ಇರುವುದೊಂದೇ ಭೂಮಿ !
‘ಹಸಿರೇ ಉಸಿರು’ ಎಂಬ ವಾಕ್ಯದಂತೆ ಹಸಿರಿಲ್ಲದೆ ಉಸಿರಾಡಲು ಗಾಳಿಯಿಲ್ಲ. ಗಾಳಿಯಿಲ್ಲದೆ ಮಾನವ ಸಂಕುಲಕ್ಕೆ ಮಾತ್ರವಲ್ಲದೆ ಸಕಲ ಜೀವಜಾಲಕ್ಕೂ ಉಸಿರಾಟವೂ ಇಲ್ಲ. ಹುಟ್ಟಿನಿಂದ ಸಾವಿನ ತನಕ ಮಾನವ ಸಂಕುಲಕ್ಕೆ ಸಸ್ಯಗಳು ಮತ್ತು ಪರಿಸರ ಬಹಳ ಮುಖ್ಯವೆನಿಸಿದೆ. ಮಾನವ ಸಂಕುಲಕ್ಕೂ ಹೊರತು ಸಕಲ ಜೀವಜಾಲಕ್ಕೂ ಇದು ಅತ್ಯವಶ್ಯಕ. ಇರುವುದೊಂದೇ ಭೂಮಿ ನಮಗೆ - ನಿಮಗೆ ಎಲ್ಲರಿಗಾಗಿ, ಆದರೆ ಈಗ ಭೂಮಿಯ ಪರಿಸ್ಥಿತಿ ಹೇಗಿದೆ? ನಾವು ಅರಿತಿದ್ದೇವೆಯೇ? ಪರಿಸರದ ಬಗ್ಗೆ ನಾವಾಡುವ ಮಾತು ಮಾತ್ರ ಮುಗಿಲು ಮುಟ್ಟುತ್ತಿದೆ. ದೊಡ್ಡ ದೊಡ್ಡ ಸಮಾರಂಭಗಳು ಮಾಡಿ ಮನೋರಂಜನೆಯಿಂದ ಕೆಲ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಕೇವಲ ಮಾತುಗಳು ಮಾತ್ರ ಬಾನಂಗಳ ಮುಟ್ಟುತ್ತಿದೆ. ಆದರೆ ಕ್ರಿಯಾಶೀಲತೆ ಅಲ್ಲೇ ಉಳಿದಿದೆ. ಬಾನೆತ್ತರಕ್ಕೂ ಕಾರ್ಖಾನೆಗಳು ಕಟ್ಟಿಸಿ ಅದರಿಂದ ಬಿಡುಗಡೆಯಾಗುವ ಹೊಗೆಯಿಂದ ಮುಗಿಲೆಲ್ಲಾ ಕಪ್ಪಾಗಿದೆ. ನದಿ, ಕೆರೆ, ಬಾವಿ ಬರಡಾಗಿದೆ! ಬೆಳೆ ಗಿಡ ಸಾಯುತ್ತಿದೆ. ಕೇವಲ ಅಕಾಲಿಕ ಮಳೆ ಬಂದರೆ ಮನೆ, ಮರ ಎಲ್ಲವೂ ಕೊಚ್ಚಿಹೋಗುತ್ತಿವೆ. ಬೆಳೆನಾಶ, ಭೂಕಂಪ , ಪ್ರವಾಹ, ಬಿರೂ ಬಿಸಿಲು ಒಟ್ಟು ಎಲ್ಲವೂ.. ಅಯೋಮಯ.
ಇಂದು ಜಲ, ವಾಯು ಸೇರಿದಂತೆ ಪರಿಸರ ಮಾಲಿನ್ಯವೂ ಹೆಚ್ಚುತ್ತಿದೆ ಎಂಬುವುದು ನಮಗೆಲ್ಲ ಸಹಜ ವಿಷಯವಾದರೂ ಈ ಪರಿಸರ... ದಿನದಿಂದ ದಿನ ಸಾವಿನ ಅಂಚಿಗೆ ಮುಟ್ಟಲು ಸಾಧ್ಯತೆ ಇದೆ. ಹಲವಾರು ಕಾರ್ಯ ಚಟುವಟಿಕೆಗಳ ನಡುವೆ ಸ್ವಚ್ಛ ಪರಿಸರ ಕಣ್ಮರೆಯಾಗಿದೆ. "ಸ್ಟಾಕ್ ಹೋಂ ಸಮ್ಮೇಳನದಲ್ಲಿ ೧೯೭೨ರಲ್ಲಿ ವಿಶ್ವ ಸಂಸ್ಥೆಯು ವಿಶ್ವ ಪರಿಸರ ದಿನವನ್ನು ಪ್ರಾರಂಭಿಸಿತು. ಸಂವಹನ, ಚರ್ಚೆ, ವಾದ-ವಿವಾದಗಳೆಷ್ಟೋ ನಡೆದವು. ಈ ವಿಷಯ ಜಗತ್ತಿಗೆ ಮುಟ್ಟಲು ೨ ವರ್ಷಗಳು ಬೇಕಾಯಿತು. ೧೯೭೪ರ ಜೂನ್ ೫ರಂದು ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ನಮ್ಮ ಪರಿಸರ ನಮ್ಮ ಭವಿಷ್ಯ: ಪರಿಸರದಿಂದ ಮುಂದಿನ ಭವಿಷ್ಯಕ್ಕೆ ಏನು ಅವಶ್ಯಕ..? ಏನು ಪರಿಸರವಿಲ್ಲದೆ ಮುಂದಿನ ಜನಾಂಗಕ್ಕೆ ಬದುಕಲು ಸಾಧ್ಯವಿಲ್ಲವೇ..? ಎನ್ನುವ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಗುಣುಗುಟ್ಟಬಹುದು. ಸ್ವಚ್ಛ ಪರಿಸರವಿದ್ದರೆಯೇ ನಮಗೆ ಶುದ್ಧ ಗಾಳಿ, ಶುದ್ಧ ಗಾಳಿಯಿದ್ದರೆಯೇ ಸಕಲ ಜೀವಜಾಲಕ್ಕೂ ಉಸಿರಾಡಲು ಗಾಳಿ. ಸ್ವಚ್ಛ ಪರಿಸರವಿದ್ದರೆಯೇ ಮಳೆ, ಮಳೆಯಿದ್ದರೆಯೇ ಕುಡಿಯಲು ನೀರು ಇತ್ಯಾದಿ.... ಒಟ್ಟಾಗಿ ಹೇಳುವುದಾದರೆ ಸ್ವಚ್ಛ ಪರಿಸರ ಅಥವಾ ಮಾಲಿನ್ಯರಹಿತ ಪರಿಸರವಿದ್ದರೆಯೇ ನಮ್ಮೆಲ್ಲರ ಮುಂದಿನ ಭವಿಷ್ಯ ಮತ್ತು ಈ ದಿನ ಎನ್ನುವುದು ಖಚಿತವಾದ ಮಾತು. ನಮ್ಮ ಪವಿತ್ರವಾದ ನೆಲವನ್ನು ಕಾಪಾಡುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ.
ಪರಿಸರ ಮಾಲಿನ್ಯ ಮತ್ತು ರಕ್ಷಣೆ: ಜಲ, ವಾಯು ಸೇರಿದಂತೆ ಪರಿಸರ ಮಾಲಿನ್ಯ ಅತಿಯಾಗಿ ಹೆಚ್ಚುತ್ತಿದೆ. ಯಾವುದಾದರೂ ಒಂದು ಕಾರ್ಯಕ್ರಮ ನಡೆದರೆ ಉದಾ: ಜಾತ್ರೆ, ಸಂತೆ, ಆಟ, ಕೋಲ, ನೇಮ, ಕಂಬಳ ಮತ್ತು ಉರೂಸ್ ನಡೆದಾಗ ಆರಂಭದಲ್ಲಿ ನೀರು ಹಾಕಿ ತೋರಣ ಕಟ್ಟಿ, ನೆಲಹಾಸು ಹಾಸಿ ಮತ್ತು ಬಹಳ ಸುಂದರಗಳಿಂದ ಲೈಟು-ಗೀಟುಗಳು ಹಾಕಿ ಸುಂದರ ಕಂಡರೂ ಮರುದಿನ ಕಸಗಳು, ಬಾಟಲಿ, ಪ್ಲಾಸ್ಟಿಕುಗಳು, ಐಸ್ಕ್ರೀಮ್ ಕಪ್, ಹಾಳೆ ತಟ್ಟೆ… ಇತ್ಯಾದಿಗಳು ಮೂಗು ಮತ್ತು ಕಣ್ಣು ಮುಚ್ಚಿಕೊಳ್ಳುವ ಪರಿಸ್ಥಿತಿ. ಇನ್ನು ಪೇಟೆ-ಪಟ್ಟಣಗಳ ಕಡೆ ಕಣ್ಣು ಹಾಯಿಸಿದರೆ ಅಲ್ಲಲ್ಲಿ ಕಸ ಒಳಚರಂಡಿಗಳ ವಾಸನೆ ಇತ್ಯಾದಿ... ಇದರಿಂದ ನೀರು ಮಾಲಿನ್ಯವಾಗುತ್ತಿದೆ. ತಮ್ಮ ತಮ್ಮ ಸ್ವಾರ್ಥಗುಣಗಳಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ, ಉದಾ: ತಮ್ಮ ತಮ್ಮ ವಾಹನಗಳಲ್ಲಿ ಬಂದು ಕಸ ತ್ಯಾಜ್ಯಗಳನ್ನು ಗಂಟು ಕಟ್ಟಿ ರಸ್ತೆ ಬದಿಯಲ್ಲಿ ಎಸೆಯುವುದು. ಇದು ಇಂದು ಸಮಾಜದಲ್ಲಿ ಅತಿಯಾಗಿ ನಾವು ಕಾಣುತ್ತಿದ್ದೇವೆ. ಇದರಿಂದ ಏನು ಪ್ರಯೋಜನ... ಮನೆಗಳಾಗಲಿ ಇನ್ನೊಂದಾಗಲಿ ಸ್ವಚ್ಛವಾಗಿಡುವ ನೆಪದಲ್ಲಿ ಪರಿಸರದಲ್ಲಿ ತಂದು ಬಿಸಾಕುತ್ತೇವೆ... ನಂತರ? ನಮ್ಮ ಭವಿಷ್ಯ! ಇದು ನಮ್ಮ ಮಾನವ ಕುಲಕ್ಕೆ ಅರ್ಥವಾಗುತ್ತಿಲ್ಲ. ಇದರ ಬಗ್ಗೆ ಎಷ್ಟೋ ಮಾಹಿತಿ ಸಮಾಜದಲ್ಲಿ ದೊರಕುತ್ತಿದ್ದರೂ ಜನಗಳಿಗೆ ಅರ್ಥವಾಗುತ್ತಿಲ್ಲ ....!! ಅಂದರೆ ತಪ್ಪುಗಾರರು ಯಾರು? ದಿನ ದಿನ ಕಸ ತ್ಯಾಜ್ಯಗಳನ್ನು ಅಲ್ಲಲ್ಲಿ ಬಿಸಾಡುವವರದ್ದೆ? ಅಥವಾ ಇದರ ಬಗ್ಗೆ ತಪ್ಪು ಮಾಹಿತಿ ಕೊಡುವವರದ್ದೆ?? ಅಲ್ಲ, ನಾವುಗಳೇ..! ಪರಿಸರ ಮಾಲಿನ್ಯದ ಬಗ್ಗೆ ಯಾರೂ ಅರ್ಥ ಮಾಡಿ ಕೊಡಬೇಕಾಗಿಲ್ಲ, ಇದನ್ನು ಸ್ವತಃ ನಾವೇ ಕಂಡುಕೊಳ್ಳಬೇಕಾಗಿದೆ. ಭೂಮಿಯನ್ನು ದೇವರಂತೆ ಕಂಡು ನಾವು ಇದರ ರಕ್ಷಣೆಗಾಗಿ ಕ್ರಿಯಾತ್ಮಕ ಕಾರ್ಯ ಕೈಗೊಂಡರೆ ಮಾತ್ರ ಸಾಧ್ಯ. ನಮ್ಮ ಮನೆಯ ಸುತ್ತ ಮುತ್ತಲೂ ಗಿಡ ಸಸಿಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕು. ಮರಗಳನ್ನು ಕಡಿಯಬಾರದು. ರಾಸಾಯನಿಕ ಗೊಬ್ಬರದ ಬದಲು ನೈಸರ್ಗಿಕ ಗೊಬ್ಬರಗಳನ್ನು ಬಳಸೋಣ.
ಬಳಸಿ ಎಸೆಯುವ ಪ್ಲಾಸ್ಟಿಕ್ ತಟ್ಟೆ , ಲೋಟ, ಪೆನ್ನು, ಚೀಲಗಳ ಬದಲಿಗೆ ಪರ್ಯಾಯ ಉತ್ಪನ್ನಗಳ ಬಳಕೆ ಮಾಡೋಣ. ಹೊಗೆ ಯಂತ್ರಗಳ ಬಳಕೆಗೆ ಪೂರ್ಣವಿರಾಮ, ಇದರಿಂದ ಓಝೋನ್ ಪದರ ನಾಶವಾಗಲು ಸಾಧ್ಯವಿದೆ. ಕೈಗಾರಿಕೆಗಳಿಂದ ಹೊರ ಬರುವ ಉತ್ಪನ್ನಗಳು ಅನಿವಾರ್ಯ ಎಂದಿದ್ದರೆ ಅದರಿಂದ ಉತ್ಪನ್ನವಾಗುವ ಮಲಿನ ವಸ್ತುಗಳಿಗೆ ಸೂಕ್ತ ವಿಸರ್ಜನಾ ಕ್ರಮವನ್ನು ಕೈಗೊಳ್ಳಬೇಕು. ಜಾಲತಾಣ, ಪತ್ರಿಕೆ ಮಾಧ್ಯಮಗಳಲ್ಲಿ ಪರಿಸರದ ಕುರಿತಾದ ವಿಷಯಗಳು, ಮಾಲಿನ್ಯದ ಪರಿಣಾಮಗಳ ಬಗ್ಗೆ ಓದಿ ಕೇಳಿ ಸಾಮಾಜಿಕ ಜಾಗೃತಿ ಮೂಡಿಸೋಣ. ಕೈ ತೋಟ, ತೋಟಗಾರಿಕೆ, ಹೈನುಗಾರಿಕೆ, ಜೇನು ಸಾಕಾಣೆ ಇತ್ಯಾದಿಗಳಲ್ಲಿ ನಾವು ನಮ್ಮ ಯುವ ಜನತೆಗೆ ಹೆಚ್ಚೆಚ್ಚು ಕ್ರಿಯಾಶೀಲರಾಗಲು ಸ್ವಾವಲಂಬಿ ಬದುಕಿನ ದಾರಿ ತೋರಿಸೋಣ. ಒಟ್ಟಿಗೆ ಕಂಡುಕೊಳ್ಳೋಣ. ಪ್ರಸ್ತುತ ಜಗತ್ತು ೭೭೦ ಕೋಟಿಗಿಂತಲೂ ಹೆಚ್ಚು ಜನರಿಂದ ತುಂಬಿದೆ. ಭಾರತ ದೇಶ ೧೩೫-೧೪೦ಕ್ಕೂ ಅಧಿಕ ಕೋಟಿ ಜನರಿಂದ ಕೂಡಿ ಇನ್ನೇನು ಜಗತ್ತಿನ ಮೊದಲ ಸ್ಥಾನಕ್ಕೇರಲು ಹೆಚ್ಚು ಸಮಯ ಬೇಕಿಲ್ಲ. ನಮಗೆ ಈ ಸಾಧನೆ ಮುಖ್ಯವಲ್ಲ, ಎಲ್ಲರಿಗೂ ಆನಂದಮಯ, ಸುಖಮಯ, ಆರೋಗ್ಯಪೂರ್ಣ ಬದುಕು ಬೇಕು. ಅಂದರೆ ಅದಕ್ಕೆ ನಾವು ನಾವೇ ಕಾರಣರಾಗಬೇಕು. ನಮಗೆ ಸುಖಮಯವಾದ ಪರಿಸರ ಬೇಕಾಗಿದೆ.... ಇದಕ್ಕೆ ನಾವೇ ದಾರಿ ಹುಡುಕಬೇಕಾಗಿದೆ "ಪರಿಸರವಿದ್ದರೆ ನಾವಿಲ್ಲಿ, ಪರಿಸರವಿಲ್ಲದೆ ನಾವೆಲ್ಲಿ..??"
-ಕೆ. ಮಿಕ್ದಾದ್, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ