ಇರ್ಫಾನ್ ಖಾನ್ ಎಂಬ ಅಪ್ರತಿಮ ನಟನ ಹೇಗೆ ಮರೆಯಲಿ?
ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ ಎಂಬ ಸುದ್ದಿ ಈ ಕೊರೋನಾ ಮಹಾಮಾರಿಯ ಸುದ್ದಿಯ ನಡುವೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇರ್ಫಾನ್ ಖಾನ್ ಎಂಬ ಈ ನಟ ಯಾವತ್ತೂ ನಮ್ಮ ಪಕ್ಕಾ ಹೀರೋ ಛಾಯೆ ಹೊಂದಿರುವ ನಟ ಎಂದು ಅನಿಸಲೇ ಇಲ್ಲ. ಪಕ್ಕದ ಮನೆಯ ಬೆರಗು ಕಣ್ಣಿನ ಹುಡುಗನಂತೆಯೇ ಭಾಸವಾಗುತ್ತಿತ್ತು. ಎಲ್ಲಾ ನಟರಂತೆ ಸುಂದರ ವರ್ಣ, ಚಾಕಲೇಟ್ ಮುಖ, ಅದ್ಭುತ ನೃತ್ಯಗಾರ ಎಂಬೆಲ್ಲಾ ಗುಣವಿಶೇಷಗಳನ್ನು ಹೊಂದಿರಲಿಲ್ಲ. ಆದರೆ ಒಬ್ಬ ಪಕ್ಕಾ ಕಮರ್ಶಿಯಲ್ ನಟನಿಗೆ ಬೇಕಾದ ಎಲ್ಲಾ ಗುಣಗಳು ಈ ನಟನಿಗೆ ಇತ್ತು ಎಂದರೆ ತಪ್ಪಾಗದು. ಬಹುತೇಕ ಮಂದಿ ಇವರ ಚಿತ್ರಗಳನ್ನು ನೋಡಿರಲೂ ಬಹುದು.
೧೯೬೭ರ ಜನವರಿ ೭ ರಂದು ರಾಜಸ್ಥಾನದ ಜೈಪುರದಲ್ಲಿ ಜನಿಸಿದ ಇರ್ಫಾನ್ ಕ್ರಿಕೆಟ್ ಆಟಗಾರನಾಗುವ ಹುಮ್ಮಸ್ಸಿನಲ್ಲಿದ್ದರು. ಆದರೆ ಉತ್ತಮ ಕ್ರಿಕೆಟ್ ಆಟಗಾರನಾಗಿದ್ದರೂ ಅದೃಷ್ಟ ಎಂಬುದು ಅವರಿಗೆ ಸಿನೆಮಾ ಜಗತ್ತಿಗೆ ದಾರಿ ತೋರಿಸಿತು. ಸುಮಾರು ೩೫ ವರ್ಷಗಳ ಹಿಂದೆ ಕರ್ನಲ್ ಸಿ.ಕೆ.ನಾಯ್ಡು ಟೋಫಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು ಇರ್ಫಾನ್. ಆ ತಂಡದಲ್ಲಿ ಇವರೇ ಕಿರಿಯ ಆಟಗಾರರಾಗಿದ್ದರು. ಆದರೆ ತಂಡವನ್ನು ಸೇರಲು ಅವರಿಗೆ ೬೦೦ ರೂ.ಗಳ ಕೊರತೆ ಕಾಡಿತು. ಆಗಿನ ಸಮಯಕ್ಕೆ ಸ್ವಲ್ಪ ದೊಡ್ಡದೇ ಆದ ಈ ಹಣವನ್ನು ಇರ್ಫಾನ್ ಅವರಿಗೆ ಹೊಂದಿಸಲು ಆಗಲೇ ಇಲ್ಲ. ಕ್ರಿಕೆಟ್ ತಂಡ ಉತ್ತಮ ಆಟಗಾರನ ಸೇವೆಯಿಂದ ವಂಚಿತವಾದರೂ ಬಾಲಿವುಡ್ ಉತ್ತಮ ನಟನೊಬ್ಬನ ಪ್ರವೇಶ ಕಂಡಿತು.
'ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ'ಸೇರಲು ಇರ್ಫಾನ್ ಬಯಸುತ್ತಾರೆ. ಆದರೆ ಅಲ್ಲೂ ಅವರಿಗೆ ೩೦೦ ರೂ.ಗಳ ಕಷ್ಟ ಎದುರಾಯಿತು. ಆದರೆ ಈ ಸಂದರ್ಭದಲ್ಲಿ ಅವರ ಸಹೋದರಿ ಸಹಾಯ ಮಾಡುತ್ತಾರೆ. ಮತ್ತು ಇರ್ಫಾನ್ ಎಂ.ಎ. ಪದವಿಯನ್ನು ಪಡೆಯುತ್ತಾರೆ. ಸಿನೆಮಾ ರಂಗಕ್ಕೆ ಬರುವ ಮೊದಲು ದೂರದರ್ಶನದಲ್ಲಿ ಬರುತ್ತಿದ್ದ ಹಲವಾರು ಟಿ.ವಿ. ಧಾರವಾಹಿಗಳಿಗೆ ಕೆಲಸ ಮಾಡುತ್ತಾರೆ. ಕೊರೋನಾ ಸಮಯವೆಂದು ದೂರದರ್ಶನದವರು ಹಳೆಯ ಧಾರವಾಹಿಗಳನ್ನು ಮರುಪ್ರಸಾರ ಮಾಡುತ್ತಿದ್ದಾರೆ. ಅದರಲ್ಲಿ ಚಾಣಕ್ಯ ಒಂದು. ಈ ಧಾರವಾಹಿಯನ್ನು ವೀಕ್ಷಿಸಿದವರು ಇರ್ಫಾನ್ ಖಾನ್ ಮುಖವನ್ನು ಖಂಡಿತಾ ಗುರುತು ಹಿಡಿಯಬಲ್ಲರು. ಹೀಗೆಯೇ ಇವರ ನಟನಾ ಪ್ರಯಾಣ ಮುಂದುವರೆಯುತ್ತದೆ. ಭಾರತ್ ಏಕ್ ಖೋಜ್, ಚಂದ್ರಕಾಂತಾ, ಬನೇಗಿ ಅಪ್ನೀ ಬಾತ್ ಮುಂತಾದ ಧಾರವಾಹಿಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸುತ್ತಾರೆ. ನಂತರ ಇವರ ಪ್ರತಿಭೆಯನ್ನು ಬಾಲಿವುಡ್ ಗಮನಿಸಿತ್ತದೆ.
೧೯೮೮ರಲ್ಲಿ ಪ್ರದರ್ಶಿತವಾದ ಚಿತ್ರವೇ ಸಲಾಂ ಬಾಂಬೆ. ಮೀರಾ ನಾಯರ್ ನಿರ್ದೇಶನದ ಈ ಚಿತ್ರದಲ್ಲಿ ಇರ್ಫಾನ್ ಪಾತ್ರವಹಿಸುತ್ತಾರೆ. ಚಿತ್ರಕ್ಕೆ ಹಲವಾರು ಪ್ರಶಸ್ತಿಗಳೂ ಲಭಿಸುತ್ತವೆ. ಇರ್ಫಾನ್ ಖಾನ್ ಎಂಬ ನಟನ ಮೇಲೆ ಹಲವಾರು ಬಾಲಿವುಡ್ ನಿರ್ದೇಶಕರ ಕಣ್ಣು ಬೀಳಲಾರಂಬಿಸುತ್ತದೆ. ನಂತರ ಇರ್ಫಾನ್ ಖಾನ್ ಹಿಂದಿರುಗಿ ನೋಡುವುದಿಲ್ಲ. ಆಸಿಫ್ ಕಪಾಡಿಯಾ ಅವರ 'ದಿ ವಾರಿಯರ್' ಚಿತ್ರದಲ್ಲಿ ನಟಿಸುತ್ತಾರೆ. ಹಾಸಿಲ್, ಮಕ್ಬೂಲ್, ಲೈಫ್ ಇನ್ ಮೆಟ್ರೋ, ಲಂಚ್ ಬಾಕ್ಸ್, ಬಿಲ್ಲೂ, ಪಾನ್ ಸಿಂಗ್ ತೋಮರ್, ಪೀಕೂ, ಹೈದರ್, ಹಿಂದಿ ಮೀಡಿಯಂ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯೂ ಆಗುತ್ತಾರೆ. ಇರ್ಫಾನ್ ಖಾನ್‌ರ ಈ ನಟನಾ ಕೌಶಲ್ಯವೇ ಅವರನ್ನು ಹಾಲಿವುಡ್ ಬಾಗಿಲಿಗೂ ತಂದು ನಿಲ್ಲಿಸುತ್ತದೆ. ಸ್ಲಂ ಡಾಗ್ ಮಿಲೇನಿಯರ್, ಲೈಫ್ ಆಫ್ ಪೈ, ಜ್ಯುರಾಸಿಕ್ ವರ್ಲ್ಡ್ ಹೀಗೆ ಹಲವಾರು ಹಾಲಿವುಡ್ ಚಿತ್ರಗಳಲ್ಲೂ ನಟಿಸುತ್ತಾರೆ. ಇವರು ನಟಿಸಿದ ಚಿತ್ರಗಳು ಆಸ್ಕರ್ ಪ್ರಶಸ್ತಿಗೂ ಭಾಜನವಾಗುತ್ತದೆ. ಇವರು ನಟಿಸಿದ ಚಿತ್ರಗಳಲ್ಲಿ ಅವುಗಳ ಪಾತ್ರಗಳನ್ನು ಗಮನಿಸಿದರೆ ಇವರ ನಟನಾ ಸಾಮರ್ಥ್ಯ ನಿಮಗೆ ಅರ್ಥವಾಗುತ್ತದೆ. ಯಾವುದೇ ಪಾತ್ರವಾದರೂ ಇವರು ಆ ಪಾತ್ರವನ್ನು ಅದರ ಒಳಗೆ ಹೊಕ್ಕು ಮಾಡುತ್ತಾರೆ. ಸುಮಾರು ವರ್ಷಗಳ ಹಿಂದೆ 'ಬಿಲ್ಲೂ' ಎಂಬ ಚಿತ್ರ ಬಂದಿತ್ತು. ಅದರಲ್ಲಿ ಇರ್ಫಾನ್ ಖಾನ್‌ರದ್ದು ಕ್ಷೌರಿಕನ ಪಾತ್ರ. ಆ ಪಾತ್ರಕ್ಕೆ ಎಷ್ಟು ನ್ಯಾಯ ನೀಡಿದರೆಂದರೆ ಚಿತ್ರ ನೋಡಿದವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಶಾರುಖ್ ಖಾನ್ ಎಂಬ ನಟನ ಎದುರು ಸರಿ ಸಮನಾದ ರೀತಿಯಲ್ಲಿ ನಟಿಸಿದ ಪರಿ ಮೆಚ್ಚುವಂಥದ್ದೇ.
ನಟನಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವಾಗಲೇ ೨೦೧೮ರಲ್ಲಿ ಇವರಿಗೆ ಕಾಯಿಲೆಯೊಂದು ಕಾಣಿಸಿತು. ಮೊದಲಿಗೆ ಕಾಮಾಲೆ (ಜೋಂಡೀಸ್) ಎಂದು ಡಾಕ್ಟರ್‌ಗಳು ತೀರ್ಮಾನಿಸಿದರೂ ನಂತರ ಮೆದುಳಿನ ಕಾಯಿಲೆ ಎಂದು ನಂಬಿದರು. ಇವರ ಈ ಕಾಯಿಲೆ ಯಾವುದೇ ನಿರ್ದಿಷ್ಟ ಗುಣ ಲಕ್ಷಣಗಳನ್ನು ತೋರಿಸುತ್ತಲೇ ಇರಲಿಲ್ಲ. ನ್ಯೂರೋಎಂಡೋಕೈನ್ ಗೆಡ್ಡೆ ಎಂಬ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಉಪಚಾರಗಳು ಇರಲಿಲ್ಲ. ಆದರೆ ಇರ್ಫಾನ್ ಖಾನ್ ಎಂಬ ವ್ಯಕ್ತಿಯ ಮನಃಶಕ್ತಿ ದೊಡ್ಡದು. ಇಂಗ್ಲೆಂಡ್ ತೆರಳಿ ಸ್ವಲ್ಪ ಸಮಯ ಈ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಂಡರು. ನಂತರ ಭಾರತಕ್ಕೆ ಬಂದು 'ಅಂಗ್ರೇಜಿ ಮೀಡಿಯಂ' ಎಂಬ ಚಿತ್ರದಲ್ಲಿ ನಟಿಸಿದರು. ತಂದೆ-ಮಗಳ ಭಾವನಾತ್ಮಕ ಲೇಪವಿರುವ ಈ ಚಿತ್ರವೇ ಇರ್ಫಾನ್ ಖಾನ್ ಕೊನೆಯ ಚಿತ್ರವಾಯಿತು. ಕೊರೋನಾ ಲಾಕ್‌ಡೌನ್ ಮೊದಲು ಬಿಡುಗಡೆಯಾದ ಚಿತ್ರ ವೀಕ್ಷಿಸಲು ಅಭಿಮಾನಿಗಳಿಗೆ ಸಮಯವೇ ಸಿಗಲಿಲ್ಲ. ಚಿತ್ರ ಮಂದಿರಗಳು ಬಂದ್ ಆದವು. ಆ ಸಮಯದಲ್ಲಿ ತಮ್ಮ ಚಿತ್ರವನ್ನು ಪ್ರಮೋಷನ್ ಮಾಡಲು ಇರ್ಫಾನ್ ಬಯಸಿದ್ದರು. ಆದರೆ ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆಯೂ ಅವರಿಗೆ ಅರಿವಿತ್ತು. ಒಂದು ಕಡೆಯಲ್ಲಿ ಅವರು ಬರೆದು ಕೊಳ್ಳುತ್ತಾರೆ. 'ನನ್ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾನು ಗಮನಿಸಿತ್ತಿದ್ದೇನೆ. ನನ್ನ ದೇಹದಲ್ಲಿ ಸೇರಿರುವ ಒಲ್ಲದ ಅತಿಥಿಯನ್ನು ಬಹುಬೇಗನೇ ದೂರಕ್ಕೆ ಓಡಿಸಿ ನಿಮ್ಮ ಬಳಿಗೆ ಮತ್ತೆ ಬರಲಿದ್ದೇನೆ' ಎಂದು. ಆದರೆ ಒಲ್ಲದ ಅತಿಥಿ ನಮ್ಮ ನಟನನ್ನು ಬಲಿ ತೆಗೆದುಕೊಂಡಿತು. ಚಿತ್ರರಂಗ ಓರ್ವ ಅದ್ಭುತ ನಟನನ್ನು ಕಳೆದುಕೊಂಡಿತು.
ಇರ್ಫಾನ್ ತಮ್ಮ ಪತ್ನಿ ಸುತಪಾ ಸಿಕ್ದರ್ ಮತ್ತು ಪುತ್ರರಾದ ಬಾಬಿಲ್ ಹಾಗೂ ಅಯಾನ್ ರನ್ನು ಬಿಟ್ಟು ಹಿಂದಿರುಗಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇವರ ಸಾವಿನ ೪ ದಿನಗಳ ಹಿಂದೆಯಷ್ಟೇ ಇವರ ತಾಯಿಯವರ ನಿಧನವಾಗಿತ್ತು. ಲಾಕ್‌ಡೌನ್ ಕಾರಣದಿಂದ ತಮ್ಮ ಊರಾದ ಜೈಪುರಕ್ಕೆ ಹೋಗಲಾರದೇ ಮುಂಬೈಯಲ್ಲೇ ವಿಡಿಯೋ ಮುಖಾಂತರ ಅಂತಿಮ ದರ್ಶನ ಮಾಡಿದ್ದರು. ಸುಮಾರು ೫೦ಕ್ಕೂ ಹೆಚ್ಚು ಕ್ವಾಲಿಟೀ ಚಿತ್ರಗಳಲ್ಲಿ ನಟಿಸಿದ ಇವರಿಗೆ ರಾಷ್ಟ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿದೆ. ಕಲೆ ಹಾಗೂ ಸಿನೆಮಾಗೆ ನೀಡಿದ ಕೊಡುಗೆಯನ್ನು ಗಮನಿಸಿ ಭಾರತ ಸರಕಾರ ೨೦೧೧ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಇರ್ಫಾನ್ ಖಾನ್ ನಟಿಸಿದ ಚಿತ್ರಗಳು ಮುಂದೆಯೂ ಅವರನ್ನು ಜೀವಂತವಾಗಿಡುತ್ತವೆ. ಯಾಕೆಂದರೆ ಅವರು ಚಿತ್ರಗಳಲ್ಲಿ ಕೇವಲ ನಟಿಸಲಿಲ್ಲ ಆ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೇಗೂ ಬಿಡುವಿದೆಯಲ್ಲಾ. ಇವರ ಚಿತ್ರಗಳನ್ನೊಮ್ಮೆ ನೋಡಿ ಬಿಡಿ. ವಿ ಮಿಸ್ ಯೂ ಇರ್ಫಾನ್...