ಇನ್ನಷ್ಟು ಈಸೋಪನ ಕಥೆಗಳು

ಇನ್ನಷ್ಟು ಈಸೋಪನ ಕಥೆಗಳು

'ಸಂಪದ' ದ ಹಿಂದಿನ ಸಂಚಿಕೆಗಳಲ್ಲಿ ಕೆಲವು ಈಸೋಪನ ಕಥೆಗಳನ್ನು ಪ್ರಕಟಿಸಲಾಗಿತ್ತು. ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಈ ನೀತಿಭರಿತ ಕಥೆಗಳು ಇಷ್ಟವಾಗಿದ್ದುವು. ಇನ್ನಷ್ಟು ಕಥೆಗಳನ್ನು ಸಂಗ್ರಹಿಸಿ ನೀಡಬೇಕೆಂದು ಎಲ್ಲರ ಬೇಡಿಕೆಯಾಗಿತ್ತು. ಆ ನಿಟ್ಟಿನಲ್ಲಿ ಹುಡುಕಾಡಿ ಇನ್ನಷ್ಟು ಈಸೋಪನ ಕಥೆಗಳನ್ನು ತಂದಿದ್ದೇವೆ. ಓದಿ…

ಸಿಂಹ ಮತ್ತು ಗೂಳಿ

ಒಂದು ಸಿಂಹ ತನ್ನ ಗುಹೆಯ ಸಮೀಪವೇ ತಿರುಗಾಡಿಕೊಂಡಿದ್ದ ಗೂಳಿಯೊಂದನ್ನು ಹಿಡಿದು ತಿನ್ನುವ ಪ್ರಬಲವಾದ ಆಸೆಯನ್ನು ಬೆಳೆಸಿಕೊಂಡಿತು. ಆದರೆ ಗೂಳಿ ಬೃಹದಾಕಾರವಾಗಿದ್ದುದ್ದಾದರಿಂದ ಅದರ ಮೇಲೆ ಆಕ್ರಮಣ ಮಾಡಲು ಸಿಂಹ ಹೆದರುತ್ತಿತ್ತು. ಹಾಗಾಗಿ ಗೂಳಿಯನ್ನು ಹಿಡಿಯಲು ಒಂದು ಉಪಾಯ ಹೂಡಿತು. ಸಿಂಹ ಗೂಳಿಯನ್ನು ಸಮೀಪಿಸಿ ‘ಗೆಳೆಯಾ, ಗೂಳಿಯಣ್ಣನೇ ನಾನು ಇಂದು ಒಂದು ಒಳ್ಳೆಯ ಕುರಿಯನ್ನು ಕೊಂದು ನನ್ನ ಗುಹೆಯಲ್ಲಿ ಸೊಗಸಾದ ಔತಣವನ್ನು ಏರ್ಪಡಿಸಿದ್ದೇನೆ. ನಿನಗಾಗಿ ಎಳೆಯ ಹುಲ್ಲುಗಳ ಖಾದ್ಯವನ್ನೂ ತಯಾರಿಸಿದ್ದೇನೆ. ನೀನು ನನ್ನ ಸಂಗಡ ಊಟ ಮಾಡಿದರೆ ನನಗೆ ಬಹಳ ಸಂತೋಷವಾಗುತ್ತದೆ'ಎಂದು ಹೇಳಿತು.

ಗೂಳಿಯನ್ನು ಗುಹೆಯೊಳಗೆ ಕರೆದೊಯ್ದು ಅಲ್ಲಿ ಅದರ ಮೇಲೆ ಆಕ್ರಮಣ ಮಾಡಿ ಅದನ್ನು ತಿನ್ನುವ ಉದ್ದೇಶ ಸಿಂಹದ್ದಾಗಿತ್ತು. ಗೂಳಿಯು ಸಿಂಹದ ಮಾತಿಗೆ ಅನುಮಾನದಿಂದಲೇ ಒಪ್ಪಿ ಅದರ ಗುಹೆಯ ಬಳಿ ಬಂತು. ಆದರೆ ಗುಹೆಯ ಒಳಗೆ ದೊಡ್ಡ ಕಡಾಯಿ ಮತ್ತು ಸೌಟು ಬಿಟ್ಟು, ಯಾವ ಕುರಿ ಅಥವಾ ಕುರಿಯ ಮಾಂಸವೂ ಕಾಣಿಸಲಿಲ್ಲ. ಎಳೆಯ ಹುಲ್ಲಿನ ಖಾದ್ಯವೂ ಕಾಣಸಿಗಲಿಲ್ಲ. ಒಂದು ಮಾತನ್ನೂ ಆಡದೇ ಗೂಳಿ ಮೌವಾಗಿ ಅಲ್ಲಿಂದ ನಿರ್ಗಮಿಸಿತು. ಆಕ್ರಮಣ ಮಾಡುವ ಯಾವ ಸುಳಿವನ್ನೂ ನೀಡದ ಸಿಂಹ, ಗೂಳಿಯನ್ನು ಕುರಿತು  ‘ಅಭ್ಯಾಗತರಿಗೆ ಒಂದು ಮರ್ಯಾದೆಯ ಮಾತನ್ನೂ ಹೇಳದೆ ಸುಮ್ಮನೇ ಹೋಗುವುದು ಸರಿಯಾದ ಕ್ರಮವಲ್ಲ, ಹೀಗೆ ಏಕೆ ಮರಳಿ ಹೋಗುತ್ತಿರುವೆ?’ ಎಂದು ಕೇಳಿತು. ಗೂಳಿ ‘ನಾನು ನಿರ್ಗಮಿಸುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ನೀನು ಕುರಿಯನ್ನು ಕೊಂದು ಭಕ್ಷ್ಯವನ್ನು ತಯಾರಿಸಿರುವ ಯಾವುದೇ ಸೂಚನೆಗಳು ನನಗೆ ಕಾಣಿಸಲಿಲ್ಲ. ಆದರೆ ಗೂಳಿಯನ್ನು ಕೊಂದು ತಿನ್ನಲು ಎಲ್ಲಾ ತಯಾರಿಗಳೂ ಇಲ್ಲಿ ನಡೆದಿರುವುದು ನನಗೆ ಕಾಣಿಸುತ್ತಿದೆ.’ ಎಂದು ಹೇಳಿತು.

ನೀತಿ: ಸ್ವಲ್ಪ ವಿವೇಚನೆ ಇದ್ದರೆ ಆಪತ್ತಿನಿಂದ ಪಾರಾಗಬಹುದು. 

***

ತೋಳ ಮತ್ತು ಕುದುರೆ

ಜೋಳದ ಹೊಲದಿಂದ ಹೊರಗೆ ಬಂದ ತೋಳವೊಂದು ಒಂದು ಕುದುರೆಯನ್ನು ಭೇಟಿಯಾಯಿತು. ತೋಳ ಕುದುರೆಗೆ ಹೀಗೆ ಹೇಳಿತು, ‘ಕುದುರೆಯಣ್ಣಾ, ಅಲ್ಲಿ ಕಾಣುತ್ತಿರುವ ಹೊಲಕ್ಕೆ ಹೋಗು, ಆ ಹೊಲವು ಜೋಳದ ಬೆಳೆಗಳಿಂದ ತುಂಬಿದೆ. ನಾನು ನಿನಗೋಸ್ಕರ ಆ ಬೆಳೆಯನ್ನು ತಿನ್ನದೇ ಬಿಟ್ಟು ಬಂದಿರುವೆ. ನೀನು ನನ್ನ ಗೆಳೆಯನಾದ್ದರಿಂದ ಜೋಳದ ಹುಲ್ಲುಗಳನ್ನು ನಾನು ತಿನ್ನದೇ ನಿನಗೋಸ್ಕರ ಬಿಟ್ಟು ಬಂದಿದ್ದೇನೆ. ನೀನು ಆ ಹುಲ್ಲನ್ನು ಮೇಯುವುದನ್ನು ನೋಡುವುದೇ ಒಂದು ಸೊಬಗು ನನಗೆ'. ತೋಳದ ಮಾತಿಗೆ ಕುದುರೆ ಪ್ರತಿಕ್ರಿಯೆ ನೀಡುತ್ತಾ ‘ಜೋಳದ ಹುಲ್ಲು ತೋಳದ ಆಹಾರವಾಗಿದ್ದರೆ ನೀನು ನಿನ್ನ ಹೊಟ್ಟೆಯನ್ನು ಬಲಿಕೊಟ್ಟು ನಾನು ತಿನ್ನುವ ಹುಲ್ಲಿನ ಸದ್ದನ್ನು ಕೇಳಿ ನೀನು ಸಂತೋಷ ಪಡುತ್ತಿರಲಿಲ್ಲ' ಎಂದು ಹೇಳಿತು.

ನೀತಿ: ಕುಖ್ಯಾತಿಯ ಜನರು ಒಳ್ಳೆಯ ಕೆಲಸವನ್ನು ಮಾಡಿದಾಗ ಅದಕ್ಕೆ ಸೂಕ್ತ ಗೌರವವನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ.

***

ಒಂಟೆ ಮತ್ತು ದೇವತೆ

ಒಮ್ಮೆ ಒಂಟೆಯು ಕೊಂಬುಗಳಿಂದ ಅಲಂಕೃತವಾಗಿರುವ ಗೂಳಿಯನ್ನು ನೋಡಿ ಅಸೂಯೆಪಟ್ಟಿತು. ಹಾಗೂ ತಾನೂ ಸಹ ಕೊಂಬುಗಳನ್ನು ಹೊಂದಬೇಕೆಂದು ಬಯಸಿತು. ಅದಕ್ಕಾಗಿ ಒಂಟೆ ದೇವತೆಯ ಬಳಿ ಹೋಗಿ ತನಗೆ ಕೊಂಬುಗಳನ್ನು ದಯಪಾಲಿಸಬೇಕಾಗಿ ಬೇಡಿಕೊಂಡಿತು. ಒಂಟೆಯ ಈ ಬೇಡಿಕೆಯಿಂದ ವನ ದೇವತೆ ಬೇಸರಪಟ್ಟುಕೊಂಡಿತು. ಏಕೆಂದರೆ ಒಂಟೆ ತನಗಿದ್ದ ದೊಡ್ದ ದೇಹ ಮತ್ತು ಶಕ್ತಿಯಿಂದ ತೃಪ್ತವಾಗದೆ ಇನ್ನೂ ಹೆಚ್ಚಿನದಕ್ಕೆ ಆಸೆ ಪಡುತ್ತಿತ್ತು. ದೇವತೆ ಒಂಟೆಗೆ ಕೊಂಬುಗಳನ್ನು ನೀಡಲು ನಿರಾಕರಿಸಿತಲ್ಲದೇ ಅದರ ಕಿವಿಯ ಸ್ವಲ್ಪ ಭಾಗವನ್ನೂ ಕಿತ್ತುಕೊಂಡಿತು.

ನೀತಿ: ಅತಿಯಾಸೆ ಗತಿಗೇಡು.

***

(ಆಧಾರ) ಚಿತ್ರ ಕೃಪೆ: ಇಂಟರ್ನೆಟ್ ತಾಣ