ಇಸ್ರೋ ದಾಪುಗಾಲು ; ಆಗಸ ಸ್ವಚ್ಛತೆಯ ಯೋಜನೆಗೆ ಚಾಲನೆ
ಹಲವು ವಿಕ್ರಮಗಳನ್ನು ಸಾಧಿಸಿ ದಾಖಲೆಗಳನ್ನು ಬರೆಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಕ್ಷಿತಿಜದತ್ತ ಕೊಂಡೊಯ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಈಗ ಮನುಕುಲ ಸಂರಕ್ಷಿಸುವ ನಿಟ್ಟಿನಲ್ಲಿ ಮತ್ತೊಂದು ಸಾಹಸಕ್ಕೆ ಅಣಿಯಾಗಿದೆ. ಭೂಸ್ಥಿರ ಕಶೆಯಲ್ಲಿ ೨೫ ಸಾವಿರಕ್ಕೂ ಅಧಿಕ ಉಪಗ್ರಹಗಳ ಪೈಕಿ ಸದ್ಯ ೫೭೧೨ ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಉಳಿದ ಶೇ ೭೭ರಷ್ಟು ನಿಷ್ಕ್ರಿಯವಾಗಿದ್ದು, ಹೊಸ ಉಪಗ್ರಹಗಳ ಉಡಾವಣೆಗೆ ಅಡ್ಡಿಯನ್ನುಂಟುಮಾಡುತ್ತಿದೆ. ಆಗಸದಲ್ಲಿ ಸಂಚರಿಸುವ ಕ್ಷುದ್ರ ಗ್ರಹಗಳು, ಧೂಮಕೇತುಗಳು ಹಾಗೂ ಮಾನವ ನಿರ್ಮಿತ ಉಪಗ್ರಹಗಳ ನಡುವೆ ಡಿಕ್ಕಿ ಸಂಭವಿಸಿ ಭೂಮಿಗೆ ಅಪ್ಪಳಿಸುವ ಮೂಲಕ ಅನಾಹುತಗಳಾಗುವ ಸಾಧ್ಯತೆ ಇರುತ್ತದೆ. ಈ ಹಿಂದೆ ಇಂತಹ ಅನಾಹುತಗಳು ಸಂಭವಿಸಿ ಸಾವು-ನೋವು, ಆಸ್ತಿ ಹಾನಿ ಉಂಟಾಗಿರುವ ಪ್ರಕರಣಗಳು ಅನೇಕ. ನಿಷ್ಕ್ರಿಯ ಉಪಗ್ರಹಗಳ ಪಳೆಯುಳಿಕೆಗಳೂ ಭೂಮಿಗೆ ಅಪ್ಪಳಿಸಿ ಅವಘಡಗಳು ಸಂಭವಿಸಿದ ಉದಾಹರಣೆಗಳೂ ಇವೆ. ಮುಂಬರುವ ದಿನಗಳಲ್ಲಿ ಈ ತೆರನಾದ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಬಾಹ್ಯಾಕಾಶವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಹಾಗೂ ಜಾಗತಿಕವಾದ 'ಸುರಕ್ಷತೆ ಮತ್ತು ಸುಸ್ಥಿರ ಬಾಹ್ಯಾಕಾಶ ಕಾರ್ಯಾಚರಣೆ ಯೋಜನೆ' ಜಾರಿಗೊಳಿಸಲು ಇಸ್ರೋ ಹೆಜ್ಜೆ ಇಟ್ಟಿದೆ.
ತ್ಯಾಜ್ಯ ರೂಪ ತಾಳಿರುವ ನಿಷ್ಕ್ರಿಯ ಉಪಗ್ರಹಗಳನ್ನು ನಿಭಾಯಿಸಲು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಇಸ್ರೋ ಕ್ರಮ ಕೈಗೊಂಡಿದೆ. ಲೇಸರ್ ಮತ್ತು ವಿದ್ಯುತ್ ಕಾಂತೀಯ ತಂತ್ರಜ್ಞಾನದ ಮೂಲಕ ಈ ತ್ಯಾಜ್ಯ ವಿಲೇವಾರಿಗೆ ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ. ಇದಕ್ಕಾಗಿ ಇತರೆ ದೇಶಗಳ ಸಹಕಾರ ಪಡೆಯಲು ಮಾತುಕತೆಗೆ ಇಸ್ರೋ ಮುಂದಾಗಿದೆ. ೧೯೬೯ರ ಆಗಸ್ಟ್ ೧೫ರಂದು ವಿಕ್ರಮ್ ಸಾರಾಭಾಯಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಇಸ್ರೋ ಪ್ರಧಾನ ಕಚೇರಿ ಇರುವುದು ಬೆಂಗಳೂರಿನಲ್ಲಿ ಎಂಬುದು ವಿಶೇಷ.
೧೯೭೫ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆ ಮೂಲಕ ಜಾಗತಿಕ ಮನ್ನಣೆಗೆ ಪಾತ್ರವಾಯಿತು. ಸ್ವದೇಶಿ ನಿರ್ಮಿತ ಪಿಎಸ್ ಎಲ್ ವಿ, ಜಿ ಎಸ್ ಎಲ್ ವಿ ಉಡಾವಣೆ, ಚಂದ್ರಯಾನ, ಮಂಗಳಯಾನ, ಶುಕ್ರಯಾನ ಇವು ಇಸ್ರೋ ಸಾಧನೆಗಳ ಗರಿಗಳು. ರಷ್ಯಾ, ಅಮೇರಿಕಾ, ಚೀನಾ, ಐರೋಪ್ಯ ರಾಷ್ಟ್ರಗಳಿಗೆ ಸರಿಸಾಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಸ್ರೋ ೨೦೧೭ರಲ್ಲಿ ಏಕಕಾಲಕ್ಕೆ ೧೦೪ ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿ ವಿಶ್ವವೇ ಬೆರಗಾಗುವಂತೆ ಸಾಧನೆ ಕೂಡ ಮಾಡಿತ್ತು. ವಿದೇಶಿ ಉಪ್ರಗ್ರಹಗಳನ್ನು ಕೂಡ ಕಕ್ಷೆಗೆ ಉಡಾಯಿಸುವ ಮೂಲಕ ವಾಣಿಜ್ಯಿಕವಾಗಿಯೂ ಸೈ ಎನಿಸಿಕೊಂಡಿದೆ. ಆರೂವರೆ ಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಅಪ್ಪಳಿಸಿ ಭೂಮಿಯ ಮೇಲಿನ ಶೇ.೭೦ ಪ್ರಾಣಿ ಮತ್ತು ಪಕ್ಷಿ ಸಂಕುಲ ನಾಶವಾಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಅಂತರಿಕ್ಷ ತ್ಯಾಜ್ಯ ವಿಲೇವಾರಿ ಮಾಡಿ ಸಂಭಾವ್ಯ ಅನಾಹುತ ತಪ್ಪಿಸುವ ಇಸ್ರೋ ಯೋಜನೆಯು ನಿರೀಕ್ಷಿತ ಯಶಸ್ಸು ಸಾಧಿಸಿದರೆ ಭೂಮಿಯನ್ನು ಕಾಪಾಡುವ, ಮನುಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಮತ್ತೊಂದು ಕೊಡುಗೆ ನೀಡಿದಂತಾಗಲಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೩-೦೭-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ