ಇವ.. ಲೆಬನಾನಿನವ

ಇವ.. ಲೆಬನಾನಿನವ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಬಾರ್ಬರಾ ಯಂಗ್, ಕನ್ನಡಕ್ಕೆ: ಎನ್ ಸಂಧ್ಯಾರಾಣಿ
ಪ್ರಕಾಶಕರು
ನುಡಿ ಪುಸ್ತಕ, ತ್ಯಾಗರಾಜನಗರ, ಬೆಂಗಳೂರು - ೫೬೦೦೨೮
ಪುಸ್ತಕದ ಬೆಲೆ
ರೂ. ೨೦೦.೦೦ ಮುದ್ರಣ: ೨೦೨೨

ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಬರೆದ ಹಲವಾರು ಪುಸ್ತಕಗಳನ್ನು ನೀವು ಓದಿರಬಹುದು. ಆದರೆ ಖಲೀಲ್ ಗಿಬ್ರಾನ್ ಅವರ ಗೆಳತಿ ಬಾರ್ಬರಾ ಯಂಗ್ ಅವರ ಕಂಗಳಲ್ಲಿ ಕಂಡು ಬಂದ ಗಿಬ್ರಾನ್ ಬಗ್ಗೆ ಓದಿರುವಿರಾ? ಇಲ್ಲವೆಂದಾದರೆ 'ಇವ ಲೆಬನಾನಿನವ' ಮೂಲಕ ಕನ್ನಡ ಭಾಷೆಗೆ ಅನುವಾದಗೊಂಡ ಈ ಪುಸ್ತಕ ಓದಲೇ ಬೇಕು. ಅನುವಾದಕರು ಎನ್ ಸಂಧ್ಯಾರಾಣಿ. ಕವಿ ಹಾಗೂ ಅನುವಾದಕರಾದ ಚಿದಂಬರ ನರೇಂದ್ರ ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯ ಹೀಗಿದೆ…

"ಕನ್ನಡಕ್ಕೂ ಲೆಬನಾನ್ ನ ಮಹಾಕವಿ ಖಲೀಲ್ ಗಿಬ್ರಾನ್ ನಿಗೂ ಅವಿನಾಭಾವ ಸಂಬಂಧ. ವರಕವಿ ಬೇಂದ್ರೆ ಅಂತೂ ಗಿಬ್ರಾನ್ ನನ್ನು ತಮ್ಮ ಗುರು ಚತುರ್ಮುಖರಲ್ಲಿ ಒಬ್ಬ ಎಂದು ಗುರುತಿಸುತ್ತಾರೆ. ತಮ್ಮ ಹಲವಾರು ಕವಿತೆಗಳಿಗೆ ಅವನಿಂದ ಸ್ಪೂರ್ತಿಯನ್ನು ಪಡೆಯುತ್ತಾರೆ. ತಾನು ಅದನ್ನು ಬರೆಯುವಾಗ ಅದು ತನ್ನನ್ನು ಬರೆಯಿತು ಎಂದು ಖಲೀಲ್ ಗಿಬ್ರಾನ್ ನೇ ಬೆರಗಿನಿಂದ ಹೇಳುವ ಅವನ ಆಚಾರ್ಯ ಕೃತಿ The Prophet ಕನ್ನಡಕ್ಕೆ ಮತ್ತೆ ಮತ್ತೆ ಅನುವಾದವಾಗುತ್ತಲೇ ಇದೆ. ಗಿಬ್ರಾನ್ ನ ಅನುವಾದಗಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗುತ್ತಿರುವುದು ಸಂಧ್ಯಾರಾಣಿಯವರು ಅನುವಾದಿಸಿದ ಬಾರ್ಬರಾ ಯಂಗ್ ಅವರ 'ಇವ ಲೆಬನಾನಿನವ' (This Man from Lebanon) ಎನ್ನುವ ಅಪರೂಪದ ಅನುವಾದ.

ಬಾರ್ಬರಾ ಯಂಗ್ ಅಮೇರಿಕೆಯ ಕವಿ, ಕಲಾ ವಿಮರ್ಶಕಿ. ಗಿಬ್ರಾನ್ ನ ಕೊನೆಯ ವರ್ಷಗಳಲ್ಲಿ ಅವನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಅವನ ತಲ್ಲಣಗಳನ್ನ, ಧ್ಯಾನವನ್ನ, ಅವನ ಸುತ್ತ ಹರಡಿಕೊಂಡಿರುತ್ತಿದ್ದ ಅಲೌಕಿಕತೆಯನ್ನು ಕಣ್ಣಾರೆ ಕಂಡವರು. ಅನುಭವಿಸಿದವರು. ಆತ್ಮೀಯ ಗೆಳತಿಯಾಗಿ ಅವನ ಮಾತುಗಳನ್ನ, ಮೌನವನ್ನ ಗ್ರಹಿಸಿದವರು. ಈ ಪುಟ್ಟ ಹೊತ್ತಿಗೆಯಲ್ಲಿ ಬಾರ್ಬರಾ, ಗಿಬ್ರಾನ್ ನ ವ್ಯಕ್ತಿತ್ವವನ್ನು, ಅವನ ಚಿತ್ರಕಲೆ, ಕಾವ್ಯ, ಆಧ್ಯಾತ್ಮ, ಮನುಷ್ಯ ಸಹಜ ಬಯಕೆಗಳು, ಅಸಾಮಾನ್ಯ ದೈವಿಕತೆಯನ್ನು ಹೋಲುವ ಪ್ರತಿಭೆ ಎಲ್ಲದರ ಮುಖಾಂತರ ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತಾರೆ.

ಪ್ರೇಮಿಯಾಗಿ, ಬಂಡಾಯಗಾರನಾಗಿ, ತತ್ವಜ್ಞಾನಿಯಂತೆ, ದೃಷ್ಟಾರನಂತೆ, ಕಾವ್ಯ ರಚಿಸುವ ಮತ್ತು ಪದ್ಯವನ್ನು ಗದ್ಯದಂತೆ, ಗದ್ಯವನ್ನು ಪದ್ಯದಂತೆ ಹೃದಯಂಗಮಯವಾಗಿ ಬರೆಯಬಲ್ಲ ಗಿಬ್ರಾನ್ ನನ್ನು ಅನುವಾದಿಸುವವರು, ಕೇವಲ ಚತುರ ಅನುವಾದಕರಾಗಿದ್ದರಷ್ಟೇ ಸಾಲದು, ಸೂಕ್ಷ್ಮ ಮನಸ್ಸಿನ ಕವಿಯೂ ಆಗಿರಬೇಕಾಗುತ್ತದೆ. ಸಂಧ್ಯಾರಾಣಿಯವರ ಈ ಅನುವಾದ ಸಫಲವಾಗಿರುವುದೇ ಅವರು ಈ ಎರಡೂ ಮಾನದಂಡಗಳನ್ನು ಯಶಸ್ವಿಯಾಗಿ ಸಾಧಿಸಿಕೊಂಡಿರುವುದಕ್ಕೆ. ಇಲ್ಲಿನ ಗದ್ಯ, ಪದ್ಯ ಎರಡೂ ಬರ್ಬರಾ ಮತ್ತು ಗಿಬ್ರಾನ್ ರ ಮೂಲಕ್ಕೆ ಅತ್ಯಂತ ಹತ್ತಿರ. ಗಿಬ್ರಾನ್ ನಂಥ ಅದ್ಭುತ ಪ್ರತಿಭೆಯನ್ನ ಮತ್ತೊಂದು ಕೃತಿಯ ಮೂಲಕ ಕನ್ನಡಕ್ಕೆ ಪರಿಚಯಿಸಿದ ಕಾರಣಕ್ಕೆ ಸಂಧ್ಯಾರಾಣಿಯವರು ಕನ್ನಡ ಓದುಗರ ಅಭಿನಂದನೆಗೆ ಪಾತ್ರರು."