ಇನ್ನು ಸ್ವಲ್ಪ ದೂರ ಮಾತ್ರ!
ಒಂದು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆಯೊಬ್ಬರ ಹತ್ತಿರ ಹಲವಾರು ಬ್ಯಾಗುಗಳನ್ನು ಹೊತ್ತ ಯುವಕನೊಬ್ಬನು ಬಂದು ಕುಳಿತನು. ಯುವಕನ ಬ್ಯಾಗುಗಳಿಂದಾಗಿ ಆ ವೃದ್ಧೆಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವೇ ಆಯಿತು. ಆ ವೃದ್ಧೆಯ ಅವಸ್ಥೆಯನ್ನು ನೋಡಿ ಕನಿಕರಗೊಂಡ ಪಕ್ಕದಲ್ಲಿ ನಿಂತಿದ್ದ ಒಬ್ಬಾತ ಆ ವೃದ್ಧೆಯ ಹತ್ತಿರ ಕೇಳಿದ: "ನೀವು ಯಾಕೆ ಪ್ರತಿಕ್ರಿಯಿಸುತ್ತಿಲ್ಲ? ಆ ಯುವಕನಿಗೆ ಬ್ಯಾಗುಗಳನ್ನು ಕೆಳಗಿಡಲು ಅಥವಾ ಬಸ್ ಡಿಕ್ಕಿಯಲ್ಲಿ ಹಾಕಲು ಯಾಕೆ ಹೇಳುತ್ತಿಲ್ಲ?"
ಆಗ ಆ ವೃದ್ಧೆ ಮುಗುಳ್ನಗುತ್ತಾ ಹೇಳಿದರು: "ಇಷ್ಟು ಚಿಕ್ಕ ವಿಷಯಕ್ಕೆ ನಾನೇಕೆ ಪ್ರಾಧಾನ್ಯತೆ ಕೊಡಬೇಕು? ಅವನ ಜೊತೆ ಯಾಕೆ ಚರ್ಚಿಸಬೇಕು? ನಂತರ ಜಗಳ, ಆನಂತರ ಕೋಪ, ಆಮೇಲೆ ದ್ವೇಷ ಹುಟ್ಟಿಕೊಳ್ಳುತ್ತದೆ, ಕೊನೆಗೆ ತಾಳ್ಮೆಯೇ ಕಳೆದುಹೋಗುತ್ತದೆ, ನಾನು ಮುಂದಿನ ನಿಲ್ದಾಣದಲ್ಲಿ ಇಳಿಯುತ್ತೇನೆ, ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರ!"
***
ಆತ್ಮೀಯರೇ.
ನಿಜವಾಗಿಯೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಒಂದು ದೊಡ್ಡ ಸಂದೇಶವನ್ನೇ ಆ ವೃದ್ಧೆ ಹೇಳಿರುವುದು. ನಮ್ಮ ಒಟ್ಟಿಗಿನ ಈ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರ! ಏಕೆಂದರೆ ನಮ್ಮೆಲ್ಲರ ಈ ಜೀವನ ಎಷ್ಟೊಂದು ನಶ್ವರ ಮತ್ತು ಚಿಕ್ಕದು. ನಿಮ್ಮ ಹೃದಯವನ್ನು ಯಾರಾದರೂ ನೋಯಿಸಿದ್ದಾರಾ? ಅವರನ್ನು ಕ್ಷಮಿಸಿ. ಯಾಕೆಂದರೆ ಒಟ್ಟಿಗಿನ ಈ ಪ್ರಯಾಣ ಇನ್ನು ಸ್ವಲ್ಪ ದೂರ ಮಾತ್ರ!
ನಿಮ್ಮನ್ನು ಯಾರಾದರೂ ಅವಮಾನಿಸಿದರೇ? ನಿಮಗೆ ಯಾರಾದರೂ ಮೋಸ ಮಾಡಿದರೇ? ನಿಂದಿಸಿದರೇ? ಬೇಸರ ಮಾಡಿಕೊಳ್ಳದಿರಿ. ಈ ಒಟ್ಟಿಗಿನ ಜೀವನ ಯಾತ್ರೆಯು ಇನ್ನು ಸ್ವಲ್ಪ ದೂರ ಮಾತ್ರ! ನಿಮ್ಮ ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ನಿಂದಿಸಲ್ಪಟ್ಟರೆ, ಶಿಕ್ಷಿಸಲ್ಪಟ್ಟರೆ, ಚಿಂತಿಸಬೇಡಿ.
ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ದೂರ ಮಾತ್ರ! ಮನಸ್ಸಲ್ಲಿ ಪ್ರೀತಿ, ಸ್ನೇಹ, ಮಾಧುರ್ಯವನ್ನು ತುಂಬಿಕೊಳ್ಳಿ, ಅವು ನಿಮಗೆ ಒಂದು ಅನುಗ್ರಹವಾಗಿವೆ. ಶತ್ರುಗಳಿಗೋ ಅಥವಾ ದ್ವೇಷಿಸುವವರಿಗೋ ಸಿಗದವುಗಳಾಗಿದೆ ಅವು. ಆದುದರಿಂದ, ಇನ್ನುಳಿದ ಕಾಲ ಸಂತೋಷದಿಂದಲೂ, ಸ್ನೇಹದಿಂದಲೂ ಪರೋಪಕಾರದಿಂದಲೂ ಪರಸ್ಪರರನ್ನು ಕ್ಷಮಿಸುತ್ತಾ, ಸಹಿಸುತ್ತಾ ಮುಂದೆ ಸಾಗೋಣ.
ನಮ್ಮ ಜೀವನ ಪ್ರಯಾಣವು ಯಾವಾಗ ಕೊನೆಯಾಗುತ್ತದೆ ಎಂದು ಭಗವಂತನಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಇಂದು ಇದ್ದ ವ್ಯಕ್ತಿ ಮರು ಕ್ಷಣ ಇಲ್ಲವಾಗುವ ಈ ನಶ್ವರ ಲೋಕದಲ್ಲಿ ನಾವು ಯಾಕೆ ದ್ವೇಷವನ್ನು ಮನದಲ್ಲಿ ಇಟ್ಟುಕೊಂಡು ಬೆಳೆಸಬೇಕು. ಓರ್ವ ವ್ಯಕ್ತಿಯ ಬಗ್ಗೆ ನಿಮಗೆ ಅಸಮಧಾನವಿದೆಯೇ, ಆ ವ್ಯಕ್ತಿಯ ಭಾವವನ್ನು ಮನಸ್ಸಿನಿಂದ ಅಳಿಸಿಹಾಕಿ. ಅವರ ಬಗ್ಗೆ ಯೋಚಿಸಲೇ ಬೇಡಿ. ಪ್ರತೀ ಕ್ಷಣ ಅವರನ್ನು ಯೋಚಿಸಿ, ಅವರಿಗೆ ಹೇಗೆ ಹಾನಿ ಮಾಡಲಿ? ದ್ವೇಷ ತೀರಿಸಿಕೊಳ್ಳಲಿ ಎಂದು ಚಿಂತಿಸತೊಡಗಿದರೆ ನಷ್ಟ ನಮಗೇ. ನಮ್ಮ ಅಗತ್ಯದ ಕೆಲಸಗಳು ಈ ಚಿಂತನೆಯಿಂದ ಹಿಂದೆ ಉಳಿದು ಬಿಡುತ್ತವೆ. ಪ್ರೀತಿಪಾತ್ರರ ಜೊತೆಗೆ ಕಳೆಯ ಬೇಕಾದ ಉತ್ತಮ ಸಮಯವನ್ನು ನಾವು ದ್ವೇಷದ ಚಿಂತನೆಯಿಂದ ಹಾಳು ಮಾಡಿಬಿಡುತ್ತೇವೆ. ಸಮಯದ ಸದುಪಯೋಗ ಅಗತ್ಯ.
ಈಗಂತೂ ನಾವು ರಾಕೆಟ್ ಯುಗದಲ್ಲಿದ್ದೇವೆ. ದಿನದ ೨೪ ಗಂಟೆಯೂ ಸಾಕಾಗುವುದಿಲ್ಲ ಎಂದು ಬದುಕುವವರಿದ್ದಾರೆ. ನಮಗೆ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಮತ್ತು ಯೋಜನೆ ಅತ್ಯಗತ್ಯ. ಇಂದು ಕಳೆದ ಸಮಯ ಮತ್ತೆ ಬಾರದು. ಬೆಳೆದು ದೊಡ್ಡವರಾದ ಬಳಿಕ ನಾವು ಹಿಂದಿರುಗಿ ನೋಡಿದಾಗ ಸಮಯವನ್ನು ಹಾಗೆ ಕಳೆಯಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಯೋಚಿಸಿ ಪ್ರಯೋಜನವಿಲ್ಲ. ಅದು ಕಳೆದಾಗಿದೆ. ಇನ್ನು ನಮ್ಮ ಮುಂದಿರುವುದು ಇಂದು ಮತ್ತು ನಾಳೆ. ನಾಳೆಯನ್ನು ನೋಡಿದವರಿಲ್ಲ. ಆದರೆ ನಾವಿಂದು ಸಿಕ್ಕಿದ ಸಮಯ ಮತ್ತು ಅವಕಾಶಗಳನ್ನು ಎರಡೂ ಕೈಯಿಂದ ಬಾಚಿಕೊಳ್ಳೋಣ. ಆತ್ಮೀಯರ ಜೊತೆಗಿನ ಒಡನಾಟವನ್ನು ಮರೆಯದಿರೋಣ. ಸಜ್ಜನರ ಸಂಗ ಯಾವತ್ತೂ ಹಿತಕರ. ನಮಗೆ ಯಾರು ಹಿತವರು? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಅವರಿಗಾಗಿ ಸಮಯ ಕೊಡೋಣ. ಮಕ್ಕಳು ಸಣ್ಣವರಿರುವಾಗ ನಾವು ಸಮಯ ಕೊಡದಿದ್ದರೆ, ದೊಡ್ಡವರಾದ ಬಳಿಕ ಅವರಿಗೆ ನಮ್ಮ ಅಗತ್ಯವೇ ಇರುವುದಿಲ್ಲವಲ್ಲಾ. ಆಗ ಯೋಚಿಸಿ ಪ್ರಯೋಜನವಿಲ್ಲ. ನೀವು ಎಷ್ಟೇ ತುರ್ತು ಕೆಲಸದಲ್ಲಿದ್ದರೂ ಅವರಿಗಾಗಿ ದಿನದ ಒಂದು ನಿರ್ದಿಷ್ಟ ಸಮಯ ಮೀಸಲಿಡಿ. ಈ ವಿಚಾರ ಬರೆಯುವಾಗ ನನಗೊಂದು ಸಣ್ಣ ಕತೆ ನೆನಪಿಗೆ ಬರುತ್ತದೆ.
ಗಂಡ, ಹೆಂಡತಿ ಮತ್ತು ಪುಟ್ಟ ಮಗುವಿರುವ ಸಂಸಾರವದು. ಗಂಡ ಸದಾ ಕೆಲಸದಲ್ಲಿ ವ್ಯಸ್ತ. ತನ್ನ ಮಗು ಏಳುವ ಮೊದಲೇ ಮನೆ ಬಿಟ್ಟರೆ ಮತ್ತೆ ಹಿಂದಿರುಗುವುದು ಮಗು ಮಲಗಿದ ಮೇಲೆಯೇ. ಅಪ್ಪ ಆ ಮಗುವಿಗೆ ಸದಾ ಅಪರಿಚಿತ. ಮಗುವಿಗೆ ಅಪ್ಪನ ಪ್ರೀತಿಯ ಹಂಬಲ. ಒಮ್ಮೆ ಅಪರೂಪಕ್ಕೆ ಸಿಕ್ಕ ಅಪ್ಪನ ಬಳಿ ಆ ಮಗು ಕೇಳುತ್ತದೆ. ‘ ಅಪ್ಪಾ., ನೀವು ಒಂದು ಗಂಟೆಯಲ್ಲಿ ಎಷ್ಟು ಹಣ ಸಂಪಾದನೆ ಮಾಡುತ್ತೀರಿ?’ ಎಂದು. ಮಗುವಿನ ಪ್ರಶ್ನೆ ಸಿಲ್ಲಿ ಎಂದು ಅನಿಸಿದರೂ ಅಪ್ಪ ಒಂದಿಷ್ಟು ಹಣದ ಮೊತ್ತ ಹೇಳುತ್ತಾನೆ. ಮರುದಿನ ಅಪ್ಪನ ಬಳಿಗೆ ಬಂದ ಮಗ ' ಅಪ್ಪಾ, ನೀವು ನಿನ್ನೆ ಹೇಳಿದ ಮೊತ್ತದಷ್ಟು ಹಣ ತಂದಿದ್ದೇನೆ. ನನ್ನ ಜೊತೆ ಒಂದು ಗಂಟೆ ಕಳೆಯುವಿರಾ?’ ಎನ್ನುತ್ತಾನೆ. ಈ ಮಾತು ಅಪ್ಪನಿಗೆ ಕಪಾಳಕ್ಕೆ ಹೊಡೆದಂತೆ ಭಾಸವಾಗುತ್ತದೆ. ಮುಂದೆಂದೂ ಆ ಅಪ್ಪ ಮಗನಿಗೆ ಸಮಯ ಕೊಡುವುದನ್ನು ತಪ್ಪಿಸುವುದಿಲ್ಲ. ಈ ರೀತಿಯ ಅಪ್ಪ ಅಥವಾ ಅಮ್ಮ ನೀವಾಗಿದ್ದರೆ ಒಮ್ಮೆ ಯೋಚಿಸಿ, ಮಕ್ಕಳಿಗೆ ಸಮಯ ಕೊಡಿ.
ಕೊನೆಯದಾಗಿ, ಹಿಂತಿರುಗಲಾಗದ, ಯಾವಾಗ, ಯಾರು, ಯಾವ, ಸ್ಟಾಪಲ್ಲಿ ಇಳಿಯುವರು ಎಂದು ಮುಂಚೆಯೇ ಹೇಳಲಾಗದ ಈ ಜೀವನ ಎಂಬ ಪ್ರಯಾಣವು...!
ಇನ್ನು ಸ್ವಲ್ಪ ದೂರ ಮಾತ್ರ!
(ಸಾಮಾಜಿಕ ಜಾಲತಾಣವೊಂದರಲ್ಲಿ ಕಂಡ ಬರಹವೊಂದರ ಸ್ಪೂರ್ತಿ)
ಚಿತ್ರ : ಅಂತರ್ಜಾಲ ತಾಣದ ಕೃಪೆ