ಇದ್ಯಾವ್ ಬೆಂಗಳೂರು ಸ್ವಾಮಿ? ಕನ್ನಡದವರೆಲ್ಲಾ ಎಲ್ಲಿ ಸ್ವಾಮಿ?

ಇದ್ಯಾವ್ ಬೆಂಗಳೂರು ಸ್ವಾಮಿ? ಕನ್ನಡದವರೆಲ್ಲಾ ಎಲ್ಲಿ ಸ್ವಾಮಿ?

ಬರಹ

- ನವರತ್ನ ಸುಧೀರ್

ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ - ಏನಾಗಿದೆ ನಮ್ಮ ಚೆಲುವನಾಡಿಗೆ?” ಅನ್ನುವ ಲೇಖನದಲ್ಲಿ ನನ್ನ ಗೋಳನ್ನು ತೋಡಿಕೊಂಡಿದ್ದೆ. (http://www.ourkarnataka.com/kannada/articles/whatwrong.htm )

ಈ ನಡುವೆ ಕನ್ನಡ ಭಾಷೆ, ಕನ್ನಡತನ, ಕನ್ನಡನಾಡಿನಲ್ಲಿ ಕನ್ನಡಿಗರಾಗುತ್ತಿರಬಹುದಾದ ಅನ್ಯಾಯಗಳ ಬಗ್ಗೆ ಅನೇಕ ಲೇಖನಗಳು
ಪ್ರಕಟವಾಗುತ್ತಿದೆ. ಸಾಲದ್ದಕ್ಕೆ ನಮ್ಮ ಕರ್ನಾಟಕದ ರಾಜಕೀಯದಲ್ಲಿ ಪ್ರಸ್ತುತ ನಡೆಯುತ್ತಿರುವ ಹಾಸ್ಯಾಸ್ಪದವಾದ ಅಧಿಕಾರ ಹಸ್ತಾಂತರ ಪ್ರಕರಣ ನಮ್ಮ ನಾಡು ಮತ್ತು ಕನ್ನಡಿಗರ ಬಗ್ಗೆ ಎಲ್ಲರೂ ಅಸಹ್ಯ ಪಡುವಂತಾಗಿದೆ.

ನಾನು ಪ್ರತಿ ದಿನ ಎರಡು ವೃತ್ತಪತ್ರಿಕೆಗಳನ್ನು ಓದುತ್ತೇನೆ. ಒಂದು ಇಂಗ್ಲೀಷ್, ಮತ್ತೊಂದು ಕನ್ನಡ. ಆ ಇಂಗ್ಲೀಷ್ ಪತ್ರಿಕೆ “ಟೈಮ್ಸ್ ಆಫ್ ಇಂಡಿಯಾ”. ಮತ್ತೊಂದು ಪತ್ರಿಕೆ ನಮ್ಮ ಅಚ್ಚ ಕನ್ನಡದ “ವಿಜಯಕರ್ನಾಟಕ”. ಎರಡೂ ಪತ್ರಿಕೆಗಳು ಒಂದೇ ಸಂಸ್ಥೆ ಬೆನೆಟ್ ಕೋಲ್‍ಮನ್ ಗ್ರೂಪ್‍ಗೆ ಸೇರಿದ್ದು.

ನನಗೆ ಇಂಗ್ಲೀಷ್ ಪತ್ರಿಕೆಯಲ್ಲಿ ಕಾಣುವ ಬೆಂಗಳೂರಿಗರಿಗೂ , ಕನ್ನಡ ಪತ್ರಿಕೆಯಲ್ಲಿ ಕಾಣುವ ಬೆಂಗಳೂರಿಗರಲ್ಲೂ ಬಹಳ ವ್ಯತ್ಯಾಸ ಕಾಣಿಸುತ್ತೆ. ದೈನಂದಿನ ರಾಜಕೀಯ, ಮೂಲಭೂತ ಸೌಲಭ್ಯಗಳ ಕೊರತೆಯ ಗೋಳು ಮತ್ತು ಅಪರಾಧ ಸಮೀಕ್ಷೆ ಹೊರತಾಗಿ ಎರಡೂ ಪತ್ರಿಕೆಗಳಲ್ಲಿ ಬಿಂಬಿಸುವ ಬೆಂಗಳೂರುಗಳು ಅದೆಷ್ಟು ಬೇರೆ ಅನ್ನಿಸುತ್ತೆ. ಇಂಗ್ಲೀಷ್ ಪತ್ರಿಕೆಯ ಸಂಪಾದಕೀಯ, ಇತರ ಲೇಖನಗಳು , ಪುರವಣಿಗಳಲ್ಲಿನ ವಿಷಯವ್ಯಾಪ್ತಿ, ಪೇಜ್ ತ್ರೀ ಅಲಂಕರಿಸುವ ಕನ್ನಡಿಗರಂತೂ ಅಲ್ಲದ ಬೆಂಗಳೂರಿಗರ ಚಿತ್ರಗಳು, ಕೊಳ್ಳುಬಾಕ ಸಮಾಜದ ಸಂಸ್ಕೃತಿಯನ್ನು ಅಧರಿಸುವ ಲೇಖನಗಳು ಇವೆಲ್ಲವೂ ವಿಜಯಕರ್ನಾಟಕ ವರ್ಣಿಸುವ ಕನ್ನಡದ ಪ್ರಪಂಚಕ್ಕಿಂತ ಬಹಳ ಬೇರೆ. ಎಲ್ಲವನ್ನೂ ಓದಿದಾಗ ಅದೇ ತಾನೇ ಬೆಂಗ್ಳೂರಿಗೆ ಬಂದ ಬೋರೇಗೌಡನಿಗೆ ಅನಿಸಿದ ಹಾಗೆ ಅನ್ನಿಸುತ್ತೆ.

ಆದರೆ ವಿಜಯಕರ್ನಾಟಕ ದಲ್ಲಿ ಬರುವ ವಿಶ್ವೇಶ್ವರ ಭಟ್, ರವಿ ಬೆಳಗೆರೆ, ಪ್ರತಾಪ್ ಸಿಂಹ, ಹಾಲ್ದೊಡ್ಡೇರಿ ಸುಧೀಂದ್ರ, ವೈ. ಎನ್. ಗುಂಡೂರಾವ್ ಇವರುಗಳ ಅಂಕಣಗಳಲ್ಲಿ ನಮಗೆ ಚೆನ್ನಾಗಿ ತಿಳಿದ ಕನ್ನಡದ ಮಣ್ಣಿನ ವಾಸನೆ ಇರುತ್ತೆ.

ಹಾಗಿದ್ದರೆ ಇಲ್ಲಿರುವುದು ಎರಡು ಬೆಂಗಳೂರೇ? ಅಥವಾ ಒಂದೇ ಊರಿನಲ್ಲಿ ಎರಡು ಬೇರೆ ಪ್ರಪಂಚಗಳಿವೆಯೇ? ಈ ಎರಡೂ ಪ್ರಪಂಚಗಳಲ್ಲಿ ಸ್ವಾಭಾವಿಕ ಹಾಗೂ ಸಹಜವಾಗಿ ಹೋಗಿ ಬಂದು ವಿರಹಿಸುವ ಪ್ರಾಣಿಗಲೂ ಇದ್ದಾರೆಯೇ? ಹೀಗೆ ಎರಡೂ ಸಂಸ್ಕೃತಿಗಳಿಗೆ ಸೇತುವೆ ಕಟ್ಟಿರುವ ಮಹಾತ್ಮರಿವರಾರು? ಹೀಗೇ ಅನೇಕ ಪ್ರಶ್ನೆಗಳು.

ನಾವುಗಳು ನಮ್ಮ ಪ್ರಪಂಚದಲ್ಲಿದ್ದುಕೊಂಡು ಕನ್ನಡ ಕನ್ನಡ ಅಂತ ಎಷ್ಟು ಶಂಖ ಹೊಡಕೊಂಡರೂ ಅದನ್ನ ಕೇಳಬೇಕಾದ ಜನಗಳಿರುವ ಪ್ರಪಂಚಕ್ಕೆ ತಲುಪುತ್ತೋ ಇಲ್ಲವೋ ಅಂತ ಶಂಕೆ. ನಮ್ಮದು ಬರಿಯ ಅರಣ್ಯರೋದನವಲ್ಲ ತಾನೆ?

ಇದೇ ಸಮಯದಲ್ಲಿ “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆ “ಲೀಡ್ ಇಂಡಿಯಾ” ಎಂಬ ಸ್ಪರ್ಧೆ ನಡೆಸುತ್ತಿದೆ. ಇದರ ಉದ್ದೇಶ್ಯ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಲು ಸಿದ್ಧರಿರುವ ಯುವ ಪೀಳಿಗೆಯ ಸ್ಫೂರ್ತಿವೆತ್ತ ಧುರೀಣರನ್ನು ಗುರುತಿಸುವುದು.
ಅನೇಕ ಅರ್ಜಿದಾರರಲ್ಲಿ ಮೊದಲ ಸುತ್ತಿನಲ್ಲಿ ಎಂಟು ಜನರನ್ನು ಆಯ್ಕೆ ಮಾಡಿ, ಎರಡನೇ ಸುತ್ತಿನಲ್ಲಿ ಅವರನ್ನು ಒಂದು ನಿರ್ಣಾಯಕ ಮಂಡಳಿಯ ಪರೀಕ್ಷಣೆ ಮತ್ತು ಎಸ್. ಎಮ್. ಎಸ್ ಪೋಲ್‍ ಮುಖಾಂತರ ಕೊನೆಯ ಸುತ್ತಿನಲ್ಲಿ ಬೆಂಗಳೂರನ್ನು ಪ್ರತಿನಿಧಿಸಲು ಕೇವಲ ಮೂವರನ್ನು ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದವರಲ್ಲಿ ಒಬ್ಬರು ಉತ್ತರ ಭಾರತೀಯ, ಒಬ್ಬರು ಮಲೆಯಾಳಿ, ಮತ್ತೋರ್ವರು ಬೆಂಗಾಲಿ. ಕನ್ನಡಿಗರಾರೂ ಇಲ್ಲ.

ಬೆಂಗಳೂರೇನೂ ಕೇವಲ ಕನ್ನಡಿಗರ ಸ್ವತ್ತಾಗದಿದ್ದರೂ, ನಮ್ಮನ್ನು ಪ್ರತಿನಿಧಿಸುವವರು ಕನ್ನಡಿಗರಾಗಿದ್ದರೆ ಅದೆಷ್ಟು ಚೆನ್ನಾಗಿ ಇರುತ್ತಿತ್ತಾಲ್ಲವೇ? ಅದೇಕೆ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಕನ್ನಡದ ಯುವ ಜನಾಂಗ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ? ಯಾರ ಬಳಿಯಾದರೂ ಉತ್ತರವಿದೆಯೇ? ನಮ್ಮ ಕನ್ನಡದ ಯುವಕರಿಗೆ ಹುಮ್ಮಸ್ಸಿಲ್ಲವೇ? ಉತ್ಸಾಹವಿಲ್ಲವೇ?

ಕೇಳ್ಬಹುದೇ ಅಥ್ವಾ ಕೇಳ್ಬಾರ್ದೇ? ಇತಿ ಕೈಲಾಸಂ.

*****************************************