ಅವನಿಗೆ ಟಾಟಾ ಹೇಳಿ ನಾನು ಮನೆಗೆ ಬಂದು ಟಿ.ವಿ. ನೋಡುತ್ತಾ ಕೂತೆ. ಕಣ್ಣುಗಳು ಟಿ.ವಿ. ನೋಡ್ತಾ ಇದ್ರೂ ಮನಸ್ಸು ಅವನಾಡಿದ ಮಾತುಗಳ ಬಗ್ಗೆ ಯೋಚಿಸುತ್ತಾ ಇತ್ತು. ಅವನ ಬೇಂಜ಼್ ಕಾರ್ ನೋಡಿದ ಮೇಲಂತೂ, ಅವನು ಹೇಳಿದ್ದು ನಿಜ ಇದ್ರು ಇರಬಹುದು ಅಂತ ಅನಸ್ತು. ಆದ್ರೂ ಪೂರ್ತಿ ಭರವಸೆ ಬರಲಿಲ್ಲ. ಇದನ್ನ ಹೇಗೆ ಪುಷ್ಟೀಕರಿಸಿಕೊಳ್ಳೋದು ಅಂತ ತಿಣುಕಾಡುತ್ತಿರುವಾಗ, ಅವನು ಹೇಳಿದ ಒಂದು ಚಿತ್ರದ ಹೆಸರು ನೆನಪು ಆಯ್ತು, 'ಹುಡುಕಾಟ'. ಸರಿ, ಇವತ್ತು ಹೇಗಾದ್ರೂ ಈ ಚಿತ್ರವನ್ನು ನೋಡಿದ್ರೆ ಗೊತ್ತಾಗುತ್ತೆ ಅಂತ ನಿರ್ಧರಿಸಿ ಆ ದಿನದ ದಿನಪತ್ರಿಕೆಯಲ್ಲಿ ಆ ಚಿತ್ರದ ಥಿಯೇಟರ್ ಮತ್ತು ಸಮಯ ಹುಡುಕೋಕೆ ಕೂತೆ. ಆದ್ರೆ ಅದರಲ್ಲಿ ಆ ಹೆಸರು ಇರಲಿಲ್ಲ. ಸಂಶಯ ಬಂತು, ಆದ್ರೂ ಇನ್ನೊಂದು ಪತ್ರಿಕೆಯನ್ನು ನೋಡಿ ನಿರ್ಧಾರ ಮಾಡಬೇಕು ಅಂತ ಲೆಕ್ಕ ಹಾಕಿ, ಮನೆಯಿಂದ ಕಾಲು ಮೈಲಿ ದೂರದಲ್ಲಿ ಇದ್ದ ಒಂದು ಪುಸ್ತಕದ ಮಳಿಗೆಗೆ ಹೋಗಿ, ಕೇವಲ ಚಲನಚಿತ್ರಗಳ ಮಾಹಿತಿ ಇರುವಂತಹ ಒಂದು ಪತ್ರಿಕೆಯನ್ನು ತಂದು ಹುಡುಕುತ್ತಾ ಕೂತೆ. ಕೊನೆಯ ಪುಟದ ಕೊನೆಯ ಭಾಗದ ಒಂದು ಸಣ್ಣ ಚೌಕದಲ್ಲಿ 'ಹುಡುಕಾಟ' ಸಿಕ್ತು. 'ಯಶಸ್ವಿಯಾಗಿ ೨೫ ದಿನಗಳನ್ನು ಮುಗಿಸಿ ೨೬ ನೇ ದಿನಕ್ಕೆ ಕಾಲಿಡುತ್ತಿರುವ 'ಹುಡುಕಾಟ', ಇಂದೇ ನೋಡಿ ಆನಂದಿಸಿ' ಅಂತ ಮೆಜೆಸ್ಟಿಕ್ ಹತ್ರ ನಾನು ಕೇಳದೇ ಇದ್ದ ಹಾಗೂ ಇನ್ನೂ ವರೆಗೆ ಅಲ್ಲಿಗೆ ಹೋಗದೇ ಇದ್ದ ಒಂದು ಥಿಯೇಟರ್ ಹೆಸರು ಕೊಡಲಾಗಿತ್ತು.
ನಾನು ಹಳೆಯ ಕಾಲದ ಕನ್ನಡ ಹಾಗೂ ಹಿಂದಿ ಚಿತ್ರಗಳನ್ನು ಬಹುವಾಗಿ ನೋಡ್ತಾ ಇದ್ದೆ. ಇತ್ತೀಚೆಗೆ ಬರುತ್ತಿದ್ದ ಚಿತ್ರಗಳ ಗುಣಮಟ್ಟ ಸರಿ ಇಲ್ಲದುದರ ಕಾರಣ ನಾನು ಥಿಯೇಟರ್ ಗೆ ಜಾಸ್ತಿ ಹೋಗ್ತಾ ಇರಲಿಲ್ಲ. ಹಳೆಯ ಚಿತ್ರಗಳಲ್ಲಿ ಒಂದು ಸತ್ವ ಇತ್ತು, ಆ ಪಾತ್ರವೇ ತಾನು ಎಂದು ಅನುಭವಿಸಿ ನಟಿಸುವ ಮೇರು ನಟರಿದ್ದರು. ಆಗ ಸಿನಿಮಾ ಮಾಡುವುದು ಕೇವಲ ಉದ್ಯಮವಾಗಿರದೆ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ಮಾಧ್ಯಮವೂ ಆಗಿತ್ತು. ಆದರೆ ಈಗಿನ ಪರಿಸ್ಥಿತಿ ಇದಕ್ಕೆ ವ್ಯತಿರೀಕ್ತ. ನನಗೆ ಚಿತ್ರ ನೋಡುವುದಕ್ಕಿಂತ, ಕಥೆ ಅಥವಾ ಕಾದಂಬರಿಯನ್ನು ಓದುವುದರಲ್ಲಿ ತುಂಬಾ ಆಸಕ್ತಿ. ನಾನು ಕೂಡ ಪುಟ್ಟಣ್ಣ ಕಣಗಾಲ್ ಅವರ ಅಭಿಮಾನಿ. ಕಾರಣ ಅವರು ಕಾದಂಬರಿಯನ್ನು ಮೀರಿಸುವ ಹಾಗೆ ಚಿತ್ರಗಳನ್ನು ಮಾಡ್ತಾ ಇದ್ದರು. ಮನಸ್ಸಲ್ಲಿ ಇಷ್ಟೆಲ್ಲಾ ದ್ವಂದ್ವಗಳಿದ್ದರೂ ನನ್ನ ಗೆಳೆಯ ಈರಪ್ಪ ಊರ್ಫ್ ಪುಟ್ಟಣ್ಣನ 'ಹುಡುಕಾಟ' ನೋಡಲು ಗಟ್ಟಿ ಮನಸ್ಸು ಮಾಡಿ ನನ್ನ ಹೆಂಡತಿಗೆ ಹೇಳಿದೆ "ಲೇ, ಏನೇ. ಇವತ್ತು ಸಾಯಂಕಾಲ ಮೆಜೆಸ್ಟಿಕ್ ಗೆ 'ಹುಡುಕಾಟ'ಕ್ಕೆ ಹೋಗೋಣ ರೆಡೀ ಆಗು" ಅಂತ ಆಜ್ಞೆ ಮಾಡಿದೆ. ಅವಳು ಪತಿರಾಯ ತನಗೆ ರೇಷ್ಮೆ ಸೀರೇನೋ ಅಥವಾ ಬಂಗಾರದ ಒಡವೇನೋ ಕೊಡಿಸಬಹುದು ಅಂತ ಕಲ್ಪಿಸಿಕೊಂಡು "ಮೆಜೆಸ್ಟಿಕ್ ನಲ್ಲಿ ಯಾವ ಅಂಗಡಿ ಅಂತ ಗೊತ್ತಾ ನಿಮಗೆ? ಗೊತ್ತಿಲ್ಲ ಅಂದ್ರೆ ನನಗೆ ಒಬ್ಬಳು ಗೆಳತಿ ಇದ್ದಾಳೆ, ಅವಳನ್ನ ಕೇಳ್ತೀನಿ. ಇಲ್ಲ ಅಂದ್ರೆ ನಾವಿಬ್ಬರೇ ಕೂಡಿ ಒಳ್ಳೆಯ ಅಂಗಡಿ ಹುಡುಕೋಣ. ಏನು ಕೊಡಿಸ್ತಾ ಇದಿರಾ?" ಅಂತ ನುಲಿಯುತ್ತಾ ನನ್ನ ಹತ್ತಿರ ಬಂದು ನಿಂತಳು. ನನ್ನ ಮಾತಿನ ಅಚಾತುರ್ಯದ ಅರಿವಾಗಿ, ಸರಿಯಾಗಿ ಹೇಳದೇ ಹೋದರೆ ಮಧ್ಯಾಹ್ನದ ಊಟಕ್ಕೆ ಸಂಚಕಾರ ಗ್ಯಾರೆಂಟೀ ಅಂತ ಅನ್ನಿಸಿ "ಲೇ, ನಾನು ಹೇಳಿದ್ದು 'ಹುಡುಕಾಟ" ಎಂಬ ಸಿನಿಮಾ ನೋಡಲು ಹೋಗೋಣ" ಎಂದು ಬಿಡಿಸಿ ಹೇಳಿದೆ. ಅದಕ್ಕೆ ಅವಳು ಮುಖ ಸಣ್ಣಗೆ ಮಾಡಿಕೊಂಡು ಒಳಗೆ ಹೋದಳು.
ಸಾಯಂಕಾಲ ೭ ಘಂಟೆಯ ಶೋಗೆ ನಾವು ಒಂದು ಘಂಟೆ ಮುಂಚೇನೆ ಹೋಗಿ ಥಿಯೇಟರ್ ಗಾಗಿ ಹುಡುಕಾಟ ನಡೆಸಿದೆವು. ಸ್ವಲ್ಪ ಸಮಯದ ನಂತರ ಮೆಜೆಸ್ಟಿಕ್ ನ ಒಂದು ಮೂಲೆಯಲ್ಲಿ ಥಿಯೇಟರ್ ಸಿಕ್ಕಿತು. ನಾನು ತುಂಬಾ ಜನಜಂಗುಳಿ ಇರಬಹುದು ಅಂತ ಯೋಚನೆ ಮಾಡಿದ್ದೆ, ಅಲ್ಲಿಗೆ ಹೋದ ಮೇಲೇನೆ ಗೊತ್ತಾಗಿದ್ದು ಅವರು ನಮಗೋಸ್ಕರನೆ ಕಾಯ್ತಾ ನಿಂತೀದ್ರು ಅಂತ. ಟಿಕೆಟ್ ತಗೊಂಡು ಒಳಗೆ ಹೋಗಿ ನೋಡಿದೆ, ಕೇವಲ ಬೆರಳೆಣಿಕೆಯಷ್ಟೇ ಜನ ಕೂತಿದ್ರು. ಚಿತ್ರ ಬಹುಶಃ ಚೆನ್ನಾಗಿಲ್ಲ ಅಂತ ಕಾಣುತ್ತೆ ಎಂದು ಊಹೆ ಮಾಡಿಕೊಂಡು ಸೀಟ್ ಅಲ್ಲಿ ಕೂತೆ. ನನ್ನಾಕೇ ಒಲ್ಲದ ಮನಸ್ಸಿನಿಂದ ಬಂದಿದ್ದಳು. ಚಿತ್ರ ನೋಡಿ ಹೊರಗೆ ಬಂದಾಗ ಘಂಟೆ ೯.೧೫ ಆಗಿತ್ತು. ಮನೆಗೆ ಬಂದ ಮೇಲೆ ಹೆಂಡತಿಯನ್ನು ಚಿತ್ರ ಹೇಗಿತ್ತು ಅಂತ ಕೇಳಿದೆ. ಅದಕ್ಕೆ ಅವಳು ಮುಖ ಸಿಂಡರಿಸಿಕೊಂಡು ಮಲಗಲು ಹೋದಳು. ನನಗೇನೋ ಚಿತ್ರ ಇಷ್ಟ ಆಗಿತ್ತು, ಏಕೆಂದರೆ ಅವನ ಡೈರೆಕ್ಶನ್ ನನಗೆ ೧೯೭೦ ರ ದಶಕದ ಚಿತ್ರವನ್ನು ನೆನಪಿಸುವಂತಿತ್ತು. ಅದರ ಕಥೆ ನನಗೆ ತುಂಬಾ ಹಿಡಿಸಿತ್ತು. ತಾಯಿಗೆ ಒಬ್ಬನೇ ಮಗ, ತುಂಬಾ ಪ್ರೀತಿಯಿಂದ ಬೆಳೆದವನು. ಮನೆಯಲ್ಲಿ ಆಸ್ತಿ, ಐಶ್ವರ್ಯ ಎಲ್ಲ ಇದ್ದರೂ ತನಗೆ ಮಗನೆ ನಿಜವಾದ ಆಸ್ತಿ ಎಂದು ನಂಬಿರುವ ತಾಯಿ. ಮುಂದೆ ತನ್ನ ಮಗ ಮನೆತನದ ಕೀರ್ತಿ, ಸಂಸ್ಕಾರ, ಸಂಸ್ಕೃತಿ ಬೆಳಗುತ್ತಾನೆ ಎಂದು ನಂಬಿದವಳು. ಅವನು ಅಷ್ಟೇ, ಚಿಕ್ಕವನಿದ್ದಾಗ ತಾಯಿಯನ್ನು ಒಂದು ಕ್ಷಣವೂ ಬಿಡದೆ ಇರುವವ. ಆದರೆ ಅವನು ಬೆಳೆದು ದೊಡ್ಡವನಾದ ಮೇಲೆ, ಅದೇನೋ ತಾಯಿಯ ಮೇಲೆ ಒಂದು ರೀತಿಯ ಅಸಡ್ಡೆ. ತನ್ನ ತಾಯಿ ಹಳೆಯ ಸಂಪ್ರದಾಯದವಳು, ಇವಳಿಗೆ ಏನು ಗೊತ್ತಿಲ್ಲ ಎಂಬ ಭಾವನೆ. ಅವನು ಆಗಾಗ ತನ್ನ ಮನೆಗೆ ಇತರ ಗೆಳೆಯರನ್ನು ಕರೆದುಕೊಂಡು ಬಂದು ಕುಣಿದು ಕುಪ್ಪಳಿಸುವಾಗಲು ಅವಳಿಗೆ ಯಾವುದೇ ರೀತಿಯ ಖೇದವಿಲ್ಲ. ಮನೆಗೆ ಬರುವ ಪ್ರತಿಯೊಬ್ಬರನ್ನು ತಾನು ಹೆತ್ತ ಮಕ್ಕಳೇ ಎಂದು ತಿಳಿದು ಉಪಚಾರ ಮಾಡುವ ದೊಡ್ಡ ಗುಣ ಅವಳದು. ಇಷ್ಟೆಲ್ಲಾ ಮಾಡಿದ್ರೂ ಮಗನಿಗೆ ಆಕೆಯ ಮೇಲೆ ಅದೇ ಅಸಡ್ಡೆ ಭಾವನೆ, ಹೆತ್ತ ಮಗನಿಗೇನೆ ಈ ಭಾವನೆ ಇರಬೇಕಾದರೆ ಇನ್ನು ಸುಮ್ಮನೇ ಆಕೆಯ ಮನೆಗೆ ಬಂದು ಹೋಗುವ ಬೇರೆಯವರಿಗೆ ಆ ಭಾವನೆ ಎಲ್ಲಿಂದ ಬರಬೇಕು. ಮನೆತನದ ಕೀರ್ತಿ ಎತ್ತಿ ಹಿಡಿಯಬೇಕಾದ ತನ್ನ ಮಗನೇ ಹೀಗಾದನಲ್ಲ ಎಂದು ಕೊರಗುತ್ತಾ ಒಂದು ದಿನ ಮನೆ ಬಿಟ್ಟು ಹೋಗುವ ತಾಯಿ. ಕೆಲವು ಕಾಲದ ನಂತರ ತಾಯಿಯ ನಿಜವಾದ ಬೆಲೆ ಏನು ಅಂತ ಅರಿತು ಅವಳಿಗೋಸ್ಕರ ಹುಡುಕಾಟ ನಡೆಸುವ ಮಗ. ಸಮಯ ಮೀರಿದ ಮೇಲೆ ಹುಡುಕಿ ಪ್ರಯೋಜನವೇನು? ಕೊನೆಗೆ "ತಾಯಿಯೇ ಕಣ್ಣಿಗೆ ಕಾಣುವ ನಿಜವಾದ ದೇವರು. ಅವಳು ಈ ಸ್ಥಿತಿ ತಲಪುವ ಮುನ್ನ ಎಚ್ಚೆತ್ತುಕೊಳ್ಳಿ" ಎಂಬ ವಾಕ್ಯದೊಂದಿಗೆ ಚಿತ್ರ ಮುಕ್ತಾಯ. ಚಿತ್ರದ ಗುಹ್ಯಾರ್ಥ ನನಗೆ ಅರಿವಾಗಿತ್ತು.
ಮುಂದಿನ ೩-೪ ದಿನಗಳನ್ನು ನಾನು ಅವನ ಬಗ್ಗೆ ಮಾಹಿತಿ ಸಂಗ್ರಹಿಸುವುದರಲ್ಲಿ ಕಳೆದೆ. ನನಗೆ ಪರಿಚಯದವರಾದ ಒಂದಿಬ್ಬರು, ಅವನನ್ನು ನಾವು ಎಲ್ಲೋ ನೋಡಿದ್ದೇವೆ ಹಾಗೂ ಪತ್ರಿಕೆಯಲ್ಲಿ ಅವನ ಬಗ್ಗೆ ಓದಿದ್ದೇವೆ ಎಂದು ಹೇಳಿದರು. ಅವನು ಹೇಗೂ ಈ ವಾರಾಂತ್ಯದಲ್ಲಿ ಸಿಗೋಣ ಅಂತ ಹೇಳಿದ್ದು ನೆನಪಾಗಿ, ಶನಿವಾರ ಅವನನ್ನು ಖುದ್ದಾಗಿ ಭೇಟಿ ಮಾಡಿದರಾಯಿತು ಅಂತ ನಿರ್ಧಾರ ಮಾಡಿದೆ. ಶನಿವಾರ ಮುಂಜಾನೆ ಅವನಿಗೆ ಫೋನ್ ಮಾಡಿ ಸಾಯಂಕಾಲ ಭೇಟಿ ಆಗುತ್ತೇನೆ ಎಂದು ಹೇಳಿದೆ, ಅದಕ್ಕೆ ಅವನು "ಇವತ್ತು ಬೇಡ, ನಾನು ಶೂಟಿಂಗ್ ಗೋಸ್ಕರ ಸಕಲೇಶಪುರಕ್ಕೆ ಹೋಗ್ತಾ ಇದೀನಿ. ನಾಳೆ ಸಾಯಂಕಾಲ ಸಿಗೋಣ" ಅಂತ ಹೇಳಿದ. ನಾನು ಅವನು ಹೇಳಿದ ಹಾಗೆ ರವಿವಾರ ಸಾಯಂಕಾಲ ಭೇಟಿಯಾಗಲು ಬನಶಂಕರಿಯಲ್ಲಿದ್ದ ಅವನ ಅಪಾರ್ಟ್ಮೆಂಟ್ ಗೆ ಹೋದೆ. ಅವನ ಮನೆ ತುಂಬಾ ಚೆನ್ನಾಗಿತ್ತು, ಮನೆಯ ಹಾಲ್ ತುಂಬೆಲ್ಲ ಅವನು ತನ್ನ ಹಾಗೂ ಪರಿಚಯದವರ ಫೋಟೋಗಳನ್ನು ಹಾಕಿದ್ದ. ಅದರಲ್ಲಿ ಒಬ್ಬ ಕನ್ನಡದ ಹೆಸರಾಂತ ನಿರ್ಮಾಪಕನ ಹಾಗೂ ಒಬ್ಬ ಸ್ಥಳೀಯ ಮುಖಂಡನ ಚಿತ್ರವೂ ಇತ್ತು. "ನಿನಗ ಇವರೆಲ್ಲ ಪರಿಚಯ ಇದಾರಾ?" ಅಂತ ಪ್ರಶ್ನೆ ಹಾಕಿದೆ. ಅವನು ಹೌದು ಅಂತ ತಲೆ ಅಲ್ಲಾಡಿಸಿದ. ಇದನ್ನೆಲ್ಲ ನೋಡಿ ನನಗೆ ಅವನ ಮೇಲೆ ಸಂಪೂರ್ಣ ಭರವಸೆ ಬಂದಿತ್ತು. ಅವನು ಒಂದು ಬಾಟಲ್ ವಿಸ್ಕೀ ತಂದು ನನ್ನ ಮುಂದೆ ಇಟ್ಟ. "ನನಗ ಕುಡಿಯುವ ಅಭ್ಯಾಸ ಇಲ್ಲ, ಬೇಕಾದ್ರ ನಾ ನಿಂಗ ಕಂಪನೀ ಕೊಡ್ತೇನಿ" ಅಂತ ಹೇಳಿದೆ. "ಮತ್ತ ಎನ್ ಸಮಾಚಾರ? ನಾ ಹೇಳಿದ್ದ ರ ಬಗ್ಗೆ ಎನ್ ವಿಚಾರ ಮಾಡಿದಿ?" ಅಂತ ಕೇಳಿ ಅವನು ಕುಡಿಯಲು ಶುರು ಮಾಡಿದ. "ನೋಡು, ನನಗೂ ಸೈಟ್ ತಗೋಬೇಕು, ರೊಕ್ಕಾ ಮಾಡಬೇಕು ಅಂತ ಬಾಳ ಆಸೆ ಐತಿ. ಏನೋ ನಿನ್ನ ನಂಬಿ ಒಂದು ಸೈಟ್ ತಗೋಬೇಕು ಅಂತ ತೀರ್ಮಾನ ಮಾಡಿನಿ. ಸೈಟ್ ಗೆ ಎಷ್ಟ ರೊಕ್ಕಾ ಆಕ್ಕೈತಿ ಹೇಳು" ಅಂತ ಕೇಳಿದೆ. ಅವನು "೩೦X೪೦ ಗೆ ೮ ಲಕ್ಷ ಆಗತ್ತ, ಆದ್ರ ನೀ ನನ್ನ ಊರಿನ ಗೆಳೆಯ ಅದಕ್ಕ ನಾ ನಿಂಗ ೬ ಲಕ್ಷಕ್ಕೆ ಕೊಡ್ತೇನಿ" ಅಂತ ಹೇಳಿದ. ನನ್ನ ಹತ್ತಿರ ಮನೆಗೆ ಅಂತ ಇದ್ದದ್ದು ಕೇವಲ ೫ ಲಕ್ಷ. ಇನ್ನೊಂದು ಲಕ್ಷಕ್ಕೆ ಏನು ಮಾಡೋದು ಅಂತ ಕೇಳಿದೆ. ಅದಕ್ಕವನು "ನಿನ್ನ ಆ ಡಕೋಟ ಕಾರ್ ಮಾರಿ ಬಿಡು, ಸ್ವಲ್ಪ ರೊಕ್ಕಾ ಬರತ್ತ" ಅಂತ ಅಂದ. ನನ್ನ ಕಾರ್ ನ ಡಕೋಟ ಅಂತ ಹೇಳಿದ್ದು ಕೇಳಿ ನನಗೆ ಸಿಟ್ಟು ಬಂತು, ಆದರೆ ಅವನು ಹೇಳಿದ ಮಾತು ಒಂದು ರೀತಿಯಲ್ಲಿ ಸರಿ ಕೂಡ ಇತ್ತು. ಏಕೆಂದರೆ ಇತ್ತೀಚೆಗೆ ಅದರ ಮೈಲೇಜು ಕಡಿಮೆಯಾಗಿ, ಖಾಯಿಲೆ-ಖಸಾಲೆ ಖರ್ಚು ಜಾಸ್ತಿ ಆಗಿತ್ತು. "ಆತು, ನಾನ ಮುಂದಿನ ವಾರದೊಳಗಾಗಿ ಎಲ್ಲಾ ಏರ್ಪಾಡು ಮಾಡ್ತೇನಿ" ಅಂತ ಹೇಳಿದೆ. "ಹಂಗ, ನನ್ನ ಹೆಂಡ್ತಿಗೆ ಒಡವೆ ಕೊಡಸ್ಬೆಕು ಅಂತ ಸ್ವಲ್ಪ ಹಣ ಸೇವ್ ಮಾಡಾಕತ್ತೆನಿ. ಆದ್ರ ಅದೆಲ್ಲಾ ಮಾಡಾಕ ಇನ್ನೂ ನನಗ ಒಂದ ವರ್ಷ ಆದ್ರೂ ಬೇಕಾಕ್ಕೈತಿ. ಅದಕ್ಕ ಅದನ್ನ ನಿನ್ನ ಇನ್ವೆಸ್ಟ್ ಮೆಂಟ್ ಬಿಸ್ನೆಸ್ ನ್ಯಾಗ ಹಾಕಿ ಸ್ವಲ್ಪ ಲಗುನ ಜಾಸ್ತಿ ರೊಕ್ಕಾ ಬರುವಂಗ ಮಾಡಿದ್ರ ಬಾಳ ಚೊಲೊ ಆಕ್ಕೈತಿ" ಅಂತ ಅವನ ಹತ್ತಿರ ದೂರಾಸೆಯ ಭಾವನೆಯಿಂದ ಹೇಳಿದೆ. ಅದಕ್ಕವನು "ನೀ, ಏನು ಚಿಂತೀ ಮಾಡ್ಬ್ಯಾಡ. ನನ್ನ ಮ್ಯಾಲ ನಂಬಿಕೆ ಇಡು" ಅಂತ ಭರವಸೆ ಕೊಟ್ಟ.
ಅವನು ಒಂದರ ಮೇಲೆ ಒಂದು ಪೆಗ್ ಕುಡೀತಾನೆ ಇದ್ದ. ಹಾಗೆ ಕೆಲವು ವಿಚಾರಗಳನ್ನು ನನಗೆ ಹೇಳ್ತಾ ಇದ್ದ. ಅವನಿಗೆ ಬೆಂಗಳೂರಲ್ಲಿ ಹಲವಾರು ಧನಾಪ್ತ ಮಿತ್ರರಿದ್ದರು, ಅಂದರೆ ಅವರೆಲ್ಲರೂ ಅವನಲ್ಲಿರುವ ಹಣಕ್ಕೋಸ್ಕರ ಆಪ್ತರಾದವರು. ಅವನಿಗೆ ಇನ್ನೂ ಮದುವೆ ಆಗಿರಲಿಲ್ಲ, ಆದರೆ ವಾಸಂತಿಯ ಮೇಲೆ ನಿಜವಾದ ಪ್ರೀತಿ ಆಗಿತ್ತು. ಹಾಗೆಯೇ ಅವನಿಗೆ ಕನ್ನಡದ ಮೇಲೆ ಉತ್ಕಟ ಅಭಿಮಾನವಿತ್ತು. ಅದಕ್ಕೋಸ್ಕರ ಅವನು ಏನು ಮಾಡಲು ತಯಾರಿದ್ದ, ತನ್ನ ಮೊದಲನೆಯ ಚಿತ್ರವನ್ನು ಕನ್ನಡದ ಅಭಿಮಾನಿಗಳಿಗೆ ಅರ್ಪಿಸಿದ್ದ. "ನಮ್ಮ ಜನಕ್ಕ ಇದ್ದಿದ್ದನ್ನ ತೋರ್ಸಿದ್ರ ನೋಡಂಗಿಲ್ಲ, ಇವರಿಗೆಲ್ಲಾ ಆ ಫ್ಯಾಂಟೆಸೀ ಜಗತ್ತ ಇಷ್ಟ. ನಿಜ ಹೇಳ ಬೇಕಂದ್ರ, ಕನ್ನಡಕ್ಕ ಅಪಾಯ ಇರೋದು ಪರಭಾಷಿಕರಿಂದಲ್ಲ, ತಮ್ಮನ್ನ ತಾವು ಕನ್ನಡಿಗರು ಅಂತ ಢೋಂಗಿ ಪೋಸ್ ಕೊಡೋ ನಮ್ಮ ಕೆಲವು ಜನಗಳಿಂದ. ದುಡ್ಡಿನ ಆಸೆಗೆ ಏನು ಬೇಕಾದ್ರೂ ಮಾಡ್ತಾರೆ. ತಮ್ಮತನ ಅನ್ನೋದು ಸ್ವಲ್ಪಾನೂ ಇಲ್ಲ" ಅಂತ ಏನೇನೋ ಹೇಳ್ತಾ ಇದ್ದ. ಅವನ ಮಾತು ಸದ್ಯದ ಪರಿಸ್ಥಿತಿಗೆ ಸರಿ ಅಂತ ಕಂಡರೂ ಅದು ಪೂರ್ತಿ ಸತ್ಯ ಅಲ್ಲ ಅಂತ ನನಗೆ ಅರಿವಾಗಿ ಅವನಿಗೆ "ನೋಡ, ಕನ್ನಡ ಉಳಿಸೋದು ಕೇವಲ ಚಿತ್ರ ರಂಗದವರಿಂದ ಮಾತ್ರ ಸಾಧ್ಯ ಅಂತ ನಾವು ಅನ್ನುಕೊಳ್ಳೋದು ತಪ್ಪು. ಇದನ್ನ ಯಾಕ ನಮ್ಮ ಜನ ಅರ್ಥ ಮಾಡಕೊಳ್ಳಾಕ ತಯಾರಿಲ್ಲ ನಾನರಿಯೆ. ನಿನಗ ಅಷ್ಟೊಂದು ಅಭಿಮಾನ ಇರುದ ಆದ್ರ ಕನ್ನಡ ಸಾಹಿತ್ಯ ಓದು ಅಥವಾ ಏನಾದ್ರೂ ಬರಿ ಅಥವಾ ಬೇರೆ ಏನಾದ್ರೂ ಮಾಡು. ನಮ್ಮ ಕನ್ನಡ ಸಾಹಿತ್ಯ ಭಾರತದ ಬೇರೆ ಯಾವುದೇ ಸಾಹಿತ್ಯಕ್ಕಿಂತಲೂ ಕಡಿಮೆ ಏನು ಇಲ್ಲ. ಅದಕ್ಕೆ ತಾನೇ ನಮಗೆ ಜಾಸ್ತಿ ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರೋದು" ಅಂತ ನನಗೆ ಅನಿಸಿದುದನ್ನು ಹೇಳಿದೆ. ಈ ರಿಯಲ್ ಎಸ್ಟೇಟ್ ನವರಿಗೆ ಚಿತ್ರರಂಗಕ್ಕಿರುವ ನಂಟಿನ ಬಗ್ಗೆ ನನಗೆ ಅಚ್ಚರಿ ಆಗಿತ್ತು. ಚಿತ್ರರಂಗಕ್ಕೆ ಬರಬೇಕಾದವರು ಮುಂಚೆ ಅದಕ್ಕೆ ಸಂಬಂಧ ಪಟ್ಟ ಕ್ಷೇತ್ರದಲ್ಲಿ ಅನುಭವ ಪಡೆದಿರಬೇಕು ಇಲ್ಲವೇ ನಾಟಕ ರಂಗದಿಂದಾದರೂ ಬಂದಿರಬೇಕು. ಆಗ ತಾನೇ ನಿಜವಾದ ಕಲೆ ಎನ್ನೋದು ಹೊರಗೆ ಬರೋದು. ಆದರೆ ಯಾವಾಗ ಒಂದು ಉದ್ಯಮ ತನ್ನ ಏಳಿಗೆಗೇ ಹಣವೇ ಮೂಲ ಬಂಡವಾಳ ಅಂತ ತಿಳಿದುಕೊಂಡು ಮುಂದೆ ಸಾಗುತ್ತೋ ಅದು ಅಧಃಪತನಕ್ಕೆ ಇಳಿಯುತ್ತೆ ಅಂತ ಅಂದುಕೊಂಡು ಸುಮ್ಮನಾದೆ. ಆದರೂ ನನ್ನ ಕಣ್ಣಿಗೆ ಅವನು ಸದ್ಯದ ಕನ್ನಡ ಚಿತ್ರರಂಗ ಎಂಬ ಮರಭೂಮಿಯಲ್ಲಿ ಸಣ್ಣ ಒಯಾಸಿಸ್ ರೀತಿಯಲ್ಲಿ ಕಂಡ.
(ಸಶೇಷ...)
For Part 3 refer the below link: