ಇ-ಲೋಕ-11(22/2/2007)
ಯಾವ ಜನ್ಮರಾಶಿಯವರು ದೀರ್ಘಾಯುಷಿಗಳು?
ರಾಶಿ ರಾಶಿ ದತ್ತಾಂಶಗಳನ್ನು ಜಾಲಾಡಿ, ಅದರಿಂದ ಉಪಯುಕ್ತ ಮಾಹಿತಿಯನ್ನು ಸೋಸಿ ತೆಗೆಯುವ ಡಾಟಾಮೈನಿಂಗ್ ತಂತ್ರಜ್ಞಾನವೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಂತೂ ಉತ್ಪನ್ನಗಳ ಮಾರಾಟ ಹೆಚ್ಚಸಲು ಯಾವ ತಂತ್ರ ಅನುಸರಿಸಬೇಕು ಎಂದು ನಿರ್ಧರಿಸಲು ಡಾಟಾಮೈನಿಂಗ್ ಬಳಸಿಕೊಳ್ಳುವುದು ಸಾಮಾನ್ಯ. ಗಣಿಯನ್ನಗೆದು ಅಮೂಲ್ಯ ವಸ್ತುಗಳನ್ನು ಹೊರತೆಗೆದರೆ, ದತ್ತಾಂಶವನ್ನಗೆದು ಜ್ಞಾನವನ್ನು ಹೊರತೆಗೆಯುವುದು ಸಾಧ್ಯ.
ಇತ್ತೀಚೆಗೆ ತಜ್ಞರು ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಇದೆಯೇ ಎಂದು ತಿಳಿಯಲು ಈ ತಂತ್ರ ಅನುಸರಿಸಿದರು.ಕೆನಡಾದ ಒಂಟಾರಿಯೋದ ದಶಲಕ್ಷ ಜನರಿಗೆ ಸಂಬಂಧಿಸಿದ ಮಾಹಿತಿಯನ್ನು ಜಾಲಾಡಿದಾಗ ಮೇಲ್ನೋಟಕ್ಕೆ ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಇದೆ ಎಂಬ ಅಂಶ ಕಂಡು ಬಂತು. ಸುಮಾರು ಇಪ್ಪತ್ತನಾಲ್ಕು ಅಂಶಗಳಲ್ಲಿ ಜನ್ಮರಾಶಿ ಮತ್ತು ರೋಗಗಳಿಗೆ ಸಂಬಂಧ ಕಂಡುಬಂತು. ಉದಾಹರಣೆಗೆ ಕುಂಭರಾಶಿಯವರಿಗೆ ಹೃದಾಯಾಘಾತ ಹೆಚ್ಚು, ತುಲಾದವರು ದೀರ್ಘಾಯುಷಿಗಳು ಎಂಬಿತ್ಯಾದಿ. ಆಸ್ಟಿನ್ ಎಂಬ ಅಂಕಿಅಂಶಶಾಸ್ತ್ರಜ್ಞ ಇದನ್ನು ಮತ್ತಷ್ಟು ಪರಿಶೀಲಿಸಬಯಸಿದ. ಆತ ದಶಲಕ್ಷ ಜನರನ್ನು ಎರಡು ಗುಂಪು ಮಾಡಿದ. ಮೊದಲ ಗುಂಪಿನ ಐದು ಲಕ್ಷ ಜನರ ದಾಖಲೆಗಳನ್ನು ಜಾಲಾಡಿ ಕಂಡುಕೊಂಡ ಜ್ಞಾನವು ಸತ್ಯವಾದರೆ,ಅದು ಉಳಿದ ಐದು ಲಕ್ಷ ಜನರಿಗೂ ಸತ್ಯವಾಗಬೇಕು ತಾನೇ? ಆದರೆ ಮೊದಲ ಐದು ಲಕ್ಷ ಜನರ ಡಾಟಾಮೈನಿಂಗ್ನಿಂದ ಕಂಡುಕೊಂಡ ವಿಷಯಗಳು ಎರಡನೇ ಗುಂಪಿಗೆ ಅನ್ವಯವಾಗದಿದ್ದರೆ,ಅದು ನಂಬಲರ್ಹ ಅಲ್ಲ ಎಂದು ಅವನ್ನು ಕೈಬಿಟ್ಟಾಗ ಯಾವ ಅಂಶವೂ ಜನ್ಮರಾಶಿಗೂ ರೋಗಗಳಿಗೂ ಸಂಬಂಧವಿರುವುದನ್ನು ಖಚಿತ ಪಡಿಸಲಿಲ್ಲ.
"ಕಂಪ್ಯೂಟರ್ ಹುಳ"ವಾಗುತ್ತಿರುವ ಮಕ್ಕಳು
ಒಂದು ಕಾಲದಲ್ಲಿ ಮಕ್ಕಳು "ಪುಸ್ತಕದ ಹುಳು"ವಾಗುತ್ತಿರುವುದಕ್ಕೆ ಖೇದ ವ್ಯಕ್ತವಾಗುತ್ತಿತ್ತು. ಆದರೀಗ ಮಕ್ಕಳು ಕಂಪ್ಯೂಟರಿಗೆ ಅಂಟಿಕೊಳ್ಳುವ ಪ್ರವೃತ್ತಿ ಹೆಚ್ಚಿದೆ. ಮೂರು ವರ್ಷ ವಯಸ್ಸಿನ ಮಕ್ಕಳೂ ಕಂಪ್ಯೂಟರ್ ಬಳಸಲು ಸಮರ್ಥರಾಗಿರುವುದೀಗ ಸಹಜವಾಗಿ ಬಿಟ್ಟಿದೆ.ವೆಬ್ಸೈಟುಗಳು ಮಿಥ್ಯಾವಾಸ್ತವ ಆಟಿಕೆಗಳನ್ನು ಒದಗಿಸುತ್ತವೆ. ಆಟಿಕೆ ಖರೀದಿಸಿದಾಗ ಆನ್ಲೈನಿನಲ್ಲಿ ಆಡಬಹುದಾದ ಆಟವನ್ನೂ ಉಚಿತವಾಗಿ ಬಳಸಲು ಅನುವು ಮಾಡಿ ಅಂತರ್ಜಾಲಾಟದ ಜನಪ್ರಿಯತೆಗೆ ಕಾರಣವಾಗುತ್ತಿವೆ.ತಮಗೋಚಿ ಎನ್ನುವ ಮಿಥ್ಯಾ ಆಟಿಕೆ ಆನ್ಲೈನಿನಲ್ಲಿ ಮಾತ್ರಾ ಲಭ್ಯ. ಇದು ಮಕ್ಕಳ ಆಟಿಕೆಯಲ್ಲಿ ಹೊಸದೇ ಆದ ಅಲೆಯನ್ನು ಹುಟ್ಟುಹಾಕಿದೆ.
ಉಚಿತ ಸೌರಶಕ್ತಿ ಯೋಜನೆ!
"ನಿಮ್ಮ ಮನೆಯ ಮೇಲೆ ಸೌರಕೋಶಗಳ ಮೂಲಕ ವಿದ್ಯುತ್ ಉತ್ಪಾದಿಸುವ ಸ್ಥಾವರ ಸ್ಥಾಪಿಸುತ್ತೇವೆ. ನೀವು ಇದಕ್ಕೆ ಮರುಪಾವತಿಸಬಹುದಾದ ಠೇವಣಿ ಮೊತ್ತವನ್ನು ಸಂದಾಯ ಮಾಡಿದರೆ ಸಾಕು. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್ ಪೂರೈಕೆ ನಾವು ಮಾಡುತ್ತೇವೆ. ಅದಕ್ಕೆ ಸದ್ಯ ನೀವು ಮೆಸ್ಕಾಂಗೆ ಪಾವತಿಸುವ ವಿದ್ಯುತ್ಶುಲ್ಕಕ್ಕಿಂತ ಕಡಿಮೆ ಪಾವತಿಸಿದರೆ ಸಾಕು.ನಿಗದಿತ ಸಮಯದ ಬಳಿಕ ನೀವು ಈ ಯೋಜನೆಯಿಂದ ಹೊರಬಂದರೆ,ನಿಮ್ಮ ಆರಂಭಿಕ ಠೇವಣಿ ವಾಪಸ್ಸು ಮಾಡುತ್ತೇವೆ", ಎಂದು ಯಾವುದಾದರೂ ಕಂಪೆನಿ ಕೊಡುಗೆ ನೀಡಿದರೆ ನೀವೇನು ಮಾಡುತ್ತೀರಿ?ಮರುಳಾಗದಿರುವುದು ಕಷ್ಟ,ಅಲ್ಲವೇ?ಸಿಟಿಜನ್ರಿ ಎನ್ನುವ ಅಮೆರಿಕಾದ ಕಂಪೆನಿ ಇಂತಹ ಯೋಜನೆ ಪ್ರಕಟಿಸಿ ಸುದ್ದಿ ಮಾಡಿದೆ. ಮೇಲ್ನೋಟಕ್ಕೆ ಯೋಜನೆ ಅದ್ಭುತವಾಗಿದೆ. ಆದರೆ ಇದು ಕಾರ್ಯಸಾಧ್ಯವೇ?ಮನೆಯಲ್ಲಿ ವಿದ್ಯುತ್ ಸ್ಥಾವರ ಸ್ಥಾಪಿಸಲು ಇಪ್ಪತ್ತೈದು ಸಾವಿರ ಡಾಲರು ಖರ್ಚು ಬರುತ್ತದೆ. ಇದಕ್ಕೆ ಅಗತ್ಯವಾದ ಅಪಾರ ಬಂಡವಾಳ ಎಲ್ಲಿಂದ ಬರುತ್ತದೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.ಇದರ ಜತೆಗೆ ಕಂಪೆನಿ ಹಲವಾರು ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡು ಇದೊಂದು ನೆಟ್ವರ್ಕ್ ಕಂಪೆನಿಯೇ ಎಂಬ ಪ್ರಶ್ನೆ ಎಬ್ಬಿಸಿದೆ. ನೆಟ್ವರ್ಕ್ ಕಂಪೆನಿಗಳು ಟೋಪಿ ವ್ಯವಹಾರವಾಗಿ ಬಿಡುವುದೇ ಹೆಚ್ಚಾದ್ದರಿಂದ ಇದೂ ಜನರನ್ನು ವಂಚಿಸುವ ಯೋಜನೆಯೇ ಎಂದು ಯೋಚಿಸುವವರ ಸಂಖ್ಯೆ ದೊಡ್ಡದಿದೆ.ಕಂಪೆನಿಯ ಮುಖ್ಯಸ್ಥ ವಿದ್ಯುತ್ ವಿಷಯಗಳಲ್ಲಿ ವಿದ್ವತ್ ಗಳಿಸಿದವನೇ ಆಗಿರುವುದು ಮತ್ತು ಇಂತಹ ಯೋಜನೆಗೆ ಅವಶ್ಯ ತಂತ್ರಜ್ಞಾನದ ಲಭ್ಯತೆ ಕಂಪೆನಿಯು ನಿಜವಾಗಿಯೂ ಇಂತಹ ಧ್ಯೇಯ ಹೊಂದಿದೆಯೆ ಎಂಬ ಅನಿಸಿಕೆಯನ್ನು ಹುಟ್ಟು ಹಾಕಿದೆ.ಸ್ಥಾವರ ಸ್ಥಾಪಿಸಲು ಅಗತ್ಯವಾದ ಸೌರಕೋಶಗಳನ್ನೂ ತಾನೇ ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚ ಗಣನೀಯವಾಗಿ ತಗ್ಗಿಸಿ ಅಗತ್ಯ ಬಂಡವಾಳವನ್ನು ಕಡಿಮೆ ಮಾಡುವುದು ಸಾಧ್ಯ ಎಂದು ಕಂಪೆನಿಯ ವಾದ. ತನ್ನ ಹೂಡಿಕೆದಾರರಿಗೆ ಅಪಾರ ಬಂಡವಾಳ ತೊಡಗಿಸುವ ಸಾಮರ್ಥ್ಯ ಇದೆ ಎಂದು ಅದು ಹೇಳಿಕೊಂಡಿದೆ.
ಗೋಡೆ ಏರುವುದೀಗ ಸಲೀಸು!
ಮಸಾಚ್ಯುಸೆಟ್ಟಿನ ತಾಂತ್ರಿಕ ವಿದ್ಯಾಲಯ ವಿದ್ಯಾರ್ಥಿ ಗೋಡೆ ಹತ್ತುವುದನ್ನು ಸುಲಭವಾಗಿಸುವ ಸಾಧನವನ್ನು ಅನ್ವೇಷಿಸಿದ್ದಾನೆ. ಹಗ್ಗವನ್ನು ಸುರುಳಿ ಸುತ್ತಿಕೊಂಡು ಮೇಲೇರುವುದನ್ನು ಸಾಧ್ಯವಾಗಿಸುವ ತಂತ್ರ ಇದರಲ್ಲಿ ಬಳಕೆಯಾಗಿದೆ. ಇದು ಸಾಧ್ಯವಾಗಲು ಕಟ್ಟಡಗಳಲ್ಲಿ ಮೇಲಿನಿಂದ ನೇತಾಡುವ ದೃಢವಾದ ಹಗ್ಗ ಲಭ್ಯವಿರಬೇಕು.ಅಗ್ನಿಶಾಮಕ ದಳಗಳವರಿಗೆ,ಪೊಲೀಸರಿಗೆ ಆಪತ್ಕಾಲದಲ್ಲಿ ಕಟ್ಟಡ ಏರಲು ಸುಲಭವಾಗಿಸುವುದು ಈ ಸಾಧನವನ್ನು ತಯಾರಿಸುವುದಕ್ಕೆ ಸ್ಪೂರ್ತಿ.ಸೆಕೆಂಡಿಗೆ ಹತ್ತಡಿ ವೇಗದಲ್ಲಿ ಏರುವುದು ಮತ್ತು ಇಳಿಯುವುದು ಸಾಧ್ಯ.ನೌಕೆಯನ್ನು ಲಂಗರು ಹಾಕಲು ಬಳಸುವ ಉಪಾಯ ಇದರಲ್ಲೂ ಬಳಕೆಯಾಗಿದೆ.ಇಪ್ಪತ್ತಮೂರರ ಹರೆಯದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಥನ್ ಬಾಲ್ ಈ ಅನ್ವೇಷಣೆಗೆ ಪ್ರಶಸ್ತಿಯನ್ನೂ ಬಗಲಿಗೆ ಹಾಕಿಕೊಂಡಿದ್ದಾನೆ.
*ಅಶೋಕ್ಕುಮಾರ್ ಎ