ಇದ್ದರೆ ಇರಲಿ ಬಿಡಿ ದೇವರು, ನಮಗೇನು...?

ಇದ್ದರೆ ಇರಲಿ ಬಿಡಿ ದೇವರು, ನಮಗೇನು...?

ನಾವು ವಂಚಕರಲ್ಲ, ಭ್ರಷ್ಟರಲ್ಲ, ಮೋಸಗಾರರಲ್ಲ, ಕಳ್ಳ ಖದೀಮರಲ್ಲ. ದೇವರಿದ್ದರೆ ನಮಗೇ ಒಳ್ಳೆಯದು. ನಾವು ಬೇರೆಯವರ ಆಸ್ತಿಗೆ ಹೊಂಚು ಹಾಕುವವರಲ್ಲ, ಬೇರೆಯವರನ್ನು ಹಿಂಸಿಸುವವರಲ್ಲ, ಭೂಮಿ ಬಗೆಯುವವರಲ್ಲ, ದೇವರು ಸರ್ವ ಶಕ್ತನಾಗಿದ್ದರೆ ತನಿಖೆ ಮಾಡಿಕೊಳ್ಳಲಿ ಬಿಡಿ. ನಾವು ಪೂಜೆ ಮಾಡುವುದಿಲ್ಲ, ನಮಾಜು ಮಾಡುವುದಿಲ್ಲ, ಪ್ರಾರ್ಥನೆ ಮಾಡುವುದಿಲ್ಲ.

ಹಸಿದವರಿಗೆ ಅನ್ನ ನೀಡುತ್ತೇವೆ,

ಅಗತ್ಯವಿದ್ದವರಿಗೆ ಬಟ್ಟೆ ನೀಡುತ್ತೇವೆ,

ಅವಶ್ಯಕತೆ ಇದ್ದವರಿಗೆ ರಕ್ತವನ್ನೂ ನೀಡುತ್ತೇವೆ.

 

ನಾವು ಮಸೀದಿಗೆ ಹೋಗುವುದಿಲ್ಲ,

ನಾವು ದೇವಸ್ಥಾನಕ್ಕೆ ಹೋಗುವುದಿಲ್ಲ,

ನಾವು ಚರ್ಚಿಗೂ ಹೋಗುವುದಿಲ್ಲ.

 

ವೃದ್ದಾಶ್ರಮಕ್ಕೆ ಹೋಗುತ್ತೇವೆ‌ ಸಾಂತ್ವನ ಹೇಳಲು,

ಅನಾಥಾಶ್ರಮಕ್ಕೆ ಹೋಗುತ್ತೇವೆ ಸಹಾಯ ಮಾಡಲು,

ಆಸ್ಪತ್ರೆಗಳಿಗೆ ಹೋಗುತ್ತೇವೆ ಸೇವೆ ಮಾಡಲು.

 

ದೇವರಿಗೆ ಏನನ್ನೂ ಕೊಡುವುದಿಲ್ಲ,

ದೇವರಲ್ಲಿ ಏನನ್ನೂ ಬೇಡುವುದಿಲ್ಲ,

ದೇವರಿಗಾಗಿ ಕೊಲ್ಲುವುದೂ ಇಲ್ಲ.

 

ಮನುಷ್ಯರಿಗಾಗಿ ಬದುಕುತ್ತೇವೆ,

ಮನುಷ್ಯರಿಗಾಗಿ ಕೊಡುತ್ತೇವೆ,

ಮನುಷ್ಯರಿಗಾಗಿಯೇ ಜೀವಿಸುತ್ತೇವೆ.

 

ದೇವರನ್ನು ಪ್ರೀತಿಸುವುದಿಲ್ಲ, 

ದೇವರನ್ನು ದ್ವೇಷಿಸುವುದಿಲ್ಲ,

ದೇವರನ್ನು ಹುಡುಕಾಡುವುದಿಲ್ಲ.

 

ಮನುಷ್ಯರನ್ನು ಪ್ರೀತಿಸುತ್ತೇವೆ,

ಮನುಷ್ಯರನ್ನು ಗೌರವಿಸುತ್ತೇವೆ,

ಮನುಷ್ಯತ್ವವನ್ನೇ ಹುಡುಕುತ್ತೇವೆ.

ಮನುಷ್ಯ ಮತ್ತು ದೇವರಲ್ಲಿ ನಮ್ಮ ಆಯ್ಕೆ ಮನುಷ್ಯ ಮಾತ್ರ. ಏಕೆಂದರೆ ನಾವು ಮನುಷ್ಯರು. ನಾವು ಬದುಕುತ್ತಿರುವುದು ಮನುಷ್ಯರೊಂದಿಗೆ.. ಕೋಟ್ಯಾಂತರ ಮನುಷ್ಯರನ್ನು ನೋಡಿದ್ದೇವೆ, ಆದರೆ ಒಬ್ಬೇ ಒಬ್ಬ ದೇವರನ್ನು ನೋಡಿಲ್ಲ. ನನ್ನನ್ನು ಹುಟ್ಟಿಸಿದ್ದು, ಬೆಳೆಸಿದ್ದು, ಸಹಾಯ ಮಾಡಿದ್ದು ಎಲ್ಲವೂ ಮನುಷ್ಯನೇ. ದೇವರೆಂಬುದು ನಂಬಿಕೆ ಎಂದು ಹೇಳಲಾಗುತ್ತದೆ,

ಮನುಷ್ಯರೆಂಬುದು ವಾಸ್ತವ - ಈ ಕ್ಷಣದ ಸತ್ಯ. ಕಣ್ಣಿಗೆ ಕಾಣದ ದೇವರಿಗಿಂತ ಕಣ್ಣಿಗೆ ಕಾಣುವ ಮನುಷ್ಯನೇ ಶ್ರೇಷ್ಠ ಮತ್ತು ವಾಸ್ತವ. ದೇವರನ್ನು ನೋಡಲು ಮಾತನಾಡಲು ಸಾಧ್ಯವಿಲ್ಲ, ಮನುಷ್ಯನೊಂದಿಗೆ ಎಲ್ಲವೂ ಸಾಧ್ಯ. ಮನುಷ್ಯರಿಗೆ ಹೆದರಿ ದೇವರು ಅಡಗಿ ಕುಳಿತಿದ್ದಾನೆ, ದೇವರಿಗೆ ಹೆದರದೆ ಮನುಷ್ಯರು ಸಮಾಜದಲ್ಲಿ ಬದುಕುತ್ತಿದ್ದಾರೆ. ದೇವರನ್ನು ಸೃಷ್ಟಿಸಿದ್ದು ಮನುಷ್ಯರು, ಮನುಷ್ಯರನ್ನು ಸೃಷ್ಟಿಸಿದ್ದು ದೇವರೇ ?  ಪ್ರಕೃತಿಯೇ‌ ? ದಯವಿಟ್ಟು ಅರ್ಥಮಾಡಿಕೊಳ್ಳಿ,

ದೇವರಿಗಿಂತ ಮನುಷ್ಯ ಮುಖ್ಯ. ದೇವರಿಗಾಗಿ ಮನುಷ್ಯರನ್ನು ಕೊಲ್ಲಬೇಡಿ. ಬೇಕಿದ್ದರೆ ದೇವರನ್ನೇ ಇಲ್ಲವಾಗಿಸಿ. ಪಾಪ ಮನುಷ್ಯ ಬದುಕುವುದೇ ಕೆಲವು ವರ್ಷಗಳು, ದೇವರೆಂಬ ಭ್ರಮೆ  ಮಾತ್ರ ಶಾಶ್ವತವಾಗಿ ಇರುತ್ತದೆ. ಮನುಷ್ಯರನ್ನು ಕೊಂದು ದೇವರನ್ನು ಮೆಚ್ಚಿಸುವುದು ಕ್ರೌರ್ಯ, ಮನುಷ್ಯರನ್ನು ಬದುಕಿಸಿ‌ ದೇವರನ್ನು ಮೆಚ್ಚಿಸುವುದು ಧರ್ಮ. ದೇವರಿಗಾಗಿ ಏನನ್ನಾದರೂ ಮಾಡುವುದು ಮೂರ್ಖತನ, ಮನುಷ್ಯರಿಗಾಗಿ ಏನನ್ನಾದರೂ ಮಾಡುವುದು ಜಾಣತನ. ಭಾರತದ ಭವಿಷ್ಯ ಕರಾಳವಾಗುವ ಮುನ್ನ ಎಲ್ಲರೂ ಮನುಷ್ಯರಾಗಿ, ಇಲ್ಲವೇ, ದೇವರು ಧರ್ಮದ ಹೆಸರಿನಲ್ಲಿ ರಾಕ್ಷಸರಾಗಿ ನಾಶವಾಗಿ, ಆಯ್ಕೆ ನಮ್ಮ ಮುಂದಿದೆ. ದಯವಿಟ್ಟು ಯೋಚಿಸಿ.

ಕ್ರೌರ್ಯ ಮತ್ತು ಪ್ರೀತಿ,

ದೇವರು ಮತ್ತು ಮನುಷ್ಯ,

ಭಕ್ತಿ ಮತ್ತು ಮಾನವೀಯತೆ,

ಧರ್ಮ ಮತ್ತು ಸಂವಿಧಾನ

ಶವ ಮತ್ತು ಜೀವ..

ಆಯ್ಕೆ ನಮ್ಮೆಲ್ಲರ ವಿವೇಚನೆಗೆ ಬಿಡುತ್ತಾ... ರಾಜಸ್ಥಾನದ ಉದಯಪುರದ ದಾರುಣ ಹತ್ಯೆ ಖಂಡಿಸುತ್ತಾ.. ಕ್ರಿಯೆ ಪ್ರತಿಕ್ರಿಯೆ ಪ್ರಚೋದನೆ ವಾಸ್ತವ ಪರಿಸ್ಥಿತಿ ಮಾನಸಿಕ ಆರೋಗ್ಯ ಸಮಾಜದ ಸ್ವಾಸ್ಥ್ಯ ಎಲ್ಲದರ ಸಮಗ್ರ ಚಿಂತನೆಯನ್ನು ಒಳಗೊಂಡ ಅಭಿಪ್ರಾಯ ನಿಮ್ಮದಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ