ಈಜಿಪ್ಟ್: ಪದಚ್ಯುತಿಯ ಸಾಫಲ್ಯ
ಈಜಿಪ್ಟಿನಲ್ಲಿ ಇಲ್ಲಿಯವರೆಗೆ ಆಗಿರುವ ವಿದ್ಯಮಾನ ಅಸಾಧಾರಣವಾದದ್ದು. ಐತಿಹಾಸಿಕವಾದದ್ದು. ದಯವಿಟ್ಟು ಮುಂದಿನ ಮಾತುಗಳನ್ನು ಸಿನಿಕತನ ಎಂದು ಉಪೇಕ್ಷಿಸಬೇಡಿ.
ಈಜಿಪ್ಟಿನ ಆಗುಹೋಗುಗಳನ್ನು ಕ್ರಾಂತಿಯೆಂದು ಕರೆಯುವ ಮೊದಲು ಕೆಲವು ವಿಶಯಗಳನ್ನು ಗಮನಕ್ಕೆ ತಂದುಕೊಳ್ಳಬಹುದೆ?
ಈಗ ಈಜಿಪ್ಟ್ ಭ್ರಷ್ಟನೊಬ್ಬನನ್ನು, ತನ್ನ ಸಾತ್ವಿಕವಾದ ಆಗ್ರಹದ ಮೂಲಕ ಅಧ್ಯಕ್ಷಸ್ಥಾನದಿಂದ, ಪದಚ್ಯುತಿಗೊಳಿಸಿದೆ. ಈ ಸಾಫಲ್ಯ ಜನರಲ್ಲಿ ಹೊಸ ಚೈತನ್ಯವನ್ನು, ಹೊಸ ಆಶಯವನ್ನು ತುಂಬಿಸುವುದರಲ್ಲಿ ಸಂದೇಹವಿಲ್ಲ. ಭಾರತವೂ ೬೩ ವರ್ಷಗಳ ಹಿಂದೆ ಇಂತಹುದೇ ಘಟ್ಟದಲ್ಲಿತ್ತು.
ಆಗ್ರಹದ ಸಾಫಲ್ಯವೇನೋ ಪದಚ್ಯುತಿಯಲ್ಲಿದೆ ನಿಜ. ಆದರೆ ಪದಚ್ಯುತಿಯ ಸಾಫಲ್ಯ?
ಈಗ ಆ ನಾಡಿನಲ್ಲಿ ಉಂಟಾಗಬಹುದಾದ ವಿಪ್ಲವದ ಸ್ಥಿತಿ ತುಂಬಾ ವಲ್ನರಬಲ್ ಆದದ್ದು. ಈಜಿಪ್ಟಿನವರ ಸದಾಶಯಗಳು ಆ ರಾಷ್ಟ್ರದ ನವನಿರ್ಮಾಣಕ್ಕೆ ಬದ್ಧವಾದ ಶಕ್ತಿಗಳನ್ನು ಒಗ್ಗೂಡಿಸಲು ಎಡೆಮಾಡಿಕೊಡದಿದ್ದರೆ ಮತ್ತೊಬ್ಬ ಮುಬಾರಕ್ ಅಲ್ಲದಿದ್ದರೂ ಒಬ್ಬ ಖೊಮೇನಿ ನಾಡಿನ ನೊಗವನ್ನು ಹಿಡಿಯಬಹುದು. ಚರಿತ್ರೆ ಮರುಕಳಿಸಬಹುದು.
ಫೇರೋ ರಾಮ್‌ಸೀಸ್‌ನ ಆ ನಾಡು ಅನೇಕ ಅಧಿಕಾರ ಪಲ್ಲಟಗಳನ್ನು ಕಂಡಿದೆ. ಐದು-ಹತ್ತು ವರ್ಷಗಳ ಬಳಿಕ ಈಜಿಪ್ಟ್ ಎಂತಹ ರಾಷ್ಟ್ರವಾಗಿ ರೂಪುಗೊಳ್ಳುವುದೋ ಅದು ಈ ವಿದ್ಯಮಾನವನ್ನು ಕ್ರಾಂತಿಯ ಹರಿಕಾರ ಎನ್ನಬಹುದೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ಅಧಿಕಾರ ಪಲ್ಲಟ ಮತ್ತೆ ಅಧಿಕಾರದ ಕಚ್ಚಾಟಕ್ಕೆ ಸಿಕ್ಕ ಪರವಾನಿಗಿ ಎಂದು ಜನಕೋಟಿಗೆ ಅನಿಸಿದರೆ, ಮುಬಾರಕ್‌ನನ್ನು ಅಂಬಾರಿಯ ಮೇಲೆ ವಾಪಸ್ ಕರೆಸಿಕೊಳ್ಳಲು ಅಡ್ಡಿಯಿಲ್ಲ.
ಈಜಿಪ್ಟ್ ತನ್ನ ಪಾರಂಪರಿಕ ಸಂಪನ್ನತೆಗೆ ಕಿಂಚಿತ್ತೂ ಧಕ್ಕೆ ತಂದುಕೊಳ್ಳದೆ, ತನ್ನ ಆಂತರಿಕ ಸಂಪತ್ತನ್ನುಸದ್ವಿನಿಯೋಗಪಡಿಸಿಕೊಳ್ಳುತ್ತಾ ಆಧುನಿಕವಾದ(ಪಶ್ಚಿಮದ ನಕಲು ಅಲ್ಲ) ರಾಷ್ಟ್ರವಾದರೆ ಆಗ ಆ ಬದಲಾವಣೆ ನಿಜವಾದ ‘ಕ್ರಾಂತಿ’. ಈಜಿಪ್ಟಿನಲ್ಲಿನ ಇಂದಿನ ಆಗುಹೋಗುಗಳು ಅಂತ್ಯದಲ್ಲಿ ‘ಕ್ರಾಂತಿ’ಯಾಗಿ ಪರಿಣಮಿಸುವುವೋ ಇಲ್ಲವೋ ಎನ್ನುವುದರ ಬಗ್ಗೆ ನನ್ನ ನಿಲುವು, ಅಮೇರಿಕನ್ನರು ಹೇಳುವ ಹಾಗೆ, ‘ಜ್ಯೂರಿ ಈಸ್ ಔಟ್.’ ಅಶಾವಾದವಿದೆ... ಬಟ್ ವಿತ್ ಕಾಷನ್!
ಇನ್ನೊಂದು ವಿಶಯ:
ಮುಬಾರಕ್ ಅಮೇರಿಕಾದ ಕೈಗೊಂಬೆಯಾಗಿದ್ದ ಎನ್ನುವುದು ನಿಜವಾಗಿದ್ದಲ್ಲಿ, ಅಮೇರಿಕನ್ನರು (ಅವರ ಮೂಲಕ ಪಾಶ್ಚಿಮಾತ್ಯರು), ಮತ್ತೆ, ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ಸದಾ ಕಾಲಕ್ಕೂ ಲೋಕತಂತ್ರದ ಪುರಾಣ ಹೇಳ್ತಾ ಹೇಳ್ತಾ ರಾಜಕೀಯ ಷಡ್ಯಂತ್ರದ ಬದನೇಕಾಯಿ ತಿನ್ನೋಕ್ಕೆ ಸಾಧ್ಯವಿಲ್ಲ. ೭೦ರ ದಶಕದ ಇರಾನಿನ ಘಟನಾವಳಿಯಿಂದ ಇದನ್ನು ಈಗಾಗಲೆ ಕಲಿತಿರಬೇಕಾಗಿತ್ತು.
ಪ್ರಭು
Comments
ಉ: ಈಜಿಪ್ಟ್: ಪದಚ್ಯುತಿಯ ಸಾಫಲ್ಯ
ಉ: ಈಜಿಪ್ಟ್: ಪದಚ್ಯುತಿಯ ಸಾಫಲ್ಯ
ಉ: ಈಜಿಪ್ಟ್: ಪದಚ್ಯುತಿಯ ಸಾಫಲ್ಯ