ಇಬ್ಬರದ್ದೂ ಒಂದೇ ಕಥೆ !

ಇಬ್ಬರದ್ದೂ ಒಂದೇ ಕಥೆ !

ಮೊನ್ನೆ ನನ್ನ ಕಕ್ಷಿಗಾರರೊಬ್ಬರು ನನ್ನಲ್ಲಿ ಮಾತನಾಡುತ್ತಾ.... “ಸರ್ ನೀವು ನಿಮ್ಮ ಕವನಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕ್ತೀರಲ್ಲಾ ಅವುಗಳಲ್ಲಿ ಕೆಲವೆಲ್ಲಾ ನಂಗೆ ಅರ್ಥನೇ ಆಗುದಿಲ್ಲ ಸರ್! ಆದ್ರೆ ಕೆಲವೆಲ್ಲ ಅರ್ಥ ಆಗ್ತದೆ, ಚೆನ್ನಾಗಿರ್ತವೆ! ನೀವು ಎಷ್ಟು ಹೊತ್ತಿಗೆ ಅಷ್ಟೆಲ್ಲಾ ಬರೀತೀರಿ ಸರ್. ಯಾವಾಗ ಅವಕ್ಕೆಲ್ಲಾ ಟೈಮ್ ಕೊಡ್ತೀರಿ ಅಂತಾನೇ ಗೊತ್ತಾಗ್ತಿಲ್ಲ ಸರ್!” ಮುಖದಲ್ಲಿ ನನ್ನ ಮೇಲಿನ ಪ್ರೀತಿ, ಗೌರವ ಎರಡೂ ಪ್ರತಿಫಲಿಸುವಷ್ಟು ಮುಗುಳ್ನಗುವಿನ ತೋರಣ ಕಟ್ಟಿದ್ದರು. 

“ನಿಮ್ಗೆ ಯಾಕೆ ಕೆಲವೆಲ್ಲ ಅರ್ಥ ಆಗ್ತಿಲ್ಲ? ನೀವು ಇಂಗ್ಲೀಷ್ ಮೀಡಿಯಂನಲ್ಲಿ ಕಲ್ತಿದ್ದಾಂತ ಅಲ್ವಾ?” ಅಂದೆ. “ಅಲ್ಲ ಸರ್, ನಂಗೆ ಎಂಟು, ಒಂಬತ್ತು, ಹತ್ತನೇ ಕ್ಲಾಸಲ್ಲಿ ಸಿಕ್ಕಿದ ಕನ್ನಡ ಮೇಷ್ಟ್ರು ಸರಿಯಾಗಿ ಪಾಠನೇ ಮಾಡ್ತಿರ್ಲಿಲ್ಲ ಸರ್. ಎಲ್ಲಾ ನೀವೇ ಓದ್ಕೊಳ್ಳಿ ಅಂತಿದ್ರು. ಏನೇನೋ ಜೋಕ್ಸ್ ಮಾಡ್ತಾ ಇರ್ತಿದ್ರು. ಕ್ಲಾಸ್ ಪರೀಕ್ಷೆಗಳಲ್ಲಿ ಒಳ್ಳೆ ಅಂಕ ಕೊಡ್ತಾ ಇದ್ರು.  ಹಾಗಾಗಿ ಕನ್ನಡ ಏಳನೇ ತರಗತಿಗೇ ನಿಂತೋಯ್ತು! ಈಗ ಕನ್ನಡದ ವಿಷಯಗಳು ಬಂದಾಗ ತುಂಬಾ ಕಷ್ಟ ಅನ್ನಿಸ್ತದೆ ಸರ್”. 

ನನಗೆ ತಕ್ಷಣ ನಮ್ಮೂರಿನ ಶಾಲೆಯ ಮೇಷ್ಟ್ರೊಬ್ಬರ ಕಥೆ ನೆನಪಾಯ್ತು. “ನಮ್ಮೂರಿನ ಶಾಲೆಯಲ್ಲೂ ಒಬ್ರು ಮೇಷ್ಟ್ರಿದ್ರು ನೋಡಿ. ಅವರು ಮರದ ವ್ಯಾಪಾರವನ್ನೂ ಮಾಡ್ತಾ ಇದ್ರು. ಹಾಗಾಗಿ ಶಾಲೆಗೆ ಬರುವುದೇ ಅಪರೂಪ. ತನ್ನ ಪರವಾಗಿ ಒಬ್ಬಾಕೆಯನ್ನು ಶಾಲೆಯಲ್ಲಿರಿಸಿ ಆಕೆಯಿಂದ ಪಾಠ ಹೇಳಿಸ್ತಿದ್ರು. ತಾನು ಕಾಡು ಸುತ್ತುತ್ತಿದ್ರು. ಪರೀಕ್ಷೆಯ ಮುಂಚಿನ ದಿನ ಪ್ರತ್ಯಕ್ಷನಾಗಿ ಮಕ್ಕಳಿಗೆ ಪ್ರಶ್ನೆ ಪತ್ರಿಕೆಯನ್ನೇ ಕೊಡ್ತಾ ಇದ್ರು. ಉತ್ತರವನ್ನೂ ಅವರೇ ಹೇಳಿಕೊಡ್ತಾ ಇದ್ರು. ಎಲ್ಲಾ ಮಕ್ಕಳಿಗೂ ತೊಂಬತ್ತರ ಮೇಲೆ ಅಂಕ ಬರ್ತಿತ್ತು. ಮಕ್ಕಳೇನೋ ಖುಷಿಯಾಗಿದ್ರು. ಆದ್ರೆ ಅದೆಲ್ಲಾ ಪಾಪದ ಕೆಲಸ ಅಲ್ವಾ?! ಮುಗ್ದ ಮಕ್ಕಳ ಭವಿಷ್ಯ ಕೆಡಿಸುವುದಾ? ಅನ್ಯಾಯ ಅಲ್ವಾ? ಈಗ ನೀವೇ ನಿಮ್ಮ ಕನ್ನಡ ಮೇಷ್ಟ್ರಿಗೆ ಎಷ್ಟು ಶಾಪ ಹಾಕ್ತಾ ಇದ್ದೀರಿ. ಮಕ್ಕಳ ಶಾಪ ಆಯ್ತೋ ಏನೋ ಗೊತ್ತಿಲ್ಲ ನಮ್ಮೂರಿನ ಮೇಷ್ಟ್ರೂ ಐವತ್ತು ವರ್ಷ ವಯಸ್ಸಿಗೇ ಹೃದಯಾಘಾತವಾಗಿ ತೀರ್ಕೊಂಡ್ರು. ಯಾರೂ ಅನ್ಯಾಯ ಮಾಡ ಬಾರದು. ಅದ್ರಲ್ಲೂ ಮಕ್ಕಳಿಗೆ ಮೋಸ ಮಾಡ್ಲೇ ಬಾರ್ದು. ಯಾರೂ ಕೂಡಾ ಅನ್ಯಾಯ ಮಾಡಿ, ಮೋಸ ಮಾಡಿ ಬದುಕಿ ಉಳಿದ ನಿದರ್ಶನಗಳಿಲ್ಲ!"

ಮತ್ತೆ ಮುಂದುವರಿಸಿ… "ನಿಮ್ಮ ಕನ್ನಡ ಮೇಷ್ಟ್ರು ಈಗ ಇದ್ದಾರಾ, ಹೇಗಿದ್ದಾರೆ? ಚೆನ್ನಾಗಿದ್ದಾರಾ? “ ಅಂತ ಕುತೂಹಲದಿಂದಲೇ ಪ್ರಶ್ನೆ ಮಾಡಿದೆ. “ಸರ್, ಅವರೂ ಕೂಡಾ ಇತ್ತಿಚೆಗೆ ಹಾರ್ಟ್ ಅಟ್ಯಾಕ್ ಆಗಿಯೇ ತೀರ್ಕೊಂಡದ್ದು ಸರ್. ಇನ್ನೂ ನಾಲ್ಕೈದು ವರ್ಷ ಸರ್ವಿಸ್ ಇತ್ತು ಸರ್. ನೀವು ಹೇಳಿದ ಮೇಷ್ಟ್ರು ಮತ್ತು ನಮ್ಮ ಮೇಷ್ಟ್ರದ್ದು ಸೇಮ್ ಸ್ಟೋರಿ ಆಯ್ತು ನೋಡಿ. ಬಹಳ ಆಶ್ಚರ್ಯ!! ನಿಮ್ಗೆ ತಕ್ಷಣ ಆ ಮೇಷ್ಟ್ರ ಕಥೆ ನೆನಪಾದದ್ದು ಆಗ್ಬಹುದು!!” ಅಂತ ಹುಬ್ಬೇರಿಸಿ ಕಣ್ಣರಳಿಸಿ ಒಂದು ಕ್ಷಣ ಮೌನಕ್ಕೆ ಜಾರಿದರು. 

ಇಂತಹ ಕಥೆಗಳು ನಿಮ್ಮ ಜೀವನದಲ್ಲೂ ನಡೆದಿರಬಹುದು, ನೀವೂ ಕೇಳಿರಲೂಬಹುದು! ಈ ಜಗತ್ತಿನ ಹಿಂದೆ ಯಾವುದೋ ಒಂದು ಶಕ್ತಿ ರಹಸ್ಯವಾಗಿ ಕೆಲಸ ಮಾಡುತ್ತಾ ಜಗತ್ತಿಗೊಂದು ನ್ಯಾಯ ಒದಗಿಸುತ್ತಾ ಇರುತ್ತದೆ ಅಂತ ಅನ್ನಿಸುವುದಿಲ್ಲವೇ?! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!

-ಮೌನಮುಖಿ, (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ) 

ಚಿತ್ರ ಕೃಪೆ: ಇಂಟರ್ನೆಟ್ ತಾಣ