ಇದೊಂದು ನಾಚಿಕೆಗೆಟ್ಟ ವ್ಯವಹಾರ !

ಇದೊಂದು ನಾಚಿಕೆಗೆಟ್ಟ ವ್ಯವಹಾರ !

" ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ " ದಾಸ ಕೀರ್ತನೆ ನೆನಪಾಗುತ್ತಿದೆ. ಈ ಕ್ಷಣಕ್ಕೆ ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಸಭಾಪತಿ, ಮಾಜಿ ಮುಖ್ಯಮಂತ್ರಿಯೊಬ್ಬರು ನೆನಪಾದರು. ಇಲ್ಲಿ ಹೆಸರು ನಗಣ್ಯ. ಇತ್ತೀಚಿನ ವರ್ಷಗಳಲ್ಲಿ ಇದು ಎಲ್ಲಾ ಪಕ್ಷಗಳಲ್ಲಿ ಅತ್ಯಂತ ಸಾಮಾನ್ಯ ವಿಷಯ. ಅಷ್ಟು ದೊಡ್ಡ ಎತ್ತರದ, ಮುಖ್ಯವಾಹಿನಿಯ ವ್ಯಕ್ತಿಯೊಬ್ಬರು ತಮ್ಮ ಸುಮಾರು 67-68 ನೆಯ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿ ಈ ರೀತಿಯ ನಡವಳಿಕೆ ಪ್ರದರ್ಶಿಸಿದರೆ ಸಾಮಾನ್ಯ ಮತದಾರರ ವರ್ತನೆ ಹೇಗೆ ಇರಬೇಕು ಎಂದು ನಿರೀಕ್ಷಿಸುವುದು?

ಹೆಂಡತಿಗೆ ಮಾತು ಕೊಟ್ಟ ಕಾರಣಕ್ಕೆ ದಶರಥ, ಅಪ್ಪನ ಮಾತಿನ ಕಾರಣಕ್ಕಾಗಿ ಶ್ರೀರಾಮ, ಗಂಡನ ಹಿತ ರಕ್ಷಣೆಗಾಗಿ ಸೀತೆ, ಅಣ್ಣನ ನೆರಳಾಗಿ ಲಕ್ಷಣ, ಕೊಟ್ಟ ಮಾತು ಉಳಿಸಿಕೊಂಡ ಭರತ, ಸ್ವಾಮಿ ನಿಷ್ಠೆಯ ಹನುಮಂತ ಇಂತಹ ಅಪೂರ್ವ ಆದರ್ಶದ ರಾಮಾಯಣದ ಬಾಲರಾಮನ ಪ್ರಾಣ ಪ್ರತಿಷ್ಟೆಯ ದೃಶ್ಯಗಳು ಇನ್ನೂ ಹಸಿಹಸಿಯಾಗಿ ಕಣ್ಣ ಮುಂದೆ ಇರುವಾಗಲೇ ಎರಡೂ ಪಕ್ಷಗಳ ವಿಶ್ವಾಸಕ್ಕೆ ನೇರವಾದ ದ್ರೋಹ.

ಅಪ್ಪನ ಕಾಲದಿಂದಲೂ ಅತ್ಯಂತ ನಿಷ್ಠಾವಂತ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಬೆಳೆದವರು ಅಧಿಕಾರ ಮತ್ತು ಪಕ್ಷದೊಳಗಿನ ಭಿನ್ನಾಭಿಪ್ರಾಯದ ಕಾರಣದಿಂದ‌ ಪಕ್ಷ ತೊರೆದರು. ಕಾಂಗ್ರೆಸ್ ನಾಚಿಕೆ ಇಲ್ಲದೇ ತನ್ನ ಅಧಿಕಾರ ದಾಹದ ಕಾರಣದಿಂದಾಗಿ ಪಕ್ಷಕ್ಕೆ ಅದ್ದೂರಿ ಸ್ವಾಗತ ನೀಡಿತು. ಸೋತರು ತನ್ನ ಕಾರ್ಯಕರ್ತರನ್ನು ವಂಚಿಸಿ ವಿಧಾನ ಪರಿಷತ್   ಸದಸ್ಯರನ್ನಾಗಿ ಮಾಡಿತು. ಕೇವಲ ಒಂಬತ್ತೇ ತಿಂಗಳಲ್ಲಿ ಮತ್ತೆ ನಿಷ್ಠೆ ಬದಲಾವಣೆ. ರಾತ್ರೋರಾತ್ರಿ ಬಿಜಿಪಿ ಸಹ ನಾಚಿಕೆ ಇಲ್ಲದೇ ಮತ್ತೆ ಕೆಂಪು ಹಾಸಿನ ಸ್ವಾಗತ. ಇದೇ ಪ್ರಜಾಪ್ರಭುತ್ವ. ಆದರ್ಶಗಳು ಅಕ್ಷರಗಳಲ್ಲಿ, ಮಾತುಗಳಲ್ಲಿ, ಶಿಲೆಗಳಲ್ಲಿ ಮಾತ್ರವೇ ಅಥವಾ ನಿತ್ಯ ಬದುಕಿನ ಪ್ರಯೋಗಗಳಲ್ಲಿ ವಾಸ್ತವವಾಗಬೇಕೆ?

ಮಾಧ್ಯಮಗಳು ಇದನ್ನು ವಿಶ್ಲೇಷಿಸುವುದು ಇನ್ನೊಂದು ರೀತಿಯ ಅನಾಚಾರ. ಕಾಂಗ್ರೆಸ್ ಶಾಕ್ ಬಿಜೆಪಿ ರಾಕ್ಸ್. ಅದರ ಹಿಂದಿನ ಕೈವಾಡ ಯಾರು,  ಹೀಗೆ ಏನು ಭಾಷೆ ಏನು ಏನು ಚರ್ಚೆ. ಇದರಿಂದ ಆಗಬಹುದಾದ ಪರಿಣಾಮಗಳು ಏನಿರಬಹುದು. ಬಿಜೆಪಿಗೆ ಒಂದಷ್ಟು ಮತಗಳ ಲಾಭವಾಗಬಹುದು, ಆ ರಾಜಕಾರಣಿಗೆ ಬೆಳಗಾವಿಯ ಲೋಕಸಭಾ ಟಿಕೆಟ್ ಸಿಗಬಹುದು, ಕಾಂಗ್ರೆಸ್ ಗೆ ಸ್ವಲ್ಪ ನಷ್ಟವಾಗಬಹುದು. ಅವರ ವಿಧಾನ ಪರಿಷತ್ತಿನ‌ ಇ‌ನ್ನುಳಿದ ಅವಧಿಗೆ ಕಾಂಗ್ರೆಸ್‌ ಪಕ್ಷದ ಒಬ್ಬರಿಗೆ ಆ ಸ್ಥಾನ ಸಿಗಬಹುದು. ಈ ಎಲ್ಲವೂ ವ್ಯಕ್ತಿ ಅಥವಾ ಪಕ್ಷದ ಲಾಭ ನಷ್ಟಗಳು. ಆದರೆ ಸಮಾಜದ, ದೇಶದ, ಸಂವಿಧಾನದ, ಮತದಾರರ ಮೌಲ್ಯಗಳು ಮೇಲೆ ಇದು ಬೀರುವ ಪರಿಣಾಮಗಳು ಏನು ಮತ್ತು ಅದಕ್ಕೆ ಜವಾಬ್ದಾರಿ ಯಾರು ಎಂಬುದನ್ನು ಯಾವ ಮಾಧ್ಯಮಗಳು ಚರ್ಚಿಸುವುದಿಲ್ಲ.

ಇಷ್ಟೊಂದು ಸ್ವಾರ್ಥದ ರಾಜಕಾರಣಕ್ಕೆ ಜನ, ಮಾಧ್ಯಮ ಎಲ್ಲರೂ ಇದೊಂದು ಸಹಜ ಘಟನೆ ಎಂದು ಪರಿಗಣಿಸಿ ನಿರ್ಲಕ್ಷಿಸಿದರೆ ಮುಂದಿನ ‌ದೇಶದ ರಾಜಕೀಯ ಭವಿಷ್ಯ ಏನಾಗಬಹುದು ಊಹಿಸಿ. ಮೌಲ್ಯಗಳೇ ಇಲ್ಲದ ಜಾತಿ, ಅಧಿಕಾರ, ಹಣ ಕೇಂದ್ರೀಕೃತ ರಾಜಕೀಯ ಆತ್ಮವಿಲ್ಲದ ದೇಹದಂತೆ ಆಗುವುದಿಲ್ಲವೇ? ನಿಜ ಇದು ಹೊಸದೇನಲ್ಲ. ದೇಶದ ಕೆಲವು ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ ಅದರ ವಿರುದ್ಧ ಧ್ವನಿಗಳು ಅಷ್ಟೇ ತೀಕ್ಷ್ಣವಾಗಿ ಹೊರಹೊಮ್ಮಿತ್ತಿಲ್ಲ ಮತ್ತು ಈ ರೀತಿಯ ರಾಜಕಾರಣ ಯಶಸ್ವಿಯಾಗುತ್ತಿದೆ ಎಂಬುದು ಬಹುದೊಡ್ಡ ಚಿಂತೆಗೆ ಕಾರಣವಾಗಿದೆ.

ಹಿಂದೆ ಅವರು ಮಾಡಿರಲಿಲ್ಲವೇ, ಈಗ ಇವರು ಮಾಡಿದರೆ ತಪ್ಪೇನು, ರಾಜಕೀಯ ಇರುವುದೇ ಹೀಗೆ, ಅವರೇನು ಸನ್ಯಾಸಿಗಳಲ್ಲ ಎಂದು ಪೂರ್ವಾಗ್ರಹ ಪೀಡಿತರಾಗಿ ಎಲ್ಲವನ್ನೂ ಸಮರ್ಥಿಸುವ ಪರಿಪಾಠ ಬೆಳೆಯುತ್ತಿದೆ. ಈ ಬೆಂಕಿ ಒಂದು ದಿನ ಇತರರನ್ನು ಸುಡುವುದಲ್ಲದೇ ತನ್ನನ್ನೇ ಸುಡುತ್ತದೆ ಎಂಬ ಅರಿವೇ ಮಾಧ್ಯಮಗಳು ಮತ್ತು ಮತದಾರರಿಗೆ ಆಗುತ್ತಿಲ್ಲ. ಸೇರುವವರು, ಸೇರಿಸಿಕೊಳ್ಳುವವರು, ಅವರ ಹಿಂಬಾಲಕರು, ಮಾಧ್ಯಮಗಳು ಹೀಗೆ ಎಲ್ಲರೂ ಸೂಕ್ಷ್ಮತೆ ಕಳೆದುಕೊಂಡರೆ ಕೊನೆಗೆ ಉಳಿಯುವುದು ಆಚಾರವಿಲ್ಲದ ನಾಲಿಗೆ ಮಾತ್ರ. ಕನಿಷ್ಟ ಈ ಕೆಟ್ಟ ಸಂಸ್ಕೃತಿಯ ವಿರುದ್ಧ ಮಾತನಾಡುವಷ್ಟದರೂ ಪ್ರಾಮಾಣಿಕವಾಗಿರೋಣ. ಇದು ಕೇವಲ ಒಬ್ಬ ವ್ಯಕ್ತಿ ಮತ್ತು ಪಕ್ಷಕ್ಕೆ ಸೀಮಿತವಾಗಬಾರದು. ಇದೊಂದು ನಾಚಿಕೆಗೆಟ್ಟ ವ್ಯವಹಾರ. ಇದನ್ನು ತಡೆಯಲು ಎಲ್ಲರೂ ತಮ್ಮ ತಮ್ಮ ನೆಲೆಯಲ್ಲಿ ಪ್ರಯತ್ನಿಸಬೇಕು.

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ