ಇರಲಿ ನಿನ್ನ ದಾರಿ ನಿನಗೆ

ಇರಲಿ ನಿನ್ನ ದಾರಿ ನಿನಗೆ

ಕವನ

 

 

ಇರಲಿ ನಿನ್ನ ದಾರಿ ನಿನಗೆ

ಇರಲಿ ನನ್ನ ದಾರಿ ನನಗೆ

ಆಗಿ ಹೋಯಿತೇನು ಸೂರೆ... ? ಮಾತು ನಿಲುವುದು..

 

ನಿನ್ನ ಮದುವೆಯಾದ ಮೇಲೆ, ಆಗಬಹುದು ನನ್ನ ಮದುವೆ,

ಒಂದು ಗಂಡಿಗೊಂದು ಹೆಣ್ಣು ಕಾದು ನಿಂತಿದೆ..

ನಿನ್ನ ಬದುಕು ತುಂಬಿಕೊಂಡು

ನಿನ್ನ ಪುಣ್ಯ ಕೈಗೆ ಬಂದು

ನಿನ್ನ ಗಂಡನೊಡನೆ ನೀನು ತೆರಳು ಸಂತೆಗೆ... !!

 

ಅಲ್ಲಿಗೆನ್ನ ಮಡದಿಯೊಡನೆ, ಬಂದು ಜನರ ಕಣ್ಣ ಮುಂದೆ,

ಮೊದಲಿನೊಲವ ಮರೆತು - " ಏನೇ, ತಂಗಿ " - ಎನುವೆನು...

ಗಂಡ ಹೆಂಡಿರಾಗದವರು,

ಅಣ್ಣ ತಂಗಿಯಾಗಬಹುದು

ಹಠವ ತೊರೆದು, ದಿಟವ ಕಂಡು, ದೂರ ಸರಿವೆನು....

 

                                              - ಕೆ. ಎಸ್. ನರಸಿಂಹಸ್ವಾಮಿ

 

 

 

ಚಿತ್ರ ಕೃಪೆ: ಗೂಗಲ್