ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಬರಹ

ಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.

ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ.

ಜಿಟಿಎನ್ ತಮ್ಮ ದೇಹವನ್ನು ಜೆಎಸ್ಎಸ್ ಅಸ್ಪತ್ರೆಗೆ ದಾನ ನೀಡಿದ್ದರು. ಮೈಸೂರಿನ ಗಣ್ಯಾತಿಗಣ್ಯರೆಲ್ಲ ಬಂದಿದ್ದರು. ಅವರಿಗೆ ಅಂತಿಮ ನಮನ ಹೇಳುವುದಕ್ಕೆ. ಸಂಜೆ ಮುಸುಕುಲಾರಂಬಿಸಿತ್ತು. ಮೋಡ ತುಂಬಿದ ವಾತಾವರಣ. ಮಳೆ ಹನಿಯತೊಡಗಿತ್ತು. ಜಿಟಿಎನ್ ಅವರ ಆ ಆಪೇಕ್ಷೆ ಪೂರೈಸುವ ಹೊತ್ತು ಬಂತು. ಆಸ್ಪತ್ರೆಯ ವಾಹನ ಮನೆಯ ಎದುರುಗಡೆ ಬಂದು ನಿಂತಿತು. ಜಿಟಿಎನ್ ಅವರ ದೇಹವನ್ನು ಜೆಎಸ್ಎಸ್ ಕಾಲೇಜಿನ ಪ್ರಯೋಗಾಲಯದಲ್ಲಿ ಅತ್ಯಂತ ಮೆತ್ತಗೆ ಇರಿಸಿ, ಕೊನೆಯ ಬಾರಿಗೆ ಕಣ್ಣು ತುಂಬ ನೋಡಿ ಮರಳುವ ಆ ಹೊತ್ತಿನಲ್ಲಿ ಮಾತ್ರ ಎಲ್ಲ ಖಾಲಿಯಾದಂತೆ, ಬರಿದಾದಂತೆ ಅನ್ನಿಸಿತು.
ರಾಧಾಕೃಷ್ಣ