ಇ-ಮೇಲ್ ಖಾತೆ:ನಾಪತ್ತೆ
(ಇ-ಲೋಕ-59)(29/1/2008)
ನಿಮಗೆ ಉಚಿತವಾಗಿ ಲಭ್ಯವಾಗುವ ಮಿಂಚಂಚೆ ಸೇವೆಯ ಮಿಂಚಂಚೆಗಳು ಕಾಣೆಯಾದದ್ದಿಯೇ?ಇರಲಾರದು ತಾನೇ?ಕಂಪೆನಿಯೊಂದು ತನ್ನಲ್ಲಿರುವ ಮಿಂಚಂಚೆ ಖಾತೆಗಳ ಪೈಕಿ ಕ್ರಿಯಾಶೀಲವಾಗಿದ್ದ,ಹದಿನಾಲ್ಕು ಸಾವಿರ ಖಾತೆಗಳನ್ನು ಕಿತ್ತೆಸೆದು ಈಗ ಕ್ಷಮಿಸಿ ಎನ್ನುತ್ತಿದೆ.ಅಮೆರಿಕಾದ ಚಾರ್ಟರ್ ಎನ್ನುವ ಕಂಪೆನಿ ಕೇಬಲ್ ಕಂಪೆನಿ.ಇದು ಟಿವಿ ಸಂಕೇತಗಳನ್ನಷ್ಟೇ ನೀಡದೆ,ಅಂತರ್ಜಾಲ ಸೇವೆಯನ್ನೂ ನೀಡುತ್ತಿದೆ.ಅಂತರ್ಜಾಲ ಸೇವೆ ಪಡೆದವರಿಗೆ ಕಂಪೆನಿಯು ಉಚಿತ ಮಿಂಚಂಚೆ ಖಾತೆಯನ್ನೂ ಒದಗಿಸುತ್ತದೆ.ಆದರೆ ಹಲವಾರು ಗ್ರಾಹಕರು ಈ ಸೇವೆಯನ್ನು ಬಳಸದೆ ಇರುವುದಿದೆ.ಹಾಗೆ ಮಾಡಿದಾಗ ಉಪಯೋಗವಾಗದಿದ್ದ ಖಾತೆಗಳನ್ನು ತೆಗೆದು ಬಿಡುವ ಪರಿಪಾಟ ಕಂಪೆನಿ ಪಾಲಿಸುತ್ತಿದೆ.ಇದನ್ನು ಮಾಡಲು ತಂತ್ರಾಂಶವೊಂದನ್ನು ಬಳಸಲಾಗುತ್ತಿದೆ.ಇತ್ತೀಚೆಗೆ ಹಾಗೆ ಮಾಡುತ್ತಿದ್ದಾಗ ತಂತ್ರಾಂಶ ತಪ್ಪೆಸಗಿ,ಬಳಕೆಯಾಗುತ್ತಿದ್ದ ಖಾತೆಗಳನ್ನೂ ಕಿತ್ತೆಸೆಯುವ ತಪ್ಪು ಮಾಡಿತು.ಈಗ ಆ ಖಾತೆ ಹೊಂದಿದ್ದವರ ಮಿಂಚಂಚೆಗಳನ್ನು ಮತ್ತೆ ಪಡೆಯುವ ವಿಧಾನಗಳೇ ಇಲ್ಲವಾಗಿವೆ.ಚಾರ್ಟರ್ ಕಂಪೆನಿ ಅಂತಹ ಖಾತೆಗಳ ಮಾಲಕರಿಗೆ ಸಾರಿ ಹೇಳಿ ಕೈತೊಳೆದುಕೊಂಡಿದೆ.
ಜನಪ್ರಿಯವಾಗಲಿರುವ ಮೊಬೈಲ್ ಜಾಹೀರಾತು :ಗೂಗಲ್ ಸಿಇಓ ವಿಶ್ವಾಸ
ಎರಿಕ್ ಸ್ಮಿತ್, ಪ್ರಖ್ಯಾತ ಗೂಗಲ್ ಕಂಪೆನಿಯ ಸಿಇಓ.ಮುಂದಿನ ದಿನಗಳಲ್ಲಿ,ಅಂತರ್ಜಾಲವನ್ನು ಮೊಬೈಲ್ ಮೂಲಕ ಜನರಿಗೆ ತಲುಪಿಸುವುದು ಗೂಗಲ್ ಕಂಪೆನಿಯ ಬಯಕೆ.ಮೊಬೈಲ್ ಸೇವೆಯ ರಹದಾರಿ ಪಡೆಯಲು ಕಂಪೆನಿ ಅಮೆರಿಕಾದಲ್ಲಿ ಪ್ರಯತ್ನಿಸುತ್ತಿದೆ.ಅಂತರ್ಜಾಲ ತಾಣಗಳಲ್ಲಿ ಜಾಹೀರಾತುಗಳೂ ಇರುತ್ತದೆ ತಾನೇ?ಮೊಬೈಲ್ ಮೂಲಕ ಲಭ್ಯವಾಗುವ ಅಂತರ್ಜಾಲದಲ್ಲೂ ಜಾಹೀರಾತುಗಳಿರಲೇ ಬೇಕು.ಆದರೆ ಕಾಣಿಸಿಕೊಳ್ಳುವ ಜಾಹೀರಾತನ್ನು ವ್ಯಕ್ತಿಯಿರುವ ಸ್ಥಳವನ್ನು ಹೊಂದಿಕೊಂಡು ನೀಡಿದರೆ ಹೇಗೆ ಎನ್ನುವುದು ಗೂಗಲ್ ಯೋಚನೆ.ವ್ಯಕ್ತಿಯಿರುವ ಸ್ಥಾನ ಪತ್ತೆ ಮಾಡಲು ಜಿಪಿಎಸ್ ತಂತ್ರಜ್ಞಾನ ಹೇಗೂ ಲಭ್ಯವಿದೆ.ಅಂತರ್ಜಾಲ ಜಾಲತಾಣದಲ್ಲಿ ಈ ಸ್ಥಾನವನ್ನಾಧರಿಸಿದ ಜಾಹೀರಾತು ನೀಡಬೇಕು ಎನ್ನುವುದು ಕಂಪೆನಿಯ ಕನಸು.ಈ ಈ ರೀತಿಯ ವಿನೂತನ ಸೇವೆ ಜಾಹೀರಾತುದಾರರಿಗೆ ದುಬಾರಿಯಾಗಬಹುದಾದರೂ,ಅದು ಯಶಸ್ವಿಯಾಗುತ್ತದೆ ಎನ್ನುವುದು ಎರಿಕ್ ವಿಶ್ವಾಸ.ಇಂತಹ ತಂತ್ರಜ್ಞಾನ ನಿಜವಾದಾಗ,ಹೋಟೆಲ್ ಬಳಿ ಸಾರುವಾಗ,ಆ ಹೋಟೆಲಿನ ಜಾಹೀರಾತು ಮೊಬೈಲಿನಲ್ಲಿ ಕಾಣಿಸಿಕೊಳ್ಳುತ್ತದೆ.ಅಂಗಡಿಯ ಬಳಿ ಸಾಗಿಹೋಗುವಾಗ,ಅಲ್ಲಿ ಲಭ್ಯವಿರುವ ಕಡಿತದ ದರ ಮಾರಾಟಗಳ ಬಗೆಗಿನ ವಿವರಗಳು ಲಭ್ಯವಾಗುತ್ತವೆ.ಇದರಿಂದ ಜಾಹೀರಾತುದಾರರಿಗೆ ಹೆಚ್ಚಿನ ಲಾಭವಾಗಲಿದೆಯೆಂದು ಎರಿಕ್ ಅಂದಾಜು.
ಯಾಹೂ ಕಂಪೆನಿ ಮುಳುಗುತ್ತಲಿದೆಯೇ?
ಅಮೆರಿಕಾವು ಆರ್ಥಿಕ ಹಿನ್ನಡೆಯನ್ನು ಕಾಣುತ್ತಿದೆಯೆಂಬ ಗುಮಾನಿ ಹಬ್ಬಿದೆ.ಹಲವಾರು ಪ್ರಸಿದ್ಧ ಕಂಪೆನಿಗಳ ವಹಿವಾಟು ಕುಸಿತ ಕಂಡಿದೆ.ಮುಂದಿನ ದಿನಗಳಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಉನ್ನತಿ ಕಷ್ಟವೆಂದು ಕಂಪೆನಿಗಳು ಒಪ್ಪಿಕೊಂಡಿವೆ.ಇಂತಹ ಹಿನ್ನಡೆ ಕಾಣುತ್ತಿರುವ ಕಂಪೆನಿಗಳಲ್ಲಿ ಯಾಹೂವಿನಂತಹ ದೈತ್ಯ ಕಂಪೆನಿಯೂ ಸೇರಿಕೊಂಡಿದೆಯಂತೆ.ದಿನಕ್ಕೆ ಯಾಹೂವಿನ ಅಂತರ್ಜಾಲ ಪುಟ ನೋಡುಗರ ಸಂಖ್ಯೆ ಮೂರು ಬಿಲಿಯನ್ ದಾಟುತ್ತದೆ.ತಿಂಗಳಿಗೆ ನೂರಮೂವತ್ತು ದಶಲಕ್ಷ ಚಂದಾದಾರರನ್ನು ಅದು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ.ಅಂತಹ ಕಂಪೆನಿಯೂ ಹಿನ್ನಡೆ ಕಾಣುತ್ತಿದೆ.ಯಾಹೂವಿನ ವೈಶಿಷ್ಟ್ಯವೆಂದರೆ,ಅದರ ತಾಣವನ್ನು ಸಂದರ್ಶಿಸುವವರು ತಾಣವನ್ನು ಬಹಳ ಹೊತ್ತು ವೀಕ್ಷಿಸುತ್ತಾರೆ.ಯಾಹೂ ಒದಗಿಸುವ ಸೇವೆಗಳಲ್ಲಿ ಮಿಂಚಂಚೆಯೂ ಒಂದು.ಸುದ್ದಿಗಳು,ಶೋಧ ಸೇವೆ,ನಕಾಶೆ,ಕ್ಯಾಲೆಂಡರ್,ಬ್ಲಾಗ್,ಅಂತರ್ಜಾಲ ಸ್ಥಳಾವಕಾಶ ಹೀಗೆ ಸೇವೆಯ ಪರಿಧಿ ಬಹಳ ದೊಡ್ಡದು.ಆದರೆ ಗೂಗಲ್ ಶೋಧ ಸೇವೆ ಜನಪ್ರಿಯವಾಗುತ್ತಿರುವುದರಿಂದ ಯಾಹೂ ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆಯಂತೆ.ಕಂಪೆನಿಯ ಶೇರು ಬೆಲೆ ದಿನದಿಂದ ದಿನಕ್ಕೆ ಇಳಿಯುತ್ತಿದೆ.ಕಂಪೆನಿಯು ನೌಕರರನ್ನು ಬಿಡಲಿದೆಯೆಂಬ ಸುದ್ದಿಯೂ ಇದೆ.ಇದಕ್ಕೆ ಮೊದಲೂ ಎರಡುಸಾವಿರದ ಇಸವಿಯ ವೇಳೆಗಿನ ಡಾಟ್ಕಾಮ್ ಕಂಪೆನಿಗಳ ಪತನದ ಸಮಯದಲ್ಲೂ ಹಿನ್ನಡೆ ಅನುಭವಿಸಿದ ಯಾಹೂ,ಆ ಸಮಸ್ಯೆಯಿಂದ ಸಮರ್ಥವಾಗಿ ಹೊರಬಂದಿದೆ.ಈ ಸಲವೂ ಹಾಗೆ ಆಗಬಹುದು ಎಂಬ ಭರವಸೆಯಿಡುವುದರಲ್ಲಿ ತಪ್ಪೇನಿದೆ?
ದೇಹವನ್ನು ಪರೀಕ್ಷಿಸುವ ಉಡುಗೆ-ತೊಡುಗೆ
ನಿಮ್ಮ ಉಡುಪು ದೇಹವನ್ನು ಮುಚ್ಚುವುದರ ಜತೆಗೆ ಅದಕ್ಕೆ ಅಂದವನ್ನು ನೀಡುತ್ತದೆ.ಇದರ ಜತೆಗೆ ಅದು ದೇಹದ ತಾಪ,ಹೃದಯದ ಆರೋಗ್ಯ ತಪಾಸಣೆಯನ್ನೂ ಮಾಡಿದರೆ ಒಳ್ಳೆಯದಲ್ಲವೇ?ಇಟೆಲಿಯ ಪೀಸಾದ ಬಳಿಯ ಸ್ಮಾರ್ಟೆಕ್ಸ್ ಎನುವ ಕಂಪೆನಿ ತಯಾರಿಸುವ ಉಡುಗೆಗಳು ಈ ರೀತಿಯವು. ಈ ಉಡುಪಿನಲ್ಲಿ ದೇಹದ ತಾಪವನ್ನಳೆದು,ಅದನ್ನು ನಿಸ್ತಂತು ಮಾಧ್ಯಮದ ಮೂಲಕ ಹೊರಸೂಸುವ ಸೆನ್ಸರುಗಳಿವೆ.ರಕ್ತದೊತ್ತಡ,ವಿದ್ಯುತ್ ಸಂಕೇತಗಳನ್ನು ಅಳೆಯುವ ಮಾಪಕಗಳೂ ಉಡುಪಿನಲ್ಲಿ ಅಡಕವಾಗಿವೆ.ಲ್ಯಾಪ್ಟಾಪ್ ಇದ್ದರೆ,ಈ ಉಡುಪು ರವಾನಿಸಿದ ಸಂಕೇತಗಳನ್ನು ಪಡೆದು ಪ್ರದರ್ಶಿಸಬಹುದು.ದೇಹದ ಸ್ಥಿತಿಗತಿಯನ್ನು ವ್ಯಕ್ತಿ ಸ್ವತಃ ಅರಿಯುವುದು ಸಾಧ್ಯ.ಮುಂದಿನ ದಿನಗಳಲ್ಲಿ ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಮೇಲೆ ಸತತವಾಗಿ ಕಣ್ಣಿಡಲು ಇಂತಹ ಉಡುಪನ್ನು ಬಳಸುವುದು ಸಾಮಾನ್ಯವಾಗಿಬಿಡಬಹುದು.
ಸ್ಮಾರ್ಟೆಕ್ಸ್ ಕಂಪೆನಿಯ ಇತರ ಉತ್ಪನ್ನಗಳಲ್ಲಿಕೈಗವಸೊಂದೂ ಸೇರಿದೆ.ಇದನ್ನು ಧರಿಸಿ,ಕೈಸನ್ನೆಗಳನ್ನು ಮಾಡಿದರೆ,ಕಂಪ್ಯೂಟರ್ ತಂತ್ರಾಂಶ ಅದಕ್ಕೆ ಸಂಬಂಧಿಸಿದ ಪದವನ್ನು ಉಚ್ಚರಿಸುತ್ತದೆ.ಇನ್ನೊಂದು ಉಡುಪು ಧರಿಸಿ,ಕುರ್ಚಿಯಲ್ಲಿ ಆಸೀನರಾದರೆ,ದೇಹದಕಟ್ಟುಮಸ್ತಾಗಿದೆಯೇ ಅಥವಾ ಬೊಜ್ಜಿನಿಂದ ಕೂಡಿದೆಯೇ ಎನ್ನುವುದು ಸ್ಪಷ್ಟವಾಗುತ್ತದೆ.
ಉದಯವಾಣಿ
*ಅಶೋಕ್ಕುಮಾರ್ ಎ