ಇದ್ದವರು ಇಬ್ಬರೇ ಆದರೆ ಕದ್ದವರಾರು?

ಇದ್ದವರು ಇಬ್ಬರೇ ಆದರೆ ಕದ್ದವರಾರು?

ಬರಹ
ಬ್ಯಾನರ್ಜಿ, ರಾಮಕೃಷ್ಣ ಹೆಗಡೆ, ನಜೀರ್ ಸಾಬ್

ರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದದ್ದು ಮತ್ತು ಆ ಅವಧಿಯದ್ದಕ್ಕೂ ಕರ್ನಾಟಕ ಬರದ ಬಾಧೆಯನ್ನು ಅನುಭವಿಸಿದ್ದನ್ನು ಬಹುಶಃ ಯಾರೂ ಮರೆತಿರಲಿಕ್ಕಿಲ್ಲ. ಈ ಅವಧಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಅವರ ಸಂಪುಟ ಸಹೋದ್ಯೋಗಿಗಳಾದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೇಂದ್ರ ಸರಕಾರ ಬರ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ ಎಂದು ಮೇಲಿಂದ ಮೇಲೆ ಹೇಳಿದ್ದೂ ಪತ್ರಿಕೆಗಳನ್ನು ಓದುವ, ಟಿ.ವಿ.ನೋಡುವ ಎಲ್ಲರಿಗೂ ನೆನಪಿರಬೇಕು. ಆಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌.ಡಿ.ಎ. ಸರಕಾರವಿತ್ತು. ಕರ್ನಾಟಕದ ಅನಂತಕುಮಾರ್‌ ಮತ್ತು ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಕೇಂದ್ರ ಸಚಿವ ಸಂಪುಟದಲ್ಲಿದ್ದರು. ಕೇಂದ್ರದ ನೆರವಿಗೆ ಸಂಬಂಧಿಸಿದಂತೆ ಕರ್ನಾಟಕದ ಅಧಿಕಾರಾರೂಢ ಕಾಂಗ್ರೆಸ್ಸಿಗರ ಟೀಕೆ ಹೆಚ್ಚುತ್ತಲೇ ಹೋದಾಗ ಇಬ್ಬರೂ ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದರು. ಕೇಂದ್ರ ಬರ ಪರಿಹಾರಕ್ಕೆಂದು ಒದಗಿಸಿದ್ದ ಹಣವನ್ನು ರಾಜ್ಯ ಸರಿಯಾಗಿ ಬಳಸಿಕೊಂಡಿಲ್ಲ. ಬಹಳಷ್ಟು ಹಣ ಬಳಸದೆಯೇ ಲ್ಯಾಪ್ಸ್‌ (laps) ಆಗಿದೆ ಎಂದಲ್ಲಾ ಗದ್ದಲವೆಬ್ಬಿಸಿದ್ದರು. ಇದಕ್ಕೆ ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯ ಜಗಧೀಶ್‌ ಶೆಟ್ಟರ್‌, ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಮುಂತಾದವರೆಲ್ಲಾ ಧ್ವನಿಗೂಡಿಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಎಸ್ ಎಂ ಕೃಷ್ಣ

ಇದೆಲ್ಲಾ ನಡೆದು ಇನ್ನೂ ಐದು ವರ್ಷವೂ ತುಂಬಿಲ್ಲ. ಉತ್ತರ ಕರ್ನಾಟಕವನ್ನು ನೆರೆ ಹಾವಳಿ ತೀವ್ರವಾಗಿ ಬಾಧಿಸುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿದೆ. ರಾಜ್ಯದಲ್ಲಿ ಜನತಾದಳ (ಎಸ್‌) ಮತ್ತು ಬಿಜೆಪಿ ಮೈತ್ರಿಯ ಸಮ್ಮಿಶ್ರ ಸರಕಾರವಿದೆ. ಈಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾಸ್ವಾಮಿ ಕೇಂದ್ರ ಸರಕಾರ ತಮಗೆ ಬೇಕಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ. ಪರಿಹಾರ ಕಾರ್ಯ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ. ಕೇಂದ್ರದಲ್ಲಿ ಎನ್‌ಡಿಎ ಸರಕಾರವಿದ್ದಾಗ ಅದರ ಬೆಂಬಲಕ್ಕೆ ನಿಂತಿದ್ದ ಉಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಗ ಕೇಂದ್ರವನ್ನು ಹಳಿಯುತ್ತಿದ್ದಾರೆ. ಇದಕ್ಕೆ ಈಶ್ವರಪ್ಪ, ಜಗಧೀಶ್‌ ಶೆಟ್ಟರ್‌ ಕೂಡಾ ಜತೆಯಾಗಿದ್ದಾರೆ. ಈ ಹಿಂದೆ ಕೇಂದ್ರವನ್ನು ಹಳಿಯುತ್ತಿದ್ದ ಧರ್ಮಸಿಂಗ್‌, ಮಲ್ಲಿಕಾರ್ಜುನ ಖರ್ಗೆ, ಜನಾರ್ದನ ಪೂಜಾರಿ ಮುಂತಾದವರೆಲ್ಲಾ ಈಗ ಕೇಂದ್ರದ ಬೆಂಬಲಕ್ಕೆ ನಿಂತಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಶೆಟ್ಟರ್‌, ಈಶ್ವರಪ್ಪ ಮುಂತಾದವರ ಬಾಯಿಂದ ಬಂದಿದ್ದ ಅದೇ ವಾಕ್ಯಗಳನ್ನು ಈಗ ಹೇಳುತ್ತಿದ್ದಾರೆ. ಕೇಂದ್ರ ಸಚಿವ ಮುನಿಯಪ್ಪ ಮತ್ತು ರಾಜಶೇಖರನ್‌ ಈಗ ಅನಂತಕುಮಾರ್‌ ಮತ್ತು ವೆಂಕಯ್ಯನಾಯ್ಡು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.

`ಇದ್ದವರು ಇಬ್ಬರಾದರೆ ಕದ್ದವರು ಯಾರು?' ಎಂಬ ಪ್ರಶ್ನೆ ಈಗ ಕೇಳಲೇಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರಗಳಿದ್ದಾಗ ಇದು ಸಂಭವಿಸುತ್ತದೆಯೇ ಅಥವಾ ಕೇಂದ್ರದಲ್ಲಿ ಬೇರೆ ಪಕ್ಷ ಆಡಳಿತ ನಡೆಸುತ್ತಿರುವಾಗ ರಾಜ್ಯದ ಆಡಳಿತಾರೂಢರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ಬಗೆಯ ಆರೋಪಗಳನ್ನು ಮಾಡುತ್ತಾರೆಯೇ?
ಈ ಹಿಂದಿನ ಬರ ಪರಿಹಾರ ಮತ್ತು ಈಗಿನ ನೆರೆ ಪರಿಹಾರಗಳೆರಡನ್ನೂ ಒಟ್ಟಿಗಿಟ್ಟುಕೊಂಡು ನೋಡಿದರೆ ರಾಜ್ಯದಲ್ಲಿರುವ ಆಡಳಿತಾರೂಢರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದೇ ನಿಜ ಎನಿಸುತ್ತದೆ.

ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರಕ್ಕೇ ಹೆಚ್ಚು ಅನುಕೂಲತೆಗಳಿರುವುದು ನಿಜ. ಭಾರತದಂಥ ವೈವಿಧ್ಯಮಯ ಮತ್ತು ಭಿನ್ನ ಆರ್ಥಿಕ ಸಂರಚನೆಗಳನ್ನೊಳಗೊಂಡ ವಲಯಗಳಿರು ದೇಶದಲ್ಲಿ ಕೇಂದ್ರ ಸರಕಾರ ಹಣಕಾಸಿನ ಮೇಲೆ ಹೆಚ್ಚಿನ ನಿಯಂತ್ರಣ ಇಟ್ಟುಕೊಂಡು ಎಲ್ಲರಿಗೂ ಸಮಾನವಾಗಿ ಸವಲತ್ತುಗಳನ್ನು ಹಂಚುವುದೇ ಸರಿ. ಆದರೆ ಈ ಹಂಚಿಕೆಯಲ್ಲಿ ಕೇಂದ್ರದ ಆಡಳಿತಾರೂಢರು ಕೆಲ ಮಟ್ಟಿಗಿನ ಮಲತಾಯಿ ಧೋರಣೆಯನ್ನು ತಳೆಯಲು ಸಾಧ್ಯವೇ? ಕೇವಲ ತಾಂತ್ರಿಕವಾಗಿ ಇದನ್ನು ಪರಿಶೀಲಿಸಿದರೆ ಕಾನೂನುಗಳು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸರಳ ಉತ್ತರ ನೀಡಬಹುದು. ಆದರೆ ನಮ್ಮ ರಾಜಕಾರಣಿಗಳು ಕಾನೂನುಗಳನ್ನು ಮೀರುವುದರಲ್ಲಿ ನಿಸ್ಸೀಮರು. ಈ ಚಾಣಕ್ಷತನವೇನಿದ್ದರೂ ಒಂದು ರಾಜ್ಯಕ್ಕೆ ಸಿಗಲೇಬೇಕಾದ ಪಾಲನ್ನು ತಡೆಹಿಡಿಯುವುದು ಅಸಾಧ್ಯ. ಅದರಲ್ಲೂ ಪಡೆದುಕೊಳ್ಳಬೇಕಾದ ರಾಜ್ಯದಲ್ಲಿ ಅಸರ್ಟಿವ್‌ ಆದ ಸರಕಾರವೊಂದಿದ್ದರೆ ಕೇಂದ್ರವೇ ಇಕ್ಕಟ್ಟಿಗೆ ಸಿಲುಕಿಬಿಡುತ್ತದೆ.

ಇದಕ್ಕೆ ಕರ್ನಾಟಕದ್ದೇ ಆದ ಒಂದು ಉತ್ತಮ ಉದಾಹರಣೆಯಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ವಿಕೇಂದ್ರೀಕರಣವನ್ನು ಮಹಿಳೆಯರೂ ಸೇರಿದಂತೆ ಎಲ್ಲಾ ಶೋಷಿತ ವರ್ಗಗಳಿಗೂ ಮೀಸಲಾತಿಯನ್ನು ನೀಡಿ ಜಾರಿಗೆ ತಂದದ್ದು ಕರ್ನಾಟಕ. ಇದಕ್ಕಾಗಿ 1983ರಲ್ಲಿ ಕರ್ನಾಟಕ ಜಿಲ್ಲಾಪರಿಷತ್‌, ತಾಲೂಕು ಪಂಚಾಯಿತಿ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯಪಂಚಾಯಿತಿ ಕಾಯ್ದೆಯನ್ನು ರೂಪಿಸಿತು. ಇದು ಸಂವಿಧಾನದ ಸಮವರ್ತಿ ಪಟ್ಟಿ(concurrent list)ನಲ್ಲಿ ಬರುವ ವಿಷಯವಾದುದರಿಂದ ಇದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಕೇಂದ್ರದ ಒಪ್ಪಿಗೆಯ ಅಗತ್ಯವಿತ್ತು. ಸರಳವಾಗಿ ಹೇಳಬೇಕಾದರೆ ರಾಷ್ಟ್ರಪತಿಗಳ ಅಂಕಿತ ಬೇಕಿತ್ತು. 1983ರಲ್ಲಿಯೇ ಈ ಕಾಯ್ದೆ ರಾಷ್ಟ್ರಪತಿ ಭವನ ತಲುಪಿದರೂ 1986 ತನಕವೂ ಇದಕ್ಕೆ ಅವರ ಅಂಕಿತ ಬೀಳಲಿಲ್ಲ.

ಬಿ ಎಸ್ ಯಡಿಯೂರಪ್ಪ

ರಾಜ್ಯಗಳಿಂದ ಬರುವ ಕಾಯ್ದೆಗಳಿಗೆ ಅಂಕಿತ ಹಾಕುವ ಮೊದಲು ರಾಷ್ಟ್ರಪತಿಗಳು ಅವನ್ನು ಸಂಬಂಧಪಟ್ಟ ಇಲಾಖೆಗೆ (ಕೇಂದ್ರ ಸರಕಾರದ) ಕಳುಹಿಸುತ್ತಾರೆ. ಅಲ್ಲಿಂದ ಬರುವ ಅಭಿಪ್ರಾಯವನ್ನು ಅವಲಂಬಿಸಿ ಅದಕ್ಕೆ ಒಪ್ಪಿಗೆ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ಪರಿಪಾಠ. ಕರ್ನಾಟಕದ ಪಂಚಾಯಿತಿ ಕಾಯ್ದೆಯನ್ನು ರಾಷ್ಟ್ರಪತಿಗಳು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅಲ್ಲಿಂದ ಯಾವ ಅಭಿಪ್ರಾಯ ಬಂತೋ ಏನೋ. ಒಟ್ಟಿನಲ್ಲಿ ಅವರು ಅಂಕಿತ ಹಾಕಲಿಲ್ಲ. ಮೂರು ವರ್ಷಗಳ ಕಾಲ ರಾಷ್ಟ್ರಪತಿಗಳ ಒಪ್ಪಿಗೆಗೆ ಕಾದು ಕುಳಿತ ಕರ್ನಾಟಕದ ರಾಮಕೃಷ್ಣ ಹೆಗಡೆ ನೇತೃತ್ವದ ಸರಕಾರ ಕೊನೆಗೆ ಸಹನೆ ಕಳೆದುಕೊಂಡು ಕೇಂದ್ರದ ಜತೆಗೆ ನೇರ ಹಣಾಹಣಿಗೆ ಸಿದ್ಧವಾಯಿತು. ಕಾಯ್ದೆಯನ್ನು ರೂಪಿಸಿದ್ದ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್‌ ನಜೀರ್‌ ಸಾಬ್‌ ಅವರು ನೇರ ದಿಲ್ಲಿಗೆ ಹೋಗಿ ರಾಷ್ಟ್ರಪತಿ ಭವನದ ಎದುರು ಧರಣಿ ಕುಳಿತರು. ಕರ್ನಾಟಕ ಪಂಚಾಯಿತಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಬಿತ್ತು. 1987ರಲ್ಲಿ ಮಂಡಲ ಪಂಚಾಯಿತಿ, ಜಿಲ್ಲಾ ಪರಿಷತ್‌ ಚುನಾವಣೆಗಳು ನಡೆದು ದೇಶಕ್ಕೇ ಮಾದರಿಯಾದ ಪಂಚಾಯತ್‌ರಾಜ್‌ ವ್ಯವಸ್ಥೆ ಕಾರ್ಯರೂಪಕ್ಕೆ ಬಂತು.

ಈ ಘಟನೆ ಒಂದು ವಿಷಯವನ್ನು ಖಚಿತ ಪಡಿಸುತ್ತದೆ. ರಾಜ್ಯ ಸರಕಾರ ಸಂವಿಧಾನದಲ್ಲಿ ಒದಗಿಸಲಾಗಿರುವ ಅವಕಾಶಗಳನ್ನು ಬಳಸಿಕೊಂಡು ಸರಿಯಾದ ರೀತಿಯಲ್ಲಿ ಬೇಡಿಕೆಯನ್ನು ಮಂಡಿಸಿದರೆ ಕೇಂದ್ರ ಇಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಕೇಂದ್ರ `ಇಲ್ಲ' ಎಂದರೆ ಅದರ ಜತೆ ಹಣಾಹಣಿಗೆ ಇಳಿದಾದರೂ ಅದನ್ನು ಸಾಧಿಸಬಹುದು. ಒಂದು ಸಾಂವಿಧಾನಿಕ ಬಿಕ್ಕಟ್ಟನ್ನು ಯಾವ ಸರಕಾರವೂ ಇಚ್ಛಿಸುವುದಿಲ್ಲ. ಇಂಥದ್ದನ್ನು ಸಾಧಿಸುವುದಕ್ಕೆ ಬೇಕಿರುವುದು ಪ್ರಾಮಾಣಿಕತೆ, ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಅರಿವು.

ಎಸ್‌.ಎಂ. ಕೃಷ್ಣ ನೇತೃತ್ವದ ಸರಕಾರ ಮತ್ತು ಈಗಿನ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ದೊಡ್ಡ ಕೊರತೆಯೇ ಇವು. ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಗಳೆರಡನ್ನೂ ಕೇವಲ ಭಾಷಣದ ವೇದಿಕೆಗಳಿಗೆ ಸೀಮಿತವಾಗಿಟ್ಟುಕೊಂಡು ಆಡಳಿತಾತ್ಮಕ ಅರಿವೆಂದರೆ `ಕೆ.ಜಿ.ಗೆ ಎಷ್ಟು?' ಎಂದು ಕೇಳುವವರು ಏನು ಮಾಡಬಹುದೋ ಅದನ್ನು ಎಸ್‌.ಎಂ.ಕೃಷ್ಣ ಸರಕಾರ ಮಾಡಿತ್ತು. ಕುಮಾರಸ್ವಾಮಿ-ಯಡಿಯೂರಪ್ಪ ಬೇರೆಯೇ ಪಕ್ಷಗಳವರಾದರೂ ಕೃಷ್ಣ ಪರಂಪರೆಯನ್ನೇ ಮುಂದುವರಿಸುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ.

-ಇಸ್ಮಾಯಿಲ್