ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ ?

ಈಗಲೂ ನಕ್ಸಲ್ ಚಳವಳಿಯ ಹಿಂಸಾ ಮಾರ್ಗದ ಅವಶ್ಯಕತೆ ಇದೆಯೇ ?

ಮುಖ್ಯವಾಹಿನಿಯ ಪ್ರಜಾಪ್ರಭುತ್ವದ ರಾಜಕೀಯ ಮಾರ್ಗ ಒಳ್ಳೆಯ ಆಯ್ಕೆಯಾಗಬಹುದಲ್ಲವೇ? ಎನ್ಕೌಂಟರ್, ಛತ್ತೀಸ್ಗಡದಲ್ಲಿ 29 ನಕ್ಸಲರ ಹತ್ಯೆ ಆಗಾಗ ಈ ರೀತಿಯ ಸುದ್ದಿಗಳು ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್, ಛತ್ತೀಸ್ಗಡ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಬಿಹಾರದ ಕೆಲವು ಭಾಗಗಳು ಮುಂತಾದ ಕಡೆ ಕೇಳಿ ಬರುತ್ತದೆ. ಸೈದ್ಧಾಂತಿಕ ಸ್ಪಷ್ಟತೆ ಇದ್ದರೂ ಮಾರ್ಗದಲ್ಲಿ ಎಡವುತ್ತಿರುವ ನಕ್ಸಲರು, ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಪ್ರಜಾಪ್ರಭುತ್ವ ಇಷ್ಟೊಂದು ಗಟ್ಟಿಯಾಗಿ, ಆಳವಾಗಿ, ತಾಂತ್ರಿಕವಾಗಿ ಮುಂದುವರಿದಿರುವಾಗ, ಸಮೂಹ ಸಂಪರ್ಕ ಕ್ರಾಂತಿಯಾಗಿರುವಾಗ, ಈಗಲೂ ಶಸ್ತ್ರಾಸ್ತ್ರ ಹೋರಾಟ ಮಾಡುತ್ತಾ, ಹಿಂಸೆಯನ್ನು ನಂಬಿಯೇ ತಮ್ಮ ಹೋರಾಟ ಮಾಡುವ ಈ ಚಳವಳಿ ನಿಜಕ್ಕೂ ವಿಷಾದನೀಯ ಮತ್ತು ಅತ್ಯಂತ ಮೂರ್ಖತನದ್ದು.

ಭಾರತದಂತ ಬೃಹತ್ ಶಕ್ತಿಯುತ ಸೈನಿಕ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಕೆಲವೇ ಜನ, ಕೆಲವೇ ಶಸ್ತ್ರಾಸ್ತ್ರಗಳ ಮೂಲಕ ಹೆದರಿಸುವ, ಬೆದರಿಸುವ ಮಾರ್ಗಗಳಿಂದ ತಮ್ಮ ಯೋಜನೆ ಕಾರ್ಯರೂಪಕ್ಕೆ ತರುವ ಯೋಚನೆಯೇ ಅತ್ಯಂತ ಬಾಲಿಶವಾದದ್ದು. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ದುರ್ಬಲರ ಪರವಾಗಿ ತಮ್ಮ ತನು ಮನ ಧನವನ್ನು ಧಾರೆ ಎರೆದು ಹೋರಾಡುವುದು ಉತ್ತಮ ಮಾರ್ಗವೇನೋ ನಿಜ. ಆದರೆ ಅದಕ್ಕಾಗಿ ಶಸ್ತ್ರ ಮತ್ತು ಅದರ ಮೂಲಕ ಹಿಂಸೆಯನ್ನು ಖಂಡಿತವಾಗಿಯೂ ಈ ನೆಲದ ಯಾವ ನಾಗರಿಕರು ಒಪ್ಪಲು ಸಾಧ್ಯವಿಲ್ಲ. ನಿಜಕ್ಕೂ ನಕ್ಸಲರಿಗೆ ಆದರ್ಶಗಳಾಗಿ, ಸೈದ್ಧಾಂತಿಕ ಮಾದರಿಯಾಗಿ, ದಾರಿ ತೋರಬಹುದಾದ ಇಬ್ಬರು ವ್ಯಕ್ತಿಗಳೆಂದರೆ ಮಹಾತ್ಮಾ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್.

ಒಂದು ಚಳವಳಿ, ಅದರ ಹಿನ್ನೆಲೆ, ಅದರ ಮಾರ್ಗ, ಅದರ ಗುರಿ, ಅದನ್ನು ಸಾಧಿಸುವ ರೀತಿ ನೀತಿ, ಸ್ಪಷ್ಟತೆ, ಪ್ರಾಮಾಣಿಕತೆ ಈ ವಿಷಯದಲ್ಲಿ ಮಹಾತ್ಮ ಗಾಂಧಿ ನಿಜಕ್ಕೂ ಇಡೀ ವಿಶ್ವದ ಎಲ್ಲ ಹೋರಾಟಗಳಿಗೆ ಮಾದರಿಯಾಗುತ್ತಾರೆ. ಹಾಗೆಯೇ ಆ ಹೋರಾಟಗಳ ಯಶಸ್ಸು, ಕ್ರಮಬದ್ಧತೆ, ಅದು ಪ್ರಾಯೋಗಿಕವಾಗಿ, ಆಡಳಿತಾತ್ಮಕವಾಗಿ ಜಾರಿಯಾಗಬೇಕಾದರೆ ಅದಕ್ಕೆ ಅನುಸರಿಸಬೇಕಾದ ಆಡಳಿತಾತ್ಮಕ ಸ್ಪಷ್ಟತೆ ಬಾಬಾ ಸಾಹೇಬರ ಸಂವಿಧಾನಾತ್ಮಕ ಮೌಲ್ಯಗಳಲ್ಲಿ ಅಡಗಿದೆ. ಈ ಇಬ್ಬರ ಯೋಚನೆ ಶಕ್ತಿಯನ್ನು ಪ್ರಾಮಾಣಿಕವಾಗಿ ಮತ್ತು ವ್ಯಾಪಕವಾಗಿ ಬಳಸಿಕೊಳ್ಳಲು ನಕ್ಸಲರಿಗೆ ಸಾಧ್ಯವಾಗುವುದೇ ಆದರೆ ಖಂಡಿತವಾಗಲೂ ಈ ಜನರ ನಡುವೆ ಅವರು ತಮ್ಮ ಆಶಯಗಳನ್ನು ಪೂರೈಸಿಕೊಳ್ಳುವ ಎಲ್ಲ ಸಾಧ್ಯತೆಗಳು ಇದೆ ಮತ್ತು ಆ ಸಾಧ್ಯತೆಗಳು ಅನಿವಾರ್ಯ ಸಹ.

ಹಿಂಸೆಯಿಂದ ಏನನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಜೊತೆಗೆ ಒಂದು ವೇಳೆ ಹಿಂಸೆಯಿಂದ ಏನನ್ನಾದರೂ ಸಾಧಿಸುವುದು ಸಾಧ್ಯವಾದರೂ ಅದರಿಂದ ಆಗುವ ದುಷ್ಪರಿಣಾಮಗಳ ಮುಂದೆ ಫಲಿತಾಂಶ ಪ್ರಯೋಜನಕ್ಕೇ ಬರುವುದಿಲ್ಲ. ಕೆಲವು ಕಡೆ ನಕ್ಸಲರಿಂದ ಪೊಲೀಸರ ಹತ್ಯೆ, ಮತ್ತೆ ಕೆಲವು ಕಡೆ ಪೊಲೀಸರಿಂದ ನಕ್ಸಲರ ಹತ್ಯೆ, ಇಬ್ಬರೂ ಸಹ ತಮ್ಮ ಕರ್ತವ್ಯಗಳಲ್ಲಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಇಬ್ಬರು ಬಹುತೇಕ ಕೆಳ ಮಧ್ಯಮ ಮತ್ತು ಬಡತನದ ಜೀವನಶೈಲಿ ಹೊಂದಿರುವವರು. ಇದನ್ನು ಎಷ್ಟು ದಿನ ಸಹಿಸಿಕೊಳ್ಳುವುದು. ಈ ಸುದ್ದಿಗಳು ನಾಗರೀಕ ಸಮಾಜಕ್ಕೆ ಕಪ್ಪು ಚುಕ್ಕೆಗಳಾಗುತ್ತವೆ, ಹೃದಯವಂತರಿಗೆ ಕರುಳು ಹಿಂಡುತ್ತದೆ. ಅನಾವಶ್ಯಕವಾಗಿ ತಮ್ಮ ಅಮೂಲ್ಯ ಜೀವಗಳನ್ನು ಬಲಿಕೊಡುವುದು ಖಂಡಿತ ಒಪ್ಪುವ ಮಾತಲ್ಲ.

ಸರಳವಾಗಿ ಸಾಮಾನ್ಯ ಜನರಿಗಾಗಿ ನಕ್ಸಲಿಸಂ ಬಗ್ಗೆ ಸಣ್ಣ ಮಾಹಿತಿ.

ನಕ್ಸಲಿಸಂ ಎಂದರೇನು ? ನಕ್ಸಲೀಯರು ಯಾರು ? ನಕ್ಸಲರನ್ನು ಪ್ರೀತಿಸುವವರು ಮತ್ತು ದ್ವೇಷಿಸುವವರ ಅಭಿಪ್ರಾಯ ಬೇರೆಯೇ ಆಗಿರುತ್ತದೆ. ಆದರೆ ಸಾಮಾನ್ಯನೊಬ್ಬನ ಮೇಲ್ನೋಟದ ಸರಳ ನಿರೂಪಣೆ. ಮನುಷ್ಯ ನಾಗರಿಕ ಸಮಾಜ ಪ್ರವೇಶಿಸಿದ ಮೇಲೆ ವಿವಿಧ ರೀತಿಯ ಆಡಳಿತ ವ್ಯವಸ್ಥೆಗಳು ನಮ್ಮನ್ನು ಮುನ್ನಡೆಸಿದೆ. ಧರ್ಮಾಡಳಿತ, ರಾಜಾಡಳಿತ, ವಂಶಾಡಳಿತ, ಸರ್ವಾಧಿಕಾರ, ಮಿಲಿಟರಿ ಆಡಳಿತ, ಕಮ್ಯುನಿಸ್ಟ್ ಆಡಳಿತ, ಪ್ರಜಾಪ್ರಭುತ್ವ ಇದರಲ್ಲಿ ಮುಖ್ಯವಾದುವುಗಳು.

17-18 ನೇ ಶತಮಾನದಲ್ಲಿ ಯೂರೋಪ್ ಅದರಲ್ಲೂ ಇಂಗ್ಲೇಂಡಿನಲ್ಲಿ ಕೈಗಾರಿಕೀಕರಣ ಬೆಳವಣಿಗೆ‌ ಹೊಂದಿತು. ಆಗ ಬಂಡವಾಳಶಾಹಿ ವ್ಯವಸ್ಥೆ ಅಧಿಕೃತವಾಗಿ ಮತ್ತು ವ್ಯಾಪಕವಾಗಿ ಜಾರಿಗೆ ಬಂದಿತು. ಒಂದು ಕಡೆ ಶ್ರೀಮಂತ ಆಡಳಿತ ವರ್ಗ, ಮತ್ತೊಂದು ಕಡೆ ಬಡ ಕಾರ್ಮಿಕ ವರ್ಗ ಸೃಷ್ಟಿಯಾಯಿತು. ಇದು ಹೀಗೆ ಮುಂದುವರಿದು ಕೆಲ ಕಾಲದ ನಂತರ ಈ ಆಡಳಿತ ವರ್ಗ ಕಾರ್ಮಿಕರಿಂದ ಅತಿ ಹೆಚ್ಚು  ದುಡಿಸಿಕೊಂಡು ಅವರಿಗೆ ಅತ್ಯಂತ ಕಡಿಮೆ ಹಣ ನೀಡುತ್ತಿದೆ ಎಂಬ ಅನುಮಾನ ಮತ್ತು ಅಸಮಾಧಾನ ಕಾರ್ಮಿಕರಲ್ಲಿ ಮೂಡತೊಡಗಿತು.

ಕಾರ್ಲ್ ಮಾರ್ಕ್ಸ್ ಮತ್ತು ಏಂಜಲ್ಸ್ ಎಂಬುವವರು ಈ ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯನ್ನು ಅತ್ಯಂತ ಗಂಭೀರವಾಗಿ ಮತ್ತು ಸೂಕ್ಷ್ಮ ದೃಷ್ಟಿಯಿಂದ ಗಮನಿಸತೊಡಗಿದರು. ಕಾರ್ಲ್ ಮಾರ್ಕ್ಸ್ ಮುಖ್ಯವಾಗಿ ದಾಸ್ ಕ್ಯಾಪಿಟಲ್ ಮತ್ತು ಕಮ್ಯುನಿಸ್ಟ್ ಮ್ಯಾನಿಫೆಸ್ಟ್ ಎಂಬ ಪುಸ್ತಕಗಳಲ್ಲಿ ಇದನ್ನು ದಾಖಲಿಸಿದರು. ಈ ಬಗ್ಗೆ  ವ್ಯಾಪಕ ಚರ್ಚೆ ಸಂವಾದ ಮಂಥನಗಳಾದವು. ಜಾಗೃತಿಯೂ ಮೂಡಿತು. ಇದನ್ನೇ ಆಧಾರವಾಗಿ ಇಟ್ಟುಕೊಂಡು ಸಮಾಜವಾದ ಮತ್ತು ಸಮತಾವಾದದ ಸರ್ಕಾರಗಳು ರಷ್ಯಾ ಹಂಗರಿ ಜಕೋಸ್ಲಾವಾಕಿಯಾ, ಚೀನಾ, ಕ್ಯೂಬಾ ಮುಂತಾದ ಕೆಲವು ದೇಶಗಳಲ್ಲಿ ಆಡಳಿತ ವ್ಯವಸ್ಥೆಯಾಗಿ ಅಧಿಕಾರಕ್ಕೆ ಬಂದವು.

ಇಂಗ್ಲೆಂಡ್ ಅಮೆರಿಕ ಭಾರತ ಮುಂತಾದ ದೇಶಗಳು ಬಂಡವಾಳಶಾಹಿ ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಪ್ರತಿನಿಧಿಸಿದರೆ ರಷ್ಯಾ ಚೀನ ಮುಂತಾದ ದೇಶಗಳು ಕಾರ್ಮಿಕರ ಹಿತಾಸಕ್ತಿಯ ಕಮ್ಯುನಿಸ್ಟ್ ಆಡಳಿತವನ್ನು ಪ್ರತಿನಿಧಿಸುತ್ತವೆ. ಸ್ವಾತಂತ್ರ್ಯ ನಂತರ ಭಾರತ ಸಂಸದೀಯ ಪ್ರಜಾಪ್ರಭುತ್ವದ ಆಡಳಿತ ರೂಪಿಸಿಕೊಂಡಿತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯ ವಿರೋಧ ಪಕ್ಷವೇ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷವಾಗಿತ್ತು.  ಕೇರಳ ಪಶ್ಚಿಮ ಬಂಗಾಳ ಪೂರ್ವದ ಕೆಲವು ರಾಜ್ಯಗಳಲ್ಲಿ ಪ್ರಜಾಪ್ರಭುತ್ವದ ಮಾದರಿಯ ಕಮ್ಯುನಿಸ್ಟ್ ಆಡಳಿತಗಳು ಅಧಿಕಾರಕ್ಕೆ ಬಂದವು. ರಷ್ಯಾದ ಜೋಸೆಫ್ ಸ್ಟಾಲಿನ್ ಮತ್ತು ಚೀನಾದ ಮಾವೋತ್ಸೆತುಂಗ್ ಆಕ್ರಮಣಕಾರಿ ಮತ್ತು ದಬ್ಬಾಳಿಕೆಯ ಕ್ರಮದ ಮೂಲಕ ವಿರೋಧಿಗಳನ್ನು ಸದೆಬಡಿದು ಕಾರ್ಮಿಕ ಪರವಾದ ಆಡಳಿತ ನಡೆಸಿದರು. ಇದರಿಂದ ಪ್ರೇರಿತವಾದ ಕಮ್ಯುನಿಸ್ಟರಲ್ಲಿಯೇ ಒಂದು ವರ್ಗ  ನಕ್ಸಲ್ ಬಾರಿ ಎಂಬ ಪ್ರದೇಶದಲ್ಲಿ ಕಾರ್ಮಿಕರ ಶೋಷಣೆ ತಪ್ಪಿಸಿ ಅವರಿಗೆ ನ್ಯಾಯ ದೊರಕಿಸಿಕೊಡಲು ಹಿಂಸೆಯೇ ಸರಿಯಾದ ಮಾರ್ಗ. ಶಸ್ತ್ರಸಜ್ಜಿತ ಹೋರಾಟವೇ ಇದಕ್ಕೆ ಪರಿಹಾರ ಎಂದು ನಿಶ್ಚಯಿಸಿ ಮಾವೋ ವಾದಿಗಳಿಂದ ನಕ್ಸಲ್ ಚಳವಳಿ ಪ್ರಾರಂಭಿಸಲಾಯಿತು.

ಆಂಧ್ರಪ್ರದೇಶ, ತೆಲಂಗಾಣ ಒರಿಸ್ಸಾ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ,  ಪಶ್ಚಿಮ ಬಂಗಾಳ ಇತ್ಯಾದಿಗಳು ಈ ನಕ್ಸಲ್ ಚಟುವಟಿಕೆಯ ಪ್ರಮುಖ ಕೇಂದ್ರಗಳು. ಅಂದರೆ ಈ ನಕ್ಸಲೀಯರು ಹಿಂಸಾವಾದಿಗಳು ಎಂಬುದು ಸ್ಪಷ್ಟವಾಯಿತು. ಹಾಗಾದರೆ ಇವರು ದೇಶದ್ರೋಹಿಗಳೆ ? ಇಲ್ಲ, ಖಂಡಿತ ಇಲ್ಲ. ಇವರು ವ್ಯವಸ್ಥೆಯ ವಿರೋಧಿಗಳೇ ಹೊರತು ದೇಶದ್ರೋಹಿಗಳಲ್ಲ. ವಾಸ್ತವವೆಂದರೆ, ನಾವೆಲ್ಲರೂ ಅಂದರೆ ಬಡವ ಮತ್ತು ಮಧ್ಯಮವರ್ಗದವರ ಮನಸ್ಸಿನಲ್ಲಿ ಬಹುತೇಕ ಒಂದಲ್ಲಾ ಒಂದು ಸಮಯದಲ್ಲಿ ನಕ್ಸಲ್ ಮನೋಭಾವ ಹೊಂದಿರುವವರೇ.

ನಮಗೆ ಅನ್ಯಾಯವಾದಾಗ, ಬೇರೆಯವರಿಂದ ದೌರ್ಜನ್ಯವಾದಾಗ, ನಮ್ಮ ಸಾಮರ್ಥ್ಯಕ್ಕೆ ಸರಿಯಾದ ಕೆಲಸ ಸಿಗದೆ ಬೇರೆ ಅನರ್ಹರಿಗೆ ಆ ಕೆಲಸ ದೊರೆತಾಗ, ನ್ಯಾಯಯುತ ಕೆಲಸಕ್ಕೆ ಲಂಚ ಕೊಡಬೇಕಾಗಿ ಬಂದಾಗ, ಅದಕ್ಕೆ ಕಾರಣರಾದವರನ್ನು ಕೊಂದು ಬಿಡುವಷ್ಟು ಸಿಟ್ಟು ಬರುತ್ತದೆಯಲ್ಲವೇ ಅದೇ ಬಂಡಾಯ ಅಥವಾ ನಕ್ಸಲ್ ಮನೋಭಾವ. ನಾವು ಆ ಕ್ಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿ ಮರೆತು ಬಿಡುತ್ತೇವೆ. ಆದರೆ ಕೆಲವರು ಈ ಅಸಹಾಯಕ ಮನಸ್ಥಿತಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅವರಿಗೆ ವೇದಿಕೆ ಒದಗಿಸುವುದೇ ನಕ್ಸಲ್ ಚಳವಳಿ.

ಇಲ್ಲಿನ ಮತ್ತೊಂದು ವಿಪರ್ಯಾಸವೆಂದರೆ ನಮ್ಮ ಆಡಳಿತ ವ್ಯವಸ್ಥೆ ಈ ನಕ್ಸಲರ ಹಿಂಸೆಯನ್ನು ತಡೆಯಲು ಪೋಲಿಸ್, ಅರೆ ಸೇನಾಪಡೆ ಮತ್ತು ಸೇನಾಪಡೆಯ ಬಲವನ್ನು ಉಪಯೋಗಿಸುತ್ತದೆ. ಶಸ್ತ್ರಸಜ್ಜಿತ ಜನರನ್ನು ಎದುರಿಸಲು ರಾಜಕಾರಣಿಗಳು ಅಧಿಕಾರಿಗಳು ಮತ್ತು ಸಾಮಾನ್ಯರಿಗೆ ಸಾಧ್ಯವಿಲ್ಲ. ಅದಕ್ಕಾಗಿ ನಕ್ಸಲೀಯರಿಗೆ ಈ ದೇಶ ರಕ್ಷಕರೇ ಮೊದಲ ಶತ್ರುಗಳು. ವಾಸ್ತವವಾಗಿ ಅವರ ಹೋರಾಟ ಇರುವುದು ಭೂಮಾಲೀಕರು, ಬಂಡವಾಳಶಾಹಿಗಳು ಮತ್ತು ರಾಜಕಾರಣಿಗಳ ಮೇಲೆ. ಆದರೆ ಅನಿವಾರ್ಯವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ಪೋಲೀಸರೇ ಇವರಿಗೆ ನೇರ ಎದುರಾಳಿ. ಇದು ಮತ್ತೊಂದು ದುರಂತ.

ಅದಕ್ಕೆ ಸಂಪೂರ್ಣ ವಿರುದ್ಧ ಚಳವಳಿಯೇ ಧರ್ಮಾಂಧರ ಮೂಲಭೂತವಾದ. ಧರ್ಮದ ಅಮಲು - ನಕ್ಸಲರ ಹೋರಾಟ ವಿಭಿನ್ನವಾದರೂ ಅದರ ಪರಿಣಾಮ ಒಂದೇ ರೀತಿಯದು ಅಂದರೆ ಹಿಂಸೆ. ಮತಾಂಧರು ಅತಿಮಾನುಷ ಶಕ್ತಿಯ ಭ್ರಮೆಗೊಳಗಾದರೆ, ನಕ್ಸಲರು ಅವಾಸ್ತವ ಭ್ರಮೆಗೆ ಒಳಗಾಗಿದ್ದಾರೆ‌. ಪ್ರಜಾಪ್ರಭುತ್ವಕ್ಕೆ ಎರಡೂ ಅಪಾಯಕಾರಿಯೇ. ಈಗ ಈ ಎರಡೂ ಮುಖಾಮುಖಿಯಾಗುತ್ತಿರುವುದರಿಂದ ಯಾವುದೋ ಒಂದು ವಾದ ಜಯಗಳಿಸುತ್ತದೆ ಎಂಬುದು ಸುಳ್ಳು. ಇದರಿಂದಾಗಿ ಭಾರತ ಒಂದು ದೇಶವಾಗಿ ದುರ್ಬಲವಾಗುತ್ತದೆ ಅಥವಾ ಸೋಲುತ್ತದೆ ಎಂಬುದು ಮಾತ್ರ ನಿಜ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯೇ ವಿಶ್ವದ ಸದ್ಯದ ಅತ್ಯುತ್ತಮ ಆಡಳಿತ ವ್ಯವಸ್ಥೆ. ಇದನ್ನು ಒಪ್ಪದೆ ಮೂಲಭೂತವಾದಿಗಳು ಧರ್ಮದ ಆಡಳಿತ ಬಯಸಿದರೆ, ನಕ್ಸಲೀಯರು ಎಂದೆಂದೂ ಸಾಧ್ಯವಾಗದ ಹಿಂಸಾ ಹೋರಾಟ ನಡೆಸುತ್ತಾರೆ. ವಿಚಾರವಾದಿಗಳನ್ನು ಕೊಂದು ಸಂಭ್ರಮಿಸುವ ಮನೋಭಾವದ ಎಲ್ಲಾ ಧರ್ಮಗಳ ಧರ್ಮಾಂಧರು, ಕಾರಣಗಳೇನೇ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡದೆ ಹಿಂಸಾ ಮಾರ್ಗ ಹಿಡಿದಿರುವ ನಕ್ಸಲೀಯರು ದೇಶದ ಹಿತಕ್ಕೆ ಮಾರಕ ಎಂದು ಖಂಡಿತ ಹೇಳಬಹುದು.

ಕೊನೆಯದಾಗಿ, ಈ ಎರಡೂ ವಾದಕ್ಕಿಂತ ಅಂಬೇಡ್ಕರ್ ವಾದ, ಬಸವ ಮಾರ್ಗ ಮತ್ತು ಗಾಂಧಿವಾದ ಹೆಚ್ಚು ಸಹನೀಯ ಮತ್ತು ಪರಿಣಾಮಕಾರಿ. ಇದು ಸರಳ ವಿವರಣೆ ಮಾತ್ರ. ಆಳದಲ್ಲಿ ಇದಕ್ಕಿಂತ ಹೆಚ್ಚಿನ ಅರ್ಥವಿದೆ.

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ