ಈರಪ್ಪ ಬಿಜಲಿಯವರ ಗೀತೆಗಳು

ಈರಪ್ಪ ಬಿಜಲಿಯವರ ಗೀತೆಗಳು

ಕವನ

*ನರಸಿಂಹ*

ನಮೋ ನಮೋ ನರಸಿಂಹ

ನಮ್ಮ ಸಲವೊ ನರಸಿಂಹ

ಬವಣೆ ನೀಗೊ ನರಸಿಂಹ

ಶರಣು ಬಂದೆ ನರಸಿಂಹ||

 

ದೀನ ನಾನು ನರಸಿಂಹ

ಮಾನ ಕಾಯೊ ನರಸಿಂಹ

ನಾಮ ನುಡಿವೆ ನರಸಿಂಹ

ಮೇಘ ಶಾಮ ನರಸಿಂಹ||

 

ಭಕ್ತ ಪ್ರೀಯ ನರಸಿಂಹ

ಶಕ್ತಗೊಳಿಸೊ ನರಸಿಂಹ

ಯುಕ್ತಿ ತಾರೊ ನರಸಿಂಹ

ಮುಕ್ತಿ ನೀಡೊ ನರಸಿಂಹ||

 

ಕಮಲ ನಯನ ನರಸಿಂಹ

ವಿಮಲ ವದನ ನರಸಿಂಹ

ಲಕುಮಿ ರಮಣ ನರಸಿಂಹ

ನಮಿಪೆ ನಿತ್ಯ ನರಸಿಂಹ ||

 

ಬಾಳು ಗೋಳು ನರಸಿಂಹ

ಪಾರು ಮಾಡೊ ನರಸಿಂಹ

ಕರುಣೆ ತೋರೊ ನರಸಿಂಹ

ಚರಣ ಬಿಡೆನು ನರಸಿಂಹ||

***

*ಗಝಲ್*

ಕುದುರೆ ಏರಿ ಬರುವ ನಲ್ಲನ ಹಾದಿ

ಕಾದು ಕುಳಿತೆಯಾ ಸಖಿ

ನಿದಿರೆ ದೂರ ಮನಭಾರ ವಿರಹ ಘೋರ ಅರಿತೆಯಾ ಸಖಿ ||

 

ಕಣ್ಣೆವೆಯಲಿ ತೇಲಿವೆ ಸವಿದ ಮಧುರ ಕ್ಷಣಗಳ ಸರಣಿ

ತಣ್ಣನೆಯ ಮಾರುತವೂ ಬಿಸಿ ಅನುಭವ ನೀಡಿದೆಯಾ ಸಖಿ||

 

ನಗೆಗಡಲ ವದನದಲಿ ಬರ ಬಿದ್ದು ಬತ್ತಿಹೋಗಿದೆ

ಒಗೆಯಾಡುತ ಹೃದಯದಲಿ ಪ್ರೇಮಜ್ವಾಲೆ ಹೊತ್ತಿದೆಯಾ ಸಖಿ||

 

ವಿಶಾಲ ಲೋಕವದೇಕೊ ಸಂಕುಚಿತವಾಗಿ ಬೇಸರ ತಂದಿದೆ

ಕೋಮಲ ತನುವದು ಇನಿಯನ ಅಪ್ಪುಗೆ ಬೇಡಿದೆಯಾ ಸಖಿ ||

 

ಮನದರಸ ಬಳಿಸಾರಿ ಒಲವ ತೈಲವೆರೆದು ಹಣತೆ ಹಚ್ಚಿದ

ಅನುರಾಗದಿ ಬಿಜಲಿ ಪ್ರಭೆಗೆ ಜಗ ಬೆರಗಾಗಿದೆ ನೋಡಿದೆಯಾ ಸಖಿ||

 

*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್