯುವ ತಾಳ್ಮೆ ನಮ್ಮದಾಗಬೇಕು.
ಇದರ ಒಟ್ಟು ಸಾರಾಂಶ ಅಪ್ರಾಮಾಣಿಕತೆಯ ಸಮರ್ಥನೆಯಲ್ಲ. ಆದರೆ ಬದುಕಿನ ದೀರ್ಘ ಪಯಣದಲ್ಲಿ ಕೆಲವೊಮ್ಮೆ ಆಕಸ್ಮಿಕವಾಗಿ ಮತ್ತು ಉದ್ದೇಶ ಪೂರ್ವಕವಲ್ಲದ ತಪ್ಪುಗಳು ಸಂಭವಿಸಿದಾಗ ನಾವು ಕುಗ್ಗದೇ, ಕೀಳರಿಮೆ ಬೆಳೆಸಿಕೊಳ್ಳದೇ ಇನ್ನಷ್ಟು ಧೈರ್ಯವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರಾಯೋಗಿಕ ಅವಲೋಕನ ಮಾಡಿಕೊಳ್ಳಬೇಕು ಎಂಬ ಆತ್ಮ ಸ್ಥೈರ್ಯ ಮಾತ್ರ ಈ ಅಭಿಪ್ರಾಯ.
ಪ್ರಾಮಾಣಿಕತೆ ಎಲ್ಲಕ್ಕಿಂತ ಶ್ರೇಷ್ಠ. ಆದರೆ ನಮ್ಮ ಹೋರಾಟಕ್ಕೆ ಅದೇ ಮುಳುವಾಗಬಾರದು. ಏಕೆಂದರೆ ನಮ್ಮ ಪ್ರಾಮಾಣಿಕತೆಯ ಸೋಲನ್ನು ಬಹಳಷ್ಟು ಜನ ನಿರೀಕ್ಷಿಸುತ್ತಿರುತ್ತಾರೆ. ಅದನ್ನು ಗೆಲ್ಲಲು ಪ್ರಾಯೋಗಿಕ ಅವಲೋಕನದ ಮಹತ್ವ ಸಾರುವ ಒಂದು ಪ್ರಯತ್ನ ಈ ಲೇಖನ. ನಿಜವಾದ ಪ್ರಾಮಾಣಿಕತೆ ದೀರ್ಘಕಾಲದಲ್ಲಿ ಖಂಡಿತ ಗೆದ್ದೇ ಗೆಲ್ಲುತ್ತದೆ ಅದು ನಿಜವೇ ಆಗಿದ್ದಲ್ಲಿ.
ನೀವು ನಿಜವಾದ ಪ್ರಾಮಾಣಿಕರೇ ಆಗಿದ್ದರೆ ಧೈರ್ಯವಾಗಿ ಮುನ್ನುಗ್ಗಿ. ಜಯ ನಿಮ್ಮದಾಗುತ್ತದೆ. ಇಲ್ಲಿ ಸೋಲಿಗೆ ಅವಕಾಶವೇ ಇಲ್ಲ. ಪ್ರಾಮಾಣಿಕತೆ ಒಂದು ಜೀವನ ವಿಧಾನ. ಅದಕ್ಕೆ ಯಾವುದೇ ಮುಖವಾಡ ಇಲ್ಲ. ಪ್ರಾಮಾಣಿಕತೆಯ ಹೊರತಾಗಿ. ಎಡವಬಹುದು ಆದರೆ ಬೀಳುವುದಿಲ್ಲ.
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ