ಇಬ್ಬರು ಸೋದರಿಯರು


ವಿಧವೆಯೊಬ್ಬಳಿಗೆ ಇಬ್ಬರು ಮಗಳಂದಿರು ಇದ್ದರು. ಇಬ್ಬರೂ ನೋಡಲು ಒಂದೇ ರೂಪದವರು. ಆದರೆ ಅವರ ನಡತೆ ತೀರಾ ಭಿನ್ನ. ಕಮಲ ಮೃದು ಮಾತಿನವಳು, ವಿಧೇಯಳು, ಕರುಣಾಮಯಿ ಮತ್ತು ಶ್ರಮಜೀವಿ. ಆದರೆ ವಿಮಲ ಇದರ ವಿರುದ್ಧ ಸ್ವಭಾವದವಳು. ಅವಳು ಸೋಮಾರಿ, ಅವಿಧೇಯಳು ಮತ್ತು ತನ್ನದೇ ಯೋಚನೆ ಮಾಡುವ ಸ್ವಾರ್ಥಿ.
ಮನೆಯ ಕೆಲಸಕಾರ್ಯಗಳಲ್ಲಿ ಕಮಲ ಸಂತೋಷದಿಂದ ಅಮ್ಮನಿಗೆ ಸಹಾಯ ಮಾಡುತ್ತಿದ್ದಳು; ಕೆಲಸ ಮಾಡುವಾಗೆಲ್ಲ ಉಲ್ಲಾಸದ ಹಾಡು ಹಾಡುತ್ತಿದ್ದಳು. ಆದರೆ ವಿಮಲ ಯಾವುದೇ ಮನೆಗೆಲಸ ಮಾಡಲು ಹೇಳಿದರೂ ಗೊಣಗುಟ್ಟುತ್ತಿದ್ದಳು; ಅವಡುಗಚ್ಚುತ್ತಾ ಕೆಲಸ ಮಾಡುತ್ತಿದ್ದಳು. ಅದೊಂದು ದಿನ ಕಮಲಳಿಗೆ ಅಮ್ಮ ಹೇಳಿದಳು, “ಹೋಗಿ ಬಾವಿಯಿಂದ ಒಂದು ಕೊಡಪಾನ ನೀರು ತಗೊಂಡು ಬಾ."
ಕಮಲ ಬಾವಿಯ ಹತ್ತಿರ ಹೋದಾಗ, ಅಲ್ಲೊಬ್ಬಳು ಮುದುಕಿ ಕುಳಿತಿದ್ದಳು. ಕಮಲಳನ್ನು ಕಂಡ ಮುದುಕಿ ಹೇಳಿದಳು, “ನಿನ್ನ ಕೊಡಪಾನ ಚೆನ್ನಾಗಿದೆ. ನನಗೆ ಬಹಳ ಬಾಯಾರಿಕೆಯಾಗಿದೆ. ಕುಡಿಯಲು ಸ್ವಲ್ಪ ನೀರು ಕೊಡ್ತೀಯಾ?”
“ಓ ಖಂಡಿತ” ಎನ್ನುತ್ತಾ ಕಮಲ ಬಾವಿಯಿಂದ ನೀರು ತೆಗೆದು, ಕೊಡಪಾನವನ್ನು ಬಗ್ಗಿಸಿ, ಮುದುಕಿಗೆ ಕುಡಿಯಲು ನೀರು ಕೊಟ್ಟಳು. ಮುದುಕಿ ನೀರು ಕುಡಿದ ನಂತರ, ಅವಳು ಪುನಃ ಅದರಲ್ಲಿ ನೀರು ತುಂಬಿಸಿ, ಮನೆಗೆ ಹೊರಟಳು. ಆಗ ಮುದುಕಿ ಹೀಗೆಂದಳು: “ಒಂದು ನಿಮಿಷ ನನ್ನ ಮಾತು ಕೇಳು. ನೀನು ಕರುಣಾಮಯಿ. ಅದಕ್ಕಾಗಿ ನಿನಗೊಂದು ಉಡುಗೊರೆ ಕೊಡಲೇ ಬೇಕು. ಇನ್ನು ನೀನು ಮಾತಾಡಿದಾಗೆಲ್ಲ ನಿನ್ನ ಬಾಯಿಯಿಂದ ಚಿನ್ನದ ಆಭರಣ ಉದುರುತ್ತದೆ.”
ಕಮಲ ಮನೆಗೆ ಮರಳಿ, “ಅಮ್ಮಾ, ನೀರು ತರಲು ತಡ ಮಾಡಿದೆ, ಕ್ಷಮಿಸು. ಅಲ್ಲೊಬ್ಬಳು ಮುದುಕಿ ಕುಡಿಯಲು ನೀರು ಕೇಳಿದಳು” ಎನ್ನುವಷ್ಟರಲ್ಲಿ ಅವಳ ಬಾಯಿಯಿಂದ ಚಿನ್ನದ ಸರ ಉದುರಿತು!
ಅಮ್ಮನಿಗೆ ಅಚ್ಚರಿಯಾಯಿತು. ಅವಳು ತಕ್ಷಣವೇ ವಿಮಲಳನ್ನು ಕರೆದು ಹೇಳಿದಳು, "ಈಗಲೇ ಈ ಕೊಡಪಾನ ತಗೊಂಡು ಹೋಗಿ ಬಾವಿಯಿಂದ ನೀರು ತಾ." ಭಾರವಾದ ಕೊಡಪಾನದಲ್ಲಿ ನೀರು ಹೊತ್ತು ತರಬೇಕಾಗುತ್ತದೆ ಎಂದು ಅವಳು ಆಕ್ಷೇಪಿಸಿದಳು. ಅವಳು ಹೋಗಲೇ ಬೇಕೆಂದು ಅಮ್ಮ ಹೇಳಿದಾಗ ಜೋರಾಗಿ ಗೊಣಗುಟ್ಟುತ್ತಾ ಬಾವಿಯತ್ತ ಹೋದಳು.
ಈಗಲೂ ಬಾವಿಯ ಹತ್ತಿರ ಅದೇ ಮುದುಕಿ ಕುಳಿತಿದ್ದಳು. ಕಮಲಳನ್ನು ಕಂಡಾಗ ಅವಳು ಕೇಳಿದಳು, “ನನಗೆ ಬಹಳ ಬಾಯಾರಿಕೆಯಾಗಿದೆ. ನಿನ್ನ ದೊಡ್ಡ ಕೊಡಪಾನದಲ್ಲಿ ನೀರು ತೆಗೆದು ನನಗೆ ಕುಡಿಯಲು ಸ್ವಲ್ಪ ನೀರು ಕೊಡುತ್ತೀಯಾ?” ಕಮಲ ಮುದುಕಿಯನ್ನು ಸಿಟ್ಟಿನಿಂದ ನೋಡುತ್ತಾ ರೇಗಿದಳು, "ನಾನು ಇಲ್ಲಿಗೆ ನಿನ್ನ ಗುಲಾಮಳಾಗಲು ಬಂದಿಲ್ಲ. ನಿನಗೆ ನೀರು ಬೇಕಿದ್ದರೆ ನೀನೇ ಬಾವಿಯಿಂದ ತಗೋ. ನಿನಗೆ ನೀರು ತೆಗೆದು ಕೊಡುತ್ತಾ ನಿಂತರೆ, ವಾಪಾಸು ಹೋದಾಗ ನಾನು ತಡ ಮಾಡಿದೆಯೆಂದು ಬಯ್ಯುತ್ತಾರೆ.”
ಅನಂತರ ಕಮಲ ಬಾವಿಯಿಂದ ಕೊಡಪಾನದಲ್ಲಿ ನೀರು ತೆಗೆದು, ಮನೆಗೆ ಹಿಂತಿರುಗಲು ತಿರುಗಿದಳು. ಆಗ ಮುದುಕಿ ಹೇಳಿದಳು, “ನಿನ್ನ ಸೋದರಿಗೆ ನಾನೊಂದು ಉಡುಗೊರೆ ಕೊಟ್ಟೆ. ನಿನಗೂ ಕೊಡ್ತೇನೆ - ನಿನ್ನ ಸ್ವಭಾವಕ್ಕೆ ಸರಿಯಾದ ಉಡುಗೊರೆಯನ್ನು. ಇನ್ನು ನೀನು ಮಾತಾಡಿದಾಗೆಲ್ಲ ನಿನ್ನ ಬಾಯಿಯಿಂದ ಚೇಳು ಉದುರುತ್ತದೆ.”
ವಿಮಲ ಮಾತಾಡಲಿಲ್ಲ. ಯಾರದಾದರೂ ಬಾಯಿಯಿಂದ ಚೇಳು ಉದುರುವುದು ಅಸಂಬದ್ಧ ಎಂದುಕೊಳ್ಳುತ್ತಾ ಅವಳು ಮನೆಗೆ ಹಿಂತಿರುಗಿದಳು. ಕೊಡಪಾನವನ್ನು ಕೆಳಗಿಳಿಸುತ್ತಾ “ನೀರು ತಂದಿದ್ದೇನೆ ನೋಡು” ಎಂದಳು ವಿಮಲ. ತಕ್ಷಣವೇ ಅವಳು ಬೆಚ್ಚಿ ಬಿದ್ದಳು. ಯಾಕೆಂದರೆ ಅವಳ ಬಾಯಿಯಿಂದ ಆರಿಂಚು ಉದ್ದದ ಕೊಂಬಚ್ಚೇಳು ಉದುರಿತು! ಕಂಗಾಲಾದ ಅವಳ ಅಮ್ಮ ಬಾವಿಯತ್ತ ಓಡಿದಳು - ವಿಮಲಳಿಗೆ ಕೊಟ್ಟ “ಉಡುಗೊರೆ"ಯನ್ನು ಬದಲಾಯಿಸಬೇಕೆಂದು ಬೇಡಿಕೊಳ್ಳಲು.
“ಅದು ನನ್ನಿಂದಾಗದು. ಆದರೂ ಇದರಿಂದ ಪಾರಾಗಬೇಕಾದರೆ ನಿನ್ನ ಮಗಳು ವಿಧೇಯಳೂ ಒಳ್ಳೆಯವಳೂ ಆಗಬೇಕೆಂದೂ, ಕರುಣೆಯ ಮತ್ತು ಮೃದು ಮಾತುಗಳನ್ನೇ ಆಡಬೇಕೆಂದೂ ಅವಳಿಗೆ ಹೇಳು. ಆಗ ಅವಳು ಮಾತಾಡುವಾಗ ಅವಳ ಬಾಯಿಯಿಂದ ಚೇಳು ಉದುರುವುದಿಲ್ಲ" ಎಂದಳು ಮುದುಕಿ.
ಅಮ್ಮ ಚಿಂತಿಸುತ್ತಲೇ ಮನೆಗೆ ಹಿಂತಿರುಗಿ, ವಿಮಲಳಿಗೆ ಮುದುಕಿ ಹೇಳಿದ್ದನ್ನು ತಿಳಿಸಿದಳು. ವಿಮಲಳ ಕೆಟ್ಟ ಅಭ್ಯಾಸ ಸುಲಭದಲ್ಲಿ ಬಿಟ್ಟು ಹೋಗಲಿಲ್ಲ. ಆದರೆ, ಅವಳು ಬಿರುನುಡಿಗಳನ್ನು ಆಡಿದಾಗೆಲ್ಲ ಅವಳ ಬಾಯಿಯಿಂದ ಚೇಳು ಉದುರುತ್ತಿತ್ತು. ಅವಳು ಹೆದರಿ ನಡುಗುತ್ತಿದ್ದಳು. ಹಾಗಾಗಿ ಮಾತಾಡುವ ಮುಂಚೆ ಯೋಚಿಸಲು ಅವಳು ಅಭ್ಯಾಸ ಮಾಡಿಕೊಂಡಳು.
ಕ್ರಮೇಣ ಕಮಲಳಂತೆಯೇ ಕರುಣೆಯ ಮತ್ತು ಮೃದು ಮಾತುಗಳನ್ನು ಮಾತಾಡುವುದು ವಿಮಲಳಿಗೂ ಅಭ್ಯಾಸವಾಯಿತು. ಅವಳ ಸ್ವಭಾವವೂ ಸ್ನೇಹಮಯವಾಗಿ ಪರಿವರ್ತನೆಯಾಯಿತು. ಅವಳ ಅಮ್ಮ ಸಂತೋಷದಿಂದ ನಿಟ್ಟುಸಿರು ಬಿಟ್ಟಳು.