ಇಪ್ಪತ್ತು ವರುಷ ತರಕಾರಿ ಕೃಷಿಯ ಹರುಷ

ಇಪ್ಪತ್ತು ವರುಷ ತರಕಾರಿ ಕೃಷಿಯ ಹರುಷ

ಮಂಗಳೂರಿನ ಕದ್ರಿಪಾರ್ಕಿನಲ್ಲಿ ಅಂದು ಕೃಷಿಮೇಳ. ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರೊಬ್ಬರು ತಾವು ಬೆಳೆಸಿದ ತರಕಾರಿಗಳೊಂದಿಗೆ ಮುಂಜಾನೆಯೇ ಅಲ್ಲಿಗೆ ತಲಪಿದ್ದರು. ಅಲ್ಲಿ ಸಾಲುಗಟ್ಟಿ ನಿಂತಿದ್ದ ಕಾರುಗಳನ್ನು ಕಂಡು ಅವರು ಕೇಳಿದ ಪ್ರಶ್ನೆ: “ಇವರೆಲ್ಲ ಈ ಬೆಳಗ್ಗೆ ಕೃಷಿಮೇಳಕ್ಕೆ ಬಂದಿದ್ದಾರಾ?” ಅದಕ್ಕೆ ಬಳಗದ ಕಾರ್ಯದರ್ಶಿ ರತ್ನಾಕರ ಅವರ ಉತ್ತರ: “ಅಲ್ಲಲ್ಲ, ಅವರೆಲ್ಲ ದಿನವೂ ಇಲ್ಲಿ ವಾಕಿಂಗಿಗೆ ಬರುವವರು.”
ಇದನ್ನು ಕೇಳಿದ ಆ ಸದಸ್ಯರ ಉದ್ಗಾರ:”ಓ ದೇವರೇ, ಇವರಿಗೆಲ್ಲ ಬೆಳಗ್ಗೆಬೆಳಗ್ಗೆ ವಾಕಿಂಗ್ ಮಾಡಲಿಕ್ಕೆ ಪುರುಸೊತ್ತಾ? ನಮಗೆ ಮಾತಾಡಲಿಕ್ಕೂ ಪುರುಸೊತ್ತಾಗೋದಿಲ್ಲ.” ಅವರು ರಾಮಣ್ಣ ಗೌಡ (೪೦). ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ೭ ಕಿಮೀ. ದೂರದಲ್ಲಿರುವ ತನ್ನ ಆಪ್ತರ ಜಮೀನಿನಲ್ಲಿ ಸಾವಯವ ತರಕಾರಿ ಬೇಸಾಯದಲ್ಲಿ ತೊಡಗಿರುವ ರೈತ ಅವರು. (ಮುಂಡಾಜೆ – ಸೋಮತಡ್ಕ ಹಾದಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತಿರ)
ತರಕಾರಿ ಕೃಷಿಯಲ್ಲಿ ರಾಮಣ್ಣ ಗೌಡರದು ಪಳಗಿದ ಕೈ. ಬಾಲ್ಯದಿಂದಲೇ ತರಕಾರಿ ಬೆಳೆಸುತ್ತ ಬೆಳೆದವರು ಅವರು. ಹೈಸ್ಕೂಲು ಕಲಿಯುತ್ತಿದ್ದಾಗಲೇ ತರಕಾರಿ ಕೃಷಿಯಲ್ಲಿ ತೊಡಗಿದ ಅವರಿಗೆ ಈಗ ಇದರಲ್ಲಿ ೨೦ ವರುಷಗಳ ಖಾಸಾ ಅನುಭವ. ತಂದೆಯವರೊಂದಿಗೆ ತರಕಾರಿ ಬೇಸಾಯ ಮಾಡುತ್ತಾ ಅವರು ಕಲಿತದ್ದು – ಬೀಜ ಮೊಳೆಯಿಸಿ, ಸಸಿ ಚಿಗುರಿಸಿ, ಹೂ ಅರಳಿಸಿ, ಮಿಡಿಯಾಗಿಸಿ, ತರಕಾರಿ ಬೆಳೆಸುವ ವಿಸ್ಮಯದ ಗುಟ್ಟುಗಳನ್ನು.
ರಾಮಣ್ಣ ಗೌಡರು ತಾವು ಬೆಳೆದ ತರಕಾರಿಗಳನ್ನು ಮಂಗಳೂರಿನ ಸಾವಯವ ಸಂತೆಗೆ ತರಲಿಕ್ಕಾಗಿ ಒಮ್ನಿ ಕಾರಿಗೆ ತುಂಬುವುದೇ ಒಂದು ಸಾಹಸ. ಅವರು ತಮ್ಮ ಒಮ್ನಿ ಕಾರನ್ನು ಜಮೀನಿಗೆ ಒಯ್ಯುವಂತಿಲ್ಲ. ಯಾಕೆಂದರೆ ಮುಖ್ಯ ರಸ್ತೆಯಿಂದ ಅವರ ಜಮೀನಿಗೆ ಸಾಗುವ ಹಾದಿ, ಕಾರು ಮಗುಚಿ ಬೀಳಬಹುದಾದ ತಿರುವುಗಳಿರುವ ಹಾದಿ. ಹಾಗಾಗಿ, ತಾವು ಬೆಳೆಸಿದ ಬಸಳೆ, ಬದನೆ, ಕುಂಬಳಕಾಯಿ, ತೊಂಡೆಕಾಯಿ, ಸೋರೆಕಾಯಿ, ಪಪ್ಪಾಯಿ ಇವನ್ನೆಲ್ಲ ಅರ್ಧ ಕಿಮೀ. ದೂರ ಹೊತ್ತು ತಂದು ಒಮ್ನಿ ಕಾರಿಗೆ ತುಂಬುತ್ತಾರೆ.
ನಮ್ಮ ಬಳಗವು ಪ್ರತಿ ತಿಂಗಳೂ ಮೂರು ಭಾನುವಾರಗಳಲ್ಲಿ ಜರಗಿಸುವ ಸಾವಯವ ಸಂತೆಗೆ ರಾಮಣ್ಣ ಬೆಳಗ್ಗೆ ಏಳೂವರೆ ಗಂಟೆಗೇ ಹಾಜರ್. ಮೇ ೨೦೧೪ರಲ್ಲಿ ನಮ್ಮ ಬಳಗ ಈ ಸಂತೆ ಆರಂಭಿಸಿದಾಗಿನಿಂದಲೂ ಮುಂಜಾನೆ ಬರುವ ಗ್ರಾಹಕರಿಗೆ ಅವರು ಯಾವತ್ತೂ ನಿರಾಸೆ ಮಾಡಿಲ್ಲ. ಅವರ ಬಹುಪಾಲು ತರಕಾರಿಗಳು ಒಂದು ಗಂಟೆಯಲ್ಲೇ ಮಾರಾಟ. ಆರಂಭದಿಂದಲೂ ಪ್ರತಿಯೊಂದು ಸಂತೆಗೂ ಮಾರಾಟಕ್ಕಾಗಿ ತರಕಾರಿ ತಂದಿರುವ ರಾಮಣ್ಣ ಗೌಡರ ಜಮೀನಿಗೆ ಇತ್ತೀಚೆಗೆ ನಮ್ಮ ಬಳಗದ ಸದಸ್ಯರ ಮರುಭೇಟಿ.
ಆಗ, “ರಾಮಣ್ಣ, ಸೋರೆಕಾಯಿ ಬೇಕಾಗಿತ್ತು” ಎಂದು ಕೇಳಿದವರನ್ನೆಲ್ಲ ಜಮೀನಿಗೆ ಕರೆದೊಯ್ದು, ತಾಜಾ ಸೋರೆಕಾಯಿ ಕೊಯ್ದು ಕೊಟ್ಟರು. “ಶುಂಠಿ ಬೇಕಾಗಿತ್ತು” ಎಂದವರಿಗೆಲ್ಲ, ಗೋಣಿಯಿಂದ ತಾಜಾ ಶುಂಠಿ ಮೊಗೆದುಮೊಗೆದು ಕೊಟ್ಟರು.
ಪಶ್ಚಿಮಘಟ್ಟದ ಬುಡದಲ್ಲಿರುವ ಅವರ ಜಮೀನಿನ ಪಕ್ಕದಲ್ಲಿದೆ ದಟ್ಟ ಕಾಡು. ಅಲ್ಲಿಂದ ನುಗ್ಗಿ ಬರುವ ಕಾಡುಹಂದಿಗಳ ಕಾಟ. ಅದನ್ನು ತಡೆಯಲಿಕ್ಕಾಗಿ ತರಕಾರಿ ಹೊಲದ ಸುತ್ತಲೂ ವಿದ್ಯುತ್ ಬೇಲಿ ಹಾಕಿ, ನೈಲಾನ್ ಹಗ್ಗದ ಬಲೆ ಕಟ್ಟಿದ್ದಾರೆ. ಆದರೂ ಒಳನುಗ್ಗಿ ಬರುವ ಕಾಡುಹಂದಿಗಳು ಒಂದಷ್ಟು ತರಕಾರಿ ಹಾಳು ಮಾಡಿಯೇ ಮಾಡುತ್ತವೆ.
ಅಂದೊಮ್ಮೆ ರಾಮಣ್ಣ ಗೌಡರಿಂದ ನಮ್ಮ ಬಳಗದ ಕಾರ್ಯದರ್ಶಿಯವರಿಗೆ ಮುಂಜಾನೆ ಫೋನ್ ಕರೆ ಬಂತು, “ನನ್ನ ಒಮ್ನಿ ಮಗುಚಿ ಬಿದ್ದಿದೆ. ನನಗೇನೂ ಏಟಾಗಿಲ್ಲ.” ತಾಜಾ ತರಕಾರಿ ಕೇಳಿಕೊಂಡು ಬರುವ ಗ್ರಾಹಕರಿಗೆ ಏನು ಉತ್ತರ ಹೇಳುವುದೆಂಬ ಚಿಂತೆ ನಮಗೆ. ಆದರೆ, ಬೆಳಗ್ಗೆ ಎಂಟು ಗಂಟೆಗೆ ಬೇರೊಂದು ವಾಹನದಲ್ಲಿ ತರಕಾರಿ ಸಹಿತ ರಾಮಣ್ಣ ಹಾಜರ್! ಅದು ಅವರ ಬದ್ಧತೆ. ರಾಮಣ್ಣ ಗೌಡರ ತರಕಾರಿಗೆ ಹತ್ತಿರದ ಉಜಿರೆಯಲ್ಲೂ ಬೇಡಿಕೆಯಿದೆ. ಒಂದೂವರೆ ಗಂಟೆ ಕಾರ್ ಓಡಿಸುತ್ತಾ, ತರಕಾರಿ ಮಾರಾಟಕ್ಕಾಗಿ ಅವರು ದೂರದ ಮಂಗಳೂರಿಗೆ ಬರಬೇಕಾಗಿಲ್ಲ. ಹಲವು ರೈತರು ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಸುರಿದು ವಿಷಭರಿತ ತರಕಾರಿ ಬೆಳೆಸಿ, ಅಮಾಯಕ ಗ್ರಾಹಕರಿಗೆ ಮಾರಿ ಲಾಭ ಗಳಿಸುತ್ತಿರುವುದು ಅವರಿಗೂ ಗೊತ್ತು. ಆದರೆ, ರಾಮಣ್ಣ ಗೌಡ ಸಾವಯವ ಬೇಸಾಯ ಬಿಡಲು ತಯಾರಿಲ್ಲ. ಅದೂ ಅವರ ಬದ್ಧತೆ.
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು ಮೂರನೆಯ ವರುಷಕ್ಕೆ ಕಾಲಿಟ್ಟಿರುವ ಈ ಹೊತ್ತಿನಲ್ಲಿ ರಾಮಣ್ಣ ಗೌಡರಂತಹ ತೆರೆಯ ಮರೆಯ ರೈತರ ಕೊಡುಗೆಯನ್ನು ದಾಖಲಿಸಬೇಕಾಗುತ್ತದೆ. ಕಾಡಿನ ಪಕ್ಕದ ಪುಟ್ಟ ಮನೆಯಲ್ಲಿ ಪತ್ನಿ ಭವ್ಯ ಮತ್ತು ಪುಟ್ಟ ಮಕ್ಕಳಿಬ್ಬರೊಂದಿಗೆ ನೆಲೆಸಿರುವ ರಾಮಣ್ಣ ಗೌಡರಿಗೆ ಯಾವಾಗಲೂ ಒಂದೇ ಚಿಂತೆ: ಮುಂದಿನ ತಿಂಗಳ ಸಂತೆಗಳಿಗೆ ಯಾವ್ಯಾವ ತರಕಾರಿ ಬೆಳೆಯಬೇಕು?
“ನಿಮ್ಮ ತರಕಾರಿ ಬೆಂಗಳೂರಿನಲ್ಲಿ ಮಾರಬಹುದಲ್ಲಾ, ಅಲ್ಲಿ ಒಳ್ಳೇ ಲಾಭ ಬರುತ್ತದೆ” ಎಂದೊಬ್ಬರು ಸಲಹೆಯಿತ್ತಾಗ ರಾಮಣ್ಣ ಗೌಡರ ಮುಗುಳ್ನಗುವಿನ ಪ್ರತಿಕ್ರಿಯೆ: “ನನಗೆ ಮಂಗಳೂರಿನ ಈ ಸಂತೆಯಲ್ಲಿ ಸಿಗುವ ಲಾಭವೇ ಸಾಕು. ಇಲ್ಲಿ ನನ್ನಿಂದ ತರಕಾರಿ ತಗೊಳ್ಳುವವರೆಲ್ಲ ನನಗಾಗಿ ವಾರವಿಡೀ ಕಾಯುತ್ತಾರೆ. ಅವರಿಗೆ ನಾನು ಬೆಳೆಸಿದ ತರಕಾರಿ ಕೊಡುವಾಗ ಸಿಗುವ ಸಂತೋಷವಿದೆಯಲ್ಲ, ಅದು ಬೇರೆ ಎಲ್ಲಿ ತರಕಾರಿ ಮಾರಿದರೂ ಸಿಗಲಿಕ್ಕಿಲ್ಲ.”