ಇಮ್ಮಡಿ ಮಡಿಲು

ಇಮ್ಮಡಿ ಮಡಿಲು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ ಎನ್ ಗಣೇಶಯ್ಯ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೯೫.೦೦, ಮುದ್ರಣ ೨೦೨೪

ಇಮ್ಮಡಿ ಮಡಿಲು’ ಕೆ.ಎನ್. ಗಣೇಶಯ್ಯ ಅವರ ಕಥಾಸಂಕಲನ. ಕ್ರಿ.ಶ. ಏಳನೇ ಶತಮಾನದಲ್ಲಿ ಚಾಲುಕ್ಯರ ಬಾದಾಮಿಯನ್ನು ಗೆದ್ದ ಪಲ್ಲವರ ಸೇನಾಧಿಪತಿ, ಅಲ್ಲಿನ ಅರಮನೆಯಿಂದ ತನ್ನ ರಾಜನಿಗೆ ಅಭಿಮಾನದಿಂದ ಕಳುಹಿಸಿದ ಎರಡು 'ರತ್ನ'ಗಳು ಕೊನೆಗೆ ಆತನಿಗೇ ಮುಳುವಾಗುತ್ತವೆ. ಆ ರತ್ನಗಳಿಂದಾಗಿ ತನ್ನ ಬದುಕಿನ ಕರಾಳ ರಹಸ್ಯವೊಂದರ ಪರಿಚಯವಾದಾಗ, ಸೇನಾಧಿಪತಿ, ಬಾದಾಮಿಯಿಂದಲೇ ತಂದ ಗಣೇಶನ ಮೂರ್ತಿಯಲ್ಲಿ ಮೊರೆ ಹೋಗಿ, ಸನ್ಯಾಸ ಜೀವನ ಸಾಗಿಸುತ್ತಾನೆ. ಆತನಿಗೆ ನೆಮ್ಮದಿ, ಶಾಂತಿ ನೀಡಿದ ಅದೇ ಗಣಪತಿ ಮೂರ್ತಿ, ಸಾವಿರ ವರ್ಷಗಳ ನಂತರ ಮುತ್ತುಸ್ವಾಮಿ ದೀಕ್ಷಿತರ 'ವಾತಾಪಿ ಗಣಪತಿಂ ಭಜೇ' ಕೀರ್ತನೆಗೂ ಸ್ಫೂರ್ತಿಯಾಗುತ್ತದೆ. ಈ ಘಟನೆಗಳ ಸುತ್ತ ಹೆಣೆದ ಚಾರಿತ್ರಿಕ ಕಥೆ 'ಇಮ್ಮಡಿ ಮಡಿಲು'.

"ಇಮ್ಮಡಿ ಮಡಿಲು" ಕೃತಿಯ ಬಗ್ಗೆ ಲೇಖಕರಾದ ಕೆ ಎನ್ ಗಣೇಶಯ್ಯನವರು ಮುನ್ನುಡಿಯಲ್ಲಿ ಕಥೆಗಳು ಹೇಗೆ ಮೂಡುತ್ತವೆ ಎನ್ನುವ ಬಗ್ಗೆ ವ್ಯಕ್ತ ಪಡಿಸಿದ ಭಾವಗಳು- “ಓದುಗರೊಂದಿಗೆ ಮಾತಿಗೆ ಕುಳಿತಾಗ ಮತ್ತು ಒಮ್ಮೊಮ್ಮೆ ಮಾಧ್ಯಮಗಳ ಸಂದರ್ಶನ ಗಳಲ್ಲಿ, ನನ್ನನ್ನು ಕೇಳಿದ ಕೆಲವು ಪ್ರಶ್ನೆಗಳು ಮೊದಲ ನೋಟಕ್ಕೆ ಅಪ್ರಮುಖ ಎನಿಸಿದರೂ, ಕೃತಿಗಾರನ ಮನದಲ್ಲಿ ಕಥೆಗಳು, ಕಾದಂಬರಿಗಳು ಹುಟ್ಟುವ ಮತ್ತು ಬೆಳೆಯುವ ಕ್ರಮದ ಅಧ್ಯಯನಕ್ಕೆ ಅವು ಸಹಕಾರಿಯಾಗುತ್ತವೆ ಎನ್ನಬಹುದು. ಆ ದೃಷ್ಟಿಯಲ್ಲಿ ಈ ಪ್ರಶ್ನೆಗಳು ಅವಲೋಕನಾರ್ಹ. ಉದಾಹರಣೆಗೆ:

“ಕಥೆ ಅಥವಾ ಕಾದಂಬರಿಗೆ ವಸ್ತುವನ್ನು ಮೊದಲೇ ತೀರ್ಮಾನಿಸಿ ವಿವರಗಳನ್ನು ಹುಡುಕಲು ಹೊರಡುತ್ತೀರೋ ಅಥವಾ ವಿವರಗಳು ಸಂಪೂರ್ಣವಾಗಿ ಕೈಗೆಟುಕಿದ ಮೇಲೆ ಕಲ್ಪನೆಯಲ್ಲಿ ತೊಡಗಿಕೊಳ್ಳುತ್ತೀರೋ?”

“ಇಂಥಹುದೇ ವಸ್ತುವಿನ ಮೇಲೆ ಕಥೆ ಅಥವಾ ಕಾದಂಬರಿ ಬರೆಯಬಹುದು ಎಂದು ಹೇಗೆ ತೀರ್ಮಾನಿಸುತ್ತೀರಿ?”

“ಯಾವುದೇ ವಸ್ತುವಿನ ಸುತ್ತ ವಿವರಗಳನ್ನು ಕಲೆಹಾಕುತ್ತಿರುವಾಗ, ಯಾವ ಸಮಯದಲ್ಲಿ ನಿಮಗೆ ಕಥೆ ಅಥವಾ ಕಾದಂಬರಿ ಬರೆಯಬಹುದು ಅನಿಸುತ್ತೆ?”

ದುರದೃಷ್ಟವೆಂದರೆ ಈ ಪ್ರಶ್ನೆಗಳಿಗೆ ನನ್ನ ಬಳಿ ಸಿದ್ಧ ಉತ್ತರ ಇಲ್ಲ. ಆದರೆ ಇಲ್ಲಿನ ಮೂರು ಕತೆಗಳು ಹುಟ್ಟಿದ ಮತ್ತು ಬೆಳೆದ ರೀತಿಯನ್ನು ಬಿಡಿಸಿಡುವುದರಿಂದ ಓದುಗರ ಕುತೂಹಲಕ್ಕೆ ಸೂಕ್ತ ಉತ್ತರ ದೊರೆತೀತು ಎಂದು ಭಾವಿಸುತ್ತೇನೆ.

ದಶಕಗಳ ಹಿಂದೆ ಒಮ್ಮೆ ವೀಣಾ ಜೊತೆ ಬಾದಾಮಿ, ಐಹೊಳೆ ಪಟ್ಟದಕಲ್ಲಿನತ್ತ ಹೋಗಿ ಹಿಂದಿರುಗುವಾಗ ಟೂರಿಸ್ಟ್ ಗೈಡ್‌ಗಳು ನೀಡಿದ್ದ ಚಾರಿತ್ರಿಕ ವಿವರಗಳನ್ನು ಮೆಲುಕುಹಾಕುತ್ತಿದ್ದೆವು. ಎಂದಿನಂತೆ ಹಲವಾರು ಸಂಶಯಗಳು, ಪ್ರಶ್ನೆಗಳು ನಮ್ಮನ್ನು ಕಾಡಿದ್ದವು. ಸೂಕ್ತ ಉತ್ತರ ದೊರೆಯದೆ ಅವೆಲ್ಲವೂ ಸ್ಮೃತಿಪಟಲದಲ್ಲಿ ಎಲ್ಲೋ ಬಚ್ಚಿಟ್ಟು ಕೊಂಡಿದ್ದವು. ಇತ್ತೀಚೆಗೆ, ಡಾ. ದೇವರಕೊಂಡಾರೆಡ್ಡಿ ಮತ್ತು ಡಾ. ಸ್ಮಿತಾರೆಡ್ಡಿ ಅವರು 'ಕನ್ನಡದ ಲಿಪಿ-ವಿಕಾಸ'ದ ಬಗ್ಗೆ online ನಲ್ಲಿ ಬೋಧಿಸಿದ ಒಂದು ಕೋರ್ಸ್‌ನಲ್ಲಿ ಕಪ್ಪೆ ಅರೆಭಟ್ಟನ ಶಾಸನದ ಬಗ್ಗೆ ವಿವರಿಸಿದಾಗ ನನ್ನಲ್ಲಿ ಹೆಚ್ಚಿನ ಕುತೂಹಲ ಮೂಡಿತ್ತು. ಕಪ್ಪೆ ಅರೆಭಟ್ಟ ಯಾರು ಎಂದು ಇನ್ನೂ ತಿಳಿದಿಲ್ಲ, ಆತನ ನಿಜವಾದ ವ್ಯಕ್ತಿತ್ವ ಇನ್ನೂ ಅಜ್ಞಾತವಾಗಿಯೇ ಉಳಿದಿದೆ ಎಂಬ ಸತ್ಯ ನನ್ನನ್ನು ಮತ್ತೆ ಬಾದಾಮಿಯತ್ತ ಹೋಗುವಂತೆ ಪ್ರೇರೇಪಿಸಿತ್ತು. ಪುಣ್ಯ, ಬೆಳವಾಡಿ ಮತ್ತು ನನ್ನ ಕೆಲವು ವಿದ್ಯಾರ್ಥಿಗಳ ಜೊತೆ ಅಲ್ಲಿಗೆ ಹೋದಾಗ, ವೀಣಾ ಜೊತೆಗಿನ ಚರ್ಚೆಯಲ್ಲಿ ಮೂಡಿದ್ದ ಪ್ರಶ್ನೆಗಳು ಮತ್ತೆ ತಲೆ ಎತ್ತಿದ್ದವು. ಈ ಹಿನ್ನೆಲೆಯಲ್ಲಿ ಕಲೆಹಾಕಿದ ವಿವರಗಳು 'ಇಮ್ಮಡಿ-ಮಡಿಲು' ಕಥೆಯಾಗಿ ರೂಪ ಪಡೆದವು. ಹೀಗೆ ಅಜ್ಞಾತ ವ್ಯಕ್ತಿ, ವಿಷಯಗಳ ಬಗೆಗಿನ ಕುತೂಹಲದಿಂದ ಮೂಡುವ ಪ್ರಶ್ನೆಗಳು ದಶಕಗಳವರೆಗೆ ಹೆಪ್ಪುಗಟ್ಟಿ ಕೂತು, ನಂತರ ಕಥೆಯಾಗಿ ಬೆಳೆಯುವುದರಲ್ಲಿ ಆಶ್ಚರ್ಯವಿಲ್ಲ.

ಅಕ್ಕಮಹಾದೇವಿಯ ಬಗ್ಗೆ, ವಿಶೇಷವಾಗಿ ಆಕೆ ವಿವಸ್ತ್ರಳಾಗಿ ಸಮಾಜದಲ್ಲಿ ಓಡಾಡುವಂತಹಾ ಪರಿಸ್ಥಿತಿ ನಿರ್ಮಾಣಗೊಂಡ ಬಗೆಗೆ ಆಕೆಯನ್ನು ರೂಪಿಸಿದ ಬಗ್ಗೆ ಹಲವಾರು ವರ್ಷಗಳಿಂದಲೇ ನನ್ನನ್ನು ಪ್ರಶ್ನೆಗಳು ಕಾಡಿದ್ದವು: ಹನ್ನೆರಡನೇ ಶತಮಾನದಲ್ಲಿ, ಹೆಂಗಸರಿಗೆ ಅಷ್ಟೊಂದು ಸ್ವಾತಂತ್ರ್ಯ ಇಲ್ಲದ ಕಾಲದಲ್ಲಿಯೇ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ ಅವುಗಳ ವಿರುದ್ಧ ಸೆಟೆದು ನಿಲ್ಲಬೇಕಾದರೆ ಅಕ್ಕ ಅದೆಂತಹ ಮಾನಸಿಕ ಸುಂಟರಗಾಳಿಗೆ ಸಿಲುಕಿರಬಹುದು ಎಂಬ ಪ್ರಶ್ನೆಯ ಸುತ್ತ ಅಧ್ಯಯನ ಮಾಡಿ ಅರಿಯಬೇಕೆಂಬ ಆಸೆ ನನ್ನೊಳಗೇ ಬೇರುಬಿಟ್ಟಿತ್ತು. ಅಲ್ಲಲ್ಲಿ ದೊರಕಿದ ಲೇಖನಗಳನ್ನೂ, ಕಾದಂಬರಿಗಳನ್ನೂ, ಅವಲೋಕನಾ ಪ್ರಬಂಧಗಳನ್ನೂ, ಅಕ್ಕನ ವಚನಗಳನ್ನೂ ಓದುತ್ತಿದ್ದೆ. ಯಾವುದರಿಂದಲೂ ತೃಪ್ತಿಯೂ ಆಗಲಿಲ್ಲ; ನನ್ನ ಕುತೂಹಲ ತಣಿಸುವ ಉತ್ತರವೂ ದೊರೆಯಲಿಲ್ಲ. ಕೊನೆಗೆ ಮೈಸೂರಿನ ಡಾ. ಪ್ರೀತಿ ಶುಭಚಂದ್ರ ಅವರ ಸಲಹೆಯ ಮೇರೆಗೆ ಡಾ. ಹೆಚ್‌.ಎಸ್‌. ಅನುಪಮ ಅವರ `ಬೆಳಗಿನೊಳಗು' ಕಾದಂಬರಿಯನ್ನು ಓದಿದಾಗ ಅಕ್ಕನ ಬಗ್ಗೆ ಬರೆಯಬೇಕೆಂಬ ನನ್ನ ಹಲವು ವರ್ಷಗಳ ಆಸೆಯನ್ನು ಒಮ್ಮೆಗೇ ಕೈಬಿಟ್ಟೆ. ಕಾರಣ, ಅನುಪಮ ಅವರ ಕಾದಂಬರಿ ನನ್ನ ಬಹುಪಾಲು ಕುತೂಹಲವನ್ನು ತಣಿಸಿತ್ತು. ನಾನು ಅಕ್ಕನ ಬಗ್ಗೆ ಮತ್ತೊಂದು ಕೃತಿ ಬರೆಯುವ ಅವಶ್ಯಕತೆ ಇಲ್ಲ ಎಂಬ ಭಾವ ನನ್ನಲ್ಲಿ ದೃಢವಾಯಿತು. ಆದರೆ, ಅಕ್ಕನ ಜೀವನದ ಬಗ್ಗೆ ನಡೆಸಿದ ಹುಡುಕಾಟದ ಹಾದಿಯಲ್ಲಿ ನಾನು ಕಲೆಹಾಕಿದ್ದ ೧೪ನೇ ಶತಮಾನದಿಂದ ೧೮ನೇ ಶತಮಾನದವರೆಗಿನ ಕೆಲವು ಕಾಶ್ಮೀರಿ ಹೆಣ್ಣುಮಕ್ಕಳ ಜೀವನದ ನನ್ನಲ್ಲಿ ಅಷ್ಟೇ ಕುತೂಹಲ ಮೂಡಿಸಿತ್ತು; ಅಕ್ಕನ ಬಲವಾಗಿ ಬೆಳೆದಿತ್ತು. ಆ ಅನಿಸಿಕೆಯೇ 'ಪರ್ಯಾಯ ಕತೆಯನ್ನು ಬರೆಸಿತು. ಹೀಗೆ ಮತ್ಯಾವುದೋ ಹುಡುಕಾಟದ ದಾರಿಯಲ್ಲಿ ಕಂಡ ವಿವರವೇ ಕತೆಗೆ ವಸ್ತುವಾಗುವ ಸಾಧ್ಯತೆಯೂ ಇದೆ.

ಒಟ್ಟಿನಲ್ಲಿ ಎಂದಿನಂತೆ ಇಲ್ಲಿನ ಎಲ್ಲ ಕತೆಗಳೂ ಹುಟ್ಟಲು ಕಾರಣ 'ಅಜ್ಞಾತದ ಆಕರ್ಷಣೆ' ಮತ್ತು ಚರಿತ್ರೆಯಲ್ಲಿನ ಬಿರುಕುಗಳು. ಆ ಬಿರುಕುಗಳನ್ನು ತುಂಬುವಲ್ಲಿ ನನಗೆ ಎಲ್ಲಿಲ್ಲದ ಖುಷಿ. ೧೫೨ ಪುಟಗಳ ಈ ಕೃತಿಯಲ್ಲಿನ ಕಥೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.