ಇ-ಲೋಕ-12 (2/3/2007)

ಇ-ಲೋಕ-12 (2/3/2007)

ಬರಹ

ಸಂಶೋಧನಾ ಪ್ರಬಂಧಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಹೋರಾಟ
 ಸಂಶೋಧನಾ ಚಟುವಟಿಕೆಗಳು ಸಾಕಷ್ಟು ಬಾರಿ ಸರಕಾರದ ಅನುದಾನದೊಂದಿಗೆ ನಡೆಯುತ್ತವೆ. ಆದರೆ ಅವುಗಳ ಫಲಿತಾಂಶಗಳನ್ನೊಳಗೊಂಡ ಸಂಶೋಧನಾ ಪ್ರಬಂಧಗಳು ಪ್ರಕಾಶಕರ ಮೂಲಕ ಚಂದಾದಾರರಿಗೆ ಲಭ್ಯವಾಗುವುದೇ ಹೆಚ್ಚು. ಚಂದಾದಾರರು ದುಬಾರಿ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರ ಅನುದಾನ ಪಡೆದು ನಡೆಸಿದ ಸಂಶೋಧನಾ ಚಟುವಟಿಕೆಗಳನ್ನು ಸರ್ವರಿಗೆ ಲಭ್ಯವಾಗಿಬೇಕಾದ್ದು ನ್ಯಾಯ. ಇದನ್ನು ಮುಕ್ತವಾಗಿ ಒದಗಿಸಬೇಕು ಎಂದು ತಗಾದೆ ಹೂಡಿ,ಯುರೋಪಿಯನ್ ಒಕ್ಕೂಟದ ಆಯೋಗದ ಮುಂದೆ ದಾವೆ ಹೂಡಲಾಗಿದೆ.ಆಯೋಗವು ಸಂಶೋಧನಾ ಪ್ರಬಂಧಗಳ ಮುಕ್ತ ಲಭ್ಯತೆಗೆ ಅನುವು ಮಾಡುವ ದೃಷ್ಟಿಯಿಂದ ಈಗಾಗಲೇ ನೂರು ಮಿಲಿಯನ್ ಡಾಲರಿನ ಕೋಶವನ್ನು ಸ್ಥಾಪಿಸಿದೆ.        ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಖಾಸಗಿಯವರು ನಡೆಸುವ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾರೆ. ನಂತರ ಈ ನಿಯತಕಾಲಿಕಗಳನ್ನು ವಿಶ್ವವಿದ್ಯಾಲಯದವರು ದುಡ್ಡು ತೆತ್ತು ಖರೀದಿಸಬೇಕಾಗುತ್ತದೆ.ಇದು ಬಹಳ ವರ್ಷಗಳಿಂದಲೂ ನಡೆದು ಬಂದಿರುವ ಸಂಪ್ರದಾಯ.ಹಾಗೆಂದು ಸ್ವೀಡನ್‌ನ ಸಂಸ್ಥೆಯೊಂದು ಈಗಾಗಲೇ ತನ್ನ ಪ್ರಬಂಧಗಳನ್ನು ಮುಕ್ತವಾಗಿ ಒದಗಿಸುತ್ತದೆ. ಕೆನಡಾದ ಸಂಸ್ಥೆಯೊಂದೂ ತನ್ನ ಸಂಶೋಧನಾ ಪ್ರಬಂಧಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ ಹೆಚ್ಚಿನ ಕಡೆ ಸಂಶೋಧನಾ ಪ್ರಬಂಧಗಳನ್ನು ಸಂಶೋಧಕರು ದುಬಾರಿ ಶುಲ್ಕ ಪಾವತಿಸಿಯೇ ಪಡೆಯಬೇಕಾದ್ದು ವಿಪರ್ಯಾಸ.
 

ಎಚ್ಚರರೆಚ್ಚರ ಕಂಪ್ಯೂಟರಿಗೆ ವೈರಸ್ ಪೀಡೆ ಕಾಡಬಹುದು!
 ರಿನ್‌ಬೋಟ್ ಮತ್ತು ಡೆಲ್‌ಬೋಟ್ ಎನ್ನುವ ವೈರಸ್‌ಗಳು ಕೆಲವು ಜಾಲಗಳನ್ನು ಬಾಧಿಸಿ ಭೀತಿ ಹುಟ್ಟಿಸಿದೆ.ವೈರಸ್ ನಿರೋಧಕ ತಂತ್ರಾಂಶದ ದೌರ್ಬಲ್ಯವನ್ನು ಬಳಸಿಕೊಂಡು ಈ ವೈರಸ್‌ಗಳು ಕಂಪ್ಯೂಟರ್‍ ಜಾಲಕ್ಕೆ ನುಗ್ಗಿ, ಜಾಲದ ಕಂಪ್ಯೂಟರುಗಳ ನಿಯಂತ್ರಣವನ್ನು ಹೊಂದಲು ಹ್ಯಾಕರುಗಳಿಗೆ ಅನುವು ಮಾಡುತ್ತವೆ.ಮೈಕ್ರೋಸಾಫ್ಟ್ ಕಂಪೆನಿಯ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿದ ಕಂಪ್ಯೂಟರುಗಳಿಗೇ ಈ ವೈರಸ್ ಪೀಡೆ ಅಧಿಕ.ಎರಡು ವರ್ಷದ ಕೆಳಗೇ ಈ ತೆರನ ವೈರಸ್‌ಗಳು ಕಂಪ್ಯೂಟರ್‍ ಜಾಲಗಳನ್ನು ಕಾಡಿದ್ದುವು.
 

ಪಾರ್ಕಿಂಗ್ ಜಾಗೆಗೂ ಹರಾಜು!
 ನಗರಗಳಲ್ಲಿ ಕಾರು ಖರೀದಿಸುವುದು ಚಿಟಿಕೆಯ ಕೆಲಸವಿರಬಹುದು. ಆದರೆ ಅದನ್ನು ನಿಲ್ಲಿಸಲು ಪಾರ್ಕಿಂಗ್ ಜಾಗೆ ಹುಡುಕುವ ಕಷ್ಟ ವೈರಿಗೂ ಬೇಡ.ಗಂಟೆಕಾಲ ಅಲೆದಾಡಿ ಕೊನೆಗೂ ಪಾರ್ಕಿಂಗ್‌ಗೆ ಜಾಗೆ ದೊರಕಿದಾಗ ಏಸಿ ಕಾರಿನೊಳಗೂ  ಬೆವರು ಮೂಡುತ್ತದೆ. ಬಾಸ್ಟನ್ ಪಟ್ಟಣದಲ್ಲಿ ಸ್ಪೋಟ್‌ಸ್ಕೌಟ್ ಎಂಬ ಕಂಪೆನಿ ಹೊಸ ವ್ಯವಸ್ಥೆ ಆರಂಭಿಸಿದೆ. ಅಂತರ್ಜಾಲ ಮೂಲಕ ಖಾಲಿ ಪಾರ್ಕಿಂಗ್ ಜಾಗಗಳ ಕಾಯ್ದಿರಿಸಲು ಅವಕಾಶ ನೀಡುವ ವ್ಯವಸ್ಥೆಯನ್ನದು ಜಾರಿಗೆ ತಂದಿದೆ. ಹಣವಿದ್ದವರು ತಾವು ಹೋಗಲಿರುವ ಸ್ಥಳದ ಪಾರ್ಕಿಂಗ್ ಸ್ಥಳಗಳ ಪಾರ್ಕಿಂಗ್ ಅವಕಾಶವನ್ನು ಮುಂದಾಗಿ ಹಣ ಪಾವತಿಸಿ ಕಾದಿಸರಿಸಿ,ಅತ್ತ ಪಯಣಿಸಿ, ಸ್ಥಳವನ್ನು ಕಾಯುವಿಕೆಯ ಅಗತ್ಯವಿಲ್ಲದೆ ಪಡೆಯಬಹುದು. ಆ ಹೊತ್ತಿನಲ್ಲಿ ಜಾಗ ಹುಡುಕಿ ಬಂದವರು ಖಾಲಿ ಪಾರ್ಕಿಂಗ್ ಸ್ಥಳ ನೋಡಿದರೂ ಅದರಲ್ಲಿ ವಾಹನ ನಿಲ್ಲಿಸುವಂತಿಲ್ಲ.
 ಈ ವ್ಯವಸ್ಥೆ ಶ್ರೀಮಂತರ ಪರವಾಗಿರುವುದು ಮೇಲ್ನೋಟಕ್ಕೇ ಲಭ್ಯ. ಖಾಸಗಿ ಪಾರ್ಕಿಂಗ್ ಸ್ಥಳ ಬೇಕಿದ್ದರೆ ಹೀಗೆ ಕೊಡಲಿ. ಆದರೆ ಸಾರ್ವಜನಿಕ ಸ್ಥಳಗಳನ್ನು ಹೀಗೆ ಹರಾಜು ಮಾಡಿಕೊಡುವುದು ಸರಿಯಲ್ಲ. ಬದಲಾಗಿ ಸಾಮಾನ್ಯವಾಗಿರುವ ಮೊದಲು ಬಂದವರಿಗೆ ಮೊದಲು ಅವಕಾಶವೇ ಇರಲಿ ಎಂಬ ಕೂಗು ಅಲ್ಲಿ ಎದ್ದಿದೆ.
 

ಎತ್ತ ಬೇಕಾದರೂ ಹಾರುವ ಪಾರಿವಾಳ
 ಪಾರಿವಾಳದ ಮಿದುಳಿನಲ್ಲಿ ವಿದ್ಯುಧ್ರುವಗಳನ್ನು ನೆಟ್ಟು ಅದರ ಮೂಲಕ ಹಕ್ಕಯ ಮಿದುಳಿನ ನಿಗದಿತ ಭಾಗಗಳಲ್ಲಿ ಸಂಚಲನೆ ಉಂಟು ಮಾಡಿ ಅದು ಬೇಕಾದ ಕಡೆ ಹಾರುವಂತೆ ಮಾಡಲು ಚೈನಾದ ಸಂಶೋಧಕರಿಗೆ ಸಾಧ್ಯವಾಗಿದೆಯಂತೆ.ಶ್ಯಾಂಡೋಗ್ ವಿಶ್ವವಿದ್ಯಾಲಯದ ರೊಬೋಟ್ ಇಂಜಿನಿಯರಿಂಗ್ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಸಂಶೋಧಕರಿದನ್ನು ಸಾಧಿಸಿದ್ದಾರೆ. ಇದರ ಪ್ರಯೋಜನ ಪಡೆಯುವ  ಬಗೆ ಹೇಗೆನ್ನುವುದು ಸ್ಪಷ್ಟವಾಗಿಲ್ಲ.
 

ಅಂತರ್ಜಾಲದಲ್ಲೇ ನಿಮ್ಮ ಮಾಹಿತಿಯ ಕಣಜವನ್ನಿಡಿ!
 ಸಾಮಾನ್ಯವಾಗಿ ನಮ್ಮ  ಕಂಪ್ಯೂಟರ್‌ಗಳ ಕಡತಗಳು,ಹಾಡುಗಳು,ವಿಡಿಯೋಗಳು ನಮ್ಮ ಕಂಪ್ಯೂಟರ್‌ನ ಹಾರ್ಡ್‌ಡಿಸ್ಕಿನಲ್ಲಿ ಇರುವುದೇ ಹೆಚ್ಚು. ಆದರೆ ಅಂತರ್ಜಾಲದ ಸರ್ವರ್‌ಗಳಲ್ಲಿ ಮಾಹಿತಿಯನ್ನಿಟ್ಟು, ಬೇಕಾದಾಗ ಅವನ್ನು ನಮ್ಮ ಕಂಪ್ಯೂಟರಿಗೆ ತರುವ ವಿಧಾನ ಜನಪ್ರಿಯವಾಗಹತ್ತಿದೆ.ಆದರೆ ಕಂಪ್ಯೂಟರ್‍ ಜಾಲ ಕೈಕೊಟ್ಟರೆ,ಮಾಹಿತಿ ನಿಮ್ಮ ಉಪಯೋಗಕ್ಕೆ ಬಾರದು ಎನ್ನುವ ಅಪಾಯ ಇದರಲ್ಲಿದೆ. ಅದರ ಹೊರತಾಗಿಯೂ ಇಂತಹ ಆನ್‌ಲೈನ್ ಸೇವೆ ಒದಗಿಸುವ ತಯಾರಿಗೆ ಸಿಗೇಟ್ ಕಂಪೆನಿ ಇಳಿದಿದೆ.ಎಲ್ಲೇ ಇದ್ದರೂ ನಿಮ್ಮ ಮಾಹಿತಿ ಜಾಲದಲ್ಲಿ ಲಭ್ಯ ಎನ್ನುವುದು ಈ ವಿಧಾನದ ಪ್ಲಸ್‌ಪಾಯಿಂಟ್
*ಅಶೋಕ್‌ಕುಮಾರ್‍ ಎ