ಇರಾನ್ ಮಹಿಳೆಯರ ಹಿಜಾಬ್ ದಂಗೆ…!

ಇರಾನ್ ಮಹಿಳೆಯರ ಹಿಜಾಬ್ ದಂಗೆ…!

ಮಹ್ಸಾ ಅಮಿನಿ ಸಾವು ಮತ್ತು ಮಹಿಳೆಯರ ತೀವ್ರ ಆಕ್ರೋಶ - ಪ್ರತಿಭಟನೆ.. ಧಾರ್ಮಿಕ ನಂಬಿಕೆ ಸಂಪ್ರದಾಯಗಳ ಯಥಾಸ್ಥಿತಿ ವಾದ v/s ಪ್ರಗತಿಪರ ಚಿಂತನೆಯ ಮುಕ್ತ ವಾದ. ಇದರ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ಯಥಾಸ್ಥಿತಿ ಮತ್ತು ಮುಕ್ತತೆಯ ವೈಯಕ್ತಿಕ ಮತ್ತು ಸಾಮಾಜಿಕ ಗುಣಲಕ್ಷಣಗಳು ಮತ್ತು ಪರಿಣಾಮಗಳ ಬಗ್ಗೆ ಆಳವಾಗಿ ಪರಿಶೀಲಿಸಬೇಕು.

ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಹುಟ್ಟಿನಿಂದಲೇ ನಮ್ಮ ನಡವಳಿಕೆ ನಿಯಂತ್ರಿಸುವ ಆಚಾರ ವಿಚಾರಗಳು ಅನಾದಿ ಕಾಲದಿಂದಲೂ ಒಪ್ಪಿತ ಮತ್ತು ಹೇರಲ್ಪಟ್ಟ ಆಚರಣೆಗಳಾಗಿರುತ್ತವೆ. ಇಲ್ಲಿ ನಮ್ಮ ಸ್ವಂತ ಚಿಂತನೆಗೆ ಅವಕಾಶವೇ ಇರುವುದಿಲ್ಲ ಮತ್ತು ಸಾಮಾನ್ಯ ಜನ ಅದನ್ನು ಉಲ್ಲಂಘಿಸುವ ಪ್ರಯತ್ನ ಮಾಡುವುದಿಲ್ಲ. ಹಾಗೆ ಮಾಡಿದರೆ ಅದು ಧರ್ಮ ವಿರೋಧಿ ಎಂದೇ ಭಾವಿಸುತ್ತಾರೆ. ಮನಸ್ಸು ಸಹ ಇದನ್ನು ಒಪ್ಪಿಕೊಂಡು ಸಹನೀಯ ಎನಿಸುತ್ತದೆ. ಸಮಾಜ ಕೂಡ ಅದನ್ನು ಆತ್ಮೀಯವಾಗಿ ಬೆಂಬಲಿಸುತ್ತದೆ. ಯಥಾಸ್ಥಿತಿಯನ್ನು ಸಾಕಷ್ಟು ಜನ ಇಷ್ಟಪಡುತ್ತಾರೆ.

ಆದರೆ ಯಥಾಸ್ಥಿತಿಯ ಸಮಸ್ಯೆ ಎಂದರೆ ಅದು ಕಾಲದೊಂದಿಗೆ ಬದಲಾವಣೆಯನ್ನು ಸ್ವೀಕರಿಸುವುದಿಲ್ಲ ಮತ್ತು ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆ ಅದನ್ನು ನಿಯಂತ್ರಣಕ್ಕೆ ಪಡೆದು ಜನರನ್ನು ನಿರಂತರವಾಗಿ ಶೋಷಿಸುತ್ತಲೇ ಇರುತ್ತದೆ. ಎಲ್ಲ ಪ್ರತಿರೋಧವನ್ನು ಹತ್ತಿಕ್ಕುತ್ತದೆ. ಏಕೆಂದರೆ ಅದರ ಹಿತಾಸಕ್ತಿಗೆ ಬದಲಾವಣೆ ಧಕ್ಕೆ ತರುತ್ತದೆ ಎಂಬ ಭಯ ಅದಕ್ಕಿದೆ. ಜೊತೆಗೆ ಯಥಾಸ್ಥಿತಿ ಅಥವಾ ಸಂಪ್ರದಾಯಗಳು ದೀರ್ಘಕಾಲದಲ್ಲಿ ನಿಂತ ನೀರಿನಂತೆ ಕೊಳೆಯುತ್ತವೆ. ಅದು ಕೆಲವೊಮ್ಮೆ ಈ ಆಧುನಿಕತೆಯ ಬದುಕಿನಲ್ಲಿ ಅಸಹನೀಯ ಎನಿಸುತ್ತದೆ.

ಹಾಗೆಯೇ ಮುಕ್ತತೆ ಎಂಬುದು ಆಧುನಿಕ ಮತ್ತು ತಂತ್ರಜ್ಞಾನ ಯುಗದ ಸ್ವಾತಂತ್ರ್ಯ ಸಮಾನತೆ ಮತ್ತು ಬದಲಾವಣೆಯ ಪರಿಕಲ್ಪನೆಯ ಮೇಲೆ ತೆರೆದುಕೊಳ್ಳುತ್ತದೆ. ಕೆಲವು ಕಾನೂನಾತ್ಮಕ ಮಿತಿಗೆ ಒಳಪಟ್ಟು ಇತರರಿಗೆ ತೊಂದರೆಯಾಗದಂತೆ ನನ್ನ ಬದುಕು ನನ್ನ ಇಚ್ಚೆ ಇದಕ್ಕೆ ಮೂರನೆಯವರ ಅನುಮತಿ ಅಥವಾ ಪ್ರವೇಶದ ಅವಶ್ಯಕತೆ ಇಲ್ಲ ಎಂದೇ ಪ್ರತಿಪಾದಿಸುತ್ತದೆ. ಮುಕ್ತತೆಯ ಸಮಸ್ಯೆ ಎಂದರೆ ಇದನ್ನು ಸಾಂಪ್ರದಾಯಿಕ ಅಥವಾ ಯಥಾಸ್ಥಿತಿ ಮನಸ್ಥಿತಿಗಳು ಮತ್ತು ‌ಪಟ್ಟಭದ್ರ ಹಿತಾಸಕ್ತಿಗಳು ಸಹಿಸುವುದಿಲ್ಲ. ಜನ ತಮ್ಮ ನಿಯಂತ್ರಣ ಮೀರಿ ಬೆಳೆದರೆ ತಮಗೆ ಕಷ್ಟ ಎಂದು ಯಾವುದೇ ಬೆಲೆ ತೆತ್ತಾದರೂ ಇದನ್ನು ತಡೆಯುತ್ತಾರೆ. ಜೊತೆಗೆ ಈ ಮುಕ್ತತೆಯೂ ದೀರ್ಘಕಾಲದಲ್ಲಿ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದುತ್ತದೆ.

ಸಾಮಾನ್ಯವಾಗಿ ಬಹುತೇಕ ದೇಶಗಳಲ್ಲಿ ಯಥಾಸ್ಥಿತಿವಾದಿಗಳು ಬಹುಸಂಖ್ಯಾತರು ಮತ್ತು ಪ್ರಗತಿಪರರು ಅಲ್ಪಸಂಖ್ಯಾತರು. ಆದರೆ ಕೆಲವೊಮ್ಮೆ ಸಂಪ್ರದಾಯವಾದಿಗಳು ಉಸಿರುಗಟ್ಟುವ ವಾತಾವರಣದಲ್ಲಿ ಬದಲಾವಣೆ ಬಯಸಿ ಪ್ರಗತಿಪರ ವಾತಾವರಣ ಬಯಸುತ್ತಾರೆ. ಆಗಲೇ ವ್ಯವಸ್ಥೆ ಬಹುದೊಡ್ಡ ಪ್ರತಿರೋಧ ಒಡ್ಡುತ್ತದೆ. ಸಂಘರ್ಷ ತಾರಕಕ್ಕೇರುತ್ತದೆ.

ಹಿಜಾಬ್, ಬುರ್ಖಾ, ಭಾರತದ ಕೆಲವು ದೇವಾಲಯಗಳಿಗೆ ಮಹಿಳೆಯರ ಪ್ರವೇಶ, ಅಂಗಿ ಬಿಚ್ಚಿ ದೇವಾಲಯ ಪ್ರವೇಶ, ಅಸ್ಪೃಶ್ಯತೆ‌ ಮುಂತಾದ ಧಾರ್ಮಿಕ ನಂಬುಗೆಯ ಸಂಪ್ರದಾಯಗಳು ಜಾಗೃತ ಮನಸ್ಥಿತಿಯ ಸಂದರ್ಭದಲ್ಲಿ ಅತ್ಯಂತ ಅಸಹನೀಯವೆನಿಸಿ ಈಗ ದೊಡ್ಡ ಹೋರಾಟಗಳಾಗಿ ಪರಿವರ್ತನೆ ಹೊಂದಿವೆ. ಈ ಎಲ್ಲವನ್ನೂ ಕೂಲಂಕಷವಾಗಿ ಅಧ್ಯಯನ ಮತ್ತು ಚಿಂತನೆ ಮಾಡಿದ ನಂತರ ನಾಗರಿಕ ಸಮಾಜದಲ್ಲಿ ಕಾನೂನಿಗೆ ಒಳಪಟ್ಟ ಮುಕ್ತತೆ ಮತ್ತು ಪ್ರಗತಿಪರತೆ ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕ. 

ಇಡೀ ಜಗತ್ತು ಒಂದು ಮಾರುಕಟ್ಟೆಯಾಗಿ ಬೆಳವಣಿಗೆ ಹೊಂದಿ, ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಾಗಿ, ತಂತ್ರಜ್ಞಾನ ಎಲ್ಲರನ್ನೂ ಒಟ್ಟುಗೂಡಿಸುತ್ತಿರುವಾಗ ಈಗಲೂ ವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಎಲ್ಲಾ ಸಂಪ್ರದಾಯಗಳನ್ನು ಪುನರ್ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಹೆಚ್ಚು ಮುಕ್ತತೆಗೆ ಒಳಪಡಿಸಬೇಕಿದೆ. ಆಹಾರ, ವಸ್ತ್ರ ವಿನ್ಯಾಸ, ಕೇಶ ವಿನ್ಯಾಸ, ವಾಹನ, ಕ್ರೀಡೆ, ಮನರಂಜನೆ ಎಲ್ಲವೂ ಮುಕ್ತವಾದರೆ ಉತ್ತಮ. ಇಲ್ಲದಿದ್ದರೆ ಶೋಷಣೆ ನಿರಂತರ ಮತ್ತು ಕೆಲವೇ ಮಂದಿ ಅದರ ಲಾಭ ಪಡೆಯುತ್ತಾರೆ. 

ಇದನ್ನು ಪ್ರಾರಂಭಿಕ ಹಂತದಲ್ಲಿ ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಮತ್ತೊಂದು ಹಂತದ ಬದಲಾವಣೆಯವರೆಗೆ ಇದು ಅನಿವಾರ್ಯ. ರಾಜಪ್ರಭುತ್ವ ಪ್ರಜಾಪ್ರಭುತ್ವವಾಗಿ ಜನರಿಗೆ ಎಲ್ಲಾ ರೀತಿಯ ಆಯ್ಕೆ ಸ್ವಾತಂತ್ರ್ಯಗಳ ಅರಿವು ಮೂಡಿರುವಾಗ ಅವರಿಗೆ ಹಿಂಸೆಯಾಗುವ ಮತ್ತು ಜನರೇ ಸ್ವತಃ ವಿರೋಧಿಸುವಾಗ ಆ ಆಚರಣೆಗಳನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಅಂತಿಮವಾಗಿ ಎಲ್ಲಾ ಆಚರಣೆಗಳು ಜನರ ಹಿತಾಸಕ್ತಿಯ ಪರವಾಗಿ ಇರಬೇಕೆ ಹೊರತು ದೇವರು ಧರ್ಮ ನಂಬಿಕೆಗಳ ಆಧಾರದಲ್ಲಿ ಜನರಿಗೆ ಹಿಂಸೆ ನೀಡಬಾರದು. ಹಾಗೆಯೇ ಅದು ಸ್ವೇಚ್ಚಾಚಾರವಾಗಿ ನಿಯಂತ್ರಣ ಮೀರಿದಾಗ ಅದನ್ನು ಶಿಕ್ಷಿಸಲು ಕಾನೂನುಗಳು ಜಾರಿಯಾಗಬೇಕು.

ಇದನ್ನು ಚರ್ಚೆಗೆ ಒಳಪಡಿಸಿದಾಗ ಅನೇಕ ರೀತಿಯ ಅಭಿಪ್ರಾಯಗಳು ಹೊರಬರುತ್ತದೆ. ಆದರೆ ಪ್ರಕೃತಿಯ ಮೂಲದಿಂದ ಯೋಚಿಸಿ ಸಾರ್ವತ್ರಿಕ ಸಹಜ ಸ್ವಾಭಾವಿಕ ಅಂಶಗಳನ್ನು ಹೆಚ್ಚು ಪರಿಗಣಿಸಿ ಆ ರೀತಿಯಲ್ಲಿ ನಮ್ಮ ಆಚರಣೆಗಳನ್ನು ಮುಂದುವರಿಸಬೇಕು. ಕೃತಕ ಸೃಷ್ಟಿಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ