ಇರುವೆಗಳ ವಿಶಾಲತೆ ಮತ್ತು ಮನುಷ್ಯನ ಸಂಕುಚಿತತೆ......

ಇರುವೆಗಳ ವಿಶಾಲತೆ ಮತ್ತು ಮನುಷ್ಯನ ಸಂಕುಚಿತತೆ......

ಸಂಜೆಯ ವಾಕಿಂಗ್ ಮುಗಿಸಿ ಪಾರ್ಕಿನ ಹುಲ್ಲಿನ ಮೇಲೆ ವಿಶ್ರಮಿಸಲು ಕುಳಿತಿದ್ದೆ. ಪಕ್ಕದಲ್ಲಿಯೇ ಇರುವೆಗಳ ದೊಡ್ಡ ಸಾಲು ಮಿಲಿಟರಿಯ ಶಿಸ್ತಿನಿಂದ ಒಂದರ ಹಿಂದೆ ಒಂದು ಉದ್ದವಾಗಿ ಸಾಗುತ್ತಿದ್ದವು. ಆ ಶಿಸ್ತನ್ನು ನೋಡಿ ಅಶಿಸ್ತಿನ ನನಗೆ ಸಹಿಸಿಕೊಳ್ಳಲಾಗಲಿಲ್ಲ. ಅದರಲ್ಲಿ ಒಂದು ಇರುವೆಯನ್ನು ಕಿಡ್ ನ್ಯಾಪ್ ಮಾಡಿ ಅಂಗೈಯಲ್ಲಿ ಇಟ್ಟುಕೊಂಡು ಕೇಳಿದೆ. "ಎಲ್ಲರೂ ಎಲ್ಲಿಗೆ ಹೋಗುತ್ತಿರುವಿರಿ."

ಇರುವೆ, " ಅಲ್ಲಿ ಒಂದು ನೊಣ ಸತ್ತು ಬಿದ್ದಿದೆ. ಊಟಕ್ಕಾಗಿ ಅದನ್ನು ತರಲು ಎಲ್ಲರೂ ಹೋಗುತ್ತಿದ್ದೇವೆ ".

ನನಗೆ ಮೈ ಉರಿದು ಹೋಯಿತು.  " ಎಲ್ಲಾದರೂ ಧರ್ಮದ ಊಟ ಇದ್ದಾಗ ನಾವು ನೂಕುನುಗ್ಗಲಿನಲ್ಲಿ ಹೊಡೆದಾಡಿ ತಿನ್ನುವವರು. ಶಿಸ್ತು ನಮಗೆ ಒಗ್ಗುವುದಿಲ್ಲ. ಇದು ಬಹುಶಃ ನನ್ನನ್ನೇ ಹಂಗಿಸುತ್ತಿರಬಹುದು' ಎಂದು ಭಾವಿಸಿ ಪಟಾರನೆ ಹೊಸಕಿ ಹಾಕಿದೆ. ಸಮಾಧಾನವಾಗಲಿಲ್ಲ. ಇನ್ನೊಂದನ್ನು ಬಂಧಿಸಿ ಬೇರೆ ಪ್ರಶ್ನೆ ಕೇಳಿದೆ. 

"  ಅಲ್ಲಿ ಇರುವುದು ಒಂದೇ ಸಣ್ಣ ಸತ್ತ ನೊಣ. ಅಮ್ಮಮ್ಮಾ ಎಂದರೆ ನೂರು ಇರುವೆಗಳಿಗೆ ಊಟವಾಗಬಹುದು. ನೀನು ಯಾಕೆ ನಿಮ್ಮ ಸಂಬಂಧಿಗಳನ್ನು ಮಾತ್ರ ಕರೆದುಕೊಂಡು ಹೋಗದೆ ಸಾವಿರಾರು ಒಟ್ಟಾಗಿ ಹೊರಟಿದ್ದೀರಿ. " 

ಇರುವೆ ಹೇಳಿತು. "ನಮಗೆ ಎಷ್ಟೇ ಆಹಾರ ಸಿಕ್ಕಿದರೂ ಸಮನಾಗಿ ಹಂಚಿಕೊಂಡು ತಿನ್ನುತ್ತೇವೆ. ನಮ್ಮಲ್ಲಿ ಬೇದ ಭಾವ ಇಲ್ಲ. ಒಗ್ಗಟ್ಟೇ ನಮ್ಮ ಶಕ್ತಿ.". 

ನನಗ್ಯಾಕೋ ಪಿತ್ತ ನೆತ್ತಿಗೇರಿತು. ನನ್ನ ಜಾತಿ, ಧರ್ಮ, ಭಾಷೆ, ಊರು, ಸಂಬಂಧಿಗಳು ಎಲ್ಲಾ ನೆನಪಾದರು. ನನ್ನನ್ನೇ ಮೂದಲಿಸುವಷ್ಟು ಸೊಕ್ಕೆ ಇದಕ್ಕೆ ಎಂದು ಸಾಯಿಸಿಬಿಟ್ಟೆ. ಇನ್ನೊಂದನ್ನು ಎತ್ತಿಕೊಂಡು ಕೇಳಿದೆ. 

" ನಿಮ್ಮಲ್ಲೇ ಯಾರಾದರೂ ಗುಂಪು ಮಾಡಿಕೊಂಡು ಬೇರೆಯವರಿಗೆ ಗೊತ್ತಾಗದಂತೆ ನೊಣ ತಿಂದು ಮುಗಿಸಿ ನಿನಗೆ ಮೋಸ ಮಾಡಿದರೆ ಏನು ಮಾಡುವೆ.". 

ಇರುವೆ ಹೇಳಿತು, " ಅಯ್ಯಾ, ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. 'ಮೋಸವೆಂದರೆ ಏನು. ? ನಾವು ಇರುವೆಗಳು." ಎಂದಿತು,

ಈಗ ನನಗೆ ಕೋಪ ಬರಲಿಲ್ಲ. " ನಾವು ಇರುವೆಗಳು " ಎಂಬ ಪದ ನನ್ನ ಹೃದಯವನ್ನೇ ಇರುವೆಯೊಂದು ಕಚ್ಚಿದ ಹಾಗಾಯಿತು. ಇರುವೆಗಳಿಗೆ ಮೋಸವೇ ಗೊತ್ತಿಲ್ಲ. ಆದರೆ ಮನುಷ್ಯರಾದ ನಮಗೆ ಗೊತ್ತಿರುವುದೇ ಮೋಸ, ಕಪಟ, ವಂಚನೆ. ಆಗ ಅರ್ಥವಾಯಿತು ನಾನು ಇರುವೆಗಿಂತ ಸಣ್ಣವನು. ಅಮಾನವೀಯವಾಗಿ ಇರುವೆಯನ್ನು ಕೊಂದ ಪಾಪಿ ಎಂದು. ಛೆ...............

ಅಕ್ಷರ ಜ್ಞಾನ, ಆಧುನಿಕ ಸೌಲಭ್ಯಗಳು, ಆಡಳಿತ ವ್ಯವಸ್ಥೆ, ಧಾರ್ಮಿಕ ಚಿಂತನೆಗಳು ನಮ್ಮನ್ನು ದಾರಿ ತಪ್ಪಿಸಿದವೇ ?

ನಮ್ಮಲ್ಲಿ ಸ್ವಾರ್ಥ ಎಂಬ ಅಸಹಜ ಭಾವ ಮೂಡಿಸಿದವೇ ? ಯೋಚನಾ ಶಕ್ತಿ ಬದುಕಿನ ಸ್ವಾಭಾವಿಕ ದಿಕ್ಕನ್ನೇ ಬದಲಿಸಿತೇ ? ಯೋಚಿಸುತ್ತಾ ಬಿಪಿ ಶುಗರ್ ಚೆಕ್ ಮಾಡಿಸಲು ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದೆ.

ಬಹುಶಃ ಇರುವೆಗಳಲ್ಲಿ ಡಾಕ್ಟರ್, ಲಾಯರ್, ಪೋಲೀಸ್, ಆಕ್ಟರ್, ಹೋಟೆಲ್‌ ಇಲ್ಲವೆನಿಸುತ್ತದೆ. ನಮ್ಮಲ್ಲಿ ಇತ್ತೀಚೆಗೆ ಮತ್ತೆ ಹತ್ತು ಸಾವಿರ ಪೋಲೀಸರನ್ನು ಹೊಸದಾಗಿ ನೇಮಿಸಿಕೊಳ್ಳುವ ಆದೇಶ ಹೊರಡಿಸಲಾಗಿದೆ. ಅದೂ ಸಾಕಾಗುವುದಿಲ್ಲ. ನ್ಯಾಯಾಲಯಗಳು ತುಂಬಿ ತುಳುಕುತ್ತಿವೆ. ಕಳ್ಳರ ಜಗತ್ತಿನಲ್ಲಿ ನಾವು ನೀವು...ಛೆ......

  •  271 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ( ಬ್ರಹ್ಮಾವರ ) ತಾಲ್ಲೂಕಿನಿಂದ ಸುಮಾರು 23 ಕಿಲೋಮೀಟರ್ ದೂರದ ಉಡುಪಿ ನಗರ ತಲುಪಿತು. 

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ: ಇಂಟರ್ನೆಟ್ ತಾಣ