ಇಳಿ ಹಗಲಿನ ತೇವಗಳು

ಇಳಿ ಹಗಲಿನ ತೇವಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಯಶೋದಾ ಮೋಹನ್
ಪ್ರಕಾಶಕರು
ಕ್ರಿಯೇಟಿವ್ ಪುಸ್ತಕ ಮನೆ, ಕುಕ್ಕುಂದೂರು, ಕಾರ್ಕಳ
ಪುಸ್ತಕದ ಬೆಲೆ
ರೂ. ೨೦೦, ಮುದ್ರಣ: ೨೦೨೪

ಯಶೋದಾ ಮೋಹನ್ ಅವರು ಬರೆದ ಚೊಚ್ಚಲ ಕಥಾ ಸಂಕಲನ ‘ಇಳಿ ಹಗಲಿನ ತೇವಗಳು' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಪುಸ್ತಕಕ್ಕಾಗಿ ಬರೆದ ಲೇಖಕಿಯ ಮಾತುಗಳ ಆಯ್ದ ಭಾಗ ಇಲ್ಲಿದೆ…

“‘ಇಳಿ ಹಗಲಿನ ತೇವಗಳು' ನನ್ನ ಮೊದಲನೆಯ ಕಥಾ ಸಂಕಲನ ಮತ್ತು ಮೂರನೆಯ ಕೃತಿ. ವಿದ್ಯಾರ್ಥಿ ಜೀವನ ಕಳೆದು ಸುಮಾರು ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ ಬರವಣಿಗೆಯನ್ನು ಆರಂಭಿಸಲು ಪ್ರೇರಣೆ ಸಿಕ್ಕಿದಾಗ ನನ್ನೊಳಗಿನ ಭಾವಗಳು ಬಿಡುಗಡೆಗೊಂಡ ಹಲವು ಬಗೆಗಳಲ್ಲಿ ಸಣ್ಣ ಕತೆಯೂ ಒಂದು. ಆಗೊಮ್ಮೆ ಈಗೊಮ್ಮೆ ಬರೆದ ಕೆಲವು ಕತೆಗಳು ಈ ಸಂಕಲನದಲ್ಲಿ ಸ್ಥಾನ ಪಡೆದುಕೊಂಡಿವೆ. ಸಾಧಾರಣ ಐವತ್ತು ವರ್ಷದ ನಂತರ ಬರೆದ ಕತೆಗಳಾಗಿರುವುದರಿಂದ ಇವು ನಿಜ ಅರ್ಥದ 'ಇಳಿ ಹಗಲಿನ ತೇವಗಳು'.

ಬದುಕಿನ ಪ್ರಯಾಣದಲ್ಲಿ ಓದಿನಿಂದ ಪಡೆದ ಅರಿವಿನೊಂದಿಗೆ ಅನುಭವದಿಂದ ಪಡೆಯುವ ಹೊಳಹುಗಳೂ ಜೊತೆಯಾಗಿ ಹೆಜ್ಜೆ ಹಾಕುತ್ತಿರುತ್ತವೆ. ಅವು ಹುಟ್ಟಿ ಬೆಳೆದ ನೆಲದ ಪರಂಪರೆಯನ್ನು ಗೌರವಿಸುತ್ತಲೇ ಅದರ ಪ್ರತಿಬಿಂಬವಾದ ಸಮಾಜವನ್ನು ವಿಶ್ಲೇಷಣೆಗೆ ಒಳಪಡಿಸಿಕೊಂಡು ಸಾಗುತ್ತದೆ. ನಾವು ನಾವೇ ಹಾಕಿಕೊಂಡ ಗೆರೆಗಳ ಒಳಗೆ ನಡೆಯುವ ಬದುಕಿನ ಕಥಾನಕದಲ್ಲಿ ಅಡಕವಾಗಿರುವ ಸಂವೇದನೆಗಳು ಪ್ರತಿಯೊಬ್ಬರನ್ನೂ ತಟ್ಟುವ ಬಗೆ ಭಿನ್ನವಾದುದು. ಅಪ್ಪಟ ಗೃಹಿಣಿಯಾಗಿ ಕೌಟುಂಬಿಕ ಚೌಕಟ್ಟಿನೊಳಗೆ ನಿಂತು ನಾನು ಕಂಡ, ಅನುಭವಿಸಿದ ಸಂವೇದನೆಗಳನ್ನು ಕಟ್ಟಿಕೊಡುವ ಪ್ರಯತ್ನವೇ ಇಲ್ಲಿನ ಕತೆಗಳ ಜೀವಾಳ.

ಅದು ಕರಾವಳಿಯ ಉಸಿರಿನಲ್ಲಿ, ಅದರ ಸಂಸ್ಕೃತಿಯೊಂದಿಗೆ ಹುಟ್ಟಿಕೊಂಡಿರುವ ಕಟ್ಟುಪಾಡುಗಳೊಂದಿಗಿನ ಕೌಟುಂಬಿಕ, ಸಾಮಾಜಿಕ ಸ್ವರೂಪ ಮತ್ತು ವ್ಯಕ್ತಿತ್ವಗಳ ಚಿತ್ರಣವಷ್ಟೇ, ಬದುಕು 'ಹೀಗಿರಬೇಕು..' ಎನ್ನುವುದಕ್ಕಿಂತ 'ಹೀಗಿದೆ..' ಎನ್ನುವುದನ್ನಷ್ಟೇ ಚಿತ್ರಿಸಿ ತೀರ್ಮಾನವನ್ನು ಓದುಗರಿಗೆ ಬಿಟ್ಟುಕೊಟ್ಟ ಭಾವಸೂಚಿ. ಇಲ್ಲಿನ ಕತೆಯ ವಸ್ತುಗಳು ಸಮಾಜದಿಂದ ಪ್ರೇರಿತವಾದುವುಗಳು ಮಾತ್ರ. ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ನನ್ನನ್ನು ಕಾಡಿದ ವಿಚಾರಗಳನ್ನು ಕತೆಯೆಂಬ ಕಾಲ್ಪನಿಕ ಚೌಕಟ್ಟಿನೊಳಗೆ ಕೂರಿಸಿ, ಪೋಷಿಸಿ ಹೊರಗಿನ ಭಾವ ಪ್ರಪಂಚಕ್ಕೆ ತಲುಪಿಸಲು ಪ್ರಯತ್ನಿಸಿರುವುದು ನನ್ನನ್ನು ಹಗುರಾಗಿಸುವ ಪ್ರಕ್ರಿಯೆ ಕೂಡ. ಇಲ್ಲಿನ ಕತೆಗಳು ಮನುಷ್ಯ ಸಂಬಂಧಗಳ ಒಳಗೆ ಅವಿತಿರುವ ಪ್ರೀತಿ, ಸ್ನೇಹ, ಬಾಂಧವ್ಯ, ನಿರೀಕ್ಷೆ, ಭರವಸೆಗಳ ಜೊತೆಗೆ ಸ್ವಾರ್ಥ, ಹತಾಶೆ, ನೋವು, ಲಾಲಸೆಗಳನ್ನೂ ಬೆರೆಸಿಕೊಂಡ ರಸ ಪೊಟ್ಟಣವಷ್ಟೇ. ಓದುಗರು ಈ ಪೊಟ್ಟಣವನ್ನು ಕಾಳಜಿಯಿಂದ ತೆರೆದು ಸವಿಯಬೇಕೆಂದು ವಿನಯದಿಂದ ಭಿನ್ನವಿಸುತ್ತೇನೆ.”