ಇಪ್ಪತ್ತು ವರ್ಷಗಳ ನಂತರ

“ತಿರುಗುವ ಬುಗರಿಯನ್ನೊಮ್ಮೆ ನೋಡಿದರೆ ತನ್ನ ಕಕ್ಷೆಯಲ್ಲಿ ಒಂದು ನಿರ್ದಿಷ್ಟ ವೇಗದಲ್ಲಿ ಪ್ರಾರಂಭವಾದ ಅದರ ಚಲನೆ ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ, ಮತ್ತೆ ಅದರ ಉತ್ಕರ್ಷದ ಅವಧಿ ಮುಗಿಯುತ್ತಾ ಪುನಃ ಪ್ರಾರಂಭದ ಸ್ಥಿತಿಗೆ ಮರಳಿ ಸ್ತಬ್ಧವಾಗುತ್ತದೆ. ಹಾಗೇಯೇ ಹುಟ್ಟಿದ ಮಗು ಬೆಳೆಯುವ ಹಂತದಲ್ಲಿ ತೀವ್ರವಾಗಿರುವ ಬೆಳವಣಿಗೆ ನಂತರ ನಿಧಾನವಾಗಿ ತಾರುಣ್ಯ, ಪ್ರೌಢತೆಯ ಮಜಲುಗಳ ದಾಟುವಿಕೆಯಲಿ ಒಂದು ಸ್ಥಿರತೆಯ ವೇಗವನ್ನು ಹೊಂದಿ ಆನಂತರ ನಿಂತುಹೋಗುತ್ತದೆ. ಇನ್ನೂ ಈ ಬದುಕನ್ನು ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಎಷ್ಟೆಲ್ಲಾ ಸಂಗತಿಗಳಿವೆ. ದೊಡ್ಡ ಸಂಗತಿಗಳಿಗಿಂತ ಸಣ್ಣ ಸಣ್ಣ ಸಂಗತಿಗಳಾಗಲೀ ವಿಚಾರಗಳೇ ಆಗಲಿ ಕಲಿಸುವ ಜೀವನ ಪಾಠ ನಮ್ಮ ನಿಮ್ಮೆಲ್ಲರ ಅನುಭವಕ್ಕೆ ಬಂದಿರುವುದೇ ಆಗಿದೆ. ನಮ್ಮ ಮನಸ್ಸಿನ ಅಂತರ್ಗತ ಒಳಜಗತ್ತು ಮತ್ತು ಅದು ಹುದುಗಿಸಿಕೊಂಡಿರುವ, ಅದುಮಿಟ್ಟುಕೊಂಡಿರುವ, ಅರ್ಥೈಸಲಾಗದ ಸುಮಧುರ ಭಾವಗಳು, ವಿಚಾರಗಳು, ಸಂತಸದ ಜೊತೆಗೆ ನೋವು, ನಿರಾಶೆ, ಕಳೆದುಕೊಳ್ಳುವಿಕೆಯ ಭಯ, ಕಾಡುವ ಅಂತಃಪ್ರಜ್ಞೆ, ಸಂಬಂಧಗಳಲ್ಲಿಯ ಕ್ಲಿಷೆಗಳು, ಬಾಲ್ಯದ ಮುಗ್ಧ ನಗು, ಪ್ರೌಢ ಮನಸ್ಸಿನ ಪರಿಪಾಕದ ಒತ್ತಾಯದ ಮುಖಮುದ್ರೆಗಳು ಇವೆಲ್ಲವೂ ಬದುಕಿನಂಗಳದ ತುಂಬಾ ಹರಡಿಬಿದ್ದಿರುವ ಬೆಳಕಿನ ಚುಕ್ಕಿಗಳು, ಹೂಗಳು ಇವುಗಳ ಜೊತೆಯಲ್ಲೇ ಚೆಲ್ಲಿ ಬಿದ್ದ ಕಸ ಕಡ್ಡಿ ಒಣಗಿದೆಲೆಗಳು. ಇದೇ ಬದುಕು.
ದಿನಬೆಳಿಗ್ಗೆ ಎದ್ದು, ಹಿಂದಿನ ದಿನದ ಕಸಮುಸುರೆ ತೊಳೆದು, ಮನೆ ಮುಂದಿನಂಗಳದ ಕಸ ಗುಡಿಸಿ, ಕೈಕಾಲು ತೊಳೆದು, ಅಂಗಳದ ಮಣ್ಣಿನ ಕಟ್ಟೆಯ ಬದಿಗೇ ಬೆಳೆದ ಅಬ್ಬಲಿಗೆ ಗಿಡದಲ್ಲರಳಿದ ಹೂ ಕೊಯ್ದು ಒಂದೆರಡು ಪುಟ್ಟ ಪುಟ್ಟ ಮಾಲೆ ಕಟ್ಟಿ ದೇವರ ಪಟಕ್ಕೆ ತೂಗಿಸಿ, ಇಂದಿನ ದಿನದ ಎಲ್ಲವೂ ಸುರಳಿತವಾಗಲೆಂದು ಪೂರ್ವದ ದಿಕ್ಕಿಗೆ ಕೈ ಮುಗಿದು ದಿನವಾಳ್ತೆ ಪ್ರಾರಂಭಿಸುತ್ತಿದ್ದ ನನ್ನ ಹಿರಿಯರು ನನ್ನ ಎಲ್ಲ ಬರಹಗಳ, ಕವಿತೆಗಳ ಕಥೆಗಳ ಹಿಂದಿನ ಬಹುಮುಖ್ಯ ಸಾಕ್ಷಿಪ್ರಜ್ಷೆ. ಅವರು ಕನಸು ಕಾಣಲು, ಕಂಡ ಕನಸಿಗೆ ನೀರೆರೆಯಲು ಕಲಿಸಿದರು. ಮನೆ ಹಿಂದಿನ ಬೇಣದಲ್ಲಿ ದನ ಕಾಯಲು ಬರುವ ಹುಡುಗರ ಸಿಳ್ಳೆಗಳಿಗೆ ಮರುಸಿಳ್ಳೆ ಹಾಕುವ ಕುಂಟಕೋಳಿ ಹಕ್ಕಿಗಳು, ಬೇಣದ ಬಯಲಿನಲ್ಲೆ ಮರೆ ಮಾಡದೇ ಮೊಟ್ಟೆ ಇಟ್ಟು, ಮೊಟ್ಟೆ ಹತ್ತಿರ ಯಾರಾದರೂ ಹತ್ತಿರ ಬಂದರೂ ಸಾಕು ದಿಕ್ಕುತಪ್ಪಿಸುವ ಬುದ್ಧಿವಂತ ಹಕ್ಕಿಗಳ ಮಸಲತ್ತಿಗೆ ತಲೆದೂಗಿ “ ಅಬಾ ! ನೋಡು ಈ ಹಕ್ಕಿಯವ್ವು ಮನಸ್ರಂಗೆ ಯಾಮರ‍್ಸುದಾ !!! ಎನ್ನುತ್ತ ಸಾಗುವ ಸೌದೆ ಹೊರೆಯ ಭಾರದ ನಡುವೆಯೂ ಹಚ್ಚಗೆ ನಗುವ ಹಾಲಕ್ಕಿ ಹೆಂಗಸರ ಚಿತ್ರಗಳು ನನ್ನ ಕಣ್ಣೊಳಗೆ ಇಂಗಿ ಕೂತಿವೆ. ಸುದೈವ ಎಂದರೆ ಈ ಚಿತ್ರಣ ಇಂದಿನ ಬದಲಾಗುತ್ತಿರುವ ಜಗತ್ತಿನೊಂದಿಗೆ ಅದೇ ವೇಗದಲ್ಲಿ ಬದಲಾಗುತ್ತಿಲ್ಲ ಎಂಬುದು. ನಮ್ಮೂರಿನ ಹಳೆ ಮಾಸಲು ಬಣ್ಣದ ಮನೆಗಳು, ಊರದಾರಿಗಳು, ಈಗಲೂ ಅವೇ ಅವೇ ಆಗಿ ಉಳಿದಿವೆಯೇ? ಎಂದು ಹುಡುಕುವುದು ಅಸಂಬದ್ಧ ಅನಿಸಿದರೂ ತೀರಾ ಬದಲಾವಣೆಯ ಮಳ್ಳು ಅವರಿಗಿನ್ನು ಬಡಿದುಕೊಂಡಿಲ್ಲ ಎಂಬುದು ಅಷ್ಟೆ ಖುಷಿ. ಹಾಗಾಗಿ ನನ್ನ ಪೂರ್ವದ ಪ್ರಜ್ಞೆಯ ಹೊರತಾಗಿ ಕಾಣತೊಡಗಿದರೆ ನನ್ನ ಕಣ್ಣುಗಳು ಮಬ್ಬಾಗುತ್ತವೆ. ಮಸುಕಾಗುತ್ತವೆ.
ನನಗೆ ಕಾಡು ನನ್ನ ಬದುಕಿನ ಜೊತೆಜೊತೆಗೆ ಬೆಸೆದುಕೊಂಡಿದೆಯೇನೋ ಅನ್ನುವಷ್ಟು ಹತ್ತಿರದ್ದು. ಅದರ ಒಳಗನ್ನು ತುಂಬಾ ಸುಲಭವಾಗಿ ಗುರುತಿಸುವಷ್ಟು, ಅಲ್ಲಿನ ಉಮೇದಿನ ಸಂಗತಿಗಳನ್ನು, ಗೊತ್ತಿಲ್ಲದೇ ಗಬಕ್ಕನೆ ಎರಗುವ ಅಪಾಯಗಳನ್ನು ಅರಿವ ಒಳದೃಷ್ಟಿಯನ್ನು ಕಾಡೇ ಕಲಿಸಿತ್ತು. ಮನೆಯ ಹಿಂಭಾಗದಲ್ಲಿ ತಂದಾನೆ ತಾನೋ ಹಾಡುವ ಹಳ್ಳದ ನೀರು ಆ ನೀರ ಹರಿವಿಗೆ ನನ್ನ ನೆರಳೂ ಇರಲಿ ಎನ್ನುವ ಮರಗಿಡಗಳು, ನೀರಿನೊಂದಿಗೆ ಸದಾ ಜಗಳ ಕಾಯುವ ಸಣ್ಣ ದೊಡ್ಡ ಕಲ್ಲುಗಳು ಅಲ್ಲಿಯ ಕಸಪಿಸಿ, ಕರಕರೆ, ಎಲ್ಲವೂ ಸೇರಿ ದಾಗುಂಡಿ ಇಡುವ ಪರಿ ಈಗಲು ಕಣ್ಣೊಳಗೆ ನಿಕ್ಕಿ ಮಾಡಿಕೊಂಡ ಖಾಯಂ ಚಿತ್ರಗಳಾಗಿವೆ,
ಹೀಗೆ ಹೇಳಲು ಕಾರಣವಿದೆ. ಪುಟ್ಟ ಕಾಡೂರಿನ ಮರಗಿಡಗಳ , ಹಳ್ಳಕೊಳ್ಳಗಳ ಹಾಸಿನಲ್ಲಿ ಹಸನಾದ ಬಾಲ್ಯ ಕಳೆದ ನಮ್ಮಂತವರಿಗೆ ಪಟ್ಟಣದ ಎಲ್ಲವೂ ಇಷ್ಟವಾಗುವ ಪ್ರಾಯದ ದಿನಗಳಿದ್ದವು. ಮತ್ತೆ ಚಕ್ರ ತಿರುಗಿದಂತೆಲ್ಲ ಈ ಪಟ್ಟಣಗಳ ಸಹವಾಸವೆ ಸಾಕು ಎನ್ನುವಂತೆ ಹಳೆಯ ಬೇರಿನ ಪರಿಮಳದ ಜಾಡು ಕೈ ಬೀಸಿ ಕರೆಯುತ್ತದೆ. ಓದು, ಕಲಿಕೆ, ಗ್ರಹಿಕೆ, ಕಲಿಸುವಿಕೆ, ಬರೆಯುವಿಕೆ ಎಲ್ಲವೂ ಜೊತೆಗಿದ್ದೂ, ಇವೆಲ್ಲವುಗಳ ಹೊರತಾಗಿಯೂ ನಿಶ್ಚಿಂತ ನೆಲೆಯಲ್ಲಿ ಉಸಿರು ತೇಕುವ ಮನಸ್ಸಾಗುತ್ತದೆ. ಇದು ಒಳಗಿನ ತುಡಿತ. ಯಾಕೆಂದರೆ...
ಆದರೆ ಈ ಸಣ್ಣದೆನ್ನುವ ಆಲದ ಮರದಂತಹ ಬದುಕಿನ ಜೊತೆಗೆ ಹಬ್ಬಿದ ಬೀಳಲನ್ನು ನಾನು ಈ ಆಧುನಿಕ ಪ್ರಜ್ಞೆ ಎಂದು ಕರೆಯುವೆ. ಓದುವ ಗೀಳು, ಬರೆಯುವ ಹುಕಿ ಎಲ್ಲವೂ ಸೇರಿ ಕಲಸುಮೇಲೋಗರದಂತಾದ ಸ್ಥಿತಿ. ಆದರೆ ಬದುಕಿನ ಹಲವು ಸಂದೇಹಗಳಿಗೆ, ಮನಸ್ಸಿನ ವಿಕ್ಷಿಪ್ತತೆಗಳಿಗೆ ಮದ್ದಾಗಿ ಒದಗಿದ್ದೂ ಈ ಓದು, ಬರಹಗಳೇ. ಹಾಗಾಗಿ ತಿಳಿದವರು ‘ಬದುಕೊಂದು ಬುಗುರಿ’ ಎಂದೇ ಹೇಳುತ್ತಾರೆ. ಬಾಲ್ಯದಲ್ಲಿ ಮುಗ್ಧತೆಯ ಜೊತೆಗೊಂದು ಪೆದ್ದುತನ, ಯೌವನದಲ್ಲಿ ಪ್ಯಾಶನ್ ಜಗತ್ತಿನ ಹುಚ್ಚು, ಪ್ರೌಢ ಗೆರೆಗಳು ಮುಖದಲ್ಲಿ ಮೂಡುತ್ತಿದ್ದಂತೆ ಹುಟ್ಟಿಕೊಂಡ ಓದು ಬರಹದ ಹಂಬಲ, ಆಗಾಗ ಧರಿಸುವ ಮುಖವಾಡಗಳು, ಧರಿಸಲೇಬೇಕಾದ ಸಂದರ್ಭಗಳು, ಸನ್ನಿವೇಶಗಳು ಇದಕ್ಕೆಲ್ಲ ಈ ಬುಗುರಿ ಅವಕಾಶ ನೀಡಿದೆ. ನೀಡುತ್ತಿದೆ.. ಅದಕ್ಕೆ ಉರುಳುವ ಗೋಲವಾಗುತ್ತ ಸಾಗುತ್ತ ಇರುವುದೇ ಜೀವನದ ಆಸ್ಥೆ ಕೂಡಾ.
ಇಷ್ಟವಿದ್ದೋ ಇಲ್ಲದೆಯೋ ಇಂಗ್ಲೀಷ ಐಚ್ಚಿಕ ವಿಷಯ ಓದಿ, ಶೇಕ್ಸಪಿಯರನನ್ನು, ಶೆಲ್ಲಿಯನ್ನು,ಫ್ರಾಸ್ಟನನ್ನು ಅಲ್ಪಸ್ವಲ್ಪ ತಿಳಿದುಕೊಂಡವಳು ನಾನು. ಓದಿದ, ಕಲಿಸಿದ, ಕಲಿತ ಪಠ್ಯಗಳಿಗೆ ನನ್ನದೇ ಆದ ವಿವರಣೆಯನ್ನು ಬದುಕಿನೊಂದಿಗೆ ಆ ಭಾವಗಳನ್ನು ಸಮಿಕರಿಸಿಕೊಳ್ಳುವ ಪ್ರಯತ್ನವನ್ನು ಈ ಲೇಖನಗಳಲ್ಲಿ ತರುವ ಹಂಬಲದಿಂದ ಕೆಲವು ಬರೆಹಗಳನ್ನು ಬರೆದೆ. ಅದರ ಜೊತೆಗೆ ಕನ್ನಡದ ಕೆಲವು ಹಿರಿ ಕಿರಿಯ ಸಾಹಿತಿಗಳ ಕಾವ್ಯ, ಕಥೆ ಕಾದಂಬರಿಗಳಿಗೆ ಬರೆದ ಪುಟ್ಟ ವಿಮರ್ಶೆಗಳೂ ಇಲ್ಲಿವೆ. ಇಲ್ಲಿಯ ಬಹಳಷ್ಟು ಕವನ, ಕತೆಗಳ ವಸ್ತು ವಿಶೇಷಗಳು ಮನುಷ್ಯನ ಮಾನಸಿಕ ಜಗತ್ತನ್ನು ವಿಮರ್ಶಿಸುತ್ತವೆ. ಅಂತಹ ವಿಷಯಗಳಲ್ಲಿ ಕೊಂಚ ಆಸಕ್ತಿ ಇದೆ ಎನ್ನುವ ಕಾರಣಕ್ಕೋ ಅಂತಹ ಹಲವು ಕವಿತೆಗಳ ಓದಿನ ಮೂಲಕ ಹುಟ್ಟಿದ ವಿಶ್ಲೇಷಣೆಯ ಆಸಕ್ತಿಯ ಪ್ರತಿಫಲವಾಗಿ ಈ ಲೇಖನಗಳು ಮೂಡಿಬಂದಿವೆ.” ಎಂದು ಲೇಖಕಿ ನಾಗಲೇಖ ಗಾಂವಕರ್ ತಮ್ಮ ಮಾತಿನಲ್ಲಿ ಹೇಳಿಕೊಂಡಿದ್ದಾರೆ.