ಇಸ್ಲಾಮಿಕ್ ಸ್ಟೇಟ್ ಅಮೆರಿಕಾದ ಭವಿಷ್ಯದ ಮಿತ್ರ ?

ಇಸ್ಲಾಮಿಕ್ ಸ್ಟೇಟ್ ಅಮೆರಿಕಾದ ಭವಿಷ್ಯದ ಮಿತ್ರ ?

ಜಾಗತಿಕ ಇತಿಹಾಸದ ಪುಟಗಳನ್ನು ತಿರುವಿದರೆ ಅನೇಕ ರಕ್ತ ಸಿಕ್ತ ಅಧ್ಯಾಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇಪ್ಪತ್ತೊಂದನೆ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಶಾಂತಿ ಪರಿಪಾಲನೆಯ ಗುತ್ತಿಗೆ ಪಡೆದುಕೊಂಡಂತೆ ವರ್ತಿಸುವ ಹಲವಾರು ರಾಷ್ಟ್ರಗಳು ತಮ್ಮ ರಕ್ತ ರಂಜಿತ ಹೀನ ಕೃತ್ಯಗಳನ್ನು ಮರೆತೇ ಬಿಟ್ಟಿವೆ. ಇವತ್ತು ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರರು ನಡೆಸುತ್ತಿರುವ ಹೇಯ ಕೃತ್ಯಗಳನ್ನು ಈ ರಾಷ್ಟ್ರಗಳೂ ಕೂಡ ಅಧಿಕಾರ ಪೂರ್ವದಲ್ಲಿ ಮತ್ತು ಅಧಿಕಾರ ಬಲಪಡಿಸಿಕೊಳ್ಳುವ ಹಾದಿಯಲ್ಲಿ ನಡೆಸಿವೆ. ಅದರೆ ಇತಿಹಾಸ ಅದೆಷ್ಟೇ ಕ್ರೂರವಾಗಿದ್ದರೂ, ಅದನ್ನು ಮರೆತು ಬಿಡುವ ಶಕ್ತಿ ನಮಗಿದೆ! (Public memory is very short)
ಇದು ಯಾವುದೇ ರೀತಿಯಲ್ಲೂ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿರುವ ದೌರ್ಜನ್ಯವನ್ನು ಅಥವಾ ಕ್ರೌರ್ಯವನ್ನೋ ಸಮರ್ಥಿಸಿಕೊಳ್ಳುವ ಪ್ರಯತ್ನವಲ್ಲ. ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿರುವ ಹಿಂಸಾಚಾರ ಸಮರ್ಥನೀಯವೂ ಅಲ್ಲ. ಆದರೆ ಅಮೆರಿಕಾದ ವಿದೇಶಾಂಗ ನೀತಿ ಮತ್ತು ಅಮೆರಿಕಾ ತನ್ನ ಮಿತ್ರರನ್ನು ಆಯ್ದುಕೊಳ್ಳುವಾಗ ತೋರುವ ಕಾಳಜಿ(?)ಯ ವಿಶ್ವಾಸಾರ್ಹತೆ ಮತ್ತು ಇದಕ್ಕೆ ಪೂರಕವಾಗಿ ಬೆಳೆಯುತ್ತಿರುವ ಇಸ್ಲಾಮಿಕ್ ಸ್ಟೇಟ್ ನ ಪ್ರಸ್ತುತ ಚಟುವಟಿಕೆಗಳು ಚರ್ಚಾರ್ಹ.   ಪ್ರಸ್ತುತ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ನಡೆದು ಬಂದ ಹಾದಿಯನ್ನು ಗಮನಿಸಿದರೆ, ಈಗಿನ ಇಸ್ಲಾಮಿಕ್ ಸ್ಟೇಟ್ ಕೂಡ ಅದೇ ಹಾದಿಯಲ್ಲಿದೆ ಎಂಬುವುದು ಸ್ಪಷ್ಟ. ಇಸ್ಲಾಮಿಕ್ ಸ್ಟೇಟ್ ನ ಎಲ್ಲಾ ಹಿಂಸಾಚಾರ ಅನಾಚಾರಗಳನ್ನು ಮರೆತು ಮುಂದೊಂದು ದಿನ ಐ ಎಸ್ ತನ್ನ ಅಸ್ತಿತ್ವವನ್ನು ಸಧೃಡಗೊಳಿಸಿದರೆ, ದೊಡ್ಡಣ್ಣ ಅಮೆರಿಕಾದ ಮಿತ್ರನಾಗುವ ಕಾಲ ದೂರವಿಲ್ಲ ಎನಿಸುತ್ತದೆ.
ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಇಂದು ನಡೆಸುತ್ತಿರುವ ಅಮಾನವೀಯ ಶಿರಚ್ಚೇಧನಗಳು, ಅದು ಭವಿಷ್ಯದಲ್ಲಿ ಅಮೆರಿಕಾದ ಮಿತ್ರನಾಗುವಲ್ಲಿ ಯಾವುದೇ ಅಡ್ಡಿಯಾಗಲಾರದು. ಏಕೆಂದರೆ ಇಂಥ ಕೃತ್ಯಗಳನ್ನು ಎಸಗಿರುವ ಫ್ರಾನ್ಸ್, ಜರ್ಮನಿ, ಬ್ರಿಟನ್, ಟರ್ಕಿ ಮುಂತಾದ ಜಗತ್ತಿನ ಕೆಲವು ರಾಷ್ಟ್ರಗಳು ಇಂದು ಅಮೆರಿಕಾದ ನೆಚ್ಚಿನ ಮಿತ್ರ ರಾಷ್ಟ್ರಗಳು! ಹೌದು, ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಉನ್ನತ ಸಂಸ್ಥೆಗಳಲ್ಲಿ ಹಿರಿಯ ಸಲಹಾಗಾರರಾಗಿ ಕಾರ್ಯ ನಿರ್ವಹಿಸಿದ ರೋಸಾ ಬ್ರೂಕ್ಸ್ ಎಂಬ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಚಿಂತಕರು ತಮ್ಮ ಇತ್ತೀಚಿನ ಲೇಖನದಲ್ಲಿ ಇಂಥ ಒಂದು ಸಾಧ್ಯತೆಯ ಬಗೆಗೆ ಸುಳಿವು ನೀಡಿದ್ದಾರೆ.
ಫ಼್ರೆಂಚ್ ಕ್ರಾಂತಿಯನ್ನೇ  ಗಮನಿಸಿ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಹೆಸರಿನಲ್ಲಿ ಸುಮಾರು 40,000 ಜನರನ್ನು ಸಾರ್ವಜನಿಕವಾಗಿ ಶಿರಚ್ಚೇಧನಗೊಳಿಸಲಾಯಿತು. ಹಲವರನ್ನು ಗುಂಡಿಟ್ಟು ಕೊಲ್ಲಲಾಯಿತು, ಜೀವಂತ ಸುಡಲಾಯಿತು ತುಂಡುಗಳಾಗಿ ಕತ್ತರಿಸಲಾಯಿತು ಈ ರೀತಿ ಸತ್ತವರ ಸಂಖ್ಯೆ ಸುಮಾರು 1,50,000 . ಕ್ರಾಂತಿಯ ದಾರಿಯಲ್ಲಿ ಕರುಣೆಗೆ ಅವಕಾಶವಿಲ್ಲ ಎಂದು ಸಾರಲಾಯಿತು. ಹೌದು, ಇವತ್ತು ಅದೇ ಫ್ರಾನ್ಸ್ ಒಂದು ಪ್ರತಿಷ್ಟಿತ ರಾಷ್ಟ್ರ ಮತ್ತು ಅಮೆರಿಕಾದ ಮಿತ್ರ !
1915ರಿಂದ 1918 ರ ಕರಾಳ ಅವಧಿಯಲ್ಲಿ ಟರ್ಕಿ ಆಡಳಿತ ಲಕ್ಷಾಂತರ ಅರ್ಮೇನಿಯನ್ನರ ಮರಣ ಹೋಮ ನಡೆಸಿತು. ಟರ್ಕಿ ಆಡಳಿತದ ಕೈಗಳ ರಕ್ತ ಒಣಗಿದ ಕೂಡಲೇ ಅಮೆರಿಕಾ ಟರ್ಕಿ ಕೈ ಕುಲುಕಲು ಹಿಂದೆ ಮುಂದೆ ನೋಡಲಿಲ್ಲ. ಪ್ರಸ್ತುತ ಟರ್ಕಿ ಅಮೆರಿಕಾ ನೇತೃತ್ವದ ನ್ಯಾಟೋ ಸದಸ್ಯ ರಾಷ್ಟ್ರ. ಜರ್ಮನಿಯಲ್ಲಿ ನಡೆದ ಯಹೂದಿಗಳ ಹತ್ಯಾಕಾಂಡ, ಜರ್ಮನಿಯ ರಕ್ತ ರಂಜಿತ ಇತಿಹಾಸ ಅಮೆರಿಕದೊಂದಿಗಿನ ಅದರ ಗೆಳೆತನಕ್ಕೆಂದೂ  ಅಡ್ಡಿಯಾಗಿಲ್ಲ. ಗುಲಾಮಗಿರಿಯನ್ನೇ ಬಂಡವಾಳ ಮಾಡಿಕೊಂಡು, ಶೋಷಣೆಯಿಂದಲೇ ಸಾಮ್ರಾಜ್ಯ ಕಟ್ಟಿದ ಬ್ರಿಟಿಷರು ಇವತ್ತು ಅಮೆರಿಕಾದ ಆಪ್ತಮಿತ್ರರಲ್ಲವೇ ?
ಇದು ಇಂದು ನಿನ್ನೆಯ ಕಥೆಯಲ್ಲ. ಆಧುನಿಕ ರಾಷ್ಟ್ರ ರಾಜಕೀಯದ ಆರಂಭದಲ್ಲೇ ಉದ್ಭವಿಸಿದ ಪ್ರಕ್ರಿಯೆ. ಯುರೋಪಿನಲ್ಲಿ ನಡೆದ 'ಮೂವತ್ತು ವರ್ಷಗಳ ಯುದ್ಧ' ಆಧುನಿಕ ರಾಷ್ಟ್ರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಎಂದು ಹೆಚ್ಚಿನ ವಿದ್ವಾಂಸರು ಅಭಿಪ್ರಾಯಪಡುತ್ತಾರೆ . ಇದೇ ಯುದ್ಧ ಸುಮಾರು ಮೂರನೇ ಒಂದು ಭಾಗ ಯುರೋಪಿಯನ್ ಜನತೆಯ ಕಗ್ಗೊಲೆಗೂ ಕಾರಣೀಭೂತವಾಯಿತು. ಇಂಥ ಹಿಂಸಾತ್ಮಕ ಮೂಲದಿಂದ ಜನ್ಮ ತಳೆದ ಆಧುನಿಕ ರಾಷ್ಟ್ರ ರಾಜಕೀಯ ಮುಂದಿನ ದಶಕಗಳಲ್ಲಿ ಲಕ್ಷಾಂತರ ಜೀವಗಳನ್ನು ಬಲಿ ಪಡೆದುಕೊಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ.
ಜರ್ಮನಿಯ ಏಕೀಕರಣದ ಶಿಲ್ಪಿ ಒಟ್ಟೋವನ್ ಬಿಸ್ಮಾರ್ಕ್ ಹೇಳಿರುವಂತೆ "ಮಾನವ ಜನಾಂಗದ ಪ್ರಮುಖ ಪ್ರಶ್ನೆಗಳು ನಿರ್ಧರಿತವಾಗುವುದು ಭಾಷಣಗಳು ಅಥವಾ ಬಹುಮತದ ನಿರ್ಣಯಗಳಿಂದಲ್ಲ, ಬದಲಾಗಿ ಕಬ್ಬಿಣ ಮತ್ತು ರಕ್ತದ ನೀತಿಯಿಂದ." (Iron and Blood Policy)
ಶಿರಚ್ಚೇಧನ, ಚಿತ್ರಹಿಂಸೆ, ನಿರಾಯುಧ ಅಮಾಯಕ ಜನರ ಹತ್ಯಾಕಾಂಡ ಇವ್ಯಾವುದೂ ಜಾಗತಿಕ ಇತಿಹಾಸದಲ್ಲಿ ಹೊಸತೇನಲ್ಲ. ಆಧುನಿಕ ರಾಷ್ಟ್ರ ನಿರ್ಮಾಣದ ಕಣ ಕಣದಲ್ಲೂ ಹಿಂಸೆ ಮೂಲಭೂತ ಅಂಶವಾಗಿರುವುದರಿಂದ, ಪ್ರತಿಯೊಂದು ರಾಷ್ಟ್ರವು ಒಂದಲ್ಲ ಒಂದು ನೆಪದಲ್ಲಿ ಹಿಂಸೆಯಲ್ಲಿ ಮುಳುಗಿರುವುದು ಸಹಜವೇ. ಇದೇ ಕಾರಣಕ್ಕಾಗಿ ಗಾಂಧಿ ಆಧುನಿಕ ರಾಷ್ಟ್ರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡು, ಗ್ರಾಮ ಸ್ವರಾಜ್ಯ ಕನಸು ಕಂಡಿದ್ದು.
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರಕಾರ “ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಹಿಂಸೆಯ ಹೊರತಾಗಿ,  ಬೇರಿನ್ಯಾವುದೇ ನಿರ್ದಿಷ್ಟ ಗುರಿ ಅಥವಾ ಸಿದ್ಧಾಂತವಾಗಲೀ ಇಲ್ಲ. ಹೀಗಾಗಿ ಐ ಎಸ್ ಏನನ್ನೂ ಸಾಧಿಸಲಾಗುವುದಿಲ್ಲ” ಆದರೆ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥರು  ನಾವಂದುಕೊಂಡಷ್ಟು ಮೂರ್ಖರೇನಲ್ಲ! ಹಿಂಸೆಯನ್ನೇ ಬಳಸಿಕೊಂಡು ಅಂತರಾಷ್ಟ್ರೀಯ ರಾಜಕಾರಣದಲ್ಲಿ ಛಾಪು ಮೂಡಿಸುವ ಹಾಗೂ ತಮ್ಮದೇ ಅಸ್ಮಿತೆಯನ್ನು ಸೃಷ್ಟಿಸಿಕೊಳ್ಳುವ ಬಹುದೊಡ್ಡ ಪ್ರಯತ್ನವೊಂದು ಜಾರಿಯಲ್ಲಿದೆ. ತೀರಾ ಇತ್ತೀಚೆಗೆ ಪ್ರಕಟವಾದ ಜೆಸ್ಸಿಕಾ ಸ್ಟರ್ನ್ ಮತ್ತು ಜೆ ಎಂ ಬರ್ಗರ್ ರವರ 'ಐಎಸ್ಐಎಸ್ : ಸ್ಟೇಟ್ ಆಫ್ ಟೆರರ್'(ISIS: The State of Terror) ಎಂಬ ಪುಸ್ತಕದಲ್ಲಿ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥ ಅಬು ಬಕರ್ ಅಲ್-ಬಗ್ದಾದಿಯ ಬಗ್ಗೆ ಕುತೂಹಲಕಾರಿ ವಿವರಗಳಿವೆ. ಈ ಪುಸ್ತಕದಲ್ಲಿ ಬಗ್ದಾದಿ ಅಬು ಬಕರ್ ನಾಜಿ ಬರೆದ ಕೃತಿ 'The Management of Savagery'ಯಿಂದ ಬಹಳವಾಗಿ ಪ್ರಭಾವಿತನಾಗಿದ್ದ ಎಂದು ದಾಖಲಿಸಿದ್ದಾರೆ. ನಾಜಿ ತನ್ನ ಪುಸ್ತಕದಲ್ಲಿ ಹಿಂಸೆಯ ನಿರ್ವಹಣೆಯ ಬಗೆಗೆ, ಉಗ್ರ ಹಿಂಸೆ ಮತ್ತು ಕ್ರೌರ್ಯದ ಮೂಲಕ, ಬೆಂಬಲಿಗರು ಮತ್ತು ವಿರೋಧಿಗಳಿಂದ ಗೌರವ ಗಳಿಸುವ ವಿವಿಧ ದಾರಿಗಳನ್ನು ಬಿಚ್ಚಿಟ್ಟಿದ್ದಾನೆ.
ಇಸ್ಲಾಮಿಕ್ ಸ್ಟೇಟ್ ನ ಮುಖ್ಯಸ್ಥರಿಗೆ ಚರಿತ್ರೆಯ ಅರಿವಿದೆ. ಇಸ್ಲಾಮಿಕ್ ಸ್ಟೇಟ್ ಇಂದು ನಡೆಸುತ್ತಿರುವ ಹಿಂಸಾಚಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾದರೂ, ಮುಂಬರುವ ದಿನಗಳಲ್ಲಿ, ಇಸ್ಲಾಮಿಕ್ ಸ್ಟೇಟ್ ಮಧ್ಯ ಏಷ್ಯಾದ ತೈಲ ಬಾವಿಗಳು, ಬಂದರುಗಳು ಮತ್ತಿತರ ಸಂಪತ್ತಿನ ಮೂಲಗಳ ಮೇಲೆ ಹಿಡಿತ ಸಾಧಿಸಿದಲ್ಲಿ, ಅಮೆರಿಕಾ ಮತ್ತು ಇತರ ದೇಶಗಳ ಕ್ಷಮೆ ಅಸಾಧ್ಯವೇನಿಲ್ಲ. ಅಮೆರಿಕಾದ ಮಿತ್ರರ ಚರಿತ್ರೆಯನ್ನು ಗಮನಿಸಿದರೆ, ಇದೇ ಇಸ್ಲಾಮಿಕ್ ಸ್ಟೇಟ್ ತನ್ನ ಅಸ್ತಿತ್ವವನ್ನು ಭಧ್ರ ಪಡಿಸಿಕೊಂಡು ಮುಂದೊಂದು ದಿನ ಹಿಂಸೆಯ ಪ್ರಮಾಣವನ್ನು ಕಡಿಮೆಗೊಳಿಸಿಕೊಂಡಲ್ಲಿ ಅಮೆರಿಕಾದ ಸ್ನೇಹ, ವಿಶ್ವಾಸ ವೃದ್ಧಿಸಿಕೊಂಡು, ಅಮೆರಿಕಾದ ಮಿತ್ರ ರಾಷ್ಟ್ರವಾಗುವುದೂ ದೂರದ ಮಾತೇನಲ್ಲ!
ಇಸ್ಲಾಮಿಕ್ ಸ್ಟೇಟ್ ಅನ್ನು ಸಿದ್ಧಾಂತವಿಲ್ಲದ, ಯೋಜನೆಗಳಿಲ್ಲದ ಒಂದು ದಂಗೆಕೋರ ಗುಂಪು ಎಂದು ತಿಳಿದುಕೊಳ್ಳುವುದು ನಮ್ಮ ತಪ್ಪು. ಈ ಸಂಘಟನೆಗೆ ಸ್ಪಷ್ಟವಾದ ಯೋಜನೆಗಳಿವೆ ಮತ್ತು ತನ್ನ ಭವಿಷ್ಯತ್ತಿನ ಸ್ಥಾನಮಾನದ ಬಗೆಗೂ ಸ್ಪಷ್ಟ ಚಿತ್ರಣವಿದೆ. ಹಾಗಿಲ್ಲದೆ ಹೋಗಿದ್ದರೆ ಪ್ರಪಂಚದಾದ್ಯಂತ ತನ್ನ ಪ್ರಭಾವ ವಿಸ್ತರಿಸಿ ಜಗತ್ತಿನ ಮೂಲೆ ಮೂಲೆಗಳಿಂದ ಯುವಕರನ್ನು ಸಂಘಟನೆಯತ್ತ ಸೆಳೆಯಲು ಸಾಧ್ಯವಾಗುತ್ತಿರಲಿಲ್ಲ.
ಅಮೆರಿಕಾ ಮತ್ತು ಮಿತ್ರ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟನ್ನು ಮಣಿಸಲು ಇನ್ನಿಲ್ಲದ ಪ್ರಯತ್ನ ಮಾಡಿವೆ. ಇಷ್ಟೊಂದು ಪ್ರಯತ್ನಗಳ ಮಧ್ಯೆಯೂ ಅಮೆರಿಕಾದಂಥ ಬಲಾಢ್ಯ ರಾಷ್ಟ್ರಕ್ಕೆ ಸವಾಲಾಗಿ ನಿಲ್ಲುವಷ್ಟು ಸಾಮರ್ಥ್ಯ ಈ ಸಂಘಟನೆಗಿದೆಯೇ ? ಖಂಡಿತಾ ಇಲ್ಲ. ಅಮೆರಿಕಾದ ವೈಫಲ್ಯಕ್ಕೆ ಹಲವಾರು ಕಾರಣಗಳಿರಬಹುದು, ಇಲ್ಲಿ ಅದರ ಚರ್ಚೆ ಅನವಶ್ಯಕ . ಇಸ್ಲಾಮಿಕ್ ಸ್ಟೇಟ್ ನಂಥ  ಉಗ್ರ ದಂಗೆಕೋರ ಗುಂಪುಗಳಿಗೆ ಯುದ್ಧದಲ್ಲಿ ಅನುಕೂಲಕರ ಅಂಶವೊಂದಿದೆ. ಅದೇನೆಂದರೆ ಈ ದಂಗೆಕೋರರು ಯುದ್ಧದಲ್ಲಿ ಗೆಲ್ಲಲೇ ಬೇಕೆಂದಿಲ್ಲ, ಸೋತು ಶರಣಾಗದಿದ್ದರೆ ಸಾಕು! ಯುದ್ಧ ಅನಿರ್ಧಿಷ್ಟಾವಧಿಯವರೆಗೆ ಮುಂದುವರಿದಾಗ ಎದುರಾಳಿ ಅದೆಷ್ಟೇ ಸಮರ್ಥನಾಗಿದ್ದರೂ ಬಳಲಿ ಯುದ್ಧ ವಿರಾಮ ಘೋಷಿಸುತ್ತಾರೆ ಅಥವಾ ಸಂಧಾನಕ್ಕೆ ಒಪ್ಪಿಕೊಳ್ಳುತ್ತಾರೆ. ಈ ಮಾತುಗಳು ಚೈನಾದ ಮಾವೋನಿಂದ ಅಮೆರಿಕಾದ ಕಿಸ್ಸಿಂಜರ್ ವರೆಗೆ ಒಪ್ಪಿಕೊಂಡ ಸತ್ಯ. ಈಗ ಇಸ್ಲಾಮಿಕ್ ಸ್ಟೇಟ್ ಅದೇ ತಂತ್ರ ಅನುಸರಿಸುತ್ತಿದೆ!
ಮೊದಲೇ ಹೇಳಿದಂತೆ ಚರಿತ್ರೆಯುದ್ದಕ್ಕೂ ಅಮೆರಿಕಾ ಹತ್ಯಾಕಾಂಡಗಳನ್ನು, ಹಿಂಸಾಚಾರವನ್ನೂ ನೆನಪಿಟ್ಟುಕೊಂಡ ದಾಖಲೆಗಳಿಲ್ಲ. ಇಂದಿನ ಉಗ್ರರೇ ನಾಳಿನ ಅಮೆರಿಕಾದ ಮಿತ್ರರು ಎಂದು ಹೇಳಲೇನು ಅಡ್ಡಿಯಿಲ್ಲ!

Comments

Submitted by kavinagaraj Tue, 02/16/2016 - 16:25

ಅಮೆರಿಕಾದ ಮುಖ್ಯ ಅದಾಯದ ಮೂಲವೇ ಶಸ್ತ್ರಾಸ್ತ್ರದ ವ್ಯಾಪಾರ! ಯುದ್ಧಗಳೇ ಬಂಡವಾಳ! ಅಭಿವೃದ್ದಿ ಹೊದಲು ಹವಣಿಸುವ ರಾಷ್ಟ್ರಗಳನ್ನು ಕುಯುಕ್ತಿಯಿಂದ ತಡೆಯುವುದು ಅದರ ನೀತಿ. ಪಾಕಿಸ್ತಾನಕ್ಕೆ ಹೊರನೋಟಕ್ಕೆ ಎಚ್ಚರಿಕೆ ಕೊಡುವುದು, ಒಳಗೊಳಗೇ ಹಣ ಮತ್ತು ಶಸ್ತ್ರಾಸ್ತ್ರ ಒದಗಿಸುವುದು ಗುಟ್ಟಾಗಿಲ್ಲ. ಇದಕ್ಕಿರುವ ಮದ್ದೆಂದರೆ ನಮ್ಮ ವೋಟಿನ ಓಲೈಕೆ ರಾಜಕಾರಣಿಗಳನ್ನು ತಿರಸ್ಕರಿಸಿ ಬಲಿಷ್ಠ ಭಾರತ ಕಟ್ಟುವುದು! ಇದು ಅಷ್ಟು ಸುಲಭವಲ್ಲ.