ಇನ್ನೊಂದು ಸಂತೆ

ಇನ್ನೊಂದು ಸಂತೆ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ. 100/-

ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ ಬೆಂಗಳೂರಿನಲ್ಲಿ ನಿವೃತ್ತರಾದರು. ಈ ಸೇವಾವಧಿಯ ಹಲವಾರು ಅನುಭವಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಎಂಟು ಪುಸ್ತಕಗಳನ್ನು ಬರೆದಿರುವ ಶ್ರೀನಿವಾಸ ವೈದ್ಯರು “ಹಳ್ಳ ಬಂತು ಹಳ್ಳ” ಕಾದಂಬರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು.

ನಿವೃತ್ತಿಯ ನಂತರ ತಮ್ಮ ಸೇವಾವಧಿಯ ಸಿಂಹಾವಲೋಕನ ಮಾಡಿ, ನೆನಪಿನಲ್ಲಿ ಅಚ್ಚಳಿಯದೆ ಉಳಿದ ಅನುಭವಗಳನ್ನು ಓದುಗರ ಮನಮುಟ್ಟುವಂತೆ ಬರೆದಿರುವುದು ವೈದ್ಯರ ಹೆಚ್ಚುಗಾರಿಕೆ. ಯಾವುದೇ ಅತಿರೇಕವಿಲ್ಲದೆ ಮಾನವೀಯ ಸಂಬಂಧಗಳ ನಿರೂಪಣೆ ಮಾಡಿರುವುದು ಅವರ ವಿಶೇಷತೆ. ಇದರಲ್ಲಿನ ಎಲ್ಲ ಪ್ರಸಂಗಗಳೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.

ಪುಸ್ತಕದ ಆರಂಭದ ಬರಹದಲ್ಲಿ “ನನ್ನ ಉದ್ದೇಶ ಆತ್ಮಚರಿತ್ರೆ ಬರೆಯುವದಾಗಿರದೇ, ನನ್ನನ್ನು ಬೆಳೆಸಿದ ನನ್ನ ವೃತ್ತಿಜೀವನದ ಅನುಭವಗಳ ರೋಚಕತೆಯನ್ನು ಓದುಗರೊಡನೆ ಹಂಚಿಕೊಳ್ಳುವದಾಗಿದೆ. ಅದು ಬಿಟ್ಟು, ಇಲ್ಲಿ “ನನ್ನ ಆತ್ಮ”ಕ್ಕಾಗಲೀ ಅದರ “ಚರಿತ್ರೆ”ಗಾಗಲಿ ಹೆಚ್ಚಿನ ಮಹತ್ವವಿಲ್ಲ” ಎಂದು ಶ್ರೀನಿವಾಸ ವೈದ್ಯರು ಸ್ಪಷ್ಟ ಪಡಿಸಿದ್ದಾರೆ.

“ಮುನ್ನುಡಿ”ಯಲ್ಲಿ ವಿವೇಕ ಶಾನುಭಾಗರು ಹೀಗೆಂದು ಬರೆದಿದ್ದಾರೆ: “ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಶ್ರೀನಿವಾಸ ವೈದ್ಯರು ಸಹಜ ಕಥೆಗಾರರು. ಅವರೇನು ಬರೆದರೂ ಅದಕ್ಕೊಂದು ಕಥನದ ಆಕಾರವೂ ಆಂತರ್ಯವೂ ಇರುತ್ತದೆ. ಅಷ್ಟೇ ಅಲ್ಲ, ಅವರ ಜೊತೆ ಹತ್ತು ನಿಮಿಷ ಹರಟೆ ಹೊಡೆದರೂ ಸಾಕು ಅವರ ಮಾತಿಗೂ ಈ ಗುಣವಿರುವುದು ಗೊತ್ತಾಗುತ್ತದೆ….
ಈ ಕೃತಿಗೊಂದು ಸುಸಂಬದ್ಧ ಒಳರಚನೆಯಿದೆ. ಅದನ್ನವರು ಕೌಶಲ್ಯದಿಂದ ಹೆಣೆದಿದ್ದಾರೆ ಕೂಡ. ಅಗತ್ಯವೆನಿಸಿದಲ್ಲಿ ಕೊನೆಗಳನ್ನು ಸ್ಪಷ್ಟವಾಗಿ ಜೋಡಿಸಿದ್ದಾರೆ….”

“ಬೆನ್ನುಡಿ”ಯಲ್ಲಿ ಎಸ್. ದಿವಾಕರ್ ಅವರ ಮಾತುಗಳು: “ಇದುವರೆಗೆ ಕತೆ, ನಗೆಬರಹ, ಕಾದಂಬರಿ ಹೀಗೆ ಸಮೃದ್ಧ ಕಾಲ್ಪನಿಕ ಲೋಕಗಳನ್ನು ಸೃಷ್ಟಿಸಿದ ಶ್ರೀನಿವಾಸ ವೈದ್ಯರು ಇದೀಗಷ್ಟೇ ವಾಸ್ತವ ಪ್ರಪಂಚಕ್ಕೆ “ಎಕ್ಸ್-ಕರ್ಷನ್” ಹೋಗಿ ಬಂದದ್ದರ ಫಲ ಈ ಅಪರೂಪದ ಪುಸ್ತಕ. ಆತ್ಮಚರಿತಾತ್ಮಕ ಎನ್ನಬಹುದಾದ ಈ ಬರಹದಲ್ಲಿ ಆತ್ಮೀಯ ಧಾಟಿಯಿದೆ, ವೈದ್ಯರಿಗೇ ವಿಶಿಷ್ಟವಾದ ವಿನೋದಪ್ರಜ್ಞೆಯಿದೆ; “ಮನದ ಮಾಮರ”ದ ಕೆಳಗೆ ಅದೆಷ್ಟೋ ವರ್ಷಗಳಿಂದ ಬಿದ್ದ ಹಣ್ಣುಗಳಂತಿದ್ದ ಸ್ಥಳಗಳನ್ನು, ಜನರನ್ನು, ಪ್ರಸಂಗಗಳನ್ನು ಉದ್ದೀಪಿಸುವ ಶಕ್ತಿಯಿದೆ. ಜೀವನವನ್ನು ಅತ್ಯಂತ ಉತ್ಕಟವಾಗಿ ಪ್ರೀತಿಸುವ, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಉದಾರ ಮನಸ್ಸೊಂದು ಇಲ್ಲಿ ಸ್ವಾನುಭವವನ್ನು ಅದರ ಸಹಜ ವರ್ಣದಲ್ಲಿ, ಧ್ವನಿಯಲ್ಲಿ, ವಿವರಗಳಲ್ಲಿ, ವಿಸ್ಮಯದಲ್ಲಿ ಹಿಡಿದಿರಿಸಿದೆ.”

ಶ್ರೀನಿವಾಸ ವೈದ್ಯರು ಬರೆದಿರುವ ಕೆಲವು ಅನುಭವಗಳು: ಅವರು ಬ್ಯಾಂಕಿನ ಮುಂಬಯಿಯ ಗಿರಗಾಂವ್ ಶಾಖೆಗೆ ಅಪ್ರೆಂಟೀಸ್ ಆಫೀಸರ್ ಆಗಿ ಉದ್ಯೋಗಕ್ಕೆ ಸೇರಿದ್ದರು. ಆಗ ಅವರಿಗೆ ಸಿಗುತ್ತಿದ್ದ ಸ್ಟೈಪೆಂಡ್ ತಿಂಗಳಿಗೆ ನೂರೈವತ್ತು ರೂಪಾಯಿ. ಅದರಲ್ಲಿ ಹೋಟೆಲ್ ರೂಮಿನ ಬಾಡಿಗೆ ಸರಿದೂಗಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಇವರೂ ಇತರ ಕೆಲವರೂ ಬ್ಯಾಂಕಿನ ಕೌಂಟರಿನಲ್ಲಿ ರಾತ್ರಿ ಮಲಗುತ್ತಿದ್ದರು. ಆಗ ಕೆಲವು ಸಹೋದ್ಯೋಗಿಗಳು ಬ್ಯಾಂಕಿನ ಪುಕ್ಕಟೆ ಟೆಲಿಫೋನನ್ನು ಬಳಸುತ್ತಿದ್ದರು. ಅವರಲ್ಲೊಬ್ಬ ಮುಸ್ಲಿಮನಾದ ಎಂ.ಜೆ. ದೇಸಾಯಿ. ಕೆಲವು ದಿನಗಳ ನಂತರ “ಬ್ಯಾಂಕಿನ ಟೆಲಿಫೋನಿನಿಂದ ಪಾಕಿಸ್ತಾನಕ್ಕೆ ಯಾರು ಕರೆ ಮಾಡುತ್ತಿದ್ದೀರಿ?” ಎಂದು ಪೊಲೀಸರು ತನಿಖೆ ಮಾಡಿದಾಗ ಅದೇ ದೇಸಾಯಿ ಕರಾಚಿಯ ತನ್ನ ಅಕ್ಕನಿಗೆ ಫೋನ್ ಮಾಡುತ್ತಿದ್ದ ಸಂಗತಿ ಪತ್ತೆಯಾಯಿತು. ಇದರಿಂದಾಗಿ, ಬ್ಯಾಂಕಿನಲ್ಲಿ ರಾತ್ರಿ ಮಲಗುವ ಅನುಕೂಲ ಅವರೆಲ್ಲರೂ ಕಳೆದುಕೊಂಡರು.

1970ರಲ್ಲಿ ಶ್ರೀನಿವಾಸ ವೈದ್ಯರಿಗೆ ಅವರ ಊರಿಗೆ ಅಂದರೆ ಧಾರವಾಡಕ್ಕೆ ವರ್ಗವಾಯಿತು - ಹೊಸದಾಗಿ ಆರಂಭವಾಗಲಿದ್ದ ಮೃತ್ಯುಂಜಯ ಶಾಖೆಗೆ ಮೆನೇಜರ್ ಆಗಿ. ಆ ಶಾಖೆ ಧಾರವಾಡದ ಮುರುಘಾ ಮಠದ ಮಹಾಂತ ಸ್ವಾಮಿಗಳಿಂದ ಉದ್ಘಾಟನೆ ಆಯಿತು. ಅಲ್ಲಿದ್ದಾಗಲೇ ವೈದ್ಯರಿಗೆ ಸುಹಾಸಿನಿ ಅವರೊಂದಿಗೆ ಮದುವೆಯಾಯಿತು. ಅಲ್ಲಿದ್ದಾಗಿನ ಹಲವು ಘಟನೆಗಳನ್ನು ವೈದ್ಯರು ಸೊಗಸಾಗಿ ಬರೆದಿದ್ದಾರೆ. ಅವುಗಳಲ್ಲೊಂದು: ಆ ವರುಷ ದ.ರಾ. ಬೇಂದ್ರೆಯವರ “ನಾಕುತಂತಿ”ಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು. ಆಗ ಪ್ರತಿ ಸಂಜೆ ಮನೋಹರ ಗ್ರಂಥಮಾಲೆಯ ಅಟ್ಟದ ಹರಟೆಗಳಲ್ಲಿ ಸೇರುತ್ತಿದ್ದ ಕೆಲವರಿಗೆ ಅದರ ಕವನಗಳು  ಅರ್ಥವಾಗಿರಲಿಲ್ಲ. ಅಂಥವರ ಕೋರಿಕೆಯ ಅನುಸಾರ ಕೀರ್ತಿನಾಥ ಕುರ್ತುಕೋಟಿಯವರು “ನಾಕುತಂತಿ”ಯನ್ನು ಅರ್ಥೈಸುತ್ತ ಮಾತನಾಡಲು ಒಪ್ಪಿಕೊಂಡರು. ಹಲವು ಆಸಕ್ತರು ಸೇರಿದ್ದರಿಂದ ಆ ಸಾಹಿತ್ಯ ಸಭೆ ಮೃತ್ಯುಂಜಯ ಶಾಖೆಯಲ್ಲಿ ಜರಗಿತು. ಕೀರ್ತಿನಾಥರು “ನಾಕುತಂತಿ”ಯ ಒಳಾರ್ಥಗಳನ್ನು ಮಾರ್ಮಿಕವಾಗಿ ಬಿಡಿಸಿ ಬಿಡಿಸಿ ತಿಳಿಸಿದರು. ಆಗ ಆಕಸ್ಮಿಕವಾಗಿ ಅಲ್ಲಿಗೆ ಬಂದ ಬೇಂದ್ರೆಯವರು ಯಾರಿಗೂ ತಿಳಿಯದಂತೆ ಎಲ್ಲರ ಹಿಂದೆ ಕುಳಿತು ಅದನ್ನೆಲ್ಲ ಆಲಿಸಿದರು. ಕೊನೆಗೆ, ಅವರನ್ನು ಕಂಡು ಸಭೆಯಲ್ಲಿ ಇದ್ದವರಿಗೆಲ್ಲ ಉತ್ಸಾಹ, ಮುಜುಗರ, ಗೌಜಿ. ಅನಂತರ ಬೇಂದ್ರೆಯವರು “ಕೀರ್ತಿ ಏನೋ ಭಾಳ ಛೋಲೋ ಹೇಳಿದ ಖರೆ. ಆದರ ನಾ ಬರದದ್ದು ಬ್ಯಾರೇನ” ಎಂದುಬಿಟ್ಟರು! ಅನಂತರ ಸಭಿಕರ ಒತ್ತಾಯಕ್ಕೆ ತಾವೇ ಅರ್ಥೈಸಲು ಎದ್ದು ನಿಂತು, ಕೀರ್ತಿಯವರು ಹೇಳಿದ್ದನ್ನೇ ತಮ್ಮ ಮಾತುಗಳಲ್ಲಿ ಹೇಳಿದರು.

ಮುಂಬಯಿಯ ಗಿರಗಾಂವ್ ಶಾಖೆಗೆ ಶ್ರೀನಿವಾಸ ವೈದ್ಯರಿಗೆ ಎರಡನೇ ಬಾರಿ ವರ್ಗ ಆದಾಗಿನ ಒಂದು ನೆನಪು: ಹಳೆಯ ಗ್ರಾಹಕರಲ್ಲಿ ಒಬ್ಬರಾದ ಹಿಮ್ಮತ್ ರಾಯ್ ಚೌರಾಶಿಯಾ ಅವರದ್ದು. ರಾಜಸ್ಥಾನದ ನೂರೆಂಟು ಸಣ್ಣಪುಟ್ಟ ಸಂಸ್ಥಾನಿಕ ರಾಜರಲ್ಲಿ ಅವರೊಬ್ಬರು. ಮುಂಬಯಿಯ ಪ್ರತಿಷ್ಠಿತ ಬಡಾವಣೆಯಲ್ಲಿ ಅರಮನೆಯಂತಹ ಮನೆಯಲ್ಲಿ ಅವರ ವಾಸ. ಈಗಲೂ ಸಮವಸ್ತ್ರದ ಆಳುಕಾಳುಗಳಿಂದ ಕುರ್ನಿಸಾತ್ ಮಾಡಿಸಿಕೊಳ್ಳುತ್ತ ರಾಜರಂತೆ ದೊಡ್ಡ ಕಾರಿನಲ್ಲಿ  ಓಡಾಡಿಕೊಂಡಿದ್ದರು. ಅವರಿಗೆ ಮಸಾಲೆದೋಸೆಯ ಚಪಲ ವಿಪರೀತ. ಪ್ರತಿ ಶನಿವಾರ ಮಧ್ಯಾಹ್ನ ಶ್ರೀನಿವಾಸ ವೈದ್ಯರೊಂದಿಗೆ “ರಮಣ ವಿಳಾಸ” ಎಂಬ ತಮಿಳರ ಹೋಟೆಲಿನಲ್ಲಿ ಮಸಾಲೆದೋಸೆ ಸವಿಯುತ್ತಿದ್ದರು. ಹಿಂತಿರುಗುವಾಗ, ದಾರಿಯ ಪಕ್ಕ ತರಕಾರಿಯವರ ಜೊತೆ, ನೆಲದಲ್ಲೇ ಕೂತು ನಾಲ್ಕೆಂಟಾಣೆಗಳಿಗೆ ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದರು. ವೈದ್ಯರು ಈ ಬಗ್ಗೆ ಪ್ರಶ್ನಿಸಿದಾಗ, “ಯಾವದಕ್ಕೆಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಡಬೇಕು, ಅದು ವ್ಯವಹಾರ” ಎಂದಿದ್ದರು ಚೌರಾಸಿಯಾ!   

ಮುಂಬಯಿಯ ಮೊಸರು ಕುಡಿಕೆ ಹಬ್ಬದಲ್ಲಿ ತಮ್ಮ ಶಾಖೆಯ ಪ್ಯೂನ್ ಮದ್ಯ ಕುಡಿದು, ಮನುಷ್ಯರ ಪಿರಮಿಡ್ಡಿನ ತುದಿಗೆ ಹತ್ತಿ ಮಡಿಕೆ ಒಡೆದು, ಒಂದು ಸಾವಿರ ರೂಪಾಯಿ ಬಾಜಿ ಗೆದ್ದದ್ದನ್ನು ಕಂಡರು. “ಬಾಬು ರಾವ್ ಮೊದಲೇ ಅಪಾಯದ ಆಟ. ಅದರ ಮೇಲೆ ನೀನು ಕುಡಿದಿರುತ್ತಿಯಲ್ಲ” ಎಂದು ಕೇಳಿದಾಗ ಅವನ ಉತ್ತರ, “ಸಾಹೇಬ, ಕುಡಿಯದಿದ್ದರೆ ಮೇಲೆ ಹೇಗೆ ಹತ್ತುವುದು, ಕಣ್ಣಿಗೆ ಚಕ್ಕರ್ ಬರುವುದಿಲ್ಲವೇ?”

ಮುಂಬಯಿಯಲ್ಲಿ ಉದ್ಯೋಗಕ್ಕೆ ಸೇರಿದ್ದ ಆರಂಭದಲ್ಲೊಮ್ಮೆ ಚೌಪಾಟಿ ಸಮುದ್ರದಲ್ಲಿ ಸಂಜೆ ಕುಳಿತಿದ್ದಾಗ ಏಕಾಂಗಿತನದ ಒತ್ತಡ ತಡೆಯಲಾಗದೆ ಅತ್ತು ಬಿಟ್ಟದ್ದು; ಉಲ್ಲಾಸ ನಗರದ ಶಾಖೆಯಲ್ಲಿ “ಕೆ.ಟಿ. ಆಯಿಲ್ ಆಂಡ್ ಸೋಪ್” ಎಂಬ ಸಾಬೂನು ತಯಾರಿಕಾ ಘಟಕಕ್ಕೆ ಕೊಟ್ಟಿದ್ದ ಲಕ್ಷಗಟ್ಟಲೆ ರೂಪಾಯಿ ಸಾಲದ ವಸೂಲಿಗಾಗಿ ಶ್ರೀನಿವಾಸ ವೈದ್ಯರು ಕಠಿಣ ಕ್ರಮಗಳನ್ನು ಕೈಗೊಂಡಾಗ, ಆ ಘಟಕದ ಮಾಲೀಕ ಕಂಪೆನಿಯ ಲೆಕ್ಕಪತ್ರ ನೋಡಿಕೊಳ್ಳುವ ನೆವದಲ್ಲಿ ಚೆಲ್ಲುಚೆಲ್ಲು ಚೆಲುವೆಯೊಬ್ಬಳನ್ನು ನೇಮಿಸಿ, ತನ್ನನ್ನು ಖೆಡ್ಡಾಕ್ಕೆ ಬೀಳಿಸಲು ಪ್ರಯತ್ನಿಸಿದ್ದು; ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಶಾಖೆಯ ಮೆನೇಜರ್ ಆಗಿದ್ದಾಗ, ಒಂದು ಸಂಜೆ ಶಾಖೆಗೆ ಬರುತ್ತಿದ್ದಾಗ ಆಕಾಶದಲ್ಲಿ ಮೂಡಿದ್ದ ಕಾಮನಬಿಲ್ಲು ಕಂಡು ಉಂಟಾದ ಅಲೌಕಿಕ ಅನುಭವ - ಇವೆಲ್ಲ ಓದುಗರ ಮೇಲೆ ಆಳವಾದ ಪರಿಣಾಮ ಬೀರುತ್ತವೆ.

ಶ್ರೀನಿವಾಸ ವೈದ್ಯರು ಹಂಚಿಕೊಂಡಿರುವ ಅನುಭವಗಳ ಹಿಂದಿರುವ ಅವರ ಸಂವೇದನಾಶೀಲ ಮನಸ್ಸು, ಅವನ್ನು ದಾಖಲಿಸುವಾಗ ಬಳಸಿರುವ ಸಂಯಮದ ಭಾಷೆ, ಅವರ ಪ್ರಾಮಾಣಿಕತೆ - ಇವು ಕಾರ್ಪೊರೇಷನ್ ಬ್ಯಾಂಕಿನಲ್ಲಿ 37 ವರುಷ ಸೇವೆ ಸಲ್ಲಿಸಿ ನಿವೃತ್ತನಾದ ನನ್ನನ್ನು ಗಾಢವಾಗಿ ತಟ್ಟಿವೆ. ಮಧ್ಯಮವರ್ಗದ ಯುವಕನೊಬ್ಬನ ವೃತ್ತಿಜೀವನದ ಏಳುಬೀಳುಗಳು, ಜೊತೆಜೊತೆಗೇ ಆ ಕಾಲಘಟ್ಟದಲ್ಲಿ ಭಾರತದಲ್ಲಿ ಆಗುತ್ತಿದ್ದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ಸಮರ್ಥವಾಗಿ ಕಟ್ಟಿಕೊಡುವ ‘ಇನ್ನೊಂದು ಸಂತೆ” ಎಲ್ಲರೂ ಓದಲೇ ಬೇಕಾದ ಕೃತಿ.