ಇವಳ ಭಾರತ

ಇವಳ ಭಾರತ

ಪುಸ್ತಕದ ಲೇಖಕ/ಕವಿಯ ಹೆಸರು
ರೂಪ ಹಾಸನ
ಪ್ರಕಾಶಕರು
ಪಲ್ಲವ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೪೦೦.೦೦, ಮುದ್ರಣ: ೨೦೨೩

‘ಇವಳ ಭಾರತ' ಎನ್ನುವುದು ರೂಪ ಹಾಸನ ಇವರ ನವ ಕೃತಿ. ಈ ಕೃತಿಯಲ್ಲಿ ಅವರು ಹೆಣ್ಣಿನ ಸ್ವಾಭಿಮಾನ, ಬಯಕೆ, ಧೈರ್ಯತನ ಮೊದಲಾದ ವಿಷಯಗಳ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ. ಅದಕ್ಕೆಂದೇ ಅವರು ‘ಹೆಣ್ಣೊಡಲ ಹಾಡು ಪಾಡಿನ ಗುಚ್ಛ’ ಈ ಕೃತಿ ಎಂದು ಹೇಳಿದ್ದಾರೆ. ರೂಪ ಹಾಸನ ಇವರು ತಮ್ಮ ಪುಸ್ತಕಕ್ಕೆ ಬರೆದ ಮುನ್ನುಡಿಯಿಂದ ಆಯ್ದ ಕೆಲವು ಸಾಲುಗಳು ಇಲ್ಲಿವೆ. ಓದುವಂತವರಾಗಿ...

“ನಮ್ಮ ಕಣ್ಣಿಗೆ ಕಾಣುವುದೆಲ್ಲಾ ಎಂದಿಗೂ ಅರ್ಧ ಸತ್ಯ ಮಾತ್ರ! ಇತ್ತೀಚಿನ ವರ್ಷಗಳಲ್ಲಿ, ಎಷ್ಟೊಂದು ಪ್ರಮಾಣದಲ್ಲಿ ಹೆಣ್ಣುಮಕ್ಕಳು ಶಾಲೆ, ಕಾಲೇಜುಗಳಲ್ಲಿ ಓದುತ್ತಿರುವುದು, ವಿವಿಧ ಕಚೇರಿ ಕೆಲಸಗಳಲ್ಲಿ ತೊಡಗಿರುವುದು ಕಾಣುತ್ತಿದೆ. ಚೆಂದಗೆ ಸಿಂಗರಿಸಿಕೊಂಡು, ಬಣ್ಣ ಬಣ್ಣದ ಬಟ್ಟೆ ತೊಟ್ಟು ಸ್ಕೂಟರ್, ಕಾರುಗಳನ್ನು ಚಲಾಯಿಸುತ್ತಾ ಭರನೆ ಓಡಾಡುತ್ತಿರುವುದನ್ನೂ ನೋಡುತ್ತಿದ್ದೇವೆ. ಆದರೆ ಹೆಣ್ಣು ಸಂಕುಲಕ್ಕೆ ಇಲ್ಲಿಯವರೆಗೆ ತಲುಪುವ ಹಾದಿಯೇನೂ ಹೂವಿನ ಹಾಸಾಗಿರಲಿಲ್ಲ. ಕಲ್ಲುಮುಳ್ಳುಗಳನ್ನು ತುಳಿಯುತ್ತಲೇ ಇಲ್ಲಿಯವರೆಗೆ ತಲುಪಿದ್ದಾರೆ. ಅದನ್ನು ಕಂಡು ಎದೆಯಲ್ಲಿ ನಂಜಿಲ್ಲದವರಿಗೆ ಹೆಮ್ಮೆ ಎನಿಸಿದರೂ, ಬದಲಾವಣೆ ಬಯಸದ ಸ್ಥಾಪಿತ ಮನಸ್ಥಿತಿಯವರು ಈಗಲೂ ಒಳ/ಹೊರಗೆ ಉರಿದುಕೊಳ್ಳುತ್ತಿದ್ದಾರೆ! “ಮಹಿಳೆ ಎಲ್ಲಿ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತವೆ” ಎಂದು ಸುಳ್ಳುಗಳನುದುರಿ ಸುತ್ತಾ, 'ಇಂದು ಮಹಿಳೆ ಪುರುಷನಿಗೆ ಸಮಾನಳಾಗಿದ್ದಾಳೆ. ಅವನಿಗಿಂಥ ಯಾವುದರಲ್ಲೂ ಕಡಿಮೆ ಇಲ್ಲ' ಎಂದು ಅವೇ ಅವೇ ನಾಲೈದು ಸಾಧಿತ, ಧೀರೋದ್ಧಾತ ಮಹಿಳೆಯರ ಹೆಸರು ಉದ್ಧರಿಸಿ, ಹೆಮ್ಮೆ ಪಟ್ಟುಕೊಳ್ಳುವುದೂ ಮುಂದುವರೆದಿದೆ! ಆದರೆ ಮೇಲ್ಪದರದ ಈ ಬಣ್ಣದ ಪರದೆಗಳನ್ನು, ಪದರ ಪದರವಾಗಿ ಬಿಚ್ಚುತ್ತಾ ಹೋದರೆ ಕಣ್ಕಟ್ಟಿನ ಒಳಗಿರುವ ವಾಸ್ತವದ ಬೇರೆಯದೇ “ಇವಳ ಭಾರತ' ಕಾಣಲಾರಂಭಿಸುತ್ತದೆ!

ಇಂದು ಅನೇಕ ಎಳೆಯ ಕಂದಮ್ಮಗಳೂ ಪುರುಷ ವಿಕೃತಿಗೆ ಬಲಾತ್ಕಾರಕ್ಕೆ ಸಿಲುಕಿ ನಲುಗುತ್ತಿವೆ. ಅತ್ಯಾಚಾರದ ಪ್ರಮಾಣ ಏರುತ್ತಾ ಬಂದು, ಈಗ ಪ್ರತಿ ೧೫ ನಿಮಿಷಕ್ಕೊಬ್ಬ ಹೆಣ್ಣುಮಗಳ ಅತ್ಯಾಚಾರವಾಗುತ್ತಿರುವುದನ್ನು ಕೇಳುತ್ತಾ, ಮನಸು ವಿಹ್ವಲಗೊಳ್ಳುತ್ತಿದೆ. ಕಳೆದೊಂದು ದಶಕದಲ್ಲಿ ೧೨೦೦% ರಷ್ಟು ಅತ್ಯಾಚಾರಗಳು ಹೆಚ್ಚಳವಾಗಿರುವುದು ರಾಷ್ಟ್ರೀಯ ದಾಖಲೆಯಲ್ಲಿ ಸೇರಿ ಹೋಗಿದೆ! ಇದರಲ್ಲಿ ವ್ಯಾಪಕವಾಗುತ್ತಿರುವ ಸಾಮೂಹಿಕ ಅತ್ಯಾಚಾರಗಳೂ ಸೇರಿ, ಮನುಷ್ಯತ್ವದ ಮೇಲಿನ ನಂಬಿಕೆಯೇ ಕಳೆದು ಹೋಗಿ ದಿಗ್ಭ್ರಮೆ ಹುಟ್ಟಿಸುತ್ತಿವೆ. ದಾಖಲಾಗದವುಗಳ ಸಂಖ್ಯೆ ಅದಿನ್ನೇಷ್ಟಿದೆಯೋ, ಇಷ್ಟೇ ಅಲ್ಲ- ಗರ್ಭದಲ್ಲೇ ಹೆಣ್ಣನ್ನು ಹೊಸಕಿ ಬಿಸಾಡಲಾಗುತ್ತಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಹೆಣ್ಣುಮಕ್ಕಳ ಕಣ್ಮರೆ, ಕಳ್ಳಸಾಗಣೆ, ಮಾರಾಟ, ಆಸಿಡ್ ದಾಳಿ, ಮರ್ಯಾದಾ ಹೀನ ಹತ್ಯೆ, ಲೈಂಗಿಕ ಜೀತ, ಬಂಡವಾಳಶಾಹಿ ಕಪಿಮುಷ್ಟಿಗೆ ಸಿಕ್ಕ ವೇಶ್ಯಾವಾಟಿಕೆ ಮತ್ತು ಅದರ ಅಸಂಖ್ಯ ರೂಪಗಳು, ಕಡಿವಾಣವಿಲ್ಲದ ಬಾಲ್ಯವಿವಾಹ, ಅನವಶ್ಯಕ ಗರ್ಭಕೋಶಗಳ ಹನನ.... ಒಂದೇ ಎರಡೇ? ಗುಜರಾತ್‌ನ ಸ್ವಾತಂತ್ರೋತ್ಸವದಂದು - ಬಿಲಿಸ್ ಬಾನುವಿನ ಭೀಕರ ಅತ್ಯಾಚಾರ, ಅವಳ ಮಗುವಿನ ಮತ್ತು ಕುಟುಂಬದವರ ಕೊಲೆ ನಡೆಸಿದ II ಅತ್ಯಾಚಾರಿ ಕೊಲೆಗಡುಕರೂ ಈ ಸನ್ನಡತೆಯ ಕಾರಣಕ್ಕೆ ಬಿಡುಗಡೆಯೂ ಹೊಂದಿ, ವೀರೋಚಿತ, ಅದ್ಧೂರಿ ಸ್ವಾಗತೋತ್ಸವಕ್ಕೂ ಒಳಗಾಗಿದ್ದಾರೆ! ನ್ಯಾಯ ಎಲ್ಲಿದೆ? ಈ ಪರಿಯಲ್ಲಿ ಹೆಣ್ಣು ಜೀವದ ಮೇಲಿನ ಕ್ರೌರ್ಯಗಳು ಅವಿರತ ಇಲ್ಲಿ ನಡೆಯುತ್ತಿವೆ. ಇವನ್ನೆಲ್ಲಾ ಕಾಣದವರು ನೆಮ್ಮದಿಯಾಗಿದ್ದಾರೆ! ಕಾಣ ಬಲ್ಲವರು ಪ್ರತಿ ಕ್ಷಣ ಉಸಿರುಗಟ್ಟಿ ಒದ್ದಾಡುತ್ತಿದ್ದಾರೆ. `ಹೀಗೆ ನಮ್ಮಿ ದೇಶದಲ್ಲಿ ಹೆಣ್ಣು ಜೀವವನ್ನು ಹಿಂಡುತ್ತಿರುವ ಹಿಂಸೆಯ ಬಗೆಗಳು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿಬಿಟ್ಟಿವೆ. ಹೆಣ್ಣು ಸಂಕುಲವನ್ನು ಭೀತಿಗೊಳಿಸುವ, ದಮನಗೊಳಿಸುವ, ನಿರ್ನಾಮಗೊಳಿಸುವ ಕರಾಳ ಹಾದಿಯಲ್ಲಿ ಭಾರತ ದಾಪುಗಾಲಿಡುತ್ತಿರುವಂತೆ ಗೋಚರಿಸುತ್ತಿದೆ! ಇದು ಇನ್ನೊಂದು ಕರಾಳ ಮುಖ ಇದು ಹೆಣ್ಣು ಸಂಕುಲದೊಂದಿಗೇ ಕನಿಷ್ಠ ಹೃದಯವಂತಿಕೆಯುಳ್ಳವರಾರೂ ಎಂದಿಗೂ ಬಯಸದ 'ನಮ್ಮ ಭಾರತ'ದ ಕುರೂಪ!

ಭಾರತ ಸ್ವಾತಂತ್ರ್ಯಕ್ಕೀಗ ೭೫ ವರ್ಷ! ಎಲ್ಲೆಡೆ ಅಮೃತ ಮಹೋತ್ಸವದ ಅದ್ಧೂರಿ, ಆಡಂಬರಗಳು! ಆದರೆ ಈ ಹಂತದಲ್ಲಿ ಭಾರತದ ಅಂದಾಜು ಅರ್ಧದಷ್ಟಿರುವ ಹೆಣ್ಣಿನ ಪರಿಸ್ಥಿತಿ ಇನ್ನೂ ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹಲವು ಏರಿಳಿತಗಳನ್ನು ಕಂಡು, ಈಗ ಯಾವ ಹಂತ ತಲುಪಿದೆ ಎಂಬುದನ್ನಳೆಯಲು, ಬಹುಶಃ ಇದು ಸೂಕ್ತ ಕಾಲಘಟ್ಟ, ಅವಳ ಸ್ವಾತಂತ್ರ್ಯ, ಸಮಾನತೆ, ಸ್ವಾಯತ್ತೆ, ಅಸ್ಮಿತೆ, ಸುರಕ್ಷತೆ, ನೆಮ್ಮದಿ ಗಳಿಸಬೇಕೆಂಬ ತೀವ್ರ ಹಂಬಲದಂತೆ ಸಾಧಿಸಿದ್ದೆಷ್ಟು, ಇನ್ನೂ ತಲುಪಬೇಕಿರುವ ಹಾದಿ ಎಷ್ಟು ದೂರ, ಎಷ್ಟು ದುರ್ಗಮ? ಪಿತೃಪ್ರಾಧಾನ್ಯ ಕುಟುಂಬ, ಪುರುಷ ಕೇಂದ್ರಿತ, ಸಮಾಜ, ಪುರುಷಾಳ್ವಿಕೆಯಲ್ಲಿ ಅನುಭವಿಸಬೇಕಾಗಿ ಬಂದಿರುವ ಅಸಮಾನತೆಯ ತಳಮಳ, ತಾರತಮ್ಯದ ಕಳವಳದೊಂದಿಗೆ ಈಗ ದೌರ್ಜನ್ಯದ ಸಂಕಟ, ಜಾತಿ/ಮತಗಳ ಹುನ್ನಾರ, ವ್ಯಾಪಾರೀ ಜಗತ್ತಿನ ಕ್ರೌರ್ಯ, ಭ್ರಷ್ಟತೆಯ ಗಾಳ, ರಾಜಕೀಯದ ಷಡ್ಯಂತ್ರ... ಎಲ್ಲವೂ ಸೇರಿಬಿಟ್ಟಿವೆ! ಹೀಗಿರುವಾಗ ಇವೆಲ್ಲಕ್ಕೆ ಅರಿವಿದ್ದೋ ಇಲ್ಲದೆಯೋ ಬಲಿಪಶುವಾಗಬೇಕಿರುವ ಸ್ಥಿತಿಯನ್ನು ಹೆಣ್ಣಿನ ಸೂಕ್ಷ್ಮಕಣ್ಣಿನಿಂದ ಕಾಣುವಾಗ, ಆ ಸ್ಥಿತಿಯನ್ನು ಧಾರಣಗೊಂಡು ಅನುಭವಿಸುವಾಗ ಹೇಗೆ ಗೋಚರಿಸುತ್ತದೆ? ಒದ್ದಾಡಿಸುತ್ತದೆ. ತಳಮಳಗೊಳಿಸುತ್ತದೆ!

ಹೆಣ್ಣಿನ ಘನತೆ ಮತ್ತು ಅಸ್ಮಿತೆಯನ್ನು ಚೂರಾಗಿಸಲು ಸುತ್ತಲೂ ಕತ್ತಿ ಹಿರಿದು ನಿಂತಿರುವ ಈ ಎಲ್ಲ ದುಷ್ಟ ಶಕ್ತಿಗಳನ್ನೂ ಎದುರಿಸುವ ಬಗೆಗಳನ್ನು ಅನಾದಿಯಿಂದ ಹೆಜ್ಜೆ ಹೆಜ್ಜೆಗೂ ಹುಡುಕುತ್ತಲೇ ಬಂದಿದ್ದೇವೆ. ಆದರೆ ಈಗದನ್ನು ಮತ್ತಷ್ಟು ತೀವ್ರವೂ, ಸೂಕ್ಷ್ಮವೂ, ಹರಿತವೂ ಆಗಿಸಲೇಬೇಕಿದೆ. ಸಮತ್ವ ಮತ್ತು ಸಮತೋಲನದ ಘನತೆಯ ಕನಸಿನ ಸಾಕಾರಕ್ಕಾಗಿ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡುಕೊಳ್ಳಲೇಬೇಕಿದೆ. ಇಲ್ಲದಿದ್ದರೆ ಉಳಿಗಾಲವಿಲ್ಲ! ಹೀಗಾಗಿ ಪ್ರತಿ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಘಟನೆಯನ್ನೂ ಬಿಡಿ ಘಟನೆಯಾಗಿ ನೋಡುತ್ತಲೇ, ಅದಕ್ಕೆ ಜೊತೆಯಾಗುತ್ತ ಅದನ್ನು ಕಾಲ ಮತ್ತು ಇತಿಹಾಸದ ಪ್ರಕ್ರಿಯೆಯೊಂದಿಗೆ ಇಡಿಯಾಗಿ, ಸಮಗ್ರವಾಗಿ ಅರ್ಥೈಸಿಕೊಂಡರಷ್ಟೇ ಅದರ ಹಿಂದೆ ಸೂಕ್ಷ್ಮ ಕುಣಿಕೆಯಾಗಿ ಹರಡಿರುವ ಪುರುಷ ಪ್ರಾಧಾನ್ಯ, ಕೋಮು, ಜಾತಿ, ಸಮಾಜ, ರಾಜಕಾರಣ, ಬಂಡವಾಳಶಾಹಿಯ…. ಕರಾಳ ಕೈಗಳು ಗೋಚರಿಸಲು ಸಾಧ್ಯವೆನಿಸುತ್ತದೆ. ಜೊತೆಗೆ ಅದರಿಂದ ಬಿಡುಗಡೆಯ ದಾರಿ ಹುಡುಕಲೂ ಅನುಕೂಲವಾಗುತ್ತದೆ. ಕೊನೆಗೂ ಈ ಎಲ್ಲಾ ಅಗೋಚರ ಗಾಳಗಳು, ದಾಳಗಳು ತಂದೊಡ್ಡುವ ಸಂಕಟ, ಸೃಷ್ಟಿಸುತ್ತಿರುವ ದಾರುಣತೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವಾಗಿ ನಮ್ಮ ಕಣ್ಣ ಮುಂದಿನ ಗುರಿಯಾಗಿ ಕಾಣುವುದು- ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿ, ಪ್ರಜಾಪ್ರಭುತ್ವದ ಸಾಕಾರಕ್ಕೆ ದಿಕ್ಕಾಗಿರುವ ಸಕಲ ಜೀವಪರವಾದ ನಮ್ಮ ಸಂವಿಧಾನ! ಅದೊಂದು ಭರವಸೆ. ಸಮಾಧಾನ, ಎಷ್ಟೇ ಕಷ್ಟವಾದರೂ ಅದೇ ದಾರಿ...! ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಹಾದಿಯ ನಡೆ ಕಠಿಣ. ಆದರೆ ಸಂವಿಧಾನದ ಗುರಿ ಮುಟ್ಟುವ ಹಾದಿ ಕಠೋರ! ಕಷ್ಟವಾದರೂ ಹೊರಗಿನವರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಒದ್ದೋಡಿಸಬಹುದಿತ್ತು. ಅದಕ್ಕೆ ಎಲ್ಲರೂ ಒಗ್ಗೂಡುವ ಸಾಧ್ಯತೆ ಇತ್ತು. ಏಕೆಂದರೆ ಅವರು ನಮ್ಮವರಲ್ಲ! ಶತ್ರುಗಳು! ಆದರೆ ಒಳಗಿನ ನಮ್ಮವರೆನಿಸಿಕೊಂಡವರೊಡನೆ?-ಈ ನಿತ್ಯದ ಹಲ ಬಗೆಯ ಆಂತರಿಕ ಹೋರಾಟ- ಅತ್ಯಂತ ಯಾತನಾದಾಯಕ, ಸೂಕ್ಷ್ಮ ಮತ್ತು ಕ್ಲಿಷ್ಟಕರ. ಹಾಗೆಂದೇ ಈ ಗುರಿ ಸೇರಲು ಹೊಸ ಬಗೆಯ, ರಚನಾತ್ಮಕ, ಕ್ರಿಯಾಶೀಲ ನಡೆಗಳನ್ನು, ತಂತ್ರಗಳನ್ನು ನಾವು ಕಲಿಯುತ್ತಾ ಸಾಗಬೇಕಿದೆಯಷ್ಟೇ. ಆದರೆ ಹೆಣ್ಣು ಸಂಕುಲಕ್ಕೆ ನಿಸರ್ಗದತ್ತವಾಗಿ ದಕ್ಕಿದ ಪ್ರೀತಿ, ಕಾರುಣ್ಯ, ಅಂತಃಕರಣವನ್ನು ಒಂದಿಷ್ಟೂ ಕಳೆದುಕೊಳ್ಳದಂತೆ, ಈ ರೂಕ್ಷ ಪಯಣದಲ್ಲಿ ಧೃತಿಗೆಡದೇ ಹೆಜ್ಜೆಯಿಡಬೇಕಿದೆ! ಈ ಎಚ್ಚರ ಅನುಕ್ಷಣ ನಮ್ಮನ್ನು ಕಾಯಬೇಕಿದೆ.”