ಇಲಿ ಎಷ್ಟು ಹಾವಳಿ ಮಾಡಿತ್ತು

ಇಲಿ ಎಷ್ಟು ಹಾವಳಿ ಮಾಡಿತ್ತು

ಬರಹ

ನಾನು ಹಿಂದೆ ಬರೆದಿದ್ದ ಲೇಖನದಲ್ಲಿ (http://www.sampada.net/article/4074)ನಮ್ಮ ಅಮೇರಿಕಾ ಪ್ರವಾಸದ ಅನುಭವ ಕೊಟ್ಟಿದ್ದೆ. ಅದು ಅಲ್ಲಿ ಆಗಿದ್ದು. ಮತ್ತೆ ಇನ್ನೊಂದು ಸಾರಿ ಅಮೇರಿಕಾಗೆ ಹೋಗಬೇಕಾಗಿ ಬಂತು.ಆಗ ನನ್ನ ಹಳೆಯ ಬೀಡಿನಲ್ಲಿ ನಾವಿಲ್ಲದಿದ್ದಾಗ ಏನಾಯಿತು ಎಂದು ಈಗ ಓದಿ, ಬೊಮ್ಮನಹಳ್ಳಿಯ ಕಿಂದರ ಜೋಗಿ ಇಲಿಗಳ ಹಿಂಡನ್ನೇ ನಾಶ ಮಾಡಿರಬಹುದು. ಆದರೆ ನಾನು ಒಂದೇ ಒಂದು ಇಲಿಯನ್ನು ಓಡಿಸಿದೆ. ಅದು ಮುಖ್ಯವಲ್ಲ. ಆ ಇಲಿ ಎಷ್ಟು ಹಾವಳಿ ಮಾಡಿತ್ತು ಅನ್ನುವುದು ಮುಖ್ಯ. ಪ್ರತಿ ಸಾರಿ ಅನುಭವಗಳ ಆಧಾರದ ಮೇಲೆ ಹೊಸ ಹೊಸ ಎಚ್ಚರಿಕೆ ವಹಿಸಲು ಕಲಿತಿದ್ದೇವೆ. ಮನೆಯಲ್ಲಿ ಧೀರ್ಘ ಕಾಲ ಯಾರೂ ವಾಸಿಸುವುದಿಲ್ಲವೆಂದ ಮೇಲೆ ಬಚ್ಚಲುಗಳನ್ನು ಭಾರವಾದ ಇಟ್ಟಿಗೆಗಳಿಂದ ಮುಚ್ಚುವುದು, ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಹಾಕುವುದು. ವಸ್ತುಗಳ ಮೇಲೆ ಹೊದಿಕೆ ಹೊದಿಸುವುದು ಮೊದಲನೆಯ ಕ್ರಮ. ಇಷ್ಟೆಲ್ಲಾ ಮಾಡಿದ್ದರೂ, ಹಿಂತಿರುಗಿ ಬಂದಾಗ ಬಾಗಿಲು ತೆಗೆದಾಗ ಗಬ್ಬು ವಾಸನೆ ಆವರಿಸಿತ್ತು. ಏನಿರಬಹುದೆಂದು ಪ್ರತಿ ಕೊಠಡಿಯನ್ನೂ ಪರೀಕ್ಷಿಸಿದಾಗ ವಿಶೇಷ ಕಾಣಿಸಿದ್ದು ಬಚ್ಚಲ ಮನೆಯಲ್ಲಿ. ಅಲ್ಲಿ ತುಂಬ ಇಲಿ ಪಿಚುಕೆಗಳು. ಇದು ಹೇಗಪ್ಪಾ ಅಯಿತು? ಬಚ್ಚಲ ತೂತನ್ನು ಭದ್ರವಾಗಿ ಮುಚ್ಚಿದ್ದೆವಲ್ಲ ಅಂದುಕೊಂಡು ಸುತ್ತ ಕಣ್ಣು ಹಾಯಿಸಿದಾಗ ತೂತಿನ ಮೆಲಿಟ್ಟಿದ್ದ ಇಟ್ಟಿಗೆ ಹಾಗೇ ಇದೆ; ಅದು ಅಲುಗಾಡಿಲ್ಲ. ಇಲಿ ಅಲ್ಲಿಂದ ಬಂದಿಲ್ಲ! ಇನ್ನೆಲ್ಲಿಂದ ಬಂದಿದೆ? ಪತ್ತೇದಾರಿ ಪ್ರಾರಂಭವಾಯಿತು. ಬೇಗನೆ ಸುಳುವು ಸಿಕ್ಕಿಬಿಟ್ಟಿತು. ಕಕ್ಕಸು ಕಮೋಡಿನಲ್ಲಿ ನೀರು ಇಂಗಿಹೋಗಿದೆ! ಊರಿನ ಒಳ ಚರಂಡಿಯೇ ಇಲಿಗಳಿಗೆ ಸಂಚಾರ ಮಾರ್ಗ; ಅಲ್ಲಿಂದ ಇಲಿ ಬಂದು (ಬಂದು ಹೋಗಿ ಅಷ್ಟೇ ಅಲ್ಲ; ಅಲ್ಲೇ ಮನೆ ಮಾಡಿಕೊಂಡು ಬಿಟ್ಟಿತ್ತು) ಹಾವಳಿ ಮಾಡಿತ್ತು. ಮುಂದಿನ ಸಾರಿಗೆ ಕಮೋಡಿನ ಮೇಲೆ ಭಾರವಾದ ವಸ್ತು ಇಡಬೇಕು ಎನ್ನುವುದು ಈಗ ಕಲಿತ ಪಾಠ.