ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !

ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !

ಮಾವಿನ ಸೀಸನ್ ಶುರುವಾಗಿದೆ. ಉತ್ತರ ಕನ್ನಡ ಕರಾವಳಿಯ ಅಂಕೋಲಾ ಹೆದ್ದಾರಿಯಲ್ಲಿ ಹಣ್ಣಿನ ಬುಟ್ಟಿ ಹಿಡಿದು ಹಾಲಕ್ಕಿ ಮಹಿಳೆಯರು ಇಶಾಡು ಮಾವಿನ ಹಣ್ಣು ಮಾರಾಟಕ್ಕೆ ನಿಲ್ಲುತ್ತಾರೆ. ಅಂಕೋಲಾ ಇಶಾಡು ಸ್ಥಳೀಯ ಹಳೆಯ ತಳಿ. ಬಳಸಿ ಬಲ್ಲವರಲ್ಲಿ ರುಚಿ ಪ್ರೀತಿಯಿದೆ. ತೋಟ, ಗದ್ದೆ, ಮನೆಯ ಹಿತ್ತಲಿನ ಹಳೆಯ ಮರಗಳು ಈಗಲೂ ಬಡವರಿಗೆ ಕೈಕಾಸು ನೀಡುತ್ತಿವೆ. ಅಪರೂಪಕ್ಕೆ ದೂರದ ಹುಬ್ಬಳ್ಳಿ , ಬೆಳಗಾವಿ ಮಾರುಕಟ್ಟೆಯಲ್ಲೂ ಕಾಣಿಸಿಕೊಂಡು ಅಲ್ಲಿನ ಅನಿವಾಸಿ ಕರಾವಳಿಯವರಿಗೆ ರುಚಿ ನೆನಪು ಹಂಚುತ್ತಿವೆ.
 
 
ಅಂಕೋಲಾ ಇಶಾಡು ಮಾವಿನ ಕುರಿತು ಎಷ್ಟೇ ವರ್ಣಿಸಿದರೂ ಪ್ರಯೋಜನವಿಲ್ಲ , ಹಣ್ಣು ರುಚಿ ನೋಡಿದರಷ್ಟೇ ಸವಿ ಸುಲಭಕ್ಕೆ ಅರ್ಥವಾಗುತ್ತದೆ . ರುಚಿ ತೋರಿಸುವುದು, ಹಣ್ಣು ಮಾರುವುದು ಉದ್ದೇಶವಲ್ಲ. ಕರಾವಳಿ ಮಾವಿನ ಈ ತಳಿಯ ಖ್ಯಾತಿಯ ಚರಿತ್ರೆ ಕೆದಕ ಬೇಕು. ಇಂದಿಗೆ ನೂರು ವರ್ಷಗಳ ಹಿಂದೆ ವೀಸಾ, ಪಾಸ್ ಪೋರ್ಟ್ ಸಿದ್ಧವಾಗಿ ವಿಶ್ವಪರ್ಯಟನೆಯ ರೋಗ ಬಂದಿತ್ತು! ಈ ಮಾವಿಗೆ ಅದೃಷ್ಟ ಖುಲಾಯಿಸಿತು. ಅಂಕೋಲಾ ಇಶಾಡು ಮೌಲ್ಯವರ್ಧನೆಗೆ ಕ್ರಿ.ಶ. 1908ರಲ್ಲಿ ಕೆನರೀಸ್ ಇಂಡಸ್ಟ್ರಿ ಆರಂಭವಾಯಿತು, ಜಗತ್ತಿಗೆ ಉತ್ಪನ್ನ ಹಂಚುವ ಜಿದ್ದಿಗೆ ನಿಂತಿತು. ಅಮೆರಿಕನ್ನರ ಊಟದ ತಟ್ಟೆಯಲ್ಲಿ, ಸಿಲೋನಿಗರ ಜ್ಯೂಸಿನಲ್ಲಿ, ಆಸ್ಟ್ರೇಲಿಯಾದ ಐಸ್ ಕ್ರೀಂನಲ್ಲಿ, ಪ್ರತಿಷ್ಟಿತ ಹೋಟೆಲ್ ಮೆನುಗಳಲ್ಲಿ ಪುಟ್ಟ ಊರಿನ ಹಣ್ಣಿನ ದಿಟ್ಟ ಗೆಲವು!
 
 
ಇವತ್ತು ಹೆದ್ದಾರಿಗಳಲ್ಲಿ ಬಡವರು ಬೆವರಿಳಿಸಿಕೊಂಡು ಕಷ್ಟಪಟ್ಟು ಮಾರಾಟ ಮಾಡುತ್ತಾರೆ. ಹಣ್ಣಾದ ದಿನ ಬಳಸಿದರೆ
ಉತ್ತಮ. ಮಾರನೆಯ ದಿನಕ್ಕೆ ಹಳಸಿ ಹಾಳಾಗುತ್ತದೆ. ಬಾಳಿಕೆ ಗುಣ, ಬಣ್ಣಕ್ಕೆ ಹಣ್ಣಿನ ಮಾರುಕಟ್ಟೆ ಈ ದಿನಗಳಲ್ಲಿ ಅಂಕೋಲಾ ಇಶಾಡು ಇನ್ನುಳಿದ ತಳಿ ಪೈಪೋಟಿಯಲ್ಲಿ ಹಿನ್ನಡೆ ಅನುಭವಿಸಿದೆ. ಈ ಹಿತ್ತಲಿನ ಹಣ್ಣು ಆ ಕಾಲಕ್ಕೆ ಹಡಗು ಏರಿ ಆಗ ಹೊರಟಯದ್ದು ಹೇಗೆ? ಅಂಕೋಲಾದ ಹಿರಿಯ ವಾಮನ ಪೈ ಒಮ್ಮೆ ತಮ್ಮ ಕಡತದಲ್ಲಿದ್ದ
ಅಮೂಲ್ಯ ದಾಖಲೆ ನೀಡಿದ್ದರು. ಅದು ಕೃಷಿ ಮೌಲ್ಯವರ್ಧನೆಯ ಸಾಕ್ಷ್ಯದಂತಿದೆ. ಮುಂಬಯಿಯ ವೀರಚಂದ್ ಪನಚಂದ್ ಕಂಪನಿಗೆ ಅಂಕೋಲಾ ಕೆನರೀಸ್ ಕಂಪನಿ ಮಾವಿನ ಉತ್ಪನ್ನ ಮಾರಾಾಟದ ಹೊಣೆ ಹೊರೆಸಿತ್ತು. ಆಗ ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ನಲ್ಲಿ ಮಾಹಿತಿ ಪತ್ರ ಪ್ರಕಟವಾಯಿತು . ಜ್ಯೂಸ್, ಸಿರಪ್, ಸಲಾಡ್, ಐಸ್ ಕ್ರೀಂ ಸೇರಿದಂತೆ 48 ಅಮೆರಿಕನ್ ರೆಸಿಪಿ ತಯಾರಿಸುವ ವಿವರ ಪ್ರಕಟವಾಯಿತು. ಇಶಾಡು ಮಾವಿನ ಹಣ್ಣಿನ ತಿರುಳನ್ನು ಸಂಸ್ಕರಿಸಿ ಟಿನ್ ಗಳಲ್ಲಿ ಭರ್ತಿ ಮಾಡಿ ಮಾರುಕಟ್ಟೆಯಲ್ಲಿ ಸೆಳೆಯಲು ಆಕರ್ಷಕ ಬಣ್ಣದ ಲೇಬಲ್ ಮುದ್ರಿಸಿತು. ಅದರಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಗೆದ್ದ ಐದು ಮೆಡಲ್ ಗಳ ಚಿತ್ರಗಳಿದ್ದವು ! ಆಗ ಮುಂಬಯಿ ಸರಕಾರವಿದ್ದ ಕಾಲ.
ಅಂಕೋಲಾದಲ್ಲಿ ಓರಿಯಂಟಲ್ ಕೆನರಿಸ್ ಇಂಡಸ್ಟ್ರಿ ಆರಂಭಕ್ಕೆ ಸರಕಾರ ವಿಶೇಷ ಮುತುವರ್ಜಿ ವಹಿಸಿತು.
 
 
ಕಟ್ಟಡ ನಿರ್ಮಾಣಕ್ಕೆ ಕಟ್ಟಿಗೆಯನ್ನು ಉಚಿತವಾಗಿ ನೀಡಿತು. ಸುತ್ತಲಿನ ಹಳ್ಳಿಯಲ್ಲಿ ಬೆಳೆಯುತ್ತಿದ್ದ ಮಾವು ಸಂಗ್ರಹಿಸಿ ಸಂಸ್ಕರಿಸುವ ಕೆಲಸ ಆರಂಭವಾಯಿತು. ಲಂಡನ್, ಚೈನಾ ಮುಂತಾದ ದೇಶಗಳಿಗೆ ಉತ್ಪನ್ನ ರಫ್ತು ಶುರುವಾಯಿತು! “ಅಂಕೋಲಾ ಇಶಾಡು ಹಣ್ನಿನ ತಿರುಳು ಅಪರೂಪದ ರುಚಿ ಹೊಂದಿದೆ!” ಲಂಡನ್ನಿನ ಈಸ್ಟ್ ಇಂಡಿಯಾ ಯುನೈಟೆಡ್ ಸ್ಟೇಟ್ಸ್ ಕ್ಲಬ್, ದಿ ರೆಟೇಜ್ ಹೋಟೆಲ್ , ಮುಂಬಯಿ ಸರಕಾರದ ವುಮೆನ್ಸ್ ವಾರ್ ಅಂಡ್ ರಿಲೀಫ್ ಫಂಡ್ ನ ಗೌರವ ಕಾರ್ಯದರ್ಶಿ ಲೇಡಿ ರೀಡ್ ಮುಂತಾದವರು ಮಾವಿನ ಉತ್ಪನ್ನ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟಕ್ಕೆ ಲಂಡನ್ ದಿ ಹೋಮ್ ವಾರ್ಡ್ ಮೇಲ್, ಸಿವಿಲ್ ಸರ್ವಿಸ್ ಗೆಜೆಟ್, ಸಿಂಗಪುರದ ದಿ ಸ್ಟೇಟ್ಸ್ ಟೈಮ್ಸ್, ಮದ್ರಾಸ್ ಮೈಲ್, ಟೈಮ್ಸ್ ಆಫ್ ಇಂಡಿಯಾ ಬಾಂಬೆ, ಟೈಮ್ಸ್ ಆಫ್ ಸಿಲೋನ್, ದಿ ನಾರ್ಥ್ ಚೈನಾ ಡೈಲಿ ನ್ಯೂಸ್ ಗಳು ಅಂಕೋಲಾ ಮಾವಿನ ಉತ್ಪನ್ನ ವನ್ನು 90 – 100 ವರ್ಷ ಗಳ ಹಿಂದೆ ಮೆಚ್ಚಿ ಲೇಖನ ಪ್ರಕಟಿಸಿದವು! ಅಷ್ಟಕ್ಕೆ ನ್ಯೂಯೋರ್ಕ್ ಫಿಸಿಕಲ್ ಕಲ್ಚರ್ ಮ್ಯಾಗಜೀನ್ ಇದರಲ್ಲಿನ ಪೌಷ್ಠಿಕಾಂಶದ ಬಗೆಗೆ 1931ರ ಜೂನ್ 10 ರಂದು ಅರ್ಹತಾ ಪತ್ರ ನೀಡಿ ಅಲ್ಲಿನ ಗ್ರಾಹಕರಿಗೆ ಬಳಸಲು ಶಿಫಾರಸು ನೀಡಿತು. ಟಿನ್ ತುಂಬಿದ ಈ ಮಾವಿನ ಪಲ್ಪ್ ಕೆಡದಂತೆ ಯಾವುದೇ ಹಾನಿಕಾರಕ ರಾಸಾಯನಿಕ ಬಳಸಿಲ್ಲ, ಈ ಉತ್ಪನ್ನ ಬಳಕೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಾಲು ಪ್ರಕಟಿಸಿತು!
 
 
ಕರಾವಳಿ ಹಣ್ಣು ವಿದೇಶಿ ಮಾರುಕಟ್ಟೆ ಗೆಲ್ಲುವಾಗ ನಡೆಸಿದ ಸಿದ್ದತೆಗಳು, ಪ್ರಚಾರ ತಂತ್ರಗಳು ಅಚ್ಚರಿ ಹುಟ್ಟಿಸುತ್ತವೆ. ಪತ್ರಿಕಾ ದಾಖಲೆ, ಅರ್ಹತಾ ಪತ್ರ, ಪಲ್ಪ್ ಬಳಸಲು ಅಡುಗೆ ವಿಧಾನಗಳ ಪರಿಚಯವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿದೆ. ಮಾವಿನಲ್ಲಿರುವ ಪೋಷಕಾಂಶಗಳು, ಮಧುಮೇಹಿಗಳ ಬಳಕೆಗೆ ಸೂಕ್ತ ಮಾರ್ಗದರ್ಶನವಿದೆ ! ವಿಶ್ವದ ಬೇರೆ ಬೇರೆ ದೇಶದ ಜನರ ರೂಚಿಯನ್ನು ಅರ್ಥಮಾಡಿಕೊಂಡು ಪೂರಕವಾಗಿ ಇದನ್ನು ಪರಿಚಯಿಸಿದ ರೀತಿ ವಿಶೇಷವಾಗಿದೆ. ಪ್ರತಿಷ್ಠಿತ ಸಂಸ್ಥೆ, ವ್ಯಕ್ತಿಗಳಿಗೆ ಇವನ್ನು ನೀಡಿ ಅವರ ಅಭಿಪ್ರಾಯಗಳನ್ನು ಮಾಹಿತಿ ಪತ್ರದಲ್ಲಿ ಅಳವಡಿಸಿದ ಜಾಹಿರಾತು ತಂತ್ರ ಗಮನಾರ್ಹವಾದುದು. ಕಾರ್ಖಾನೆ ಆರಂಭಇಸಿ ಇಪ್ಪತ್ತು ವರ್ಷಗಳಲ್ಲಿ ಜಾಗತಿಕ ಮಟ್ಟಕ್ಕೆ ಬೆಳೆಸಲು ನಡೆಸಿದ ಪ್ರಯತ್ನಗಳು ನಿಜಕ್ಕೂ ಸ್ಪೂರ್ತಿದಾಯಕ. ಟಿನ್‌ಗಳಿಗೆ ಅಂಟಿಸಲು ಮುದ್ರಿಸಿದ ಮಾವಿನ ವರ್ಣ ಚಿತ್ರಗಳು ಬಾಯಲ್ಲಿ ನೀರೂರಿಸುವಂತಿವೆ.
 
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಂದ ಆರಂಭವಾದ ಕಾರ್ಖಾನೆ ಈಗಲೂ ಅಂಕೋಲಾದಲ್ಲಿ ಉಳಿದಿದೆ! ಕ್ರಿ.ಶ. 1970ರಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಹಿಚಕಡ ಗ್ರೂಪ್‌ ಹಿಂದುಳಿದ ವರ್ಗಗಳ ಕೂಲಿ ಕಾರರ ಸಹಕಾರಿ ಸಂಘ ರೂ 95000ಕ್ಕೆ ಇದನ್ನು ಖರೀದಿಸಿ ಕೆನರೀಸ್‌ ಇಂಡಸ್ಡ್ರಿ ಹೆಸರು ಹಾಗೇ ಉಳಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಮಾವಿನ ಮೌಲ್ಯವರ್ಧನೆ ಮುಂದುವರಿಸಿದೆ. ವಾಮನ ಪೈ ನೇತೃತ್ವ ವಹಿಸಿದ್ದಾರೆ. ಅಂಕೋಲಾ ಪೇಟೆಯಂಚಿನಲ್ಲಿ ಕಾರ್ಖಾನೆಯ ಹಳೆಯ ಕಟ್ಟಡ, ಯಂತ್ರೋಪಕರಣಗಳು ಕಾಲಮಾನದ ಕತೆ ಹೇಳುತ್ತಿವೆ. ಕಾರ್ಖಾನೆಯ ಸುತ್ತ ಎಂಭತ್ತು ವರ್ಷದ ಹಿಂದೆ ಬೆಳೆಸಿದ ಇಶಾಡು, ಆಪೋಸು, ಕಲ್ಮಿ ಮುಂತಾದ ಹತ್ತು ಜಾತಿಯ 200ಕ್ಕೂ ಹೆಚ್ಚು ಮಾವಿನ ಮರಗಳಿವೆ. ಅಷ್ಟೇಕೆ ಕಾರ್ಖಾನೆಯ ಸುತ್ತಲಿನ ಪೇಟೆ, ಹಳ್ಳಿ ಪ್ರದೇಶಗಳಲ್ಲಿ ಕಾರ್ಖಾನೆಗೆ ಹಣ್ಣು ಪೂರೈಸಲೆಂದು ಬೆಳೆಸಿದ ಹಳೆಯ ಮಾವಿನ ತೋಟಗಳು ಉಳಿದಿವೆ. ಈಗ ಹೊಸದಾಗಿ ಇಶಾಡು ನೆಡುವ ಆಸಕ್ತಿ ಕಡಿಮೆಯಾಗಿದೆ. ಮಾವು ಕೃಷಿಯೋಗ್ಯ ನೆಲೆಗಳು ನಿವೇಶನಗಳಾಗಿ ಚಿನ್ನದ ಬೆಲೆ ಪಡೆಯುತ್ತಿವೆ. ಒಂದು ಕಾಲಕ್ಕೆ ವಿಶಕ್ಕೆ ಪರಿಚಿತವಾಗಿದ್ದ ಇಶಾಡು ತಳಿ ಉಳಿಕೆಗೆ ಜಾಗೃತಿ ಮೂಡಿಸುವ ಕಾಲ ಬಂದಿದೆ! ಕೃಷಿ ಫಲದ ಮೌಲ್ಯವರ್ಧನೆಯ ಮೂಲಕ ಜಗತ್ತಿಗೆ ಮಾರುಕಟ್ಟೆ ವಿಸ್ತರಿಸಿದ ಊರು ಈಗ ಗಣಿಗದ್ದಲದಲ್ಲಿ ಖ್ಯಾತಿ ಗಳಿಸಿದೆ. ಬಳ್ಳಾರಿಯ ಅದಿರು ಕದ್ದು ವಿದೇಶಕ್ಕೆ ಸಾಗಿಸುವ ಕುಖ್ಯಾತಿ ಬಂದರಿಗೆ ಅಂಟಿದೆ.
 
 
“ಬದುಕಿನ ಭರಾಟೆಯಲ್ಲಿ ಹಲವರು 'ಮಿಸ್' ಮಾಡಿಕೊಂಡ ನೆಲಮೂಲ ವಿಚಾರಗಳ ಬಗೆಗಿನ ಅಂಕಣ. “
ಆಕರ : ಅಡಿಕೆ ಪತ್ರಿಕೆ 2011