ಇಲ್ಲೇ ಕಣೆ ಕಳ್ಕೊಂಡಿದ್ದು !!!

ಇಲ್ಲೇ ಕಣೆ ಕಳ್ಕೊಂಡಿದ್ದು !!!

ಇದೊಂದು ಸತ್ಯ ಘಟನೆ !

ಕಾಲೇಜಿನ ಅಷ್ಟಲಕ್ಷ್ಮಿಯರು ಎಂದೇ ಖ್ಯಾತರಾದ ಇವರುಗಳು, ಪರೀಕ್ಷೆ ಮುಗಿಸಿ, ನಾಲ್ಕು ದಿನ ಆರಾಮವಾಗಿ ಸುತ್ತಾಡಲು ಬಂದಿದ್ದಾಗ ನೆಡೆದ ಘಟನೆಯಿದು !

ಹೆಸರುಗಳನ್ನು ಮಾರ್ಪಡಿಸಿ ನೆಡೆದ ಘಟನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ !!

-------

ಬೆಳಗ್ಗಿನಿಂದಲೂ ಮಂಕಾಗಿ ಕುಳಿತಿದ್ದಳು ಶೀಲ. ಶಾಂತಿಗೂ ತಲೆ ಕೆಟ್ಟಿತ್ತು. ಎಷ್ಟು ಕೇಳಿದರೂ ಬಾಯಿ ಬಿಡ್ತಿಲ್ವಲ್ಲ ಏನಾಗಿದೆ ಇವಳಿಗೆ ಎಂದು ನೂರು ಬಾರಿಯಾದರೂ ಅಂದುಕೊಂಡಿರಬಹುದು.

ವಿಷಯ ಪಕ್ಕದ ರೂಮಿಗೂ ಹೋಯ್ತು ಅಲ್ಲಿಂದ ಇನ್ನೆರಡು ರೂಮಿಗೆ ವಿಷಯ ತಲುಪಲು ಹೆಚ್ಚು ಹೊತ್ತು ಬೇಕಿರಲಿಲ್ಲ ...

ಎಲ್ಲರೂ ಬಂದು, ಕೂತು ಅದೇ ಪ್ರಶ್ನೆ ಕೇಳುತ್ತಿದ್ದರು "ಏನಾಯ್ತೇ?"

"ನೀನು ಹಿಂಗೆ ಮೂಡ್ ಆಫ್ ಆಗಿ ಕುಳಿತಿದ್ದರೆ ಮುಂದಿನ ಕಾರ್ಯಕ್ರಮವೆಲ್ಲ ಹಾಳಾಗುತ್ತೆ .. ಟೂರ್ ಅಂತ ಬಂದಿರೋದೇ ನಾಲ್ಕು ದಿನಕ್ಕೆ ... ಹೇಳೇ ಏನಾಯ್ತು ಅಂತ"

"ನಾವಿಲ್ಲೇ ಇಷ್ಟು ತಡ ಮಾಡಿದರೆ ಕೃಷ್ಣನ ಗುಡಿ ಬಾಗಿಲು ಹಾಕುತ್ತಾರೆ ಅಷ್ಟೇ! ನಾವು ಮಲ್ಪೆಗೆ ಟೂರ್’ಗೆ ಬರ್ತೀವಿ ಅಂದಾಗಲೇ ನಮ್ಮಜ್ಜಿ ಗುಡಿ ಹುಂಡಿಗೆ ಹಾಕು ಅಂತ ದುಡ್ಡೂ ಕೊಟ್ಟಿದ್ದಾರೆ. ದರ್ಶನಕ್ಕೆ ಹೋಗ್ತೀರೋ ಇಲ್ವೋ ಅಂತಾನೂ ಕೇಳಲಿಲ್ಲ ... ಹೋಗಲೇಬೇಕೂ ಅನ್ನೋ ತಾಕೀತು ... ದೇವಸ್ಥಾನಕ್ಕೆ ಹೋಗ್ಲಿಲ್ಲ ಅಂದರೆ ಮನೆಯಲ್ಲಿ ಅದೇ ದೊಡ್ಡ ರಾದ್ದಾಂತ ಆಗುತ್ತೆ"

"ಇವಳನ್ನು ಒಂದು ಸ್ವಲ್ಪ ಹೊತ್ತು ಒಬ್ಬಳನ್ನೇ ಬಿಟ್ಟು, ಗುಡಿಗೆ ಹೋಗಿ ಬರೋಣ. ಆಗ್ಲಾದ್ರೂ ವಿಷಯ ಹೇಳ್ತಾಳಾ ನೊಡೋಣ!"

"ನಿನ್ ತಲೆ ... ಮೊದಲೇ ಸರಿ ಇವಳು. ಈ ಥರ ಆಡ್ತಾ ಇದ್ದಾಗ ಒಬ್ಬಳನ್ನೇ ಬಿಟ್ಟು ಹೋದ್ರೆ, ಅವರ ಮನೆಯವರಿಗೆ ಏನಂತ ಉತ್ತರ ಹೇಳ್ತೀಯಾ?"

"ಅಯ್ಯೋ, ರಾಮಾ! ಇವಳು ಯಾವಾಗ್ಲೂ ಮೇಲೆ ಕಳಿಸೋ ಮಾತೇ ಆಡ್ತಾಳೆ"

"ಇವಳು ವಿಷ್ಯ ನಿನಗೆ ಗೊತ್ತಿದ್ದೂ ಪೆದ್ದು ಪೆದ್ದಾಗಿ ಒಬ್ಬಳನ್ನೇ ಬಿಟ್ಟು ಹೋಗೋಣ ಅಂದ್ರೆ ಇನ್ನೇನು ಹೇಳಲಿ"

"ಸರಿ ಹಾಗಿದ್ರೆ. ಮೊದಲು ನಾಲ್ಕು ಜನ ಹೋಗೋಣ. ಇನ್ನು ಮೂವರು ಇವಳ ಜೊತೆ ಇರಲಿ. ಅವರು ವಾಪಸ್ ಬಂದ ಮೇಲೆ ಮಿಕ್ಕವರು ಹೋಗೋದು. ಅಷ್ಟರಲ್ಲಿ ಈ ಅಮ್ಮಣ್ಣಿ ಮೂಡ್ ಸರಿ ಹೋಗಿದ್ರೆ, ಇವಳನ್ನೂ ಅವರ ಜೊತೆ ಕಳಿಸೋದು. ಏನಂತೀಯ?"

"ಆಯ್ತು ... ಆದ್ರೆ ಮೊದಲು ಹೋಗೋ ನಾಲ್ಕು ಜನರಲ್ಲಿ ನೀನು ಒಬ್ಬಳಲ್ಲ ತಾನೇ?"

"ಯಾಕೇ ಹಾಗಂತೀಯಾ?"

"ನೀನು ಹಾಕಿಕೊಂಡಿರೋ ಬಟ್ಟೆ ನೋಡು. ಗುಡಿಗೆ ಹೋಗೋವಾಗ ಹಾಕೋ ಬಟ್ಟೇನಾ ಇದು. ಬ್ರಿಗೇಡ್ ರೋಡ್’ಗೆ ಹಾಕಿಕೊಂಡೂ ಹೋಗೋ ಬಟ್ಟೇ ತರಹ ಇದೆ. ನಿನ್ನ ಸ್ಟೈಲು ನೋಡಿ ಕಸಿವಿಸಿಯಾಗಿ ಕೃಷ್ಣ ಮತ್ತೆ ಆ ಕಡೆ ತಿರುಗಿಬಿಟ್ಟಾನು. ಒಂದು ವೇಳೆ ಮತ್ತೊಬ್ಬ ಕನಕರು ಬಂದು ಅವನನ್ನು ತಿರುಗಿಸಿದರೆ, ಅದೇ ದೊಡ್ಡ ರಾಜಕೀಯದ ಗಲಾಟೆ ಆಗಿಬಿಡುತ್ತೆ"

"ಅಯ್ಯೋ! ಸಾಕು ಸುಮ್ನಿರೆ! ಬಾಯಿ ಬಿಟ್ರೆ ಉಪದೇಶ ಇಲ್ಲಾ ಪಾಲಿಟಿಕ್ಸ್. ಅವಳೇನು ಇದೇ ಡ್ರಸ್’ನಲ್ಲಿ ಬರ್ತೀನಿ ಅಂತ ಹೇಳಿದ್ಲಾ? ಇಲ್ವಲ್ಲಾ?"

"ಆಯ್ತಮ್ಮ ತಾಯೇ .. ದೊಡ್ಡ ಜೋಕ್ ಹೇಳ್ದೀ ... ಇಲ್ಲಿ ನೋಡೂ ಹಹಹಹ ... ನಕ್ಕಿದ್ದೀನಿ ... ಈಗ ಚೇಂಜ್ ಮಾಡಿಕೊಂಡು ಬರ್ತೀನಿ ಹೋಗೋಣ"

"ಚಿಕ್ಕ ಚಿಕ್ಕ ವಿಷಯಕ್ಕೂ ಅದೇನು ಅಷ್ಟು ಗಲಾಟೆ ಮಾಡ್ತೀರೋ?"

ಇಷ್ಟು ಹೊತ್ತೂ ಮೌನವಾಗಿದ್ದ ಶೀಲ, ಎಲ್ಲರ ಮಾತನ್ನು ಮುರಿಯುತ್ತ ಗಂಭೀರವಾಗಿ ನುಡಿದಳು "ಸಮುದ್ರಕ್ಕೆ ಹೋಗೋಣ ಬನ್ರೇ ... "

"ಯಾಕೇ? ಹಾರಲಿಕ್ಕಾ?"

"ಸಮುದ್ರ ಅಂದೆ ದಂಡೆ ಕಣೇ, ದಂಡ"

"ಅಯ್ಯೋ ಬಿಡ್ರೇ, ಸದ್ಯ .. ಈ ಗಿಣಿ ಬಾಯಿಬಿಡ್ತಲ್ಲ"

"ಅಲ್ಲಾ ಕಣೇ ಶೀಲ ... ನೆನ್ನೆ ಎಲ್ಲ ಅಲ್ಲೇ ಇದ್ವಲ್ಲ. ಮತ್ತೆ ಅಲ್ಲಿಗೇ ಹೋಗಬೇಕಾ?"

"ನೀವುಗಳು ಬರ್ತೀರೋ, ಇಲ್ಲಾ ನಾನೊಬ್ಳೇ ಹೋಗ್ಲಾ?"

"ಸರಿಯಮ್ಮ ನಡಿ. ಎಲ್ರೂ ಹೋಗೋಣ ಬನ್ರೇ"

ಏಳೂ ಮಂದಿ ಒಮ್ಮೆ ಕನ್ನಡಿಯ ಮುಂದೆ ನಿಂತು, ತಲೆಗೂದಲನ್ನು ಒಮ್ಮೆ ಸರಿಪಡಿಸಿಕೊಂಡು, ಒಮ್ಮೆ ಈ ಬದಿ ಮತ್ತೊಮ್ಮೆ ಆ ಬದಿ ತಿರುಗಿ ಡ್ರಸ್ ನೋಡಿಕೊಂಡು, ಹಿಂದೆ ತಿರುಗಿ ಕತ್ತು ಕೊಂಕಿಸಿ ಮತ್ತೊಮ್ಮೆ ಕನ್ನಡಿಯನ್ನು ನೋಡಿ ಹೊರಟು ನಿಂತರು, ಮತ್ತೆ ಮಲ್ಪೆ ಸಮುದ್ರದಂಡೆಗೆ .....

ಹೆಚ್ಚು ಕಮ್ಮಿ ಎಲ್ಲರೂ ಮೌನವಾಗೇ ಇದ್ದರು ... ಶೀಲಳ ಬಿಟ್ಟು ಮಿಕ್ಕೆಲ್ಲರ ಮನವನ್ನು ಹೊಕ್ಕು ಹೊರಬಂದವರೆ ಕೈಯಲ್ಲಿ ಉಳಿವ ಹಲವು ಪದಗಳು "ಒಳ್ಳೇ ತಿಕ್ಕಲು ಸಹವಾಸ" ಅಂತ !!!

ಶೀಲ ಬೆಳೆದು ಬಂದಿರುವ ರೀತಿಯೇ ಹಾಗೆ. ಮನದಲ್ಲಿ ಬಂದ ಆಸೆ ನಾಲಿಗೆಗೆ ಬರುವ ಮುನ್ನ ಹಸ್ತದಲ್ಲಿ ಆ ವಸ್ತು ಇರುತ್ತಿತ್ತು ... ಆಗರ್ಭ ಶ್ರೀಮಂತರು ಅಲ್ಲದಿದ್ದರೂ, ಒಬ್ಬಳೇ ಮಗಳನ್ನು ಹಾಗೆ ಬೆಳೆಸಿದ್ದರು, ಅವರಪ್ಪ-ಅಮ್ಮ.

ಸಾಮಾನ್ಯವಾಗಿ, ಮಗುವಾಗಿದ್ದಾಗ ಅತ್ತರೆ ಬೇಕಾದ ವಸ್ತು ಕೈಗೆ ಸಿಗುತ್ತಿತ್ತು. ಬೆಳೆದಂತೆ ವಿವೇಚನೆ ಮೂಡಿ ಆ ಅಳುವ ತಂತಾನೇ ಹೋಗಿಬಿಡುತ್ತೆ. ಇಲ್ಲಿ ಹಾಗಲ್ಲ. ಬೇಕಿದ್ದ ವಸ್ತು ಸಿಗಲಿಕ್ಕೆ ಅಳುವ ಅವಕಾಶವೇ ಇರಲಿಲ್ಲ ಅಂದು ... ಹಾಗಾಗಿ ಈ ಸ್ಥಿತಿ ಇಂದು.

ಯಾವುದಾದರೂ ಕೈಗೆ ದೊರಕದಿದ್ದಲ್ಲಿ ಅಥವಾ ಹತಾಶೆಯಾದಲ್ಲಿ ಮೌನದ ಚಿಪ್ಪಿನಲ್ಲಿ ಹೊಕ್ಕರೆ, ಹೊರಗೆಳೆದುಕೊಂಡು ಬರುವುದೇ ಒಂದು ಸಾಹಸ ... ಕಷ್ಟಕ್ಕೆ, ನೋವಿಗೆ ಪ್ರತಿಸ್ಪಂದಿಸುವುದು ಹೇಗೇ ಎಂದು ತಿಳಿದಿಲ್ಲ ಶೀಲಳಿಗೆ, ಇದೊಂದು ದಾರಿ ಬಿಟ್ಟರೆ ...

ಇವರನ್ನೆಲ್ಲ ಹೊತ್ತ ವ್ಯಾನು ನಿಲ್ಲುತ್ತಿದ್ದಂತೆ, ಮರಳಿನತ್ತ ಓಡಿದಳು ಶೀಲ ...

"ಒಳ್ಳೇ ತಿಕ್ಕಲು ಹಿಡಿದವಳ ಹಾಗೆ ಓಡ್ತಿದ್ದಾಳೆ. ಏನಾಗಿದೆ ಇವಳಿಗೆ?"

"ಸುಮ್ನಿರೇ! ನಾವು ಬಂದಿರೋದೇ ಅವಳ ಗಾಡೀಲಿ! ಅದೇನು ಮಾಡ್ತಾಲೋ ನೋಡ್ಕೊಂಡ್ ಸುಮ್ನಿರು"

ಶೀಲಳ ತಲೆಗೂದಲು ಬೀಸೋಗಾಳಿಗೆ ಸಿಕ್ಕಿ ಹಾರಾಡುತ್ತಿತ್ತು ... ಚೂರಿದಾರ್’ನ ದುಪ್ಪಟ್ಟ ಕೂದಲಿನ ದುಪ್ಪಟ್ಟು ವೇಗದಲ್ಲಿ ಸಿಕ್ಕ ಸಿಕ್ಕಲ್ಲಿ ಎಗರಾಡುತ್ತಿತ್ತು ... ಒಂದು ಕೈಯಲ್ಲಿ ಕೂದಲ ನೇವರಿಸಿಕೊಳ್ಳುವುದು, ಮತ್ತೊಂದು ಕೈಯಲ್ಲಿ ದುಪ್ಪಟ್ಟ ಹಿಡಿದುಕೊಳ್ಳುವುದೂ ಮಾಡುತ್ತ ಮರಳಿನತ್ತ ತೀಕ್ಷ್ಣ ದೃಷ್ಟಿ ಹರಿಸುತ್ತ ಏನನ್ನೋ ಅರಸುತ್ತಿದ್ದಳು ... ಇದೇ ಕ್ರಿಯೆ ... ಮತ್ತೊಮ್ಮೆ, ಮಗದೊಮ್ಮೆ ....

"ಇಲ್ಲೇ ಕಣೆ ನಾನು ಕಳೆದುಕೊಂಡಿದ್ದು" ಅಂದಳು ಹುಡುಕುತ್ತ ....

ಸಮುದ್ರದಿಂದ ಎದ್ದು ಬಂದ ಭಾರಿ ಅಲೆಯೊಂದು ಧೊಪ್ಪನೆ ತೀರಕ್ಕೆ ಬಡಿದಿತ್ತು ! ಆದರೆ ಏಳು ಹೃದಯಗಳಲ್ಲಿ ಎದ್ದ ಅಲೆಯ ಮುಂದೆ ಅದೇನೂ ಅಲ್ಲ !!!

ಎಲ್ಲರ ಎದೆ ಒಮ್ಮೆ ದಸಕ್ ಎಂದಿತ್ತು !!! ಹೃದಯ ಒಂದು ಕ್ಷಣ ಬಾಯಿಗೆ ಬಂದಂತಾಗಿತ್ತು ಇವರುಗಳಿಗೆ !!

ಇವಳು ಆಡುತ್ತಿರುವ ರೀತಿ, ಆಡುತ್ತಿರುವ ಮಾತು ಶರಪಂಜರದ ಕಲ್ಪನಳನ್ನು ನೆನಪಿಗೆ ಬರಿಸದೆ ಬಿಡಲಿಲ್ಲ !!

ಅಯ್ಯೋ ಶಿವನೇ? ಇವಳು ಆಡುತ್ತಿರೋ ಮಾತಾದರೂ ಏನು? ಎಲ್ಲರೂ ಒಮ್ಮೆ ಶಾಂತಿಯತ್ತ ತಿರುಗಿದರು ...

ಅದನ್ನು ಗ್ರಹಿಸಿದ ಶಾಂತಿ "ನೆನ್ನೆ ಸಂಜೆ ಆಟ-ಊಟ ಆಗಿ ಇಲ್ಲಿಂದ ಹೋದ ಮೇಲೆ, ಹಾಸಿಗೆ ಮೇಲೆ ಬಿದ್ದೆ. ವಿಪರೀತ ಸುಸ್ತಾಗಿತ್ತು, ನಿದ್ದೆ ಬಂದುಬಿಡ್ತು. ಎದ್ದಾಗ ಬೆಳಿಗ್ಗೆ ಎಂಟೂವರೆ. ಈ ಮಧ್ಯೆ ಏನಾಯ್ತೋ ನನಗೇನೂ ಗೊತ್ತಿಲ್ಲ"

ಕೆಟ್ಟದ್ದನ್ನು ಯೋಚಿಸಬಾರದು ಅಂದ್ರೆ ಮನವೆಂಬ ಮರ್ಕಟವನ್ನು ಬಂಧಿಸಲು ಸಾಧ್ಯವೇ? ಕಡಿವಾಣ ಹಾಕಲು ಸಾಧ್ಯವೇ? ಹುಚ್ಚುಹುಚ್ಚಾಗಿ ಏನೇನೋ ಯೋಚನೆಗಳು. ಒಬ್ಬಳೇ ಇಲ್ಲಿಗೆ ಬರಲು ಹೇಗೆ ಸಾಧ್ಯ? ಇವಳೇ ಡ್ರೈವ್ ಮಾಡಿಕೊಂಡು ಬರುವ ಪ್ರಮೇಯವಾದರೂ ಏನು? ಥತ್! ಒಂದೂ ಅರ್ಥವಾಗ್ತಿಲ್ಲ....

ಗಿಣಿ ಮತ್ತೆ ಬಾಯಿಬಿಟ್ಟಿತ್ತು ....

"ಲೋ! ಮಧು ... ಎಲ್ಲ ನಿನ್ನಿಂದಾನೇ ಆಗಿದ್ದು ..."

ಮಧು!

ಇಡೀ ಕಾಲೇಜಿಗೇ ಗೊತ್ತು ಇವಳ ಮತ್ತು ಮಧು ನಡುವೆ ನೆಡೆಯುತ್ತಿರುವ ಪ್ರೇಮದಾಟ. ಇದೊಂದು ವಿಷಯದಲ್ಲಿ ಮಾತ್ರ ಶೀಲಳ ಅಪ್ಪ-ಅಮ್ಮ ಇನ್ನೂ ಬಿಗುವಾಗೇ ಇದ್ದಾರೆ.

ಮಧು ಇಲ್ಲಿಗೆ ಬಂದಿದ್ದನೇ? ಯಾವಾಗ? ಎಲ್ಲಿದ್ದ? ಎಲ್ಲಿದ್ದಾನೆ? ನೆನ್ನೆ ನಮ್ಮ ಕಣ್ಣಿಗೆ ಬೀಳಲಿಲ್ಲವಲ್ಲ?

ಇವರ ಮಧ್ಯೆ ಏನಾದರೂ ?

ಅಯ್ಯೋ ದೇವರೇ! ಇವಳ ಅಪ್ಪ-ಅಮ್ಮನಿಗೆ ಏನಪ್ಪಾ ಹೇಳೋದೂ? ಎಲ್ಲರಿಗಿಂತ ಹೆಚ್ಚು ಆಘಾತ ಆಗಿದ್ದು ಶಾಂತಿಗೆ. ’ಸ್ವಲ್ಪ ಅವಳ ಜೊತೆಗೇ ಇರಮ್ಮ’ ಅಂತ ಶೀಲಳ ಅಪ್ಪ-ಅಮ್ಮ ಇವಳ ಮೇಲೆ ಜವಾಬ್ದಾರಿ ಹೇರಿದ್ದರಿಂದ, ಇವರಿಬ್ಬರು ಒಂದು ರೂಮ್’ನಲ್ಲಿ ಇದ್ದರು !!

ಶೀಲ "ಲೇ! ನಿನ್ನ ಫೋನ್ ಕೊಡೆ" ಎಂದು ಹೆಚ್ಚು ಕಮ್ಮಿ ಕಿರುಚಿದಳು ....

ಮತ್ತೆ ಗಲಿಬಿಲಿ ... ಇವಳನ್ನು ರೂಮಿನಲ್ಲಿ ಸಾಂತ್ವನಗೊಳಿಸುತ್ತಿದ್ದವರು, ಕನ್ನಡಿಯನ್ನು ಒಮ್ಮೆ ನಾಚಿಸಿ ಹಾಗೇ ಹೊರಟು ಬಂದಿದ್ದರು. ಯಾರೂ ಫೋನ್ ಕಡೆ ಗಮನವೂ ಹರಿಸಿರಲಿಲ್ಲ ....

ಎಲ್ಲರೂ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು ... ಕೊನೆಗೆ

"ನಾವು ಯಾರೂ ತಂದಿಲ್ಲ ಕಣೇ" ಅಂದರು

ಶೀಲಳಿಗೆ ಕೋಪ ಇನ್ನೂ ಕೆರಳಿತು ... ಆ ಕಡೆ ಇಂದ ಈ ಕಡೆ, ಈ ಕಡೆ ಇಂದ ಆ ಕಡೆ ಓಡುತ್ತಾ, "ಇಲ್ಲೇ ಕಳ್ಕೊಂಡಿದ್ದು" ಅಂತಿದ್ಲು ... ಅವಳ ಹಿಂದೆ ಮರಳ ಮೇಲೆ ನಡೆದೂ, ಓಡಿ ಎಲ್ಲರಿಗೂ ಕಾಲು ನೋವು ಬಂದಿತ್ತು ...

ಶೀಲಳಿಗೆ ಕಾಲು ಸೋತಿತ್ತು ... ಕುಸಿದು ಕುಳಿತಳು ....

"ಇಲ್ಲೇ ಕಣೆ ಕಳ್ಕೊಂಡಿದ್ದು"

ಇದುವರೆಗೂ ತಡೆದು ಹಿಡಿದುಕೊಂಡಿದ್ದು ಮಾತು ... ಹೇಗೆ ಕೇಳುವುದು ಎಂದು ಬಾಯಲ್ಲೇ ನಿಂತ ಮಾತು ತಂತಾನೇ ಒಬ್ಬಳ ಬಾಯಲ್ಲಿ ಗಡುಸಾಗಿ ಹೊರಬಂತು "ಏನೇ ಕಳ್ಕೊಂಡಿದ್ದು ನಿನ್ ತಲೆ? ಬೇಗ ಹೇಳೇ"

ಆ ಸ್ವರದ ಗಡುಸಿಗೆ ಬೆದರಿದಂತಾಗಿ ಶೀಲ ಬಾಯಿಬಿಟ್ಟಳು "ನನ್ I-Phone ಕಣೇ. ಹೋದ ತಿಂಗಳು ನನ್ ಬರ್ತ್-ಡೇ’ಗೆ ನಮ್ಮಪ್ಪ ಕೊಡಿಸಿದ್ರು ... ಇಲ್ಲೇ ... ಇಲ್ಲೇ ಎಲ್ಲೋ ಕಳ್ಕೊಂಡೆ ... ನೆನ್ನೆ ಆಟ ಆಡಬೇಕಾದ್ರೆ ಮಧು ಫೋನ್ ಬಂತು .. ಅದಾದ ಮೇಲೆ ಇಲ್ಲೇ ಮರಳ ಮೇಲೆ ಹಾಕಿದ್ದ ಹಾಸಿನ ಮೇಲೆ ಇಟ್ಟಿದ್ದೆ ..... "

{ಮಿಕ್ಕ ಸನ್ನಿವೇಶ ಇಲ್ಲಿ ಅಪ್ರಸ್ತುತ ... ಮಲ್ಪೆ ಕಡೆ ಹೋದ್ರೆ, ನಮ್ ಶೀಲಳ ಫೋನ್ ಸಿಕ್ರೆ ತಂದುಕೊಟ್ಟು ಬಿಡಿ ... ಆಯ್ತಾ ಮಾರಾಯ್ರೇ?}

 

 

Comments