ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರಕಾರದ ಕಸರತ್ತು

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರಕಾರದ ಕಸರತ್ತು

ನವರಾತ್ರಿ ಹಬ್ಬ ಮುಕ್ತಾಯಗೊಳ್ಳುತ್ತಿದ್ದಂತೆಯೇ ದೇಶದೆಲ್ಲೆಡೆ ಈರುಳ್ಳಿ ಬೆಲೆ ಗಗನಮುಖಿಯಾಗಿದೆ. ವಾರದ ಹಿಂದೆ ಕೆ ಜಿ ೩೦-೪೦ ರೂ. ಬೆಲೆ ಇದ್ದರೆ ಈಗ ೮೦-೯೦ ರೂ. ಗಳಲ್ಲಿ ಬಿಕರಿಯಾಗುತ್ತಿದೆ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಇದ್ದು ರಾಜ್ಯದೆಲ್ಲೆಡೆ ಈರುಳ್ಳಿ ಬೆಲೆ ಕೆ ಜಿ ಗೆ ೮೦-೮೫ ರೂ. ಇದೆ. ಸದ್ಯ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಪೂರೈಕೆಯಾಗದಿರುವುದರಿಂದ ಬೆಲೆಯಲ್ಲಿ ಈ ಹೆಚ್ಚಳ ಕಂಡುಬಂದಿದೆ. ಹೊಸ ಋತುವಿನ ಬೆಳೆ ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಿರುವುದರಿಂದ ಬೆಲೆ ಏರಿಕೆಯ ಈ ಪ್ರಕ್ರಿಯೆ ಮುಂದುವರಿಯಲಿದ್ದು ಮುಂದಿನ ಒಂದೆರಡು ದಿನಗಳಲ್ಲೇ ಶತಕದ ಗಡಿ ದಾಟುವುದು ಬಹುತೇಕ ಖಚಿತವಾಗಿದೆ.

ದೀಪಾವಳಿ ಹಬ್ಬಕ್ಕೆ ಹತ್ತು ದಿನವಷ್ಟೇ ಉಳಿದಿದ್ದು ಈರುಳ್ಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಮುಂಗಾರು ವಿಳಂಬ, ಮಳೆ ಕೊರತೆ, ರೋಗಬಾಧೆ ಮತ್ತಿತರ ಕಾರಣಗಳಿಂದಾಗಿ ಹಾಲಿ ಋತುವಿನ ಬೆಳೆ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಈರುಳ್ಳಿ ಉತ್ಪಾದನೆಯ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಈ ಬಾರಿ ಈರುಳ್ಳಿ ಬಿತ್ತನೆ ಕಾರ್ಯ ತಡವಾಗಿರುವುದರಿಂದ ಇನ್ನಷ್ಟೇ ಕೊಯ್ಲು ನಡೆಯಬೇಕಿದೆ. ಅಷ್ಟು ಮಾತ್ರವಲ್ಲದೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಲಭಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಆಗಸ್ಟ್ ಮಧ್ಯ ಭಾಗದಿಂದಲೇ ಗೋದಾಮುಗಳಿಂದ ಈರುಳ್ಳಿ ದಾಸ್ತಾನನ್ನು ಮಾರುಕಟ್ಟೆಗೆ ಪೂರೈಸಲಾರಂಭಿಸಿದ್ದರಿಂದ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಕೂಡಾ ಇಲ್ಲ. ಹೀಗಾಗಿ ದೇಶಾದ್ಯಂತ ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ವಾರದ ಅಂತರದಲ್ಲಿ ದುಪ್ಪಟ್ಟಾಗಿದೆ. 

ಈರುಳ್ಳಿ ಬೆಲೆ ಹೆಚ್ಚಳವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಈರುಳ್ಳಿಯ ರಫ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲವೊಂದು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಈ ವರ್ಷದ ಅಂತ್ಯದವರೆಗೆ ಕನಿಷ್ಟ ರಫ್ತು ಬೆಲೆಯನ್ನು ನಿಗದಿಪಡಿಸಿದೆ. ಸರಕಾರದ ಈ ಎಲ್ಲ ಕ್ರಮಗಳ ಹೊರತಾಗಿಯೂ ಈರುಳ್ಳಿ ಧಾರಣೆಯು ಒಂದೇ ಸಮನೆ ಹೆಚ್ಚುತ್ತಲೇ ಇದ್ದು ಗ್ರಾಹಕರು ಈರುಳ್ಳಿ ಖರೀದಿ ಸಂದರ್ಭದಲ್ಲಿಯೇ ಕಣ್ಣೀರು ಸುರಿಸುವಂತಾಗಿದೆ. ಮುಂದಿನ ತಿಂಗಳು ದೇಶದ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಈರುಳ್ಳಿ ಸಹಿತ ತರಕಾರಿ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕೇಂದ್ರ ಸರಕಾರದ ಪಾಲಿಗೆ ಬಲು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ಈರುಳ್ಳಿ ಬೆಲೆ ಏರಿಕೆಯ ಬಿಸಿ ಕೇವಲ ಜನಸಾಮಾನ್ಯರನ್ನು ಮಾತ್ರವಲ್ಲದೆ ಸರಕಾರಕ್ಕೂ ತಟ್ಟತೊಡಗಿರುವುದಂತೂ ಸುಳ್ಳಲ್ಲ.

ಸದ್ಯ ಲಭ್ಯವಿರುವ ಈರುಳ್ಳಿಯನ್ನು ವ್ಯವಸ್ಥಿತವಾಗಿ ಮಾರುಕಟ್ಟೆಗೆ ಪೂರೈಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಕ್ರಮವಾಗಿ ದಾಸ್ತಾನಿಡಲಾಗಿರುವ ಗೋದಾಮುಗಳ ಮೇಲೆ ದಾಳಿ ನಡೆಸಿ ಈರುಳ್ಳಿಯನ್ನು ವಶಪಡಿಸಿಕೊಂಡು ಅದನ್ನು ಮಾರುಕಟ್ಟೆಗೆ ಪೂರೈಸಬೇಕು. ಇಂಥ ಬಿಗಿ ಕ್ರಮಗಳಿಂದ ಗ್ರಾಹಕರಿಗೆ ಒಂದಿಷ್ಟು ಕಡಿಮೆ ದರದಲ್ಲಿ ಈರುಳ್ಳಿಯನ್ನು ಪೂರೈಸಲು ಸರಕಾರ ಮುಂದಾಗಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೩೧-೧೦-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ