ಈರಪ್ಪ ಬಿಜಲಿಯವರ ಎರಡು ಮನಮೋಹಕ ಗಝಲ್ ಗಳು

ಈರಪ್ಪ ಬಿಜಲಿಯವರ ಎರಡು ಮನಮೋಹಕ ಗಝಲ್ ಗಳು

ಕವನ

ಗಝಲ್ ೧

ಸರಿರಾತ್ರಿ ನಡುದಾರಿಯಲಿ ದುಷ್ಟರ ಕೈಯಿಂದ ರಕ್ಷಿಸಿದೆಯಲ್ಲ ಸಖ

ಸುರಿಯುವ ಕಣ್ಣೀರನು ಸರಸರನೆ ವಸ್ತ್ರದಲಿ ಒರೆಸಿದೆಯಲ್ಲ ಸಖ||

 

ಹಿರಿಯರ ಹಿತವಚನ ದಿಕ್ಕರಿಸಿದ

ನಾನಗಿಂದು ತಕ್ಕಶಿಕ್ಷೆಯಾಯಿತು

ನರ ರೂಪದ ಕೀಚಕರಿಂದ ದೂರ ದೂರಕೆ ಸರಿಸಿದೆಯಲ್ಲ ಸಖ||

 

ಶರಾಬಿನ ನಶೆಯಲಿ ಸ್ವಚ್ಚಂದ ಹಕ್ಕಿಯಾಗಿ ತೇಲಾಡುತಲಿದ್ದೆ

ಗುಲಾಬಿಗೆ ಮುಳ್ಳಿನ ರಕ್ಷಣೆ ಅಗತ್ಯ ಎಂಬುದು ತೋರಿಸಿದೆಯಲ್ಲ ಸಖ||

 

ಹಾಲಿನಂತ ಮನಸಿಗೆ ಹುಳಿಯಿಂಡಿ

ಕಲುಷಿತಗೊಳಿಸಿ ನೋಯಿಸಿದೆ

ಮಾಲೆಯ ಜೊತೆಗೆ ನಾರನೂ ಸಗ್ಗಕೆ ಸೇರಿಸಿದೆಯಲ್ಲ ಸಖ||

 

ಜೇನುಗೂಡಿನ ಬಿಜಲಿ ಹೃದಯದಿ ರಾಣಿಯಾಗಿಸುತ ತಲೆ ನೇವರಿಸಿದೆ.

ಆಜಾನುಭಾಹು ತೋಳಪ್ಪುಗೆಯ ಒಪ್ಪಿಸುತಲಿ ಸಂತೈಸಿದೆಯಲ್ಲ ಸಖ||

***

ಗಝಲ್ ೨

ಏರುವ ಆತುರದಲಿ  ಹಾದಿಯ ಮರೆತು ಉತ್ತರಕ್ಕೆ ನಡೆದೆಯಲ್ಲ ನೀನು

ಸೇರುವ ಕಾತುರದಲಿ ನೀತಿಯ ತೊರೆದು ಮಾರುತಕ್ಕೆ

ತೂರಿದೆಯಲ್ಲ ನೀನು||

 

ಗೊಂದಲದ ಮನಸಿನ ಮೇಲೆ ತುಸು ಹತೋಟಿಯು ಇರಲಿ

ಕಲ್ಪನೆಯ ಪಥದಿ ಸಾಗುತ ವಾಸ್ತವದ ವ್ಯಾಪ್ತಿ ಮೀರಿದೆಯಲ್ಲ ನೀನು ||

 

ಬದುಕು ಬಿಡಿಸಲು ಆಗದ ಸುಂದರ ಸುಮಧುರ ಚೆಂದದ ಒಗಟು

ಜೀವಕುಭಾವಕು ಬೆಸೆದಿಹ ಬಂಧ ಕೆದುಕುತ ಸಾಗಿದೆಯಲ್ಲ ನೀನು||

 

ಪ್ರಕೃತಿ ಪುರುಷನ ಅಣತಿಯಿಲ್ಲದೆ

ಹುಲ್ಲುಕಡ್ಡಿಯೂ ಚಲಿಸದು

ಸುಕೃತಿ ಗೈಯುತ ಅಡಿಗಡಿಗೆಯೂ

ಹರಿಯ ಸ್ಮರಿಸಲು ನುಡಿದೆಯಲ್ಲ ನೀನು||

 

ಸಹನೆಯೇ ಸೌಖ್ಯವು ಸುಖ ಸಂಸಾರದಿ ನೌಕೆಯು ಚಲಿಸಲು

ಕಾರ್ಮುಗಿಲ ಮರೆಯಲಿ ಬಿಜಲಿ

ಮಿನುಗಲು ಹಾಡು ಹಾಡಿದೆಯಲ್ಲ ನೀನು ||

 

*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್