ಇರುವೆ ಮತ್ತು ಹೆಬ್ಬಾತು
ಒಂದು ಊರಿನಲ್ಲಿ ಹೆಬ್ಬಾತುಗಳ ಹೊಸ ಬಳಗವೊಂದು ಬಂದು ವಾಸವಾಗಿತ್ತು. ಅವು ಕುಂತ ಜಾಗದಲ್ಲೇ ಮಾಲೀಕ ಊಟವನ್ನು ತಂದು ನೀಡುತ್ತಿದ್ದನು. ಅವು ಯಾವುದೇ ‘ಪರಿಶ್ರಮ’ ಪಡದೇ ತಿಂದು ತೇಗಿ ಆರಾಮವಾಗಿದ್ದವು. ಅಲ್ಲೇ ಕೆಳಗೆ ಇರುವೆಗಳ ಬಳಗ ವಾಸವಾಗಿತ್ತು. ಅವು ಹಗಲು ಇರುಳೆನ್ನದೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದವು. ಭಾರವಾದ ಆಹಾರ ವಸ್ತುಗಳನ್ನು ಗೂಡಿಗೆ ಸಾಗಿಸುವ ಇರುವೆಗಳ ಶ್ರಮವನ್ನು ಕಂಡು ಹೆಬ್ಬಾತುಗಳ ಬಳಗ ಗಹಗಹಿಸಿ ನಗುತ್ತಿತ್ತು. ಆದರೆ ಅವುಗಳ ನಗು ಬಹುಕಾಲ ಬಾಳಲಿಲ್ಲ. ಊರಿನ ಮಂದಿ ಹೆಬ್ಬಾತುಗಳ ಮಾಂಸದ ರುಚಿಗೆ ಮರುಳಾಗಿದ್ದರು. ಅವುಗಳ ಪರಿಶ್ರಮರಹಿತ ಜೀವನ ಪ್ರಾಣಕ್ಕೆ ಸಂಚಕಾರ ತಂದಿತ್ತು. ಹೆಬ್ಬಾತುಗಳ ಮಾಲೀಕ ಕೈತುಂಬ ಹಣ ಗಳಿಸಿದನು. ಇರುವೆಗಳು ಅಲ್ಲೇ ಕೆಳಗೆ ತಮ್ಮ ಶ್ರಮ ಮುಂದುವರಿಸಿದ್ದವು...
-ನಿರಂಜನ ಕೇಶವ ನಾಯಕ, ಮಂಗಳೂರು