ಇಬ್ಬರ ಜಗಳ
ಕವನ
ಕಡಲಿನ, ಸೂರ್ಯನ ನಡುವಿನ ಗೆಳೆತನ
ಹಡೆಯಿತು ಶರಧಿ ಮೇಘಗಳ
ಕುಡಿಗಳು ಮಮತೆಯ ಮಡಿಲನು ತೊರೆದವು
ನಡೆದವು ಮರೆತು ಹಡೆದವಳ
ಹಿಡಿವವರಿಲ್ಲದೆ ನುಡಿವವರಿಲ್ಲದೆ
ಬಿಡುಗಡೆ ಭಾವ ಮನದೊಳಗೆ
ಬಿಡದಿಹ ಛಲದಲಿ ಹಿಡಿದರು ಶಸ್ತ್ರವ
ನಡೆಸುತ ಸಮರ ತಮ್ಮೊಳಗೆ
ಮತ್ತಲಿ ಮೆರೆಯುತ ಕತ್ತಿಯ ಬೀಸಲು
ಹತ್ತಿದ ಕಿಚ್ಚು ಮಿಂಚಾಗಿ
ಹತ್ತಿರ ಸೇರುತ ಸುತ್ತುವ ಪರಿಯಲಿ
ಬಿತ್ತದು ಮಳೆಯ ಹನಿಯಾಗಿ
ಜಿದ್ದಿನ ರೋಷದಿ ಗುದ್ದಲು ಕರದಲಿ
ಸದ್ದದು ಬಂತು ಗುಡುಗಾಗಿ
ಯುದ್ಧದಿ ಸಿಡಿಯುವ ಮದ್ದಿನ ಬಳಕೆಯೆ?
ಬಿದ್ದಿತು ಇಳೆಗೆ ಸಿಡಿಲಾಗಿ
ಕೊಬ್ಬಿನ ಬಿಂಕದೆ ಹಬ್ಬಲು ಯುದ್ಧವು
ಕೊಬ್ಬದು ಕರಗಿ ನೀರಾಗಿ
ಅಬ್ಬರದಿಂದಲೆ ಇಬ್ಬರ ಜಗಳವು
ಹಬ್ಬವು ಬುವಿಗೆ ಮಳೆಯಾಗಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್