ಇಮ್ರೋಜ್ ಕವಿತೆಗಳು-1
ಇವು ಪಂಜಾಬಿನ ಕವಿಯಿತ್ರಿ ಅಮೃತ ಪ್ರೀತಂಳ ಸಂಗಾತಿ ಇಮ್ರೋಜ್ ಆಕೆಯ ನೆನಪಲ್ಲಿ ಬರೆದಿರುವ ‘ಅಮೃತಾ ಕೆ ಲಿಯೆ ನಜ್ಮ್ ಜಾ಼ರಿ ಹೈ’ ಸಂಕಲನದಲ್ಲಿನ ಎರಡು ಕವಿತೆಗಳು.
ಸಂಪೂರ್ಣ ಹೆಣ್ಣು
ನಡೀತಾ ನಡೀತಾ ಒಂದು ದಿನ
ಅಮೃತಾ ಕೇಳಿದಳು-
‘ನೀನು ಎಂದಾದರೂ woman with mind
Paint ಮಾಡಿದಿಯಾ?’
ಗಕ್ಕನೆ ನಿಂತೆ.
ನನ್ನೊಳಗೆ ನೋಡಿದೆ, ನನ್ನ ಹೊರಗೆ ನೋಡಿದೆ
ಉತ್ತರ ಎಲ್ಲೂ ಇರಲಿಲ್ಲ
ನಾಲ್ಕೂ ಕಡೆ ನೋಡಿದೆ.
ಪ್ರತಿ ದಿಕ್ಕಿನ ಕಡೆ ನೋಡಿ ಕಾದೆ.
ಆದರೆ ಯಾವ ದನಿಯೂ ಕೇಳಲಿಲ್ಲ, ಉತ್ತರವೂ ಬರಲಿಲ್ಲ.
ಉತ್ತರ ಹುಡುಕುತ್ತಾ ಹುಡುಕುತ್ತಾ
ಪೇಂಟಿಂಗ್ನ ಕ್ಲಾಸಿಕ್ ಕಾಲಕ್ಕೆ ಹೋದೆ.
ಅಮೃತಾ ಕೇಳಿದ ಹೆಣ್ಣು
ಹೆಣ್ಣೊಳಗಿನ ಆಲೋಚನೆ
ಆಲೋಚನೆಯ ಬಣ್ಣ
ಯಾವುದೇ ಪೇಂಟಿಂಗ್ನ ಬಣ್ಣದಲ್ಲಿ ಕಾಣಲಿಲ್ಲ.
ಯಾವುದೇ ಕಲೆಯ ಪುಸ್ತಕದಲ್ಲೂ ಕಾಣಲಿಲ್ಲ.
ಆ ಹೆಣ್ಣಿನ ಅವಳ ಆಲೋಚನೆಯ ಎಳೆಯನ್ನು ಹುಡುಕಿದೆ..
ಓಹ್!
ನೋಡ ನೋಡುತ್ತಾ ಆಶ್ಚರ್ಯವಾಯ್ತು..
ಯಾವ ಚಿತ್ರಕಾರನೂ ಹೆಣ್ಣನ್ನು ದೇಹಕ್ಕಿಂತ
ಮಿಗಿಲಾಗಿ ಯೋಚಿಸಿರಲಿಲ್ಲ, ಚಿತ್ರಿಸಿರಲಿಲ್ಲ.
ಸಂಪೂರ್ಣ ಹೆಣ್ಣು ದೇಹಕ್ಕಿಂತ ಮಿಗಿಲಾದವಳು.
ಹೆಣ್ಣಿನ ದೇಹದೊಂದಿಗೆ ಮಲಗಬಹುದು
ಆದರೆ ಕೇವಲ ದೇಹದೊಂದಿಗೆ ಎಚ್ಚರಗೊಳ್ಳಲು ಸಾಧ್ಯವಿಲ್ಲ.
ಒಂದುವೇಳೆ ಚಿತ್ರಕಾರರು ಸಂಪೂರ್ಣ ಹೆಣ್ಣಿನೊಂದಿಗೆ
ಎಚ್ಚರಗೊಂಡು ನೋಡಿದ್ದರೆ..
ಇಷ್ಟೊತ್ತಿಗೆ ಚಿತ್ರಕಲೆ ಬೇರೆಯೇ ರೀತಿಯಿರುತ್ತಿತ್ತು.
ಈಗಿನ ಮಾಡ್ರನ್ ಆರ್ಟ್ನಲ್ಲಿ ಕೂಡ ಇದರ ಸುಳಿವಿಲ್ಲ.
ಹೆಣ್ಣಿಲ್ಲ, ಗಂಡಿಲ್ಲ ಮತ್ತು ಯಾವುದೇ ಆಲೋಚನೆ ಕೂಡ ಇಲ್ಲ.
ಒಂದು ವೇಳೆ ಗಂಡು ಹೆಣ್ಣಿನೊಂದಿಗೆ ಎಚ್ಚರಗೊಂಡು ನೋಡಿದ್ದರೆ....
ಬದಲಾಗಿರುತ್ತಿತ್ತು- ಅವನ ಬದುಕು ಮತ್ತು ಪ್ರಪಂಚ.
ಬದುಕು ಬದುಕಲು ಯೋಗ್ಯವಾಗಿರುತ್ತಿತ್ತು-
ಅವನದು ಮತ್ತು ಅವನ ಪೀಳಿಗೆಯದು ಕೂಡ..
ಹೆಣ್ಣು
ಫ್ರಾನ್ಸಿನ ಪ್ರಸಿದ್ಧ ಕಾದಂಬರಿಯೊಂದರ
ಪಾತ್ರ ತನಗೆ ತಾನೇ ಹೇಳಿಕೊಳ್ಳುತ್ತದೆ-
ನನಗೆ ಜಗತ್ತಿನ ಎಲ್ಲ ಹೆಣ್ಣುಗಳೊಂದಿಗೆ
ಮಲಗಬೇಕೆಂದು ಆಸೆ
ಆದರೆ...
ಇದುವರೆಗೂ ಯಾರದೇ ಯಾವುದೇ
ಕಥೆ ಅಥವ ಕಾದಂಬರಿಯ ಪಾತ್ರಕ್ಕೆ
ಅನ್ನಿಸಿಲ್ಲ “ನಾನು ಆ ಹೆಣ್ಣಿನೊಂದಿಗೆ ಎಚ್ಚರಗೊಳ್ಳಬೇಕೆಂದು...”
ಮಲಗುವವನಿಗೆ ಕೇವಲ ದೇಹ ಸಿಗುತ್ತದೆ
ಹೆಣ್ಣು ಸಿಗುವುದು... ಎಚ್ಚರಗೊಂಡವನಿಗೆ ಮಾತ್ರ..
Comments
ಹೇಮಾರವರೆ,
ಹೇಮಾರವರೆ,
ತುಂಬಾ ಅರ್ಥಪೂರ್ಣ ಕವಿತೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಅಭಿನಂದನೆಗಳು.