ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ: ಯಾಕೆ?

ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ: ಯಾಕೆ?

ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ - ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಸೂಚನೆಯ ಅನುಸಾರ. ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಭಾರೀ ದಂಡ ಕಾದಿದೆ.

“ಯಾಕೆ ನಿಷೇಧ?" ಎಂಬುದು ಹಲವರ ಪ್ರಶ್ನೆ. ಯಾಕೆಂದರೆ ಇದು ಮಾನವ ಕುಲದ ಉಳಿವಿನ ಪ್ರಶ್ನೆ ಎಂಬುದೇ ಉತ್ತರ. ಅದು ಹೇಗೆ? ಎಂದು ಕೇಳುವವರು ಹಲವರು. ಅದಕ್ಕೆ ಉತ್ತರವಾಗಿ ಇಲ್ಲಿದೆ ಕೆಲವು ಮಾಹಿತಿ.

ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ
ಇತ್ತೀಚೆಗೆ ವಿಜ್ನಾನಿಗಳು ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ ಪತ್ತೆ ಮಾಡಿದ್ದಾರೆ! ಅಧ್ಯಯನದಲ್ಲಿ ಪರೀಕ್ಷಿಸಲಾದ ಶೇಕಡಾ 80ರಷ್ಟು ಜನರಲ್ಲಿ ಈ ಅಪಾಯಕಾರಿ ಸೂಕ್ಷ್ಮಕಣಗಳು ಪತ್ತೆಯಾಗಿವೆ! (ಪ್ಲಾಸ್ಟಿಕ್ ವಸ್ತುಗಳು ಚೂರುಚೂರಾಗಿ ಅತಿಸೂಕ್ಷ್ಮ ಕಣಗಳಾಗುತ್ತವೆ.) ವಿಜ್ನಾನಿಗಳು ಶೋಧನೆ ಮಾಡಿರುವ ಇನ್ನೊಂದು ಆಘಾತಕಾರಿ ಸಂಗತಿ: ಈ ಮೈಕ್ರೋಪ್ಲಾಸ್ಟಿಕ್ ಕಣಗಳು ರಕ್ತಪ್ರವಾಹದಲ್ಲಿ ಮಾನವನ ದೇಹದೊಳಗೆ ಸುತ್ತಾಡಿ, ಕೆಲವು ಅಂಗಗಳಲ್ಲಿ ಶೇಖರವಾಗಬಹುದು. ಇದರಿಂದಾಗಿ, ಮಾನವರಿಗೆ ಏನೆಲ್ಲ ಅಪಾಯ ಸಂಭವ ಇದೆ ಎಂಬುದನ್ನು ಊಹಿಸಲಿಕ್ಕೂ ಸಾಧ್ಯವಿಲ್ಲ. ಇದರ ಬಗ್ಗೆ “ಡೌನ್ ಟು ಅರ್ತ್” ಟಿವಿಯಲ್ಲಿರುವ ಸಾಕ್ಷ್ಯಚಲನಚಿತ್ರವನ್ನು (ಡಾಕ್ಯುಮೆಂಟರಿ) ಯಾರೂ ನೋಡಿ, ಹೆಚ್ಚಿನ ಮಾಹಿತಿ ಪಡೆಯಬಹುದು. (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‌ವಿರಾನ್‌ಮೆಂಟ್ ಕಳೆದ 30 ವರುಷಗಳಿಂದ ಪ್ರಕಟಿಸುತ್ತಿರುವ ಪಾಕ್ಷಿಕ ಪತ್ರಿಕೆ “ಡೌನ್ ಟು ಅರ್ತ್”. ವಿಳಾಸ: 41, ತುಗ್ಲಕಾಬಾದ್ ಇನ್‌ಸ್ಟಿಟ್ಯೂಷನಲ್ ಏರಿಯಾ, ನವದೆಹಲಿ 110062. ವೆಬ್-ಸೈಟ್: www.cseindia.org)  

ಮನುಷ್ಯರು ಉಸಿರಾಡುವ ಗಾಳಿಯಲ್ಲಿ ತುಂಬಿವೆ ಮೈಕ್ರೋಪ್ಲಾಸ್ಟಿಕ್ ಕಣಗಳು  
ಇದೇ 25 ಜೂನ್ 2022ರಂದು “ನ್ಯೂಸ್ 18” ಪ್ರಕಟಿಸಿದ ವರದಿ ಬೆಚ್ಚಿಬೀಳಿಸುತ್ತದೆ. ಅದರ ಅನುಸಾರ, ವಾರಣಾಸಿಯ 1.1 ಲಕ್ಷ ಜನರು ಮೈಕ್ರೋಪ್ಲಾಸ್ಟಿಕ್ ಕಣಗಳು ತುಂಬಿದ ಗಾಳಿಯನ್ನೇ ಉಸಿರಾಡುತ್ತಿದ್ದಾರೆ! ಇದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ಬಹಿರಂಗವಾದ ಸತ್ಯಸಂಗತಿ. ಸಂಶೋಧಕರಾದ ದೀಪೀಕಾ ಪಾಂಡೆ ಮತ್ತು ಪ್ರೊ. ತೀರ್ಥಾಂಕರ್ ಬ್ಯಾನರ್ಜಿ 2019ರ ಎಪ್ರಿಲ್ - ಜೂನ್ ಅವಧಿಯಲ್ಲಿ ಅಧ್ಯಯನಕ್ಕಾಗಿ ಸ್ಯಾಂಪಲುಗಳನ್ನು ಸಂಗ್ರಹಿಸಿದ್ದರು. ಅವರು ಸಂಗ್ರಹಿಸಿದ ಪ್ರತಿಯೊಂದು ಗಾಳಿಯ ತೇಲುಕಣಗಳ ಮತ್ತು ಬೀದಿ ಧೂಳಿನ ಸ್ಯಾಂಪಲಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿದ್ದವು. 2020ರಲ್ಲಿ ನಾಗ್ಪುರದಲ್ಲಿ ನಡೆಸಿದ ಅಧ್ಯಯನದಲ್ಲಿ ಪಡೆದದ್ದೂ ಇಂತಹದೇ ಫಲಿತಾಂಶ. ಒಂದು ಮಿಲಿಮೀಟರಿಗಿಂತ ಸೂಕ್ಷ್ಮಕಣಗಳು ಉಸಿರಾಡುವಾಗ ಸಲೀಸಾಗಿ ಮನುಷ್ಯರ ಶ್ವಾಸಕೋಶದೊಳಗೆ ನುಗ್ಗಿ ಹಾನಿ ಮಾಡಬಲ್ಲವು ಎಂದು ವಿವರಿಸುತ್ತಾರೆ ಪ್ರೊ. ಬ್ಯಾನರ್ಜಿ. ಜಗತ್ತಿನಲ್ಲಿ ಹಲವು ನಗರಗಳಲ್ಲಿ ಜರಗಿಸಿದ ಇಂತಹ ಅಧ್ಯಯನಗಳು ಮೈಕ್ರೋಪ್ಲಾಸ್ಟಿಕ್ ಕಣಗಳು ಮನುಷ್ಯರ ಉಸಿರಾಟ ವ್ಯವಸ್ಥೆಯ ಎಲ್ಲ ರಕ್ಷಣಾ ವ್ಯೂಹಗಳನ್ನೂ ದಾಟಿ ಶ್ವಾಸಕೋಶಗಳ ಆಳಕ್ಕೆ ಹೋಗಿ ತಲಪಬಲ್ಲವು ಎಂಬುದನ್ನು ಖಚಿತ ಪಡಿಸಿವೆ. ಇನ್ನೊಂದು ಅಪಾಯವೇನೆಂದರೆ, ಈ ಮೈಕ್ರೋಪ್ಲಾಸ್ಟಿಕ್ ಕಣಗಳು ರೋಗಾಣುಗಳನ್ನೂ ಶ್ವಾಸಕೋಶಗಳಿಗೆ ಹೊತ್ತೊಯ್ದು ಸೋಂಕಿಗೆ ಕಾರಣವಾಗಬಲ್ಲವು.  

ಪ್ಲಾಸ್ಟಿಕ್ ಕಸದಿಂದಾಗಿ ಪ್ರಾಣಿಪಕ್ಷಿಗಳ ಮಾರಣ ಹೋಮ
ಪ್ಲಾಸ್ಟಿಕಿನಿಂದಾಗಿ ಹಲವು ದನಗಳು ಸಾವಿಗೆ ಬಲಿಯಾದ ಬಗ್ಗೆ ನಾವು ವರದಿಗಳನ್ನು ಓದಿದ್ದೇವೆ. ಗುಜರಾತಿನಲ್ಲಿ ದನಗಳನ್ನು ಸಾಕುವ ಜನಾಂಗ ಮಾಲ್ದಾರಿ. ಇವರು ದನಗಳನ್ನು ಅಲೆಮಾರಿಗಳಾಗಿ ಬಿಟ್ಟು ಸಾಕುವುದು. ಅಂತಹ ದನವೊಂದು ಆಹಾರ ಹಾಗೂ ನೀರು ಸೇವಿಸದೆ ಸಂಕಟ ಪಡುತ್ತಿತ್ತು. ಮಾಲೀಕ ಅದನ್ನು ಪಶು ಚಿಕಿತ್ಸಾಲಯಕ್ಕೆ ಒಯ್ದಾಗ, ಡಾ. ಜಡೇಜಾ ಅದರ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿ ಪರೀಕ್ಷಿಸಿದರು. ಅದರ ಹೊಟ್ಟೆಯಲ್ಲಿತ್ತು 4,000 ಪ್ಲಾಸ್ಟಿಕ್ ಲಕೋಟೆಗಳು (45 ಕಿಗ್ರಾ).

ಇನ್ನೊಂದು ಪ್ರಕರಣ ಉತ್ತರ ಕನ್ನಡದ ಶಿರಸಿಯ ವಿದ್ಯಾನಗರದಿಂದ ವರದಿಯಾಗಿದೆ. ವಿ.ಆರ್. ಹೊಳೆಗದ್ದೆ ಅವರ ಮನೆಯ ಮಿಶ್ರತಳಿಯ ಎಂಟು ತಿಂಗಳ ಗರ್ಭಿಣಿ ಹಸು ಅನೇಕ ದಿನಗಳಿಂದ ಮೇವು ತಿನ್ನದೆ, ನೀರು ಕುಡಿಯದೆ ಒದ್ದಾಡುತ್ತಿತ್ತು. ಪಶುವೈದ್ಯ ಡಾ. ಪಿ.ಎಸ್. ಹೆಗ್ಡೆ ಶಸ್ತ್ರಚಿಕಿತ್ಸೆ ಮಾಡಿ, ಅದರ ಹೊಟ್ಟೆ ಪರಿಶೀಲಿಸಿದಾಗ ಅಲ್ಲಿತ್ತು ೧೫೦ ಪ್ಲಾಸ್ಟಿಕ್ ಲಕೋಟೆಗಳು, ಸಿಮೆಂಟ್ ಚೀಲ ಇತ್ಯಾದಿ! ಹೀಗಾದರೆ ದನ ಬದುಕುವುದೇ ಅನುಮಾನ ಎನ್ನುತ್ತಾರೆ ಡಾ. ಹೆಗ್ದೆ.

ಇವೆಲ್ಲಾ ದನದ ಹೊಟ್ಟೆಯೊಳಗೆ ಹೇಗೆ ಬಂತು? ನಾವು ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಲಕೋಟೆ, ಪ್ಯಾಕೆಟುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದ ಕಾರಣ. ಅವನ್ನು ಆಹಾರವೆಂದು ಅಮಾಯಕ ದನಗಳು ತಿನ್ನುತ್ತವೆ. ಕೊನೆಗೆ ಅವು ಪ್ರಾಣವನ್ನೇ ಬಲಿಕೊಡಬೇಕಾಗುತ್ತದೆ.

ಇದೇ ವಾರ, 27 ಜೂನ್ 2022ರಂದು ಕಾರವಾರದ ಕಡಲ ತೀರದಲ್ಲಿ ಏಳೂವರೆ ಅಡಿ ಉದ್ದದ ಡಾಲ್ಫಿನ್ ಸತ್ತು ಬಿದ್ದಿತ್ತು. ಅದರ ಹೊಟ್ಟೆ ಸೀಳಿದಾಗ ಅಲ್ಲಿತ್ತು ಒಂದು ನೈಲಾನ್ ಬಲೆ! ತಿರುವನಂತಪುರದ ಸರಕಾರಿ ಪ್ರಾಣಿ ಸಂಗ್ರಹಾಲಯದಲ್ಲಿ ಮೂರು ಜಿಂಕೆಗಳು ನರಳಿನರಳಿ ಸತ್ತು ಹೋದವು. ಪಶುವೈದ್ಯರು ಅವುಗಳ ಪೋಸ್ಟ್‌-ಮಾರ್ಟಮ್ ಮಾಡಿದಾಗ ಒಂದು ಜಿಂಕೆಯ ಹೊಟ್ಟೆಯಲ್ಲಿ ಕಂಡು ಬಂದದ್ದು 1.25 ಕಿಗ್ರಾ ಪ್ಲಾಸ್ಟಿಕ್ ಚೀಲಗಳು. ಆ ಪ್ರಾಣಿ ಸಂಗ್ರಹಾಲಯದಲ್ಲಿ ಪ್ಲಾಸ್ಟಿಕ್ ಸಾಮಗ್ರಿಗಳಿಗೆ ನಿಷೇಧವಿದೆ. ಆದರೂ, ಜಿಂಕೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲಗಳು ಹೇಗೆ ಬಂದವು? ಹೇಗೆಂದರೆ, ಅಲ್ಲಿಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಚೀಲದಲ್ಲಿ ತಿನಿಸು ತುಂಬಿ ಜಿಂಕೆಗಳ ಆವರಣದೊಳಗೆ ಎಸೆಯುತ್ತಿದ್ದರು. ಹೀಗೆ ಮನುಷ್ಯರು ಬೇಕಾಬಿಟ್ಟಿಯಾಗಿ ಎಸೆದ ಪ್ಲಾಸ್ಲಿಕ್ ಪ್ಯಾಕೆಟ್, ಕ್ಯಾರಿಬ್ಯಾಗ್, ಚೀಲಗಳಿಗೆ ಬಲಿಯಾದ ನಾಯಿ, ಬೆಕ್ಕು, ಕಪ್ಪೆ, ಆಮೆ, ಸಾಗರಹಕ್ಕಿಗಳ ಲೆಕ್ಕ ಇಟ್ಟವರು ಯಾರು?

ಈಗೊಂದು ಪ್ರಶ್ನೆ:
ಏಕ-ಬಳಕೆಯ ಪ್ಲಾಸ್ಟಿಕನ್ನು ನಿಷೇಧಿಸದಿದ್ದರೆ, ಈಗಾಗಲೇ ಪ್ರಾಣಿಪಕ್ಷಿಗಳಿಗೆ ಆಗಿರುವ ಅಪಾಯ, ಮೈಕ್ರೋಪ್ಲಾಸ್ಟಿಕಿನಿಂದಾಗಿ ನಮಗೆ ಆಗೋದಿಲ್ಲ ಎಂಬ ಗ್ಯಾರಂಟಿ ಇದೆಯೇ?  

ಈಗ ಕೆಲವು ಅಂಕೆಸಂಖ್ಯೆಗಳನ್ನು ಗಮನಿಸೋಣ:
-ಜಗತ್ತಿನಲ್ಲಿ ಪ್ಲಾಸ್ಟಿಕಿನ ವಾರ್ಷಿಕ ಉತ್ಪಾದನೆ 460 ಮಿಲಿಯನ್ ಟನ್.
-ಇದರ ಶೇಕಡಾ 50 ಭಾಗ ಏಕ-ಬಳಕೆಯ ಪ್ಲಾಸ್ಟಿಕ್.
-ಕೆಲವು ದೇಶಗಳಲ್ಲಿ ಶೇಕಡಾ ೯೦ರಷ್ಟು ಪ್ಲಾಸ್ಟಿಕ್ ಕಸದ ವಿಲೇವಾರಿ ಹೀಗೆ: ಮಣ್ಣಿನೊಳಗೆ ಹೂಳುವುದು; ಸಿಕ್ಕಸಿಕ್ಕಲ್ಲಿ ಎಸೆಯುವುದು ಅಥವಾ ಯಂತ್ರಗಳಿಂದ ಚೂರುಚೂರು ಮಾಡುವುದು.
-ಇನ್ನುಳಿದ ದೇಶಗಳಲ್ಲಿ ಪ್ರತಿ ವರುಷ 12 ಮಿಲಿಯ ಟನ್ ಪ್ಲಾಸ್ಟಿಕ್ ಕಸ ಸಮುದ್ರಕ್ಕೆ ಹೋಗಿ ಸೇರುತ್ತದೆ.

ಇವೆಲ್ಲದರ ಜೊತೆಗೆ ಜೀವಭಯ ಹುಟ್ಟಿಸಬೇಕಾದ ಇನ್ನೊಂದು ಸಂಗತಿ: ಜಗತ್ತಿನಲ್ಲಿ ಈಗ ಶೇಕಡಾ 99ರಷ್ಟು ಪ್ಲಾಸ್ಟಿಕನ್ನು ಉತ್ಪಾದಿಸುವುದು ಪೆಟ್ರೋಕೆಮಿಕಲ್‌ಗಳಿಂದ. ಈ ವಿಧಾನದಲ್ಲಿ ಉತ್ಪಾದಿಸುವಾಗ ಪ್ರತಿ ವರುಷ ಎರಡು ಬಿಲಿಯನ್ ಟನ್ ಹಸುರುಮನೆ ಅನಿಲಗಳು ಹೊರಸೂಸಿ, ಮಾನವ ಕುಲಕ್ಕೆ ಮಾರಕವಾಗುತ್ತಿದೆ!

ಭಾರತದಲ್ಲಿ ಪ್ಲಾಸ್ಟಿಕ್ ಉತ್ಪಾದಿಸುತ್ತಿರುವ ಘಟಕಗಳ ಸಂಖ್ಯೆ 88,000. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಲಿಯ ಅನುಸಾರ 2020ರಲ್ಲಿ ಭಾರತದಲ್ಲಿ ಒಟ್ಟಾದ ಪ್ಲಾಸ್ಟಿಕ್ ಕಸ ೪.೧ ಮಿಲಿಯ ಟನ್. ಪ್ಲಾಸ್ಟಿಕ್ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವ ಜಗತ್ತಿನ ಮುಂಚೂಣಿ ದೇಶಗಳಲ್ಲಿ ನಮ್ಮ ದೇಶವೂ ಸೇರಿದೆ.

ಇದನ್ನೆಲ್ಲ ನಂಬಲು ಕಷ್ಟವಾದರೆ, ವಾಮಂಜೂರಿನ ಹತ್ತಿರದ ಪಚ್ಚನಾಡಿ ಡಂಪಿಂಗ್ ಯಾರ್ಡಿಗೆ ಹೋಗಿ ಕಣ್ಣಾರೆ ಕಾಣಬಹುದು: ಕಳೆದ ಹತ್ತು ವರುಷಗಳಿಂದ ಮಂಗಳೂರಿನ ಪ್ಲಾಸ್ಟಿಕ್ ಮತ್ತು ಇತರ ಕಸವನ್ನು ಅಲ್ಲಿ ರಾಶಿ ಹಾಕಿದ್ದರಿಂದಾಗಿ ತಲೆಯೆತ್ತಿರುವ 20 ಅಡಿ ಎತ್ತರದ ಕಸದ ಗುಡ್ದೆಯನ್ನು.

ಈಗ ಹೇಳಿ: ನಮ್ಮೆಲ್ಲರ ಮತ್ತು ಮುಂದಿನ ತಲೆಮಾರುಗಳ ಉಳಿವಿಗಾಗಿ ಮತ್ತು ಆರೋಗ್ಯ ರಕ್ಷಣೆಗಾಗಿ ಏಕ-ಬಳಕೆಯ ಪ್ಲಾಸ್ಟಿಕನ್ನು ನಿಷೇಧಿಸಬೇಕೇ ಬೇಡವೇ? ನಿಷೇಧಿಸಬೇಕು ಎಂದಾದರೆ, ನಿಷೇಧಕ್ಕೆ ಮನಃಪೂರ್ವಕವಾಗಿ ಕೈಜೋಡಿಸೋಣ.