ಇಸ್ಲಾಮಿನ ಸ್ವರ್ಣ ಯುಗ: ಆಶಯಗಳು ಮತ್ತು ಕನಸುಗಳು!

ಇಸ್ಲಾಮಿನ ಸ್ವರ್ಣ ಯುಗ: ಆಶಯಗಳು ಮತ್ತು ಕನಸುಗಳು!

"Had Muslims remained in Spain, then man would have landed on the Moon at least 200 years earlier"- Thomas Eugen Goldstein, ವಿಜ್ಞಾನ ಇತಿಹಾಸಕಾರರು

ಪ್ರವಾದಿ ಮುಹಮ್ಮದ್ (ಸ) ಅವರಿಗೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ ಖ್ಯಾತಿಯಲ್ಲದೇ, ಅತ್ಯಂತ ಪರಿಣಾಮಕಾರಿ ನಾಯಕತ್ವಕ್ಕೆ ಮತ್ತು ಮುಂದಾಲೋಚನೆಗೆ ಹೆಸರುವಾಸಿಯಾಗಿದ್ದರು. 632ರ ಹೊತ್ತಿಗೆ ಅವರು ಅರೇಬಿಯಾ ಪರ್ಯಾಯ ದ್ವೀಪವನ್ನು ತಮ್ಮ ಆಳ್ವಿಕೆಯಲ್ಲಿ ಒಂದುಗೂಡಿಸಿದರು. 'ಖಲೀಫಾ ಎ ರಾಶಿದೂನ್' ಎಂದು ಖ್ಯಾತಿಗೊಳಿಸಿದ ಪ್ರವಾದಿ (ಸ) ಅವರ ಅನುಯಾಯಿಗಳು ಇಸ್ಲಾಮ್ ಧರ್ಮವನ್ನು ಪ್ರಚಾರಗೊಳಿಸುವ ಮತ್ತು ಹರಡಿಸುವ ಯೋಜನೆಯನ್ನು ಪ್ರವಾದಿ (ಸ) ಅವರ ಅಗಲಿಕೆಯ ನಂತರವೂ ಸಫಲವಾಗಿ ಮುಂದುವರಿಸಿದರು.

750ರ ಸುತ್ತ, ಉಮ್ಮಯಾದ್ ಖಲೀಫರ ಸದಾಡಳಿತ ಆಳ್ವಿಕೆಯಡಿ ಇಸ್ಲಾಮಿನ ಸಾಮ್ರಾಜ್ಯವು ಸ್ಪೇನ್, ಮೊರೊಕೊದಿಂದ ಭರತಖಂಡ ಮತ್ತು ಮಧ್ಯ ಏಷ್ಯಾಕ್ಕೆ ವಿಸ್ತರಿಸಿತು. ಈ ಅವಧಿಯ ಖಲೀಫರು ಇಸ್ಲಾಮಿನ ಆದರ್ಶಗಳದಡಿ ನಿರ್ಮಿಸಿರುವ ಸಮಾಜದಲ್ಲಿ ಜ್ಞಾನ ಮತ್ತು ತಂತ್ರಜ್ಞಾನವು ಪ್ರಗತಿ ಹೊಂದಬೇಕು; ವಿಜ್ಞಾನ, ತತ್ವಶಾಸ್ತ್ರ ಮತ್ತು ಸಂಸ್ಕೃತಿಯು ಇಸ್ಲಾಮಿನ ಭಾಗವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಚಿಂತನೆಯನ್ನು ಹೊಂದಿದ್ದರು. ಇಂತಹ ದೂರದೃಷ್ಟಿ ಹೊಂದಿದ್ದ ಖಲೀಫರಲ್ಲಿ ಖಲೀಫಾ ಹಾರುನ್ ರಶೀದ್ ಅವರ ಹೆಸರು ಮುಂಚೂಣಿಯಲ್ಲಿತ್ತು.

5ನೇ ಶತಮಾನವು ಐರೋಪ್ಯ ಖಂಡವನ್ನು ವಿದ್ಯಾಹೀನತೆಯ ಅಂಧಕಾರದಲ್ಲಿ ತಳ್ಳಿತ್ತು. 5ನೇ ಶತಮಾನದ ಹೊಸ್ತಿಲಿನಿಂದ 13ನೇ ಶತಮಾನದವರೆಗೆ ಹಿಡಿದ ಈ 'Dark Age' ಎಂಬ ಗ್ರಹಣವು, ಐರೋಪ್ಯ ಖಂಡದ್ಯಾಂತ ಪ್ರಾಜ್ಞಚಿಂತನೆ ಮತ್ತು ಪಾಂಡಿತ್ಯದ ನಿಗ್ರಹಕ್ಕೆ ಸಾಕ್ಷಿಯಾಯಿತು; ನೇರಕಾರಣವಾದ ಚರ್ಚಿನ ಪುರೋಹಿತಶಾಹಿ ದೃಷ್ಟಿಕೋನವು ವಿಜ್ಞಾನಕ್ಕೆ ತದ್ವಿರುದ್ಧವಾಗಿತ್ತಲ್ಲದೆ, ಬುದ್ಧಿಜೀವಿಗಳಿಗೆ  ಸಂಶೋಧನೆಗಳನ್ನು ಮತ್ತು ಅವಲೋಕಿಸಲು-ವಿಮರ್ಶಿಸಲು ತಡೆಗಟ್ಟಿಸುತಿತ್ತು! 

ಯಹೂದಿಯರು, ಕ್ರೈಸ್ತರು ಇತ್ಯಾದಿಯರು ಮುಸ್ಲಿಮರ ವಿದ್ಯಾ ದಾಹ ಮತ್ತು ಸಂಶೋಧನೆಯ ಉತ್ಸುಕತೆಯನ್ನು ಕಂಡು ಬಗ್ದಾದ್, ದಮಾಸ್ಕಸ್, ಕೈರೋದಂತಹ ನಗರಗಳಲ್ಲಿ ಬಂದು ವಾಸಿಸತೊಡಗಿದರು. ಮುಸ್ಲಿಂ ಸಮಾಜದಲ್ಲಿ ಇದ್ದು, ತಮ್ಮಲ್ಲಿರುವ ಮೌಢ್ಯತೆಗಳನ್ನು ಕಡೆಗಣಿಸಿ, ಮುಸ್ಲಿಮರ ರೋಮಾಂಚಕ ಭಾಗವಹಿಸುವಿಕೆ[ಮುಸ್ಲಿಮರ ಶೋಧನೆ]ಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಕ್ರೈಸ್ತರು ಇಸ್ಲಾಮಿನ ಸ್ವರ್ಣ ಯುಗದಿಂದ ಪ್ರೇರಿತಗೊಂಡು 'Dark Age' ಕಂಡಂತಹ ಯುರೋಪಿನಲ್ಲಿ, ಪ್ರಸ್ತುತ ದಿನಗಳಲ್ಲಿ 'ಮಧ್ಯಯುಗ' ಎಂದು ಕರೆಯಲ್ಪಡುವ ಕಾಲದಲ್ಲಿ ಜಗತ್ತಿನಲ್ಲಿ ಅತ್ಯಂತ ಮುಂದುವರಿದ ನಾಗರಿಕತೆಯನ್ನು ನಿರ್ಮಿಸಲಾರಂಭಿಸಿದರು.

ಇಸ್ಲಾಮಿ ಜಗತ್ತಿನ ವಿದ್ವಾಂಸರು ಪ್ರಾಚೀನ ಗ್ರೀಕ್ ಮತ್ತು ರೋಮನ್ನರ ಜ್ಞಾನಕ್ಕೆ ಆಕರ್ಷಿತಗೊಂಡು, ಅದನ್ನು ಅಭಿವೃದ್ಧಿಪಡಿಸಿ ಬಹಳ ಮುಂದುವರಿಸಿದರು; ಮತ್ತು ಎಲ್ಲಾ ವಿಷಯಗಳ ಕುರಿತು ಹಲವಾರು ಗ್ರೀಕ್ ಮತ್ತು ರೋಮನ್ ಗ್ರಂಥಗಳನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸುವ ಮೂಲಕ ಆಧುನಿಕ ಜಗತ್ತಿನ ತಂತ್ರಜ್ಞಾನದ ದಿಕ್ಕನ್ನೇ ಬದಲಾಯಿಸಿದರು. ಮುಸ್ಲಿಂ ವಿದ್ವಾಂಸರು ಗಣಿತಶಾಸ್ತ್ರದಲ್ಲಿ ಮುಂಚೂಣಿಯಲ್ಲಿದ್ದರು; ಭರತ ಖಂಡದಿಂದ ದಶಮಾಂಶ ವ್ಯವಸ್ಥೆ[Decimal System]ಯನ್ನು ಆಧುನಿಕತೆಗೆ ಒಳಪಡಿಸಿದರು ಮತ್ತು ಪ್ರಸ್ತುತ ದಿನಗಳಲ್ಲಿ ಬಳಸಲಾಗುವ ಬೀಜಗಣಿತ ಮತ್ತು ಇತರ ಗಣಿತದ ವಿಧಾನಗಳನ್ನು ಕಂಡುಹಿಡಿದರು.

ಹಾರುನ್ ರಶೀದ್- ನಾಯಕರೊಬ್ಬರ ಮುಂದಾಲೋಚನೆಗಳು: ಇಸ್ಲಾಮಿನ ಸ್ವರ್ಣ ಯುಗದ ಅವಧಿಯು ಸಾಂಪ್ರದಾಯಿಕವಾಗಿ ಅಬ್ಬಾಸಿದ್ ಖಲೀಫ ಹರುನ್ ಅಲ್-ರಶೀದ್ (786-809) ಅವರ ಆಳ್ವಿಕೆಯಲ್ಲಿ ಬಗ್ದಾದಿನಲ್ಲಿ 'ಬೈತುಲ್ ಹಿಕ್ಮಾಹ್'ದ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡಿತು ಎಂದು ಅಂದಾಜಿಸಲಾಗಿದೆ; ಅಲ್ಲಿ ವಿವಿಧ ಸಾಂಸ್ಕೃತಿಕ ಹಿನ್ನೆಲೆಗಳನ್ನು ಹೊಂದಿರುವ ಜಗತ್ತಿನ ವಿವಿಧ ಭಾಗಗಳ ವಿದ್ವಾಂಸರಿಗೆ ಆದರಿಸಿ, ಜಗತ್ತಿನಾದ್ಯಂತ ಎಲ್ಲಾ ಅಭಿಜಾತ ಜ್ಞಾನವನ್ನು ಸಂಗ್ರಹಿಸಿ ಮತ್ತು ಅರೇಬಿಕ್ ಭಾಷೆಗೆ ಅನುವಾದಿಸಲು ಪ್ರೇರಿಸಲಾಗುತಿತ್ತು. ಅವರ ಆಡಳಿತವು ಅಸಾಧಾರಣ ಸಾಮರ್ಥ್ಯವುಳ್ಳ 'ವಝೀರ್‌'ಗಳಾದ 'ಬರ್ಮಸೈಡ್‌'ಗಳ ಕೈಯಲ್ಲಿತ್ತು. ['ವಝೀರ್' ಅಂದರೆ ಬುದ್ಧಿವಂತರು ಅಥವಾ ಮುಖ್ಯಸ್ಥರು] ಅವರ ಆಸ್ಥಾನದಲ್ಲಿ ಶ್ರೇಷ್ಠ ನ್ಯಾಯಾಧೀಶರು, ಕವಿಗಳು, ತರ್ಕಶಾಸ್ತ್ರಜ್ಞರು, ಗಣಿತ ತಜ್ಞರು, ಬರಹಗಾರರು, ವಿಜ್ಞಾನಿಗಳು, ಸಂಸ್ಕೃತಿಯ ಪುರುಷರು ಮತ್ತು ವಿದ್ವಾಂಸರು ಸೇರಿದ್ದರು. ಉದಾ: ರಸಾಯನಶಾಸ್ತ್ರದ ಪಿತಾಮಹ ಖ್ಯಾತಿಯ ಜಾಬಿರ್ ಇಬ್ನ್ ಹಯ್ಯಾನ್ ಅವರು ಹಾರುನ್ ರಶೀದರ ಆಸ್ಥಾನದಲ್ಲಿ ವೈಜ್ಞಾನಿಕ ಕಾರ್ಯಗಳನ್ನು ನೆರವೇರಿಸುತ್ತಿದ್ದರು.

ಖಲೀಫ ಹಾರುನ್ ರಶೀದ್ ಅವರ ಆಸ್ಥಾನದಲ್ಲಿ ಭಾಷಾಂತರ ಕಾರ್ಯದಲ್ಲಿ ನಿರತರಾಗಿದ್ದ ವಿದ್ವಾಂಸರಲ್ಲಿ ಮುಸ್ಲಿಮರು, ಕ್ರೈಸ್ತರು, ಯಹೂದಿಗಳು, ಝೋರಾಸ್ಟ್ರಿಯನ್ನರು ಮತ್ತು ಹಿಂದೂಗಳು ಸೇರಿದ್ದರು. ಅವರು ಗ್ರೀಸ್‌ ದೇಶದಿಂದ ಸಾಕ್ರಟೀಸ್, ಅರಿಸ್ಟಾಟಲ್, ಪ್ಲೇಟೋ, ಗ್ಯಾಲೆನ್, ಹಿಪ್ಪೊಕ್ರೇಟ್ಸ್, ಆರ್ಕಿಮಿಡೀಸ್, ಯೂಕ್ಲಿಡ್, ಟಾಲೆಮಿ, ಡೆಮೊಸ್ತನೀಸ್ ಮತ್ತು ಪೈಥಾಗರಸ್ ಅವರ ಸಂಶೋಧನಾ ಕೃತಿಗಳನ್ನು ತರಿಸಿದರು; ಭಾರತದಿಂದ 'ಬ್ರಹ್ಮಗುಪ್ತ'ರ 'ಸಿದ್ಧಾಂತ', 'ಆರ್ಯಭಟ್ಟ'ರ 'ಆರ್ಯಭಟೀಯಂ', ಭಾರತೀಯ ಅಂಕಿಗಳು, ಶೂನ್ಯ ಮತ್ತು ಆಯುರ್ವೇದ ಔಷಧದ ಪರಿಕಲ್ಪನೆಗಳು; ಚೀನ್ ದೇಶದಿಂದ ರಸವಿದ್ಯೆಯ ವಿಜ್ಞಾನ, ಕಾಗದ, ರೇಷ್ಮೆ, ಮತ್ತು ಕುಂಬಾರಿಕೆಯ ತಂತ್ರಜ್ಞಾನಗಳು; ಜೊರಾಸ್ಟ್ರಿಯನ್ನರಿಂದ ಆಡಳಿತ, ಕೃಷಿ, ಮತ್ತು ನೀರಾವರಿ ವಿಭಾಗಗಳನ್ನು ಕರೆತರಿಸಿದರು. ಮುಸ್ಲಿಮರು ಈ ಮೂಲಗಳಿಂದ ಕಲಿತು ಜಗತ್ತಿಗೆ ಬೀಜಗಣಿತ, ರಸಾಯನಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅನಂತತೆಯ ಪರಿಕಲ್ಪನೆಯನ್ನು ನೀಡಿದರು. ಹಾರುನ್ ರಶೀದ್ ಅವರ ಋಜು ಆಡಳಿತ ಮತ್ತು ಮುಂದಾಲೋಚನೆಗಳು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿಯಲು ನೇರ ಕಾರಣ ಎನ್ನುವುದರಲ್ಲಿ ತಪ್ಪೇನಿಲ್ಲ!!

'ಬೈತುಲ್ ಹಿಕ್ಮಾಹ್'ದ ಆ ಭವ್ಯತೆ…: ಇಸ್ಲಾಮಿನ ಸ್ವರ್ಣ ಯುಗದಲ್ಲಿ ಅಬ್ಬಾಸಿದ್ ಖಲೀಫರು ಸ್ಥಾಪಿಸಿದ 'ಗ್ರ್ಯಾಂಡ್ ಲೈಬ್ರರಿ ಆಫ್ ಬಗ್ದಾದ್' ಎಂದು ಖ್ಯಾತಿಗಳಿಸಿದ 'ಬೈತುಲ್ ಹಿಕ್ಮಾಹ್' ಬಗ್ದಾದಿನ ಒಂದು ಪ್ರಮುಖ ಸಾರ್ವಜನಿಕ ಗ್ರಂಥಾಲಯ ಮತ್ತು ಸುಪ್ರಸಿದ್ಧ ಸಂಶೋಧನಾ ಕೇಂದ್ರವಾಗಿತ್ತು. ಐರೋಪ್ಯ ಖಂಡಾದ್ಯಂತ 'ಹೌಸ್ ಆಫ್ ವಿಸ್ಡಮ್' ಎಂದು ಗುರುತಿಸಲ್ಪಡುವ ನುಡಿದ ವಿದ್ಯಾ ಪ್ರತಿಷ್ಠಾಪನೆಯಲ್ಲಿ ಅಪರೂಪದ ಅರೇಬಿಕ್ ಗ್ರಂಥಗಳೊಂದಿಗೆ, ಜಗತ್ತಿನಾದ್ಯಂತ ಅನುವಾದಿಸಲ್ಪಟ್ಟ ಜ್ಞಾನಕೋಶಗಳು ಉಪಲಬ್ಧವಾಗುತಿತ್ತು.

ಬಗ್ದಾದಿನಲ್ಲಿ ನೆರೆದ ಭಾಷಾಂತರಕಾರರು 'ಬೈತುಲ್ ಹಿಕ್ಮಾಹ್'ದಲ್ಲೇ ತಮ್ಮ ವಾಸ ಮಾಡಿ, ಜಗತ್ತಿನಾದ್ಯಂತ ನಾಗರಿಕತೆಗಳ ಜ್ಞಾನಭಂಡಾರಗಳನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಲು ಮುಸ್ಲಿಂ ವಿದ್ವಾಂಸರು ಸರಿಸುಮಾರು 700 ವರುಷಗಳ ಕಾಲ ದುಡಿದು, ಅದರ ಕರ್ತೃಪದ ವಿಷಯಗಳನ್ನು ಅರ್ಥೈಸಿಕೊಳ್ಳಲು ಪರಿಶ್ರಮಿಸಿದರು. ಆದರೆ, ಇತರ ವೈಜ್ಞಾನಿಕ ಸಾಹಿತ್ಯಗಳು ಮೌಢ್ಯತೆಯಿಂದ ತುಂಬಿ ತುಳುಕುತ್ತಿತ್ತು. ಉದಾರಣೆಗೆ, ಭರತ ಖಂಡದಲ್ಲಿ ದೊರೆತ ಖಗೋಳಶಾಸ್ತ್ರದ ಕೋಷ್ಠಕಗಳಲ್ಲಿ ಖಗೋಳಶಾಸ್ತ್ರದಲ್ಲಿ ಜ್ಯೋತಿಶಾಸ್ತ್ರವು ಹೆಣೆಯಲಾಗಿತ್ತು (Astronomy was interwoven with Astrology). ಭರತಖಂಡದ ಖಗೋಳಶಾಸ್ತ್ರದಲ್ಲಿ ನಕ್ಷತ್ರಗಳ ಚಲನೆಗಳನ್ನು ವ್ಯಕ್ತಿಯ ಅದೃಷ್ಟಕ್ಕೆ ಹೋಲಿಸಲಾಗುತಿತ್ತು. ಶನಿಯೊಂದು ಗ್ರಹವಾಗಿ ಪರಿಗಣಿಸದೆ, ಅಪಶಕುನದ ಸಂಕೇತವಾಗಿ ಬೋಧಿಸಲಾಗುತ್ತಿತ್ತು.

ಹೀಗೆ, ಇತರ ವೈಜ್ಞಾನಿಕ ಸಾಹಿತ್ಯದಲ್ಲಿ ಕಂಡು ಬರುವ ಮೌಢ್ಯತೆಗಳನ್ನು ಕಡೆಗಣಿಸಿ, ಶುದ್ಧ ವಿಜ್ಞಾನವನ್ನು ಗಣಿಸಿ, ತಮ್ಮ ಸಂಶೋಧನೆಗಳನ್ನು ಪ್ರಕಟಿಸಿ ಆಧುನಿಕ ವಿಜ್ಞಾನವನ್ನು ಮುಸ್ಲಿಂ ವಿದ್ವಾಂಸರು ಉತ್ತುಂಗಕ್ಕೆ ಏರಿಸಿದರು. ತತ್ಪರಿಣಾಮವಾಗಿ, ಇಸ್ಲಾಮಿನ ಸ್ವರ್ಣ ಯುಗದಲ್ಲಿ, ಮುಸ್ಲಿಂ ಜಗತ್ತು- ವಿಜ್ಞಾನ, ತತ್ವಶಾಸ್ತ್ರ, ಖಗೋಳಶಾಸ್ತ್ರ, ವೈದ್ಯಕೀಯ ಮತ್ತು ಶಿಕ್ಷಣದ ಪ್ರಮುಖ ಬೌದ್ಧಿಕ ಕೇಂದ್ರವಾಗಿ ಹೊರಹೊಮ್ಮಿತು. ಒಟ್ಟಾರೆ, 'ಬೈತುಲ್ ಹಿಕ್ಮಾಹ್' ಇಸ್ಲಾಮಿನ ಸ್ವರ್ಣ ಯುಗದಲ್ಲಿ ನಡೆದ 'ಸಂಶೋಧನಾ ಕ್ರಾಂತಿ', 'ವೈಜ್ಞಾನಿಕ ಪರಿಭ್ರಮಣ', 'ಭಾಷಾಂತರ ಅಭಿಯಾನ' ಇತ್ಯಾದಿಗಳನ್ನು ಸಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅಲ್ಲದೇ, ಈ ವಿದ್ಯಾ ಪ್ರತಿಷ್ಠಾಪನೆಯು ಖಲೀಫರ ಮುಂದಾಲೋಚನೆ ಮತ್ತು ದೂರದೃಷ್ಟಿಗೆ ಅತ್ಯುತ್ತಮ ಉದಾರಣೆಯಾಗಿದೆ.    

'ಹಕೀಮ್'ಗಳು- ಸಂಶೋಧನಾ ಕ್ಷೇತ್ರದ 'ವಿಸ್ಮಯ'ಗಳು: ಇಸ್ಲಾಮಿನ ಸ್ವರ್ಣ ಯುಗದಲ್ಲಿ ಅತ್ಯಂತ ಗಮನಿಸತಕ್ಕ ಗುಣಲಕ್ಷಣವೆಂದರೆ "ಹಕೀಮ್" ಎಂದು ಕರೆಯಲ್ಪಡುವ ಅಪಾರ ಸಂಖ್ಯೆಯ ಮುಸ್ಲಿಂ ಹಲಬಲ್ಲ ವಿದ್ವಾಂಸರು (Polymath); ಪ್ರತಿಯೊಬ್ಬರು ಸರ್ವಾಂಗಸಮವಾಗಿ - ಧಾರ್ಮಿಕ ಮತ್ತು ಲೌಕಿಕ - ಕಲಿಕೆಯ ವಿವಿಧ ಕ್ಷೇತ್ರಗಳಿಗೆ ಅಗಣಿತ-ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇಸ್ಲಾಮಿಕ್ ಸುವರ್ಣ ಯುಗದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಜ್ಞಾನವನ್ನು ಹೊಂದಿರುವ ಮುಸ್ಲಿಂ ಬಹುಶ್ರುತ ವಿದ್ವಾಂಸರು, ಯಾವುದೊಂದು ಕಲಿಕೆಯ ಕ್ಷೇತ್ರದಲ್ಲಿ ಪರಿಣತಿ ಪಡೆದ ವಿದ್ವಾಂಸರಿಗಿಂತ ಹೆಚ್ಚಿನ ಪ್ರಸಿದ್ಧಿಗಳಿಸಿದ್ದರು. ಗಮನಾರ್ಹ ಮಧ್ಯಯುಗದ ಮುಸ್ಲಿಂ ವಿದ್ವಾಂಸರಾದ ಅಲ್-ಬಿರುನಿ, ಅಲ್-ಕಿಂದಿ, ಇಬ್ನ್ ಸಿನಾ, ಅಲ್-ಇದ್ರಿಸಿ, ಅಲ್-ಸುಯುತಿ, ಜಾಬಿರ್ ಇಬ್ನ್ ಹಯ್ಯನ್ ಇತ್ಯಾದಿಯರು ಸೇರಿದ್ದಾರೆ.

ಉದಾ: ಇಬ್ನ್ ಸೀನಾ ಅವರು ವೈದ್ಯಕೀಯ ಶಾಸ್ತ್ರದಲ್ಲಿ ಪರಿಣೀತಿ ಸಾಧಿಸಿದಲ್ಲದೇ, ಖಗೋಳಶಾಸ್ತ್ರ, ಶಸ್ತ್ರವೈದ್ಯಶಾಸ್ತ್ರ, ತತ್ವಜ್ಞಾನ, ಮತ್ತು ಅನರ್ಘ ಸಾಹಿತ್ಯಶಾಸ್ತ್ರ ಇತ್ಯಾದಿ ಕ್ಷೇತ್ರದಲ್ಲಿ ಪ್ರವೀಣತೆ ಹೊಂದಿದ್ದರು. ಇಬ್ನ್ ಸೀನಾ ಅವರು ರಸದರಿಮೆ (Alchemy), ಭೌಗೋಳಿಕತೆ ಮತ್ತು ಭೂವಿಜ್ಞಾನ, ಮನೋವಿಜ್ಞಾನ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ಗಣಿತ ಶಾಸ್ತ್ರ, ಭೌತಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಅರಿವಿಗರೆಂದು ಇತಿಹಾಸದ ಪುಟಗಳು ಹಾಡಿ ಹೊಗಳುತ್ತಿವೆ. ಹತ್ತು ಹಲವಾರು ವಿಷಯಗಳಲ್ಲಿ ನೈಪುಣ್ಯತೆ ಸಾಧಿಸುವುದು ನಿಜಕ್ಕೂ ಅವಿಶ್ವಸನೀಯ 'ವಿಸ್ಮಯ'ವಾಗಿದೆ.

ಚೊಚ್ಚಲ ವಿದ್ಯಾದೇಗುಲಕ್ಕೆ ಬುನಾದಿ ಹಾಕಿದ ಮುಸ್ಲಿಮರು: "ಉಮ್ಮ್ ಅಲ್-ಬನೈನ್" ಖ್ಯಾತಿಯ 'ಫಾತಿಮಾ ಬಿಂತ್ ಮುಹಮ್ಮದ್ ಅಲ್-ಫಿಹೃ' ಅರಬ್ ವಂಶಸ್ಥೆಯಾಗಿದ್ದ ಅವರು, ಮೊರೊಕೊದ ಫೆಝ್'ನಲ್ಲಿ ಅಲ್-ಖರಾವಿಯಿನ್ ಮಸೀದಿಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ತರುವಾಯ, ಅವರು ಅಲ್-ಖರಾವಿಯಿನ್ ಮಸೀದಿಯನ್ನು ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯವಾಗಿ ಪರಿಷ್ಕರಣಗೊಳಿಸಿದರು!

ಫಾತಿಮಾ ಮತ್ತು ಅವರ ಸಹೋದರಿ ಮರ್ಯಮ್ ಸುಶಿಕ್ಷಿತರಾಗಿದ್ದರು. ಇಬ್ಬರು ಸಹೋದರಿಯರು ಫೇಝ್'ನಲ್ಲಿ ಬೃಹತ್ ಮಸೀದಿ: 'ಫಾತಿಮಾ ಅಲ್-ಖರಾವಿಯಿನ್ ಮಸೀದಿ'ಯನ್ನು ಮತ್ತು 'ಮರಿಯಮ್ ಅಲ್-ಅಂದಲುಸಿ ಮಸೀದಿ'ಯನ್ನು ಸ್ಥಾಪಿಸಿದರು. ನಿರ್ಮಾಣದ ಯೋಜನೆಯನ್ನು ಸ್ವತಃ ಫಾತಿಮಾ ಅವರೇ ನೋಡಿಕೊಳ್ಳುತ್ತಿದ್ದರು. ಮುಸ್ಲಿಮರು ಕುಟುಂಬ ಸಮೇತ ವಲಸೆ  ಬಂದಿರುವುದರಿಂದ, ಅವರಿಗೆ ತಮ್ಮ ಮತಶ್ರದ್ಧೆಯನ್ನು ಆಚರಿಸಲು ಮತ್ತು ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವ ಭಕ್ತಾದಿಗಳಾದ ವಲಸಿಗರನ್ನು ಒಟ್ಟುಗೂಡಿಸುವ ಅಂಶದಿಂದ ಈ ಕಲ್ಪನೆಯನ್ನು ಸಹೋದರಿಯರಲ್ಲಿ ಉದಿತಗೊಂಡಿತು. ವಲಸಿಗರು ಅಪಾರ ಸಂಖ್ಯೆಯಲ್ಲಿದ್ದರು ಮತ್ತು ಅವರಿಗೆ ಸೇವೆಸಲ್ಲಿಸಲು ಸಾಕಷ್ಟು ಸ್ಥಳಾವಕಾಶ, ಸಂಪನ್ಮೂಲಗಳು ಅಥವಾ ಶಿಕ್ಷಕರಿರಲಿಲ್ಲ. ಹಾಗಾಗಿ, ಅಲ್-ಖರಾವಿಯಿನ್ ಮಸೀದಿಯು ತರುವಾಯ ಅಲ್-ಫಿಹೃ ಅವರ ನೇತೃತ್ವದಡಿಯಲ್ಲಿ ಬೋಧನಾ ಸಂಸ್ಥೆಯಾಗಿ ಅಭಿವೃದ್ಧಿಗೆ ಒಳಪಡಿಸಲಾಗಿ, ಜಗತ್ತಿನ ಪ್ರಥಮ ವಿಶ್ವವಿದ್ಯಾಲಯವಾಯಿತು. ಅಲ್-ಫಿಹೃ ಅವರ ಅಲ್-ಖರಾವಿಯಿನ್ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಮದ್ರಸ, ಗ್ರಂಥಾಲಯ ಒಳಗೊಂಡಂತೆ ವಸತಿಗ್ರಹವೂ ಸೇರಿತ್ತು. ಇದರೊಂದಿಗೆ, ಜಗತ್ತಿನಲ್ಲಿ ಪ್ರಪ್ರಥಮ ವಿಶ್ವವಿದ್ಯಾನಿಲಯ ಸ್ಥಾಪಿಸಿದ ಶ್ರೇಯವೂ ಮುಸ್ಲಿಮರಿಗೇ ಸಲ್ಲುತ್ತದೆ!

ಐರೋಪ್ಯ ಖಂಡದಲ್ಲೂ ವಿದ್ಯಾ-ಹಣತೆ ಬೆಳಗಿಸಿದ ಮುಸ್ಲಿಮರು: ಯುರೋಪಿನ ಮೊತ್ತ ಮೊದಲ ವಿಶ್ವವಿದ್ಯಾನಿಲಯವನ್ನು ಇಟಲಿಯ ಸಲೆರ್ನೊದಲ್ಲಿ 841 A.Dಯಲ್ಲಿ ಮುಸ್ಲಿಮರು ಸ್ಥಾಪಿಸಿದರು. ಇದು ಪೂರ್ವದಲ್ಲಿ ಮುಸ್ಲಿಮರು ಸ್ಥಾಪಿಸುವ ವಿಶ್ವವಿದ್ಯಾಲಯಗಳ ವಿಸ್ತರಣೆಯ ಮೊದಲಕಾಣ್ಕೆಯಾಗಿತ್ತು. ಅದನ್ನು ಅನುಸರಿಸಿ, ಮುಸ್ಲಿಮರು ಐರೋಪ್ಯ ಖಂಡದಲ್ಲಿ ಟೊಲೆಡೊ, ಸೆವಿಲ್ಲೆ, ಮತ್ತು ಗ್ರಾನಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಪ್ರಾರಂಭಿಸಿದರು. ಆದ್ದರಿಂದ, ಯುರೋಪಿನ ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯಗಳಿಂದ ಕಲಿತು, ಪದವಿ ಪಡೆದು, ತಮ್ಮ ಮನೆಗೆ ಹಿಂದಿರುಗುವಾಗ, ಅವರು ಅರಬ್/ಮುಸ್ಲಿಂ ನಿಲುವಂಗಿಯನ್ನು ಧರಿಸುತ್ತಿದ್ದರು (ಅರಬ್ ನಿಲುವಂಗಿಯನ್ನು 'ಥ್ವಾಬ್' ಅಥವಾ 'ಖಮೀಸ್' ಎಂದು ಕರೆಯುತ್ತಾರೆ).

ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ಉಡುಪುಗಳನ್ನು ಅನುಕರಿಸುತ್ತಿದ್ದರು; ಇದು ಈ ನಿರ್ದಿಷ್ಟ ಯುವಕ/ಯುವತಿಯರು ಮುಸ್ಲಿಮರ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಪ್ರತೀಕವಾಗಿತ್ತು. ಅರಬ್/ಮುಸ್ಲಿಮರ ಉಡುಪುಗಳನ್ನು ಧರಿಸುವ ಈ ಅನುಕರಣೆ ಇಂದಿಗೂ ಅವರಲ್ಲಿ ಉಳಿದುಕೊಂಡಿದೆ; ಅಲ್ಲದೇ, ಇಂದಿಗೂ ಜಗತ್ತಿನಾದ್ಯಂತ ವಿಶ್ವವಿದ್ಯಾನಿಲಯಗಳು ತಮ್ಮ ಪದವಿ ಪಡೆದ ವಿದ್ಯಾರ್ಥಿಗಳನ್ನು ಈ 'ಖಮೀಸ್‌'ನೊಂದಿಗೆ ಅಲಂಕರಿಸುತ್ತಾರೆ!!

ಜಾಕ್ ಗೂಡಿ, ತಮ್ಮ ಕೃತಿ 'Islam in Europe'ನಲ್ಲಿ ಬರೆಯುತ್ತಾರೆ: "The Arabic clothing (Thawb) has remained as the purest and clearest sign of scholastic integrity up to this day of ours, especially during scholastic events such as the debating of university thesis, and graduations"

ಜಗತ್ತು ಅಜ್ಞಾನದ ಅಂಧಕಾರದಲ್ಲಿ ನರಳುತ್ತಿದ್ದಾಗ ಮಧ್ಯಪ್ರಾಚ್ಯ ಮುಸ್ಲಿಮರು ಜ್ಞಾನ ಗಳಿಸುವಲ್ಲಿ ಬಹಳ ಮುಂದುವರಿಸಿದ್ದರು. ಜಿಯರ್ಡಾನೊ ಬ್ರೂನೊ (1548-1600) ಅವರು ಇಟಲಿ ದೇಶದ ಸುಪ್ರಸಿದ್ಧ ಗಣಿತಶಾಸ್ತ್ರಜ್ಞರು ಮತ್ತು ಖಗೋಳಶಾಸ್ತ್ರಜ್ಞರಾಗಿದ್ದರು. ಅವರು ತಮ್ಮ ಸಂಶೋಧನೆಯಲ್ಲಿ ನಕ್ಷತ್ರಗಳು ನಮ್ಮ ಸೂರ್ಯದಂತೆ ಬಹಳ ದೂರದಲ್ಲಿ ಬೆಳಗುವ ಬೆಂಕಿ ಗೋಲಗಳು ಮತ್ತು ಅವುಗಳ ಸುತ್ತ ನಮ್ಮ ಗ್ರಹದಂತೆ ಅದರ ಗ್ರಹಗಳು ಸುತ್ತಿಸುತ್ತವೆ ಎಂದು ಪ್ರಕಟಿಸಿದ್ದಕ್ಕಾಗಿ ಐರೋಪ್ಯ ಪುರೋಹಿತ ವರ್ಗವು ಅವರನ್ನು ಜೀವಂತ ಸುಟ್ಟು ಹಾಕಿದರು. ಆದರೆ, ಈ ದುರ್ಘಟಣೆಯ ಎಂಟು ನೂರು ವರ್ಷಗಳ ಹಿಂದೆ ಅಬ್ದುಲ್ ರೆಹ್ಮಾನ್ ಅಲ್ ಸೂಫಿ ಅವರು ತಾವು ಕಂಡ ನಮ್ಮ ನೆರೆಯ ನಕ್ಷತ್ರಪುಂಜಗಳ ಕುರಿತು 'Book of Fixed Stars'ನಲ್ಲಿ ಪ್ರಕಟಿಸಿದಾಗ ಮುಸ್ಲಿಂ ಜಗತ್ತಿನಲ್ಲಿ ಹೃತ್ಪೂರ್ವಕವಾಗಿ ಸ್ವಾಗತಿಸಲಾಗಿತ್ತು. ಇದೇ ಕಾರಣ, ಸುಪ್ರಸಿದ್ಧ ವಿಜ್ಞಾನ ಇತಿಹಾಸಕಾರರಾದ ಥಾಮಸ್ ಗೋಲ್ಡ್ ಸ್ಟೀನ್ ಅವರು, "Had Muslims remained in Spain, then man would have landed on the Moon at least 200 years earlier" ಎಂದು ಇಸ್ಲಾಮಿನ ಸ್ವರ್ಣ ಯುಗದ ಕುರಿತು ತಮ್ಮ ಅಭಿಪ್ರಾಯವನ್ನು ಬಲವಾಗಿ ಪ್ರತಿಪಾದಿಸುತ್ತಾರೆ.

- ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ