ಇನ್ನಷ್ಟು ಈಸೋಪನ ಕಿರುಗತೆಗಳು

ಇನ್ನಷ್ಟು ಈಸೋಪನ ಕಿರುಗತೆಗಳು

ಕಳೆದ ವಾರ ಪ್ರಕಟಿಸಿದ ಈಸೋಪನ ಕತೆಗಳನ್ನು ಓದಿ ಹಲವಾರು ಮಂದಿ ವೈಯಕ್ತಿಕವಾಗಿ ಪ್ರತಿಕ್ರಿಯಿಸಿ, ಈ ಕಥೆಗಳನ್ನು ಓದಿ ನಮಗೆ ನಾವು ಸಣ್ಣವರಿದ್ದಾಗಿನ ಕತೆಗಳ ನೆನಪಾಯಿತು ಎಂದಿದ್ದಾರೆ. ಈಸೋಪನ ಕಥೆಗಳನ್ನು ಓದಿ ಸಣ್ಣವರಿದ್ದಾಗ ಓದಿದ  ಪಂಚತಂತ್ರ ಕಥೆಗಳು, ದಿನಕ್ಕೊಂದು ಕಥೆಗಳು, ಅರೇಬಿಯನ್ ನೈಟ್ಸ್ ಕಥೆಗಳು, ವಿಕ್ರಮ ಭೇತಾಳ ಕಥೆಗಳು ಮುಂತಾದುವುವುಗಳ ನೆನಪಾದವು. ನಿಜಕ್ಕೂ ಈಗಿನ ಮಕ್ಕಳು ಈ ಕಥೆಗಳನ್ನು ಆಸ್ವಾದಿಸಿಕೊಳ್ಳುತ್ತಿಲ್ಲ. ಮಕ್ಕಳಿಗಾಗಿ ಈ ಎಲ್ಲ ಕಥೆಗಳು ಕಾರ್ಟೂನ್ ರೂಪದಲ್ಲಿ ವಿಡಿಯೂ ಮೂಲಕ ಅಂತರ್ಜಾಲದಲ್ಲಿ ಸಿಗುತ್ತವೆ. ಆದರೆ ಇದನ್ನು ನೋಡಲು ಅವರಿಗೆ ಆಸಕ್ತಿಯೇ ಇಲ್ಲ. ಈ ಕಥೆಗಳು ಕೇವಲ ಕಥೆಗಳಲ್ಲ. ನೀತಿಯುಕ್ತ ಕಥೆಗಳು. ಪ್ರತಿಯೊಂದು ಕಥೆ ಏನಾದರೂ ಹಿತೋಪದೇಶವನ್ನು ಹೇಳುತ್ತದೆ. ದೊಡ್ಡವರಾದ ನೀವಾದರೂ ನಿಮ್ಮ ಮಕ್ಕಳಿಗೆ ಈಸೋಪನ ನೀತಿ ಕಥೆಗಳನ್ನು ಓದಿ ಹೇಳಲು ಪ್ರಯತ್ನ ಪಡಿ.

***

ಸಿಂಹ, ತೋಳ ಮತ್ತು ನರಿ

ಒಂದು ಕಾಡಿನಲ್ಲಿ ಮೃಗರಾಜನಾಗಿದ್ದ ಸಿಂಹ ಕಾಯಿಲೆಗೆ ಬಿದ್ದು ಗುಹೆಯಲ್ಲಿ ಮಲಗಿತು. ನರಿಯೊಂದನ್ನು ಬಿಟ್ಟು ಉಳಿದ ಎಲ್ಲ ಪ್ರಾಣಿಗಳು ತಮ್ಮ ಮೃಗರಾಜನನ್ನು ಭೇಟಿಯಾಗಲು ಬಂದವು. ಪ್ರಾಣಿಗಳೆಲ್ಲ ಮೃಗರಾಜನ ಯೋಗಕ್ಷೇಮ ವಿಚಾರಿಸಿದವು ಹಾಗೂ ಕಾಯಿಲೆ ಬೇಗ ವಾಸಿಯಾಗುವಂತೆ ನಮ್ಮ ಸದಿಚ್ಛೆ ವ್ಯಕ್ತಪಡಿಸಿದವು.

ಈ ಸಮಯದಲ್ಲಿ ನಯವಂಚಕ ತೋಳ ಇದು ತನಗೆ ದೊರೆತಿರುವ ಉತ್ತಮ ಅವಕಾಶವೆಂದು ತಿಳಿದು ನರಿಯನ್ನು ನಿಂದಿಸಿತು. ‘ ಮೃಗರಾಜರಾದ ತಾವು ಕಾಯಿಲೆಯಿಂದ ನರಳುತ್ತಿದ್ದರೂ ನರಿ ನಿಮ್ಮನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸುವ ಸೌಜನ್ಯವನ್ನು ಹೊಂದಿಲ್ಲ. ಆತ ನಿಮಗೆ ಅವಮಾನ ಮಾಡುತ್ತಿದ್ದಾನೆ' ಎಂದು ಹೇಳಿತು. ಕಡೆಯ ಮಾತುಗಳನ್ನು ಹೇಳುತ್ತಿರುವ ಸಮಯಕ್ಕೆ ಸರಿಯಾಗಿ ನರಿ ಅಲ್ಲಿಗೆ ಹಾಜರಾಗಿ ತೋಳದ ನಿಂದನೆಯ ಮಾತುಗಳನ್ನು ಕೇಳಿಸಿಕೊಂಡಿತು.

ನರಿ ಸಿಂಹದ ಮುಂದೆ ಬಂದಾಗ ಸಿಂಹ ಕೋಪದಿಂದ ಗರ್ಜಿಸತೊಡಗಿತು. ನರಿ ಸಿಂಹಕ್ಕೆ ಸ್ವಲ್ಪ ಸಾವಧಾನದಿಂದ ತನ್ನ ಮಾತುಗಳನ್ನು ಕೇಳಬೇಕಾಗಿ ವಿನಂತಿಸಿಕೊಂಡಿತು. 

‘ಮೃಗರಾಜ ನಿನ್ನ ಹತ್ತಿರಕ್ಕೆ ಬಂದ ಇವರೆಲ್ಲರಿಂದ ನಿನಗೆ ಆದ ಅನುಕೂಲವಾದರೂ ಏನು? ನಾನಾದರೂ ದೂರದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ವೈದ್ಯರನ್ನು ಭೇಟಿಯಾಗಿ ನಿಮ್ಮ ಕಾಯಿಲೆಯನ್ನು ಹೇಗೆ ವಾಸಿ ಮಾಡಬೇಕು ಎಂಬುದನ್ನು ತಿಳಿದುಕೊಂಡು ಬಂದಿದ್ದೇನೆ'ಎಂದು ಹೇಳಿತು ನರಿ.

ಸಿಂಹ ಕೂಡಲೇ ತನ್ನ ರೋಗ ವಾಸಿ ಮಾಡುವ ಔಷಧಿಯನ್ನು ಹೇಳಬೇಕೆಂದು ನರಿಯನ್ನು ಆಗ್ರಹಿಸಿತು. ನರಿ ‘ಮೃಗರಾಜ ನೀವು ಜೀವಂತ ತೋಳದ ಚರ್ಮ ಸುಲಿದು ಆ ಚರ್ಮ ಇನ್ನೂ ಬಿಸಿಯಾಗಿರುವಾಗಲೇ ನಿಮ್ಮ ಮೈ ಸುತ್ತ ಹೊದ್ದುಕೊಳ್ಳಬೇಕು ಎಂದು ಹೇಳಿತು. ತಕ್ಷಣ ಸಿಂಹ ತೋಳವನ್ನು ಹಿಡಿದು ಅದರ ಚರ್ಮ ಸುಲಿಯಿತು. ನರಿ ತೋಳನ ಕಡೆಗೆ ತಿರುಗಿ ಹುಸಿನಗೆ ಬೀರುತ್ತಾ ‘ನೀನು ನನ್ನ ಒಡೆಯನಿಗೆ ದುರ್ಬೋದನೆ ಮಾಡಿದೆ. ಒಳ್ಳೆಯ ಭಾವನೆ ಹುಟ್ಟುವಂತೆ ಮಾತನಾಡಬೇಕಿತ್ತು' ಎಂದು ಹೇಳಿತು.

ನೀತಿ: ಚಾಡಿಕೋರತನಕ್ಕೆ ಎಲ್ಲ ಸಮಯದಲ್ಲೂ ಮನ್ನಣೆ ದೊರೆಯಲಾರದು. ಅದರಿಂದ ತಾತ್ಕಾಲಿಕ ಲಾಭಕ್ಕಿಂತ ದೂರದ ನಷ್ಟವೇ ಹೆಚ್ಚು. 

***

ಮುಯ್ಯಿಗೆ ಮುಯ್ಯಿ

ಒಂದು ಕಾಡಿನಲ್ಲಿ ಒಮ್ಮೆ ಒಂದು ನರಿ ಮತ್ತು ಕೊಕ್ಕರೆ ಸ್ನೇಹ ಬೆಳೆಸಿದವು. ಹೀಗೆ ಸ್ನೇಹ ಮುಂದುವರೆದಿರಬೇಕಾದರೆ ಒಂದು ದಿನ ನರಿಯು ಕೊಕ್ಕರೆಯನ್ನು ತನ್ನ ಮನೆಗೆ ಬಂದು ಊಟ ಮಾಡಬೇಕೆಂದು ಆಹ್ವಾನಿಸಿತು. ಭೋಜನಕ್ಕಾಗಿ ನರಿ ಪಾಯಸವನ್ನು ತಯಾರಿಸಿತ್ತು. ನರಿ ಅಗಲವಾದ ಕಲ್ಲಿನ ತಟ್ಟೆಗೆ ಪಾಯಸವನ್ನು ಸುರಿದು ಅದನ್ನು ತಿನ್ನುವಂತೆ ಕೊಕ್ಕರೆಗೆ ಹೇಳಿತು. ಕೊಕ್ಕರೆ ಉದ್ದವಾದ ಕೊಕ್ಕುಗಳಿಂದ ಅಗಲವಾದ ತಟ್ಟೆಯಲ್ಲಿನ ಪಾಯಸವನ್ನು ತಿನ್ನಲು ಅದಕ್ಕೆ ಕಷ್ಟವಾಗುತ್ತಿತ್ತು. ಕೊಕ್ಕರೆ ಪಾಯಸವನ್ನು ತಿನ್ನಲು ಸಾಧ್ಯವಾಗದೆ ಪೇಚಾಡುತ್ತಿರುವುದನ್ನು ನೋಡಿ ನರಿ ಬಹಳ ಪರಿಹಾಸ್ಯ ಮಾಡಿ ನಕ್ಕಿತು.

ಕೆಲ ದಿನಗಳ ನಂತರ ಕೊಕ್ಕರೆಯು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ನರಿಯನ್ನು ಆಹ್ವಾನಿಸಿತು. ಈಗ ಕೊಕ್ಕರೆ ಚಿಕ್ಕ ಬಾಯಿಯಿರುವ ಉದ್ದವಾದ ಹೂಜಿಗೆ ಪಾಯಸವನ್ನು ಸುರಿದು ಅದರಲ್ಲಿ ಊಟ ಮಾಡುವಂತೆ ನರಿಗೆ ಹೇಳಿತು. ಕೊಕ್ಕರೆ ಅಂತಹದೇ ಹೂಜಿಗೆ ಪಾಯಸವನ್ನು ಹಾಕಿಕೊಂಡು ಸೊಗಸಾಗಿ ಊಟ ಮಾಡಿತು. ಆದರೆ ನರಿಗೆ ಹೂಜಿಯಲ್ಲಿ ತನ್ನ ಬಾಯಿಯೇ ಹಾಕಲು ಆಗುತ್ತಿರಲಿಲ್ಲ. ಹಾಗಾಗಿ ಪಾಯಸವನ್ನು ತಿನ್ನುವುದಿರಲಿ ರುಚಿ ನೋಡಲೂ ಆಗಲಿಲ್ಲ. ತಾನು ಈ ಮುಂಚೆ ಕೊಕ್ಕರೆಗೆ ಮಾಡಿದ ಅವಮಾನದಿಂದ ಕೊಕ್ಕರೆ ಮುಯ್ಯಿ ತೀರಿಸಿಕೊಳ್ಳುತ್ತಿರುವುದು ನರಿಗೆ ತಿಳಿಯಿತು.

ನೀತಿ: ಇನ್ನೊಬ್ಬರಿಗೆ ಅಪಹಾಸ್ಯ ಮಾಡಿದರೆ ಅದು ಇನ್ನೊಮ್ಮೆ ನಿಮಗೇ ಹಿಂದಿರುಗುತ್ತದೆ.

***

ಸತ್ಯ ಮತ್ತು ಪ್ರಯಾಣಿಕ

ಕಾಲ್ನಡಿಗೆಯ ಒಬ್ಬ ವ್ಯಕ್ತಿ ಮರಳುಗಾಡಿನಲ್ಲಿ ಪ್ರಯಾಣ ಮಾಡುತ್ತಾ ಒಬ್ಬ ಹೆಂಗಸನ್ನು ಭೇಟಿಯಾದನು. ಆಕೆ ಮರಳುಗಾಡಿನ ಮಧ್ಯೆ ಏಕಾಂಗಿಯಾಗಿ ಬಹಳ ಬೇಸರದಿಂದ ನಿಂತಿದ್ದಳು. ಪ್ರಯಾಣಿಕ ‘ನೀನು ಯಾರು?’ ಎಂದು ವಿಚಾರಿಸಿದನು. ‘ನನ್ನ ಹೆಸರು ಸತ್ಯ' ಎಂದು ಆಕೆ ಉತ್ತರಿಸಿದಳು.

‘ಯಾವ ಕಾರಣಕ್ಕಾಗಿ ನೀನು ನಗರವನ್ನು ಬಿಟ್ಟು ಮರಳುಗಾಡಿನಲ್ಲಿ ಒಬ್ಬಳೇ ವಾಸಿಸುತ್ತಿದ್ದೀಯಾ?’ ಎಂದು ಪ್ರಯಾಣಿಕ ಮರು ಪ್ರಶ್ನೆ ಮಾಡಿದ. ಅದಕ್ಕೆ ಉತ್ತರವಾಗಿ ‘ಏಕೆಂದರೆ ಬಹಳ ಹಿಂದೆ ಸುಳ್ಳು ಕೆಲವೇ ಜನರೊಂದಿಗೆ ಇತ್ತು. ಆದರೆ ಈಗ ಎಲ್ಲರ ಬಳಿಯೂ ಸುಳ್ಳಿದೆ.’ ಎಂದು ಹೇಳಿದಳು.

ನೀತಿ: ನಯವಂಚಕ ಸುಳ್ಳಿನ ಎದುರು ಸತ್ಯಕ್ಕೆ ಈಗ ಜಾಗವಿಲ್ಲದಾಗಿದೆ.  

***

(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ