ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೨)

ಬರಹ

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ನನ್ನ ಸುತ್ತಲು ಬಳಕೆಯಾಗುತ್ತಿರುವ ನನಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಅನುವಾದ ಪ್ರಯತ್ನದ ಎರಡನೇ ಕಂತು ಸುದೀರ್ಘ ಬಿಡುವಿನ ನಂತರ ಈಗ ನಿಮ್ಮ ಮುಂದಿದೆ. ಇದರ [:http://sampada.net/article/RMS-Word-Attachments|ಮೊದಲ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ]. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಎರಡನೇ ಕಂತು)

GNU[:http://sampada.net/article/RMS-Word-Attachments|(ಮೊದಲ ಕಂತಿನಿಂದ ಮುಂದುವರೆದ ಭಾಗ...)]
ಹೀಗೆ ನಿಮಗೆ ಬಂದ ಡಾಕ್ಯುಮೆಂಟಿನ ಬಗ್ಗೆ "ಇದು ನನಗೊಬ್ಬನಿಗೇ ಆದದ್ದು" ಎಂದು ನೀವು ಆಲೋಚಿಸಿದರೆ, ಅದನ್ನು ಸ್ವತಃ ನಿಭಾಯಿಸಲು ಪ್ರಯತ್ನಿಸೋದು ಸಹಜ. ಆದರೆ ಅದೊಂದು ಕ್ರಮಬದ್ಧವಾದ ಮಾರಕ ಅಭ್ಯಾಸ ಎಂದು ನೀವದನ್ನು ಗುರುತಿಸಿದಾಗ ಒಂದು ಹೊಸ ದೃಷ್ಟಿಕೋನ ಅನಿವಾರ್ಯವಾಗುತ್ತದೆ. ಆ ಫೈಲನ್ನು ನಿಮ್ಮ ತಂತ್ರಾಂಶ ಓದುವಂತೆ ಮಾಡುವುದು ಹಳೆಯ ಖಾಯಿಲೆಯ ಸೂಚನೆಗಳಿಗೆ ಚಿಕಿತ್ಸೆ ಕೊಟ್ಟಂತೆ. ಈ‌ ಖಾಯಿಲೆಯನ್ನು ಗುಣ ಮಾಡಲು ನಾವು ವರ್ಡ್ ಡಾಕ್ಯುಮೆಂಟುಗಳನ್ನು ಬಳಸಬೇಡಿ ಎಂದು ಜನರ ಮನವೊಪ್ಪಿಸಬೇಕು.

ಕಳೆದ ಒಂದು ವರ್ಷದಲ್ಲಿ ನನಗೆ ಬಂದ ವರ್ಡ್ ಆಟ್ಟಾಚ್ಮೆಂಟುಗಳಿಗೆ ಉತ್ತರಿಸುತ್ತ ವರ್ಡ್ ಫೈಲು ಬಳಸುವುದು ಕೆಟ್ಟ ಅಭ್ಯಾಸ ಎಂದು ಸೌಜನ್ಯದ ಸಂದೇಶ ಕಳುಹಿಸುವ ಅಭ್ಯಾಸ ಮಾಡಿಕೊಂಡಿದ್ದೇನೆ ಮತ್ತು ನನಗೆ ಕಳುಹಿಸಿದ್ದನ್ನು ರಹಸ್ಯವಲ್ಲದ ಫಾರ್ಮ್ಯಾಟಿನಲ್ಲಿ ಪುನಃ‌ ಕಳುಹಿಸಿ ಎಂದು ಕೇಳಲಾರಂಭಿಸಿದ್ದೇನೆ. ಹೀಗೆ ಮಾಡುವುದು ಓದಲು ಸಾಧ್ಯವಾಗದ, ಸ್ಪಷ್ಟವಾಗಿಲ್ಲದ ASCII ವಾಕ್ಯಗಳನ್ನು ಓದುವುದಕ್ಕಿಂದ ತುಂಬಾ ಕಡಿಮೆ ಕೆಲಸ. ಸಾಮಾನ್ಯವಾಗಿ ಜನ ಈ ವಿಷಯ ಅರ್ಥಮಾಡಿಕೊಳ್ಳುತ್ತಾರೆಂಬುದನ್ನು ಗಮನಿಸಿದ್ದೇನೆ, ಹಲವರು ಮತ್ತೆ ಬೇರೆಯವರಿಗೆ ವರ್ಡ್ ಫೈಲುಗಳನ್ನು ಕಳುಹಿಸುವುದಿಲ್ಲವೆಂದೂ ಹೇಳುತ್ತಾರೆ.

ನಾವೆಲ್ಲರೂ ಒಟ್ಟಾಗಿ ಈ ಕೆಲಸವನ್ನು ಮಾಡಿದಲ್ಲಿ ಹೆಚ್ಚಿನ ಪ್ರಭಾವ ಬೀರಬಲ್ಲೆವು. ಸೌಜನ್ಯದ ಒಂದು ಕೋರಿಕೆಯನ್ನು ಉದಾಸೀನ ಮಾಡಿದ ಜನರಿಗೆ ಇಂತಹ ಹಲವು ಸೌಜನ್ಯದ ಕೋರಿಕೆಗಳು ತಲುಪಿದಲ್ಲಿ ಅವರುಗಳು ತಮ್ಮ ಅಭ್ಯಾಸವನ್ನು ಬದಲಾಯಿಸಬಹುದು. ನಮಗೆ ವರ್ಡ್ ಫೈಲುಗಳನ್ನು ಕಳುಹಿಸುವ ಎಲ್ಲರಲ್ಲೂ ಈ ವಿಷಯವನ್ನು ರೂಢಿಯಂತೆ ಎತ್ತತೊಡಗಿದರೆ "ವರ್ಡ್ ಫೈಲುಗಳನ್ನ ಕಳುಹಿಸಬೇಡಿ" ಎಂಬುದನ್ನ ಅಂತರ್ಜಾಲದ ಶಿಷ್ಟಾಚಾರವನ್ನಾಗಿ ಮಾಡಬಹುದು.

ಈ‌ ಪ್ರಯತ್ನವನ್ನು ಸಫಲಗೊಳಿಸಲು ನೀವೊಂದು ತಯಾರಿಸಿದ ಉತ್ತರವೊಂದನ್ನು ಬರೆದಿಟ್ಟುಕೊಳ್ಳಬೇಕಾಗಬಹುದು. ಅನಿವಾರ್ಯವಾದಾಗಲೆಲ್ಲ ಕೂಡಲೆ ಕಳುಹಿಸಬಹುದು. ನಾನು ಎರಡು ಉದಾಹರಣೆಗಳನ್ನು ಸೇರಿಸಿರುವೆ: ಇತ್ತೀಚೆಗೆ ನಾ ಬಳಸುತ್ತಿರುವ ಆವೃತ್ತಿಯೊಂದು, ಮತ್ತೊಂದು ವರ್ಡ್ ಬಳಸುವವರಿಗೆ ಇತರ ಫಾರ್ಮ್ಯಾಟುಗಳಿಗೆ ಪರಿವರ್ತಿಸುವುದು ಹೇಗೆ ಎಂಬುದನ್ನು ತಿಳಿಸುವ ಹೊಸ ಆವೃತ್ತಿ. ಇವುಗಳೊಂದಿಗೆ ಓದುಗರು ಕಳುಹಿಸಿಕೊಟ್ಟ ಹಲವು ಸಲಹೆಗಳನ್ನೂ ಸೇರಿಸಿರುವೆ.

ಈ‌ ಉತ್ತರಗಳನ್ನು ನೀವು ಹಾಗೆಯೇ ಬಳಸಬಹುದು ಅಥವ ನಿಮ್ಮ ಆಯ್ಕೆಗೆ ತಕ್ಕಂತೆ ವೈಯಕ್ತಿಕಗೊಳಿಸಬಹುದು - ಅಥವ ನಿಮ್ಮದೇ ಒಂದು ಹೊಸತನ್ನ ಕೂಡ ಬರೆದುಕೊಳ್ಳಬಹುದು. ನಿಮ್ಮ ಐಡಿಯಗಳು ಹಾಗೂ ವ್ಯಕ್ತಿತ್ವಕ್ಕೆ ಸರಿಹೊಂದುವಂತೆ ಇದನ್ನು ಖಂಡಿತ ಹೊಸದಾಗಿ ಬರೆದುಕೊಳ್ಳಬಹುದು. ನೀವು ಕಳುಹಿಸುವ ಉತ್ತರಗಳು ವೈಯಕ್ತಿಕವಾಗಿದ್ದು ಒಂದೇ ರೀತಿ ಇರದಿದ್ದಲ್ಲಿ ಚಳುವಳಿ ಇನ್ನೂ ಹೆಚ್ಚಿನ ಪರಿಣಾಮ ಬೀರಬಲ್ಲುದು.

ಉತ್ತರಗಳು ವರ್ಡ್ ಫೈಲುಗಳನ್ನು ಕಳುಹಿಸುವ ವ್ಯಕ್ತಿಗಳಿಗೆ ಕಳುಹಿಸಲು ಮೀಸಲಾದದ್ದು. ಆದರೆ ಯಾವುದಾದರೂ ಸಂಸ್ಥೆ ನಿಮಗೆ ವರ್ಡ್ ಫಾರ್ಮ್ಯಾಟ್ ಬಳಕೆಯನ್ನು ಹೇರಿದರೆ ಅಂಥವರಿಗೆ ಬೇರೆಯ ರೀತಿಯ ಉತ್ತರ ಬರೆಯಬೇಕಾಗಬಹುದು. ಅಲ್ಲಿ, ವ್ಯಕ್ತಿಯೊಬ್ಬನ ಚಟುವಟಿಕೆಯ ಮೇಲೆ ಪ್ರಭಾವ ಬೀರದಂತಹ ನ್ಯಾಯದ ಮಹತ್ವದ ಬಗ್ಗೆ ಗಮನ ಸೆಳೆಯಬಹುದು.

ಕೆಲಸ ನೇಮಕಾತಿ ಮಾಡುವ ಸಿಬ್ಬಂಧಿ ರೆಸ್ಯೂಮುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಕೇಳಬಹುದು. ಅಚ್ಚರಿಯೆಂದರೆ, ಕೆಲವರು ಮುಕ್ತ ತಂತ್ರಾಂಶದ ಕೆಲಸಗಳಿಗೆ ಯಾರನ್ನಾದರೂ ಹುಡುಕುವಾಗ ಕೂಡ ಈ ಕೆಲಸ ಮಾಡುತ್ತಾರೆ. (ಹೀಗೆ ಮುಕ್ತ ತಂತ್ರಾಂಶದ ಕೆಲಸಗಳಿಗೆ ಹೀಗೆ ಮಾಡುತ್ತಿರುವವರು ಕೆಲಸಕ್ಕೆ ಯೋಗ್ಯರನ್ನು ಪಡೆಯುವ ಸಂಭವ ಕಡಿಮೆ) ಈ ಅಭ್ಯಾಸ ಬದಲಾಗುವತ್ತ ಸಹಾಯ ಮಾಡಲು ನೀವು ನಿಮ್ಮ ರೆಸ್ಯೂಮಿನ ಇತರ ಫಾರ್ಮ್ಯಾಟುಗಳಿಗೆ ನೀಡಿರುವ ಲಿಂಕುಗಳ ಕೆಳಗೆ ಈ ಪುಟಕ್ಕೊಂದು ಲಿಂಕ್ ನೀಡಬಹುದು. ವರ್ಡ್ ಫಾರ್ಮ್ಯಾಟನ್ನು ಹುಡುಕಿಕೊಂಡು ಯಾರಾದರೂ ಬಂದರೆ ಬಹುಶಃ ಈ ಪುಟವನ್ನು ಓದಿಕೊಳ್ಳುವರು.

ನಾವಿರುವಷ್ಟು ಜನ, ಬರಿಯ ಒಂದು ಮಾತು ಬಾಯ್ಬಿಟ್ಟು ಕೇಳುವುದರಿಂದಲೆ ಬದಲಾವಣೆಯನ್ನು ತರಬಹುದು.


ನೀವು ಮೈಕ್ರೊಸಾಫ್ಟಿನ ವರ್ಡ್ ಫಾರ್ಮ್ಯಾಟಿನಲ್ಲೊಂದು ಅಟ್ಟಾಚ್ಮೆಂಟ್ ಕಳುಹಿಸಿದ್ದೀರಿ. ವರ್ಡ್ ಫಾರ್ಮ್ಯಾಟು ಒಂದು ರಹಸ್ಯ ಹಾಗೂ ಮೈಕ್ರೊಸಾಫ್ಟಿನ ಒಡೆತನದ ಫಾರ್ಮ್ಯಾಟು - ನನಗದು ಓದಲಾಗುತ್ತಿಲ್ಲ. ನೀವು ಕಳುಹಿಸಿದ ಫೈಲನ್ನೇ ಬರಿಯ ಟೆಕ್ಸ್ಟ್ ಫಾರ್ಮ್ಯಾಟು ಅಥವ ಎಚ್ ಟಿ ಎಮ್ ಎಲ್ ಅಥವ ಪಿ ಡಿ ಎಫ್ ನಲ್ಲಿ ಕಳುಹಿಸಿದರೆ ನನಗೆ ಓದಲಾಗುವುದು.

ಜನರಿಗೆ ಡಾಕ್ಯುಮೆಂಟುಗಳನ್ನ ವರ್ಡ್ ಫಾರ್ಮ್ಯಾಟಿನಲ್ಲಿ ಕಳುಹಿಸುವುದು ಕೆಟ್ಟ ಪ್ರಭಾವ ಬೀರುತ್ತದೆ, ಏಕೆಂದರೆ ಈ ಅಭ್ಯಾಸ ಜನರಿಗೆ ಮೈಕ್ರೊಸಾಫ್ಟಿನ ತಂತ್ರಾಂಶಗಳನ್ನು ಬಳಸುವಂತೆ ಒತ್ತಡ ಹೇರುತ್ತದೆ. ಒಟ್ಟಿನಲ್ಲಿ, ನೀವು ಮೈಕ್ರೊಸಾಫ್ಟಿನ ಏಕಸ್ವಾಮ್ಯತೆಯ ಮನೆಯನ್ನು ಸ್ವತಃ ಎತ್ತಿಹಿಡಿಯುವ ಸ್ಥಂಭವಾಗಿಬಿಡುತ್ತೀರಿ. ಈ ಒಂದು ಸಮಸ್ಯೆಯು ಗ್ನು/ಲಿನಕ್ಸ್ ವಿಸ್ತಾರವಾಗಿ ಅಳವಡಿಕೆಯಾಗುವುದನ್ನು ತಡೆಗಟ್ಟಿದೆ. ಇತರರೊಂದಿಗೆ ಸಂವಹನ ನಡೆಸುವಾಗ ವರ್ಡ್ ಫೈಲನ್ನು ಬಳಕೆಯನ್ನ ಒಮ್ಮೆ ದಯವಿಟ್ಟು ಪುನಃಪರಿಶೀಲಿಸಿ ನೋಡುತ್ತೀರ ತಾನೆ?


ನೀವು ಮೈಕ್ರೊಸಾಫ್ಟಿನ ವರ್ಡ್ ಫಾರ್ಮ್ಯಾಟಿನಲ್ಲೊಂದು ಅಟ್ಟಾಚ್ಮೆಂಟ್ ಕಳುಹಿಸಿದ್ದೀರಿ. ವರ್ಡ್ ಫಾರ್ಮ್ಯಾಟು ಒಂದು ರಹಸ್ಯ ಹಾಗೂ ಮೈಕ್ರೊಸಾಫ್ಟಿನ ಒಡೆತನದ ಫಾರ್ಮ್ಯಾಟು - ನನಗದು ಓದಲು ಕಷ್ಟವಾಗುತ್ತಿದೆ. ನೀವು ಕಳುಹಿಸಿದ ಫೈಲನ್ನೇ ಬರಿಯ ಟೆಕ್ಸ್ಟ್ ಫಾರ್ಮ್ಯಾಟು ಅಥವ ಎಚ್ ಟಿ ಎಮ್ ಎಲ್ ಅಥವ ಪಿ ಡಿ ಎಫ್ ನಲ್ಲಿ ಕಳುಹಿಸಿದರೆ ನನಗೆ ಓದಲಾಗುವುದು.

ವರ್ಡ್ ಫಾರ್ಮ್ಯಾಟಿನಲ್ಲಿ ಡಾಕ್ಯುಮೆಂಟುಗಳನ್ನು ಹಂಚಿಕೊಳ್ಳುವುದು ನಿಮಗೆ ಮತ್ತು ಇತರರಿಗೆ ತೊಂದರೆಯೆ. ವೀಕ್ಷಿಸುತ್ತಿರುವವರು ವರ್ಡ್ ನ ಯಾವುದಾದರೂ ಬೇರೆ ವರ್ಶನ್ ಬಳಸುತ್ತಿದ್ದಲ್ಲಿ ಅವರಿಗೆ ನೀವು ಕಳುಹಿಸಿದ ಡಾಕ್ಯುಮೆಂಟು ಹೇಗೆ ಕಾಣುತ್ತದೆ ಎಂದು ಖರೆ ಹೇಳಬರುವುದಿಲ್ಲ; ಅವರಿಗೆ ಓದಲಾಗದೆಯೂ ಇರಬಹುದು.

ವರ್ಡ್ ಅಟ್ಟಾಚ್ಮೆಂಟುಗಳನ್ನಂತು ಪಡೆಯುವುದು ಕೆಡುಕು ಎಕೆಂದರೆ ಅವುಗಳು ವೈರಸ್ಸುಗಳನ್ನು ಹೊತ್ತು ತರುತ್ತವೆ (http://en.wikipedia.org/wiki/Macro_virus ನೋಡಿ). ವರ್ಡ್ ಅಟ್ಟಾಂಚ್ಮೆಂಟುಗಳನ್ನು ಕಳುಹಿಸುವುದೂ ನಿಮಗೆ ಕೆಟ್ಟದ್ದು ಏಕೆಂದರೆ ವರ್ಡ್ ಡಾಕ್ಯುಮೆಂಟ್ ಒಂದರಲ್ಲಿ ಅದರ ಕರ್ತೃವಿನ ಬಗ್ಗೆ ಅಡಗಿಸಿದ ಮಾಹಿತಿಯಿರುತ್ತದೆ. ಲೇಖಕರ (ಬಹುಶಃ ನಿಮ್ಮ) ಚಟುವಟಿಕೆಗಳ ನಿಗಾ ವಹಿಸುತ್ತಿರುವವರಿಗೆ ಹೊಂಚುಹಾಕಲು ಇದು ಸುಲಭದ ಹಾದಿ. ನೀವು ಅಳಿಸಿಹಾಕಿದೆನೆಂದುಕೊಂಡ ಮಾಹಿತಿ ಕೂಡ ನಿಮ್ಮನ್ನು ಪೇಚಿಗೆ ಸಿಕ್ಕಿಹಾಕಿಸುವಷ್ಟರ ಮಟ್ಟಿಗೆ ಹಾಗೆಯೇ ಉಳಿದಿರಬಹುದು.

ಆದರೆ ಇದೆಲ್ಲದಕ್ಕೂ ಮಿಗಿಲಾಗಿ, ಜನರಿಗೆ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋದು ಅವರ ಮೇಲೆ ಮೈಕ್ರೊಸಾಫ್ಟಿನ ತಂತ್ರಾಂಶಗಳನ್ನು ಬಳಸುವಂತೆ ಒತ್ತಡ ಹೇರುತ್ತದೆ. ಅಲ್ಲದೆ ಅವರಿಗೆ ಇನ್ಯಾವುದೇ ಪರ್ಯಾಯ ಅಯ್ಕೆ ದೂರವಿಡುವಲ್ಲಿ ಸಹಾಯ ಮಾಡಿರುತ್ತದೆ. ಪರಿಣಾಮ, ನೀವು ಮೈಕ್ರೊಸಾಫ್ಟಿನ ಏಕಸ್ವಾಮ್ಯತೆಯನ್ನು ಭದ್ರಗೊಳಿಸುವ ಸ್ಥಂಭವಾಗಿಬಿಡುತ್ತೀರಿ. ಈ ಒತ್ತಡ ಮುಕ್ತ ತಂತ್ರಾಂಶ ವಿಸ್ತಾರವಾಗಿ ಅಳವಡಿಕೆಯಾಗುವುದನ್ನು ತಡೆಗಟ್ಟಿದೆ. ಇತರರೊಂದಿಗೆ ಸಂವಹನ ನಡೆಸುವಾಗ ವರ್ಡ್ ಫಾರ್ಮ್ಯಾಟ್ ಬಳಕೆಯನ್ನ ಒಮ್ಮೆ ದಯವಿಟ್ಟು ಪುನಃಪರಿಶೀಲಿಸಿ ನೋಡುತ್ತೀರ ತಾನೆ?

ಫೈಲನ್ನು ವರ್ಡ್ ನಿಂದ ಎಚ್ ಟಿ ಎಮ್ ಎಲ್ (HTML) ಗೆ ಪರಿವರ್ತಿಸುವುದು ಬಹಳ ಸುಲಭ. ಡಾಕ್ಯುಮೆಂಟ್ ತೆರೆದು, File ಎಂಬುದರ ಮೇಲೆ ಕ್ಲಿಕ್ ಮಾಡಿ, Save As ಎಂಬುದನ್ನು ಕ್ಲಿಕ್ಕಿಸಿ. Save As ಎನ್ನುವ ಬಾಕ್ಸಿನ ಕೆಳಭಾಗದಲ್ಲಿ HTML Document ಅಥವ Web Page ಎಂಬುದನ್ನು ಆಯ್ಕೆಮಾಡಿ. ತದನಂತರ ಫೈಲನ್ನು Save ಮಾಡಿ. ಹೊಸ HTML ಡಾಕ್ಯುಮೆಂಟನ್ನು ನೀವೀಗ ವರ್ಡ್ ಡಾಕ್ಯುಮೆಂಟ್ ಬದಲಾಗಿ ಅಟ್ಟಾಚ್ಮೆಂಟ್ ರೂಪದಲ್ಲಿ ಕಳುಹಿಸಬಹುದು. ವರ್ಡ್ ತಂತ್ರಾಂಶ ಯದ್ವಾತದ್ವಾ ಬದಲಾಗುತ್ತಿರುತ್ತದೆ -- ನಿಮಗೇನಾದರೂ ಸ್ವಲ್ಪ ಭಿನ್ನವಾದ ಮೆನುಗಳ ಹೆಸರುಗಳು ಕಂಡುಬಂದಲ್ಲಿ, ದಯವಿಟ್ಟು ಅವುಗಳನ್ನು ಪ್ರಯತ್ನಿಸಿ.

ಬರಿಯ ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸುವುದೂ ಹೆಚ್ಚು ಕಡಿಮೆ ಹಾಗೆಯೇ -- HTML Document ಬದಲು, Save As Type ಎಂಬಲ್ಲಿ Text Only ಅಥವ Text Document ಎಂಬುದನ್ನು ಆಯ್ಕೆಮಾಡಿಕೊಳ್ಳಿ.

ನಿಮ್ಮ ಕಂಪ್ಯೂಟರಿನಲ್ಲಿ ಪಿ ಡಿ ಎಫ್ (PDF) ಫಾರ್ಮ್ಯಾಟಿಗೆ ಪರಿವರ್ತಿಸುವ ಪ್ರೋಗ್ರಾಮ್ ಕೂಡ ಇರಬಹುದು. File => Print ಎಂಬುದನ್ನು ಸೆಲೆಕ್ಟ್ ಮಾಡಿ. ಲಭ್ಯವಿರುವ ಪ್ರಿಂಟರುಗಳ ಪಟ್ಟಿಯಲ್ಲಿ ವಿಹರಿಸಿ ಪಿ ಡಿ ಎಫ್ ಕನ್ವರ್ಟರ್ ಎಂಬುದಿದ್ದರೆ ಅದನ್ನು ಸೆಲೆಕ್ಟ್ ಮಾಡಿಕೊಳ್ಳಿ. Print ಬಟನ್ನಿನ ಮೇಲೆ ಕ್ಲಿಕ್ಕಿಸಿ ತದನಂತರ ಅದು ಕೇಳಿದಾಗ ಪಿ ಡಿ ಎಫ್ ಫೈಲಿಗೊಂದು ಹೆಸರನ್ನು ಎಂಟರ್ ಮಾಡಿ.


ಇಲ್ಲಿ ಮತ್ತೊಂದು ಹೊಸ ವಿಧಾನವುಂಟು, ಸಲಹೆ ನೀಡಿದವರು ಬಾಬ್ ಚಾಸೆಲ್. ಇದನ್ನು ನಿರ್ದಿಷ್ಟ ಉದಾಹರಣೆಗೆ ನೀವು ಬದಲಾಯಿಸಿಕೊಳ್ಳಬೇಕಾಗಿಬರಬಹುದು, ಅಲ್ಲದೆ ನಿಮಗೆ ಡಾಕ್ಯುಮೆಂಟಿನಲ್ಲಿರುವ ಕಂಟೆಂಟನ್ನು ಹೊರತೆಗೆದು ಎಷ್ಟಿದೆ ಎಂಬುದನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತದೆ ಎಂದುಕೊಂಡದ್ದು.


ನೀವು ಇತ್ತೀಚೆಗೆ ಕಳಿಸಿದ ಸಂದೇಶದಲ್ಲಿ ಕಂಟೆಂಟ್ ಬರೇ 27,133 bytes ಇದ್ರೂ ನೀವ್ಯಾಕೆ ನನಗೆ 876,377 bytes ಕಳುಹಿಸೋದಕ್ಕೆ ಹೋಗಿದ್ದು? ನನಗೆ ಬಿಡಿಸಲಾಗದ ಒಗಟಾಗಿದೆ.

ನಿರ್ದಿಷ್ಟವಲ್ಲದ, ಹಿಗ್ಗಾಮುಗ್ಗಿ ಊದುಕೊಂಡಂತಿರುವ ಮೈಕ್ರೊಸಾಫ್ಟಿನ ರಹಸ್ಯದ .doc ಫಾರ್ಮ್ಯಾಟಿನಲ್ಲಿ ನನಗೆ ಐದು ಫೈಲುಗಳನ್ನ ಕಳುಹಿಸಿದ್ದೀರಿ. ಅಂತರ್ರಾಷ್ಟ್ರೀಯವಾದ, ಸಾರ್ವಜನಿಕ ಮತ್ತೂ ಹೆಚ್ಚು ಕ್ಷಮತೆಯುಳ್ಳ ಪ್ಲೇಯ್ನ್ ಟೆಕ್ಸ್ಟ್ ಫಾರ್ಮ್ಯಾಟಿನಲ್ಲಿ ಕಳುಹಿಸಬಹುದಿತ್ತಲ್ವ.

ಮೈಕ್ರೊಸಾಫ್ಟು (ಇತ್ತೀಚೆಗೆ ಕೀನ್ಯ ಮತ್ತು ಬ್ರಾಸಿಲ್ ನಲ್ಲಿ ಮಾಡಿದಂತೆ) ಸ್ಥಳೀಯ ಪೋಲಿಸರ ಮೂಲಕ ವಿದಾರ್ಥಿಗಳು ತಂತ್ರಾಂಶದ ಆಕರ ಅಧ್ಯಯನ ಮಾಡಲಾಗದಂತೆ, ನವ ಉದ್ಯಮಿಗಳು ಹೊಸ ಕಂಪೆನಿಗಳನ್ನು ಹುಟ್ಟು ಹಾಕದಂತೆ, ಹಾಗೂ ನುರಿತರು ತಮ್ಮ ಸೇವೆಯನ್ನು ನೀಡಲಾಗದಂತೆ ಹೊಸ ಕಾನೂನುಗಳನ್ನು ಜಾರಿಗೆ ತರಬಲ್ಲದು. ಅವರಿಗೆ ನಿಮ್ಮ ಬೆಂಬಲ ದಯವಿಟ್ಟು ನೀಡಬೇಡಿ.


ಜಾನ್ ಡಿ. ರಾಮ್ಸ್ಡೆಲ್ ರವರು ಜನರಿಗೆ ಮೈಕ್ರೊಸಾಫ್ಟಿನ ವರ್ಡ್ ಹಾಗೂ ಪವರ್ ಪಾಯಿಂಟ್ ಅಟಾಚ್ಮೆಂಟುಗಳನ್ನು ವಿರೋಧಿಸಲು ಈ ಕೆಳಗಿನಂತೆ ಪುಟ್ಟ ವಾಕ್ಯದೊಂದಿಗೆ ತಮ್ಮ ಮೇಯ್ಲುಗಳಲ್ಲಿ ಸಹಿ ಹಾಕುವ ಸಲಹೆ ನೀಡುತ್ತಾರೆ:


ದಯವಿಟ್ಟು ನನಗೆ ವರ್ಡ್ ಅಥವ ಪವರ್ ಪಾಯಿಂಟ್ ಅಟ್ಟಾಚ್ಮೆಂಟುಗಳನ್ನು ಕಳುಹಿಸುವುದನ್ನು ತಪ್ಪಿಸಿ.

http://www.gnu.org/philosophy/no-word-attachments.html ನೋಡಿ.


ವರ್ಡ್ ಡಾಕ್ಯುಮೆಂಟ್ ಒಂದನ್ನು ಅಟ್ಟಾಚ್ಮೆಂಟಾಗಿ ಕಳುಹಿಸಿದ ಇ-ಮೇಯ್ಲೊಂದಕ್ಕೆ [:http://www.gnu.org/philosophy/papadopoulos-response.html|ಅಲೆಕ್ಸಾಂಡರ್ ಪಪಾಡೊಪೌಲೊಸ್ ರವರು ಬರೆದ ಉತ್ತರ ನೋಡಿ].


ವಾಶಿಂಗ್ಟನ್ ಡಿ.ಸಿ. ಗಾಲಾಡೆಟ್ ವಿಶ್ವವಿದ್ಯಾನಿಲಯದ ಕೆವಿನ್ ಕೋಲ್ ರವರು ವರ್ಡ್ ಅಟ್ಟಾಂಚ್ಮೆಂಟೊಂದು ತಮಗೆ [:http://www.gnu.org/philosophy/kevin-cole-response.html|ಬಂದಾಗಲೆಲ್ಲ ಹೀಗೊಂದು ಉತ್ತರ ಕಳುಹಿಸುತ್ತಾರೆ].


ಫಾದರ್ ಮಾರ್ತಿನ್ ಸಿಲ್ವೆಸ್ಟರ್ ರವರು [:http://www.gnu.org/philosophy/sylvester-response.html|ಸುದೀರ್ಘ ಉತ್ತರವೊಂದನ್ನು ಬರೆದಿದ್ದಾರೆ]. ಪಡೆದುಕೊಂಡವರಿಗೆ ಓದಲಾಗದ ವರ್ಡ್ ಅಟ್ಟಾಂಚ್ಮೆಂಟುಗಳನ್ನು ಕಳುಹಿಸುವುದು ಎಷ್ಟು ಅಗೌರವ ನಡುವಳಿಕೆ ಎಂಬುದಕ್ಕೆ ಇನ್ನಷ್ಟು ಆಧಾರ ಒದಗಿಸುತ್ತದೆ ಇವರ ಉತ್ತರ.


ಸ್ಟಾಲ್ಮನ್ ರ ಆಯ್ದ ಪ್ರಬಂಧಗಳ ಪುಸ್ತಕ [:http://www.gnu.org/philosophy/fsfs/rms-essays.pdf|ಓದಲು ಲಭ್ಯವಿದೆ]. ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾಗೂ ಅದರ ಹಾರ್ಡ್ ಕಾಪಿ ಕೊಳ್ಳಲು ಬೇಕಾದ ವಿವರಗಳಿಗೆ [:http://www.gnu.org/doc/book13.html|ಈ ಪುಟ ನೋಡಿ].
ಅನುವಾದ: ಹರಿ ಪ್ರಸಾದ್ ನಾಡಿಗ್
Copyright © 2002 Richard M. Stallman