ಇನ್ನೊಂದು ಮುಖ

ಇನ್ನೊಂದು ಮುಖ

ಕವನ

ಕ್ರೌರ್ಯದ ಏರು ಹೊಸ್ತಿಲಿನಲ್ಲಿ

ಎಡವದ ನಾನು

ಇನ್ನು ಈ ಮುಸ್ಸಂಜೆಯ ಕಾಲದಲ್ಲಿ

ಎಡವುತ್ತೇನೆಯೇ ? 

ಹಿಂದಿನ ನೆನಪುಗಳ ಗತ ವೈಭವದ

ಮೂಸೆಯಲ್ಲಿ ಅರಳಿದ ಹೂವು ನಾನು

ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ

ಪರಿಚಯವಾಗದ ನನ್ನ ಬದುಕು

ನನಗೊಬ್ಬಗೆ ಗೊತ್ತು

ಅದು ಹಾಗೆಯೇ ಇರಲಿ ಸಾವ ತನಕ ! 

 

ಪ್ರೀತಿ ಇತ್ತೆಂದರೆ ಇತ್ತು ಇಲ್ಲವೆಂದರೆ ಇಲ್ಲ

ಆ ಬದುಕೆ ಹಾಗಿತ್ತು ನನ್ನವರ ಬಿಟ್ಟು

ಬದುಕಿಗೆ ಎದುರಾದವರ

ಕೊಚ್ಚಿ ಕೆಡವುತ್ತಿದ್ದೆ ನಿರ್ಧಾಕ್ಷಿಣ್ಯವಾಗಿ

ಕೋಟೆ ಕಟ್ಟಲೇ ಇಲ್ಲ

ಆ ಆಸೆ ಈಗಲೂ ನನಗಿಲ್ಲ

ಇಂದಿಗೂ ಬಾಡಿಗೆ ಮನೆಯಲ್ಲೇ ವಾಸ 

ಗಳಿಸಿದ್ದು ಕೋಟಿ ಕೋಟಿ

ಕಳಕೊಂಡಿದ್ದು ಲಕ್ಷಾಂತರ ಕೋಟಿ

ಆದರೂ ಬೇಸರವಿಲ್ಲ 

ನನ್ನಿಂದಾಗಿ ಇನ್ನೊಬ್ಬರಾದರೂ

ಕೋಟೆ ಮಹಲುಗಳಲ್ಲಿ

ಬದುಕುತ್ತಿದ್ದಾರೆ

ಹೆಂಡತಿ ಮಕ್ಕಳ ಜೊತೆ ನಿಶ್ಚಿಂತೆ !

 

ನಾನು ಕ್ರೌರ್ಯದ ಸಂಕೇತ

ಹಾಗೆಂದು ನನ್ನವರಾರೂ ಜೊತೆಯಲಿಲ್ಲ

ಪ್ರೀತಿಯುಡುಗಿದ ಸಮಯ 

ಮನೆ ಹೊರ ಒಳಗಿನ ವಾತಾವರಣ 

ನನ್ನ ನೇರ ದಿಟ್ಟ ನಿರಂತರದ

ಬದುಕಿಗೆ ಪ್ರೇರಣೆ ನೀಡಿತು

ಇದ್ದ ಕೆಲಸವನ್ನು ಬಿಟ್ಟು ಹೊರಬಂದೆ

ಬದುಕಿನುದ್ದಕ್ಕೂ

ಬೇರೆಯವರಿಗಾಗಿ ಹೋರಾಡಿದೆ 

ನನ್ನವರಿಗಾಗಿ ಮರುಗಲೂ

ಆಗದ ಸಮಯ ಮುಗಿದ ಬಾಳು ! 

 

ಹೀಗಿದ್ದರೂ ಜನ ಪ್ರೀತಿಸುತ್ತಾರೆ

ಹೆದರಿಕೆಯಿಂದಲೋ ಮರುಕದಿಂದಲೋ ಅಲ್ಲ

ಪ್ರೇಮದಿಂದ ಪ್ರೀತಿಯ ಅರ್ಥ ತಿಳಿದಿರುವುದರಿಂದ

ಪ್ರೀತಿಯ ಅರ್ಥ ಗೊತ್ತಿಲ್ಲದ ನನ್ನಿಂದ

ಹೇಗೆ ಹೇಳಲು ಸಾಧ್ಯ ? 

ಕ್ರೌರ್ಯವೇ ನನ್ನ ಬದುಕಾಗಿರುವಾಗ

ಬದಲಾವಣೆ ಆಗುವ ಕಾಲಕ್ಕೆ ಆಗುತ್ತದೆ 

ಗಳಿಕೆ ಇಲ್ಲದಿದ್ದರೂ

ಬದುಕುವುದು ಹೇಗೆಂದು ತಿಳಿದಿದೆ

ಹುಟ್ಟಿಸಿದವ ಹುಲ್ಲು ಮೇಯಿಸದೆ ಇರುತ್ತಾನೆಯೇ ?

 

ಬಾಳಿನುದ್ದಕ್ಕೂ ಮಂಡೆಬೆಚ್ಚವ ಬಿಟ್ಟು

ನನ್ನಿಷ್ಟದಂತೆ ಬದುಕಿದೆ ಬದುಕುತ್ತಿದ್ದೇನೆ 

ಒಳ್ಳೆಯವರ ಬದುಕಿಗಾಗಿ ತುಡಿಯುತ್ತಿದ್ದೇನೆ

ಅಪ್ರಮಾಣಿಕತೆಗೆ  ಮರುಗುತ್ತಾ

ಪ್ರಾಮಾಣಿಕತೆಗೆ ಬೆನ್ನು ತಟ್ಟುತ್ತಿದ್ದೇನೆ

ಗಳಿಸಿದ್ದಕ್ಕಿಂತ ಕಳಕೊಂಡದ್ದು ಜಾಸ್ತಿಯಾದರೂ

ದುಡಿಯುತ್ತಿದ್ದೇನೆ ಸಾವಿಗಾಗಿ ಕಾದು ಕುಳಿತು ಕೊಳ್ಳದೆ

ಯಾಕೆಂದರೆ ಅಂದಿಗೂ ನನ್ನ ಯಾರೂ ಮುಟ್ಟಿಲ್ಲ

ಇಂದಿಗೂ ನನ್ನ ಯಾರೂ ಮುಟ್ಟಲಾರರು !

 

-ಹಾ ಮ  ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್