ಇಲ್ಲಿ ನೀವು ಟೀ ಕುಡಿದ ನಂತರ ಟೀಕಪ್ ತಿನ್ನಬಹುದು!

ಇಲ್ಲಿ ನೀವು ಟೀ ಕುಡಿದ ನಂತರ ಟೀಕಪ್ ತಿನ್ನಬಹುದು!

ನೀವೆಲ್ಲಾ ಚಹಾ (ಟೀ) ಅಥವಾ ಕಾಫಿ ಕುಡಿಯುವವರೇ ಆಗಿದ್ದರೆ ಕುಡಿದ ಕಪ್ ಏನು ಮಾಡುತ್ತೀರಿ? ಸ್ಟೀಲ್ ಅಥವಾ ಗಾಜಿನದ್ದಾಗಿದ್ದರೆ ತೊಳೆದು ತೆಗೆದು ಇರಿಸುತ್ತೀರಿ. ಅದೇ ಪ್ಲಾಸ್ಟಿಕ್ ನದ್ದಾಗಿದ್ದರೆ? ಕಸದ ಡಬ್ಬಕ್ಕೆ ಬಿಸಾಕುತ್ತಿರಿ ಅಲ್ಲವೇ? ಅದೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೇ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ವಿಷಯಗಳು ನಿಮಗೆ ತಿಳಿದೇ ಇದೆ. ಅದೇ ನೀವು ಚಹಾ ಕುಡಿದ ನಂತರ ಕಪ್ ಅನ್ನು ಬಿಸಾಕದೇ ತಿಂದು ಬಿಡುವಂತಾಗಿದ್ದರೆ? ಏನು ತಮಾಷೆ ಮಾಡುತ್ತೀರಾ ಎಂದು ಕೇಳಬಹುದು. ಆದರೆ ಇದು ಸತ್ಯ. 

ನೀವು ಐಸ್ ಕ್ರೀಂ ಪ್ರಿಯರಾಗಿದ್ದರೆ ಕೋನ್ ಐಸ್ ಕ್ರೀಂ ತಿನ್ನುವಾಗ ಐಸ್ ಕ್ರೀಂ ಜೊತೆಗೆ ಅದರ ವೇಫರ್ ಅಥವಾ ಬಿಸ್ಕಿಟ್ ಕೋನ್ ಸಹ ತಿನ್ನುವುದಿಲ್ಲವೇ? ಹಾಗೆಯೇ ಚಹಾ ಕಪ್ ಸಹಾ ತಿನ್ನಬಹುದು. ಅದಕ್ಕೆ ನೀವು ಮಾತ್ರ ತಮಿಳುನಾಡು ರಾಜ್ಯದ ಮಧುರೈಗೆ ಹೋಗಬೇಕು. ಮಧುರೈ ಪಟ್ಟಣದ ವೆಸ್ಟ್ ಮಸಿ ಸ್ಟ್ರೀಟ್ ಹೋದರೆ ಅಲ್ಲಿ ನೀವು ಆರ್.ಎಸ್.ಪತಿ ನೀಲಗಿರಿ ಟೀ ಎಂಬ ಸಣ್ಣ ಅಂಗಡಿ ಸಿಗುತ್ತದೆ. ಅಲ್ಲಿಯೇ ನಿಮಗೆ ಅಪರೂಪದ ಬಿಸ್ಕಿಟ್ ಚಹಾ ಸಿಗುತ್ತದೆ. ಈ ಚಹಾ ಮತ್ತು ಇದರ ಬಿಸ್ಕಿಟ್ ಕಪ್ ಮಾಡುವವರು ಯಾರು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣವೇ?

ಆರ್. ಎಸ್.ಪತಿ ಮತ್ತು ಕಂಪೆನಿ (R.S.Pathy & Co.)ಯು ೧೯೦೯ರಿಂದಲೇ ಸುಮಾರು ೧೫ ಬಗೆಯ ನೈಸರ್ಗಿಕ ಮತ್ತು ಆರೋಗ್ಯದಾಯಕ ನೋವು ನಿವಾರಕ ಮುಲಾಮುಗಳು ಮತ್ತು ಎಣ್ಣೆಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾರೆ. ಆರ್. ಸಭಾಪತಿ ಎಂಬ ವ್ಯಕ್ತಿಯಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಅವರ ಮರಿಮೊಮ್ಮಗ ವಿವೇಕ್ ಸಭಾಪತಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವಿವೇಕ್ ಅವರಿಗೆ ತಮ್ಮ ಸಂಸ್ಥೆಯ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಏನಾದರೂ ಹೊಸತನವನ್ನು ತರಬೇಕೆಂಬ ತುಡಿತ. ಅದಕ್ಕಾಗಿ ಅವರು ೨೦೧೨ರಲ್ಲಿ ತಮ್ಮ ಆರ್.ಎಸ್.ಪತಿ ಬ್ರಾಂಡ್ ನಲ್ಲೇ ನೀಲಗಿರಿ ಚಹಾ ಹುಡಿಯನ್ನು ತಯಾರಿಸಿ ಮಾರಲು ಪ್ರಾರಂಭಿಸುತ್ತಾರೆ. ಅವರದ್ದೇ ಆದ ಒಂದು ಸಣ್ಣ ಅಂಗಡಿಯನ್ನು ಮಧುರೈನಲ್ಲಿ ೨೦೧೫ರಲ್ಲಿ ತೆರೆಯುತ್ತಾರೆ. ಅಲ್ಲಿ ಅವರ ನೀಲಗಿರಿ ಬ್ರಾಂಡ್ ನ ಚಹಾ, ಚಹಾ ಹುಡಿ ಮತ್ತಿತರ ಕೆಲವು ಉತ್ಪನ್ನಗಳನ್ನು ಮಾರುತ್ತಾರೆ. ಇವರು ಚಹಾದಲ್ಲಿ ಯಾವುದೇ ವಸ್ತುವನ್ನು ಮಿಶ್ರಣ ಮಾಡುವುದಿಲ್ಲ. ಆದುದರಿಂದ ಆ ಚಹಾಗೆ ಅದರದ್ದೇ ಆದ ರುಚಿ ಮತ್ತು ಗುಣಗಳು ಇವೆ ಎನ್ನುತ್ತಾರೆ ವಿವೇಕ್.

ನೀಲಗಿರಿ ಬ್ರಾಂಡ್ ನ ಚಹಾವನ್ನು ತಯಾರಿಸಿ ಮಾರಿ ಅವರದ್ದೇ ಚಹಾ ಹುಡಿಗೆ ಪ್ರಚಾರ ನೀಡುವ ಉದ್ದೇಶದಿಂದ ವಿವೇಕ್ ಅವರು ಮಧುರೈನಲ್ಲಿ ಅಂಗಡಿ ತೆರೆದಿದ್ದರು. ಇವರ ಚಹಾ ವ್ಯಾಪಾರಕ್ಕೆ ೨೦೧೯ರಲ್ಲಿ ಒಂದು ತಿರುವು ಸಿಕ್ಕಿತು. ಆ ವರ್ಷ ಕೇಂದ್ರ ಸರಕಾರ ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧ ಮಾಡುತ್ತಾರೆ. ಇದರಿಂದ ಅಲ್ಲಿಯವರೆಗೆ ಉಪಯೋಗಿಸಿ ಬಿಸಾಕುವ ಪ್ಲಾಸ್ಟಿಕ್ ಲೋಟಾಗಳಲ್ಲಿ ಚಹಾ ನೀಡುತ್ತಿದ್ದ ವಿವೇಕ್ ಗೆ ಮುಂದೇನು ಮಾಡುವುದು ಎಂಬ ಯೋಚನೆ ಬರುತ್ತದೆ. ಗಾಜಿನ ಲೋಟಾದಲ್ಲಿ ಚಹಾ ನೀಡಲು ಪ್ರಾರಂಭಿಸಿದಾಗ ಅವರಿಗೆ ಅದನ್ನು ತೊಳೆಯುವುದು, ನೈರ್ಮಲ್ಯವನ್ನು ಕಾಪಾಡುವುದೆಲ್ಲಾ ಸಮಸ್ಯೆಯಾಗುತ್ತದೆ. ಗಾಜಿನ ಲೋಟಾ ಒಡೆಯುವ, ಒಡೆದ ಚೂರು ತಾಗಿ ಗಾಯವಾಗುವ ಸಮಸ್ಯೆಯೂ ಇತ್ತು. ಅವರು ಉತ್ತರ ಭಾರತದ ಕೆಲವೆಡೆ ಮಣ್ಣಿನ ಕಪ್ ಗಳಲ್ಲಿ ಚಹಾ ನೀಡುವುದನ್ನು ತಿಳಿದು ಅದನ್ನು ಬಳಸಲು ಮುಂದಾಗುತ್ತಾರೆ. ‘ತಂದೂರ್ ಚಹಾ’ ಎಂದು ಮಣ್ಣಿನ ಕಪ್ ನಲ್ಲಿ ಮಾರುವ ಚಹಾ ಲೋಟ ವಿವೇಕ್ ಅವರಿಗೆ ಪೂರ್ತಿ ಸಮಾಧಾನ ತರುವುದಿಲ್ಲ.

ಆಗ ಅವರಿಗೆ ಎಡ್ಕೋ ಇಂಡಿಯಾ ಸಂಸ್ಥೆಯ ಬಗ್ಗೆ ಅಂತರ್ಜಾಲ ತಾಣದಲ್ಲಿ ಮಾಹಿತಿ ದೊರೆಯುತ್ತದೆ. ಈ ಸಂಸ್ಥೆ ಉಪಯೋಗಿಸಿದ ನಂತರ ತಿನ್ನ ಬಲ್ಲ ಕಪ್ ಅನ್ನು ೨೦೧೭ರಲ್ಲೇ ತಯಾರಿಸಿದ ಬಗ್ಗೆ ತಿಳಿಯುತ್ತದೆ. ಹೈದರಾಬಾದ್ ನಲ್ಲಿರುವ ಎಡ್ಕೋ ಇಂಡಿಯಾ ಸಂಸ್ಥೆಯ ಮಾಲಕರಾದ ರೋಹನ್ ಪನ್ಮನಿ ಅವರನ್ನು ವಿವೇಕ್ ಸಂಪರ್ಕಿಸುತ್ತಾರೆ. ಎಡ್ಕೋ ಇಂಡಿಯಾ ಮಾಲಕರಾದ ರೋಹನ್ ಅವರಿಗೆ ಕೇವಲ ೨೬ ವರ್ಷ ಪ್ರಾಯ. ಅವರ ಹುಮ್ಮಸ್ಸು ಮತ್ತು ಯೋಚನೆಗಳು ವಿವೇಕ್ ಅವರನ್ನು ತಿನ್ನುವ ಕಪ್ ಬಳಸಿ ನೋಡುವಂತೆ ಪ್ರೇರೇಪಿಸುತ್ತದೆ. ವಿವೇಕ್ ಅವರಿಗೆ ಈ ಬಿಸ್ಕಿಟ್ ಕಪ್ ಎಷ್ಟು ಸಮಯ ಬಿಸಿ ಚಹಾವನ್ನು ಹಿಡಿದಿಡಬಹುದು ಎಂದು ಕುತೂಹಲವಿತ್ತು. ಯಾಕೆಂದರೆ ಬಿಸಿ ಚಹಾ ಕಪ್ ಗೆ ಹಾಕಿದ ಕೂಡಲೇ ಕರಗಿ ಮುದ್ದೆಯಾದರೆ ಏನು ಗತಿ ಎಂಬ ಗಾಬರಿಯೂ ಇತ್ತು. ಪ್ರಯೋಗ ಮಾಡಲಾಗಿ ಈ ಕಪ್ ಸುಮಾರು ಹತ್ತು ನಿಮಿಷದವರೆಗೆ ಕರಗುವುದಿಲ್ಲ. ಕಪ್ ಗಾತ್ರ ೬೦ ಎಂ.ಎಲ್ ಮಾತ್ರ. ಕಪ್ ನಲ್ಲಿ ಚಹಾ ಹಿಡಿಯುವ ಪ್ರಮಾಣವು ಕಮ್ಮಿ ಆದುದರಿಂದ ಹತ್ತು ನಿಮಿಷಗಳ ಒಳಗೆ ಗ್ರಾಹಕ ಚಹಾ ಕುಡಿದು ಮುಗಿಸುತ್ತಾನೆ ಎಂಬ ನಂಬಿಕೆಯಿಂದ ವಿವೇಕ್ ಕಪ್ ಗಳನ್ನು ತರಿಸುತ್ತಾರೆ. ಈ ಕಪ್ ಗಳು ಎರಡು ಸ್ವಾದದಲ್ಲಿ ಬರುತ್ತದೆ. ಚಾಕಲೇಟ್ ಮತ್ತು ವೆನಿಲ್ಲಾ.

ಮಾರ್ಚ್ ೨೦೨೦ರಲ್ಲೇ ಈ ಕಪ್ ಬಳಕೆಯನ್ನು ತಮ್ಮ ಅಂಗಡಿಯಲ್ಲಿ ಪ್ರಾರಂಭಿಸಬೇಕೆಂದು ವಿವೇಕ್ ಬಯಸಿದ್ದರೂ ಕೋವಿಡ್-೧೯ ಮಹಾಮಾರಿ ಅವರಿಗೆ ಈ ಅವಕಾಶ ನೀಡಲಿಲ್ಲ, ಅವರು ಕೊನೆಗೂ ಜೂನ್ ೧೫ ರಂದು ತಮ್ಮ ಅಂಗಡಿಯಲ್ಲಿ ಬಿಸ್ಕಿಟ್ ಚಹಾ ಎಂದು ಬೋರ್ಡ್ ಹಾಕಿ ಮಾರತೊಡಗಿದರು. 

ಮೊದಲಿಗೆ ಏನಪ್ಪಾ ಇದು ಬಿಸ್ಕಿಟ್ ಚಹಾ ಎಂಬ ಕುತೂಹಲಕ್ಕೆ ಕುಡಿಯುತ್ತಿದ್ದ ಗ್ರಾಹಕರು ಈಗ ಈ ಚಹಾದ ಸ್ವಾದಕ್ಕೆ ಮಾರು ಹೋಗಿದ್ದಾರೆ. ೨೦ರೂ ಗೆ ಸಿಗುವ ಈ ೬೦ ಎಂ.ಎಲ್.ಚಹಾ ಕುಡಿದ ಬಳಿಕವೂ ಬಿಸ್ಕಿಟ್ ಗರಿಗರಿಯಾಗಿಯೇ ಇರುತ್ತದೆ ಎಂದು ಗ್ರಾಹಕರು ಪ್ರಶಂಸೆ ವ್ಯಕ್ತ ಪಡಿಸುತ್ತಾರೆ. ಚಹಾ ಕುಡಿದ ಬಳಿಕ ಈ ಕಪ್ ತಿಂದರೆ ಆಗ ಚಹಾದಲ್ಲಿ ಬಿಸ್ಕಿಟ್ ಮುಳುಗಿಸಿ ತಿಂದ ಅನುಭವವಾಗುತ್ತದೆಯಂತೆ. ಬಿಸ್ಕಿಟ್ ಚಹಾ ಪ್ರಾರಂಭಿಸಿ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಗ್ರಾಹಕರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಅಧಿಕವಾಗಿದೆ. ಈ ಪ್ರಯೋಗ ಮಾಡಿದ ವಿವೇಕ್ ಗೂ ಮೂರು ಬಗೆಯ ಖುಷಿ, ಒಂದು ಏನೆಂದರೆ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದ ಹಾಗೆ ಆಗುತ್ತೆ, ಕಸವೂ ಇರುವುದಿಲ್ಲ. ಎರಡನೆಯದಾಗಿ, ಈ ಬಿಸ್ಕಿಟ್ ಕಪ್ ಒಮ್ಮೆಗೆ ಮಾತ್ರ ಉಪಯೋಗವಾಗುವುದರಿಂದ ತೊಳೆಯುವ, ಶುಚಿಯಾಗಿ ಕಾಪಾಡುವ ಗೋಳು ಇಲ್ಲ. ಮೂರನೇ ವಿಷಯವೆಂದರೆ ಗ್ರಾಹಕರಿಗೆ ಕುಡಿಯುವ ಚಹಾದೊಂದಿಗೆ ತಿನ್ನುವ ಬಿಸ್ಕಿಟ್ ಸಿಕ್ಕಿದ ಹಾಗೆಯೂ ಆಗುತ್ತೆ.

ಈ ಬಿಸ್ಕಿಟ್ ಕಪ್ ಉಪಯೋಗಕ್ಕೆ ತಂದಾಗ ವಿವೇಕ್ ಅವರಿಗೆ ಕೆಲವೊಂದು ಸಮಸ್ಯೆಗಳೂ ಎದುರಾಗಿದ್ದವು. ದೊಡ್ಡ ಸಮಸ್ಯೆ ಎಂದರೆ ಸಾಗಾಟ. ಪ್ರಾರಂಭದಲ್ಲಿ ಹೈದರಾಬಾದ್ ನಿಂದ ಮಧುರೈಗೆ ಕಪ್ ಗಳು ಬಂದು ತಲುಪುವಾಗ ಬಹಳಷ್ಟು ಒಡೆದು ಹೋಗುತ್ತಿದ್ದವು. ಏಕೆಂದರೆ ಕೊರಿಯರ್ ಕಂಪೆನಿಯವರು ಅದನ್ನು ಸರಿಯಾಗಿ ವಿಲೇವಾರಿ ಮಾಡುತ್ತಿರಲಿಲ್ಲ. ಕಪ್ ತಯಾರಕರಾದ ರೋಹನ್ ಅವರನ್ನು ಸಂಪರ್ಕಿಸಿ ಈ ವಿಚಾರ ತಿಳಿಸಿದಾಗ ಅವರು ತುಂಬಾ ಯೋಚಿಸಿ ಕಪ್ ಒಡೆಯದಂತೆ ವಿಶೇಷ ಪ್ಯಾಕಿಂಗ್ ವ್ಯವಸ್ಥೆ ಮಾಡಿದರು. ಈ ಪ್ಯಾಕಿಂಗ್ ವ್ಯವಸ್ಥೆಯಿಂದ ಈಗ ಒಂದೂ ಕಪ್ ಒಡೆಯುವುದಿಲ್ಲ ಎಂದು ಹೇಳುತ್ತಾರೆ ವಿವೇಕ್. ಕೊವಿಡ್ ೧೯ರ ಲಾಕ್ ಡೌನ್ ಸಮಯದಲ್ಲಿ ಸಾಗಾಟದಲ್ಲಿ ವ್ಯತ್ಯಯವಾಗಿ ಸಾಮಾಗ್ರಿಗಳು ಸರಿಯಾದ ಸಮಯಕ್ಕೆ ತಲುಪದೇ ತುಂಬಾ ತೊಂದರೆಯಾಗಿತ್ತಂತೆ. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ವಿವೇಕ್ ಅವರು ಬಿಸ್ಕಿಟ್ ಚಹಾ ಅಲ್ಲದೇ ತಮ್ಮ ಅಂಗಡಿಯಲ್ಲಿ ಮಣ್ಣಿನ ಕಪ್ ನಲ್ಲಿ ‘ತಂದೂರಿ ಚಹಾ’ ಸಹಾ ಮಾರಾಟ ಮಾಡುತ್ತಾರೆ. ಚಹಾ ಕುಡಿಯಲೆಂದೇ ಗ್ರಾಹಕರು ಬೇರೆ ಬೇರೆ ಸ್ಥಳಗಳಿಂದ ಇವರ ಅಂಗಡಿಗೆ ಬರುತ್ತಾರೆ.

ಭವಿಷ್ಯದಲ್ಲಿ ಬೇರೆ ಬೇರೆ ಆಕಾರದ ಕಪ್ ತಯಾರಿಸಬೇಕು, ಬೇರೆ ಬೇರೆ ಸ್ವಾದಗಳನ್ನು ಪರಿಚಯಿಸಬೇಕು ಎಂದು ಕನಸು ಕಾಣುತ್ತಿದ್ದಾರೆ ಕಪ್ ತಯಾರಕರಾದ ರೋಹನ್ ಹಾಗೂ ಕಪ್ ನ ಗ್ರಾಹಕರಾದ ವಿವೇಕ್ ಅವರು. ವಿವೇಕ್ ಅವರಿಗೆ ಈಗ ಕೇವಲ ೩೪ರ ಹರೆಯ. ಇವರು ಭವಿಷ್ಯದಲ್ಲಿ ಇನ್ನಷ್ಟು ಶೋಧನೆಗಳನ್ನು ಮಾಡಲಿ, ದೇಶದಾದ್ಯಂತ ತಮ್ಮ ಮಳಿಗೆಗಳನ್ನು ತೆರೆಯಲಿ. ತಮ್ಮ ನೀಲಗಿರಿ ಚಹಾ ಹಾಗೂ ಬಿಸ್ಕಿಟ್ ಕಪ್ ರುಚಿಯನ್ನು ದೇಶದಾದ್ಯಂತ ಹರಡಲಿ.

 

ಚಿತ್ರ ಹಾಗೂ ಮಾಹಿತಿ ಕೃಪೆ: ದಿ ಲಾಜಿಕಲ್ ಇಂಡಿಯನ್ ಜಾಲತಾಣ