ಈಗ ಜನಸಂಖ್ಯೆ ೮೦೦ ಕೋಟಿ !

ಈಗ ಜನಸಂಖ್ಯೆ ೮೦೦ ಕೋಟಿ !

ಜಗತ್ತಿನ ಜನಸಂಖ್ಯೆ ಮಂಗಳವಾರಕ್ಕೆ ೮೦೦ ಕೋಟಿ ತಲುಪಿದೆ. ಕಳೆದ ೪ ದಶಕಗಳಲ್ಲಿ ಇದು ದುಪ್ಪಟ್ಟಾಗಿದೆ. ೧೯೭೪ ರಲ್ಲಿ ಜನಸಂಖ್ಯೆರಲ್ಲಿ ೪೦೦ ಕೋಟಿ ಇತ್ತು. ನಂತರ ಚೀನಾ, ಭಾರತದಂತಹ ಬೃಹತ್ ಜನಸಂಖ್ಯೆಯ ದೇಶಗಳ 'ಕೊಡುಗೆ' ಯಿಂದಾಗಿ ಅದು ೮೦೦ ಕೋಟಿಯಾಗಿದೆ. ಜನಸಂಖ್ಯೆಯಲ್ಲಿ ೩ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಇಂದಿಗೂ ಅದು ೩೩ ಕೋಟಿ ಮಾತ್ರ ಇದೆ. ೧೯೭೪ರಲ್ಲಿ ಅದುರಲ್ಲಿ ೨೧ ಕೋಟಿಯಿತ್ತು. ಅಂದರೆ ಅಲ್ಲಿ ದುಪಟ್ಟಾಗಿಲ್ಲ. ಹೀಗಾಗಿ ಜನಸಂಖ್ಯಾ ಸ್ಫೋಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲು ದೊಡ್ಡದಿದೆ. ಜನಸಂಖ್ಯೆಯನ್ನು ಒಂದು ಸಮಸ್ಯೆಯಾಗಿ ನೋಡಿದರೆ ಅದು ಸಮಸ್ಯೆ. ಅದನ್ನೇ ಸಾಮರ್ಥ್ಯವಾಗಿ ನೋಡಿದರೆ ಅದೊಂದು ಶಕ್ತಿ ಎಂಬುದು ಒಂದು ದೃಷ್ಟಿಕೋನದಿಂದ ಸರಿಯಾದರೂ ಭೂಮಿಯಲ್ಲಿರುವ ಸೀಮಿತ ಸಂಪನ್ಮೂಲಗಳ ದೃಷ್ಟಿಯಿಂದ ನೋಡಿದರೆ ಜನಸಂಖ್ಯೆಯ ಹೆಚ್ಚಳವು ನಿಜವಾಗಿಯೂ ಸಮಸ್ಯೆಯೇ. ಆ ಸಮಸ್ಯೆಯನ್ನು ಜಗತ್ತು ಪ್ರಸ್ತುತ ಆಹಾರ ಭದ್ರತೆ, ಮಾಲಿನ್ಯ ಏರಿಕೆ ಮುಂತಾದ ರೂಪಗಳಲ್ಲಿ ಎದುರಿಸುತ್ತಿದೆ. ಹೀಗಾಗಿ ಜನಸಂಖ್ಯೆ ದುಪಟ್ಟಾಗುವುದರೊಂದಿಗೆ ಜಗತ್ತು ಎದುರಿಸುತ್ತಿರುವ ಸವಾಲುಗಳೂ ದುಪ್ಪಟ್ಟಾಗಿವೆ. ಚೀನಾ ಮತ್ತು ಭಾರತ ಜನಸಂಖ್ಯೆಯಲ್ಲಿ ನಂಬರ್ ೧ ಮತ್ತು ೨ ರಾಷ್ಟ್ರವಾಗಿದ್ದರೂ ಜನಸಂಖ್ಯಾ ಸ್ಫೋಟದ ಸಮಸ್ಯೆಯೊಂದಿಗೇ ಅಗಾಧ ಬೆಳವಣಿಗೆಯನ್ನು ಕೂಡ ಸಾಧಿಸಿವೆ ಎಂಬುದು ವಿಶೇಷ. ಸಮರ್ಥ ನಾಯಕತ್ವ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯಿಂದಾಗಿ ಇದು ಸಾಧ್ಯವಾಗಿದೆ.

ಆಶಾದಾಯಕ ಸಂಗತಿಯೆಂದರೆ ಜನಸಂಖ್ಯಾ ಸ್ಪೋಟ ಮುಗಿದಿದೆ. ಚೀನಾ, ಭಾರತ, ಅಮೇರಿಕಾ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಜನಸಂಖ್ಯೆ ಈ ಮೊದಲಿನ ದರದಲ್ಲಿ ಹೆಚ್ಚುತ್ತಿಲ್ಲ. ಹೀಗಾಗಿ ಜಗತ್ತಿನ ಜನಸಂಖ್ಯೆ ಇನ್ನು ಮುಂದೆ ಈ ಹಿಂದಿನಂತೆ ಸ್ಪೋಟವಾಗುವುದಿಲ್ಲ. ಬದಲಿಗೆ ಮುಂದೊಂದು ದಿನ ಅದು ಇಳಿಮುಖದತ್ತಲೂ ಸಾಗಬಹುದು. ಅದು ಹೊಸತಾದ ಇನ್ನೊಂದು ಸಮಸ್ಯೆಯನ್ನು ತಂದಿಡಲಿದೆ. ಚೀನಾ, ಜಪಾನ್ ಇದ್ದಂತೆ ಅನೇಕ ರಾಷ್ಟ್ರಗಳಲ್ಲಿ ಈಗಾಗಲೇ ಅಂತಹ ಸಮಸ್ಯೆ ಶುರುವಾಗಿದೆ. ಅಂದರೆ ಜನಸಂಖ್ಯೆಯ ಹೆಚ್ಚಳವೂ ಸಮಸ್ಯೆಯೇ, ಇಳಿಕೆಯೂ ಸಮಸ್ಯೆಯೇ. ಹೀಗಾಗಿ ಈ ವಿಷಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಜಗತ್ತಿನ ಮೇಲಿದೆ. ಭಾರತವು ಪ್ರತಿಪಾದಿಸುತ್ತಿರುವ ವಸುದೈವ ಕುಟುಂಬಕಂ (ಜಗತ್ತೇ ಒಂದು) ಎಂಬ ನೀತಿ ಇನ್ನು ಮುಂದೆ ಜನಸಂಖ್ಯೆಯ ವಿಷಯಕ್ಕೂ ಅನ್ವಯಿಸಬೇಕಿದೆ. ಆಗ ಲಭ್ಯವಿರುವ ಜನಸಂಖ್ಯೆಯ ಒತ್ತಡ ಅಥವಾ ಕೊರತೆಯನ್ನು ಎಲ್ಲಾ ರಾಷ್ಟ್ರಗಳೂ ಹಂಚಿಕೊಂಡು ಮುನ್ನಡೆಯಲು ಸಾಧ್ಯ.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೧೬-೧೧-೨೦೨೨