ಈರೋಡಿನ ಅರಿಶಿನಕ್ಕೆ ಭೌಗೋಳಿಕ ಸೂಚಕದ ಹೆಗ್ಗಳಿಕೆ

ಈರೋಡಿನ ಅರಿಶಿನಕ್ಕೆ ಭೌಗೋಳಿಕ ಸೂಚಕದ ಹೆಗ್ಗಳಿಕೆ

ಅಲ್ಲಿ ಮೇಜುಗಳ ಸಾಲುಸಾಲುಗಳಲ್ಲಿ ಅರಿಶಿನದ ಗೆಡ್ಡೆಗಳು. ಸುತ್ತಲೂ ಅರಿಶಿನದ ಘಮ. ಮಾರಾಟಕ್ಕಿಟ್ಟ ಅರಿಶಿನವನ್ನು ಪರಿಶೀಲಿಸುತ್ತಿರುವ ಜನರು. ಇದು, ಪೂರ್ವಾಹ್ನ ೧೧ ಗಂಟೆಯ ಹೊತ್ತಿಗೆ ತಮಿಳ್ನಾಡಿನ ಈರೋಡಿನ ನಸಿಯನೂರಿನ ವಿಶಾಲ ಅರಿಶಿನ ಮಾರುಕಟ್ಟೆ ಪ್ರಾಂಗಣದ ನೋಟ.
ಈಗ ೬೫ನೇ ವರುಷಕ್ಕೆ ಕಾಲಿಟ್ಟಿರುವ ಅಲ್ಲಿನ ಅರಿಶಿನ ವರ್ತಕರ ಸಂಘಟನೆಯ ಸದಸ್ಯರ ಸಂಖ್ಯೆ ೩೫೭. ಈರೋಡಿನಿಂದ ೯ ಕಿಮೀ ದೂರದಲ್ಲಿರುವ ವಿಸ್ತಾರವಾದ ಮಾರುಕಟ್ಟೆ ಪ್ರಾಂಗಣವನ್ನು ಮಂಜಲ್ ಮಾನಗರಮ್ (ಅರಿಶಿನದ ರಾಜಧಾನಿ) ಎಂದು ಕರೆಯಲಾಗುತ್ತದೆ. ವರುಷವಿಡೀ ತೆರೆದಿರುವ ಆ ಮಾರುಕಟ್ಟೆಯಲ್ಲಿ ಶೇಖರಿಸಿಡಲಾಗಿದೆ ತಮಿಳ್ನಾಡು ಮತ್ತು ಪಕ್ಕದ ರಾಜ್ಯಗಳಿಂದ ಮಾರಾಟಕ್ಕೆ ತಂದ ಅರಿಶಿನದ ರಾಶಿರಾಶಿ.
ಮಾರುಕಟ್ಟೆ ಪ್ರಾಂಗಣದಲ್ಲಿ ಸಾಲಾಗಿ ಜೋಡಿಸಿಟ್ಟ ಸುಮಾರು ೪೫೦ ಅರಿಶಿನದ ಮೇಜುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿಯೊಂದು ರಾಶಿಯಲ್ಲಿದೆ ಒಂದು ಹಳದಿ ಕಾರ್ಡ್. ಅದರಲ್ಲಿರುವ ಆ ಅರಿಶಿನ ಬೆಳೆದ ಜಮೀನಿನ ವಿವರಗಳನ್ನು ಓದುತ್ತಾ ಗ್ರಾಹಕರು ಮುನ್ನಡೆಯುತ್ತಾರೆ. ಅವರು ಅರಿಶಿನದ ಬೇರುಗಳನ್ನು ಮುರಿದು, ಅದರ ಬಣ್ಣ ಮತ್ತು ತಾಜಾತನ ಪರೀಕ್ಷಿಸುತ್ತಿರುವಂತೆ ಅಲ್ಲಿನ ವಾತಾವರಣದಲ್ಲಿ ಅರಿಶಿನದ ಪರಿಮಳ ತುಂಬಿಕೊಳ್ಳುತ್ತದೆ.
ಅಲ್ಲಿನ ಕಚೇರಿಯ ಕಿಟಕಿಯಲ್ಲಿ, ಮಾರ್ಚ್ ೨೦೧೯ರ ಆರಂಭದಲ್ಲಿ ಈರೋಡಿನ ಅರಿಶಿನಕ್ಕೆ “ಭೌಗೋಳಿಕ ಸೂಚಕ” (ಜಿಐ – ಜೋಗ್ರಫಿಕಲ್ ಇಂಡಿಕೇಟರ್) ಘೋಷಿಸಿದ್ದನ್ನು ಪ್ರದರ್ಶಿಸಲಾಗಿದೆ. ಈ ಬಗ್ಗೆ ಸಂಘದ ಕಾರ್ಯದರ್ಶಿ ಎಂ. ಸತ್ಯಮೂರ್ತಿ ಹೀಗೆನ್ನುತ್ತಾರೆ: “ನಮ್ಮ ಅರಿಶಿನದ ಗುಣಮಟ್ಟದ ಮುದ್ರೆ ಈ ಭೌಗೋಳಿಕ ಸೂಚಕ. ಸ್ಥಳೀಯ ಅರಿಶಿನದ ಮೌಲ್ಯವರ್ಧನೆಗೆ ಬೆಳೆಗಾರರಿಗೂ ವರ್ತಕರಿಗೂ ಇದೊಂದು ಅವಕಾಶ. ಅದಲ್ಲದೆ, ಕಳಪೆ ಅರಿಶಿನವನ್ನು ಈರೋಡ್ ಅರಿಶಿನದ ಹೆಸರಿನಲ್ಲಿ ಮಾರಾಟ ಮಾಡುವುದನ್ನು ತಡೆಯಲು ಇದು ಸಹಕಾರಿ.”
ಭೌಗೋಳಿಕ ಸೂಚಕ ಪಡೆಯಲಿಕ್ಕಾಗಿ ೨೦೧೧ರಲ್ಲಿ ಸಲ್ಲಿಸಲಾದ ದಾಖಲೆಗಳ ಅನುಸಾರ ಈ ನಾಲ್ಕು ಪ್ರದೇಶಗಳಲ್ಲಿ ಬೆಳೆಯಲಾದ ಅರಿಶಿನವನ್ನು “ಈರೋಡ್ ಅರಿಶಿನ”ವೆಂದು ಗುರುತಿಸಲಾಗುತ್ತದೆ: ಈರೋಡ್ ಜಿಲ್ಲೆ, ಕೊಯಂಬತ್ತೂರು ಜಿಲ್ಲೆಯ ಅಣ್ಣೂರು ಮತ್ತು ತೊಂಡಮತ್ತೂರು ತಾಲೂಕುಗಳು ಹಾಗೂ ತಿರುಪುರ್ ಜಿಲ್ಲೆಯ ಕಾಂಗೆಯಾಮ್ ತಾಲೂಕು.
ಜಗತ್ತಿನಲ್ಲಿ ಅತ್ಯಧಿಕ ಪರಿಮಾಣದಲ್ಲಿ ಅರಿಶಿನ ಬೆಳೆಯುವ ದೇಶ ಭಾರತ. ಇದರ ಸಸ್ಯಶಾಸ್ತ್ರೀಯ ಹೆಸರು ಕರ್‍ಕ್ಯುಮಾ ಲೊಂಗಾ. ಇದು ಶುಂಠಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಸಸ್ಯ. ಮಣ್ಣಿನಡಿಯಲ್ಲಿ ಬೆಳೆಯುವ ಇದರ ದಪ್ಪನೆಯ ಬೇರುಗಳು (ರೈಜೋಮುಗಳು) ಶತಮಾನಗಳಿಂದ ಈ ನಾಲ್ಕು ಉದ್ದೇಶಗಳಿಗೆ ಬಳಕೆಯಾಗುತ್ತಿವೆ: ಸಾಂಬಾರವಸ್ತು, ಔಷಧಿ, ನೈಸರ್ಗಿಕ ಬಣ್ಣದ ಆಕರ ಮತ್ತು ಧಾರ್ಮಿಕ ವಿಧಿಗಳ ಅಂಶ.
ಅರಿಶಿನದ ಗಾಡ ಹಳದಿ ಬಣ್ಣಕ್ಕೆ ಕಾರಣ ಅದರಲ್ಲಿರುವ ಕರ್‍ಕ್ಯುಮಿನ್ ಎಂಬ ರಾಸಾಯನಿಕ. ಇತ್ತೀಚೆಗಿನ ವರುಷಗಳಲ್ಲಿ ಈ ಅಂಶ ಜಾಸ್ತಿಯಿರುವ ಅರಿಶಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಯಾಕೆಂದರೆ, ಕರ್‍ಕ್ಯುಮಿನ್ ಸೇವನೆ ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿ ಎಂದು ಹೇಳಲಾಗಿದೆ. ಅಂತಹ ಅರಿಶಿನಕ್ಕೆ ಮುಂಚೆ ಕ್ವಿಂಟಾಲಿಗೆ ರೂ.೭,೦೦೦ ಬೆಲೆಯಿದ್ದರೆ ಈಗ ಔಷಧಿ ಕಂಪೆನಿಗಳು ಕ್ವಿಂಟಾಲಿಗೆ ರೂ.೨೦,೦೦೦ ಬೆಲೆಗೆ ಖರೀದಿಸಲು ತಯಾರಾಗಿವೆ ಎಂದು ಮಾಹಿತಿ ನೀಡುತ್ತಾರೆ ಸತ್ಯಮೂರ್ತಿ.
ಭಾರತದಲ್ಲಿ ಬೆಳೆಸಲಾಗುವ ಅರಿಶಿನದ ವಿಧಗಳ ಸಂಖ್ಯೆ ಸುಮಾರು ೫೦. ಹಾಗಿರುವಾಗ ಈರೋಡಿನ ಅರಿಶಿನದ ವಿಶೇಷತೆ ಏನು? “ನಮ್ಮ ಅರಿಶಿನ ಸಣ್ಣದು ಮತ್ತು ತೆಳು” ಎಂದು ತಿಳಿಸುತ್ತಾರೆ ಸತ್ಯಮೂರ್ತಿ. ಜೊತೆಗೆ, ಈರೋಡಿನ ಅರಿಶಿನದಲ್ಲಿ ಕರ್‍ಕ್ಯುಮಿನ್ ಅಂಶ ಅತ್ಯಧಿಕ (ಶೇಕಡಾ ೩.೯). ಇದಕ್ಕೆ ಕಾರಣ ಈರೋಡಿನ ಕೆಂಪು ಮತ್ತು ಕಪ್ಪು ಮಣ್ಣು ಎಂದು ನಂಬಲಾಗಿದೆ. ಅದರ ವಿಶಿಷ್ಠ ಸಿಹಿ ರುಚಿ ಮತ್ತು ಪರಿಮಳದಿಂದಾಗಿ, ಭಾರತ ಮತ್ತು ವಿದೇಶಗಳ ವಾಣಿಜ್ಯ ಸಾಂಬಾರ ಹುಡಿಗಳ ತಯಾರಕರ ಮೊದಲ ಆಯ್ಕೆ ಈರೋಡ್ ಅರಿಶಿನ.
ಅರಿಶಿನದ ಸಂಸ್ಕರಣೆ: ಗಡ್ಡೆಗಳನ್ನು ಕೊಯ್ದು, ಬಿಡಿಬಿಡಿ ತುಂಡುಗಳಾಗಿ ಪ್ರತ್ಯೇಕಿಸಿ, ಅವನ್ನು ನೀರಿನಲ್ಲಿ ಅಥವಾ ವಿಶೇಷ ಹಬೆಕೋಶಗಳಲ್ಲಿ ೧೫-೨೦ ನಿಮಿಷ ಬೇಯಿಸುತ್ತಾರೆ. ಹೀಗೆ ಬೇಯಿಸುವುದರಿಂದಾಗಿ ಅರಿಶಿನದ ಬಣ್ಣ ಮತ್ತು ಪರಿಮಳ ಉತ್ತಮವಾಗುತ್ತದೆ. ಅನಂತರ ಅರಿಶಿನದ ಗೆಡ್ಡೆತುಂಡುಗಳನ್ನು ಕನಿಷ್ಠ ೧೫ ದಿನಗಳು ಬಿಸಿಲಿನಲ್ಲಿ ಒಣಗಿಸುತ್ತಾರೆ. ತದನಂತರ, ಅವನ್ನು ಪಾಲಿಷ್ ಮಾಡಿ, ಮಾರುಕಟ್ಟೆಗೆ ತರುತ್ತಾರೆ. ಬೇಯಿಸಿದ ನಂತರ ೧೦೦ ದಿನಗಳ ವರೆಗೆ ಈರೋಡ್ ಅರಿಶಿನದಲ್ಲಿ ಹುಳಹುಪ್ಪಟೆ ಆಗುವುದಿಲ್ಲ ಎನ್ನುತ್ತಾರೆ ರೈತರು. ಸಂಸ್ಕರಣಾ ಘಟಕಗಳಲ್ಲಿ ಅರಿಶಿನವನ್ನು ತಗಡಿನ ಜಾಲರಿಗಳಲ್ಲಿ ಶುಚಿ ಮಾಡುತ್ತಾರೆ. ಕಲ್ಲುಗಳನ್ನು ಮತ್ತು ಮಣ್ಣಿನ ಗೆಡ್ಡೆಗಳನ್ನು ಬೇರ್ಪಡಿಸಿದ ನಂತರ, ಗಾತ್ರದ ಅನುಸಾರ ಅರಿಶಿನದ ಗೆಡ್ಡೆತುಂಡುಗಳ ವಿಂಗಡಣೆ. ಬಳಿಕ ಅವನ್ನು ಹುಡಿ ಮಾಡಲಿಕ್ಕಾಗಿ ಮಿಲ್ಲಿಗೆ ರವಾನೆ.
ಭಾರತದಲ್ಲಿ ಅರಿಶಿನದ ಉತ್ಪಾದನೆಯಲ್ಲಿ ತೆಲಂಗಾಣ ಮತ್ತು ಮಹಾರಾಷ್ಟ್ರದ ನಂತರ ತಮಿಳ್ನಾಡು ಮೂರನೆಯ ಸ್ಥಾನದಲ್ಲಿದೆ. ತಮಿಳ್ನಾಡಿನಲ್ಲಿ ೨೦೧೫-೧೬ರಲ್ಲಿ ಬೆಳೆಯಲಾದ ಅರಿಶಿನ ೧೩೨.೪ ಟನ್. ಅರಿಶಿನ ಕೃಷಿಗೆ ಬೇಕಾದ ನೀರೂ ಜಾಸ್ತಿ; ಇದರ ಕೃಷಿಯಲ್ಲಿ ಕೆಲಸವೂ ಜಾಸ್ತಿ. ಆದ್ದರಿಂದ, ಈರುಳ್ಳಿ, ಮರಗೆಣಸು, ತೆಂಗು ಅಥವಾ ಕಬ್ಬು ಜೊತೆ ರೈತರು ಅರಿಶಿನ ಬೆಳೆಸುತ್ತಾರೆ. “ರೈತರಿಗೆ ಲಾಭವಾಗ ಬೇಕಾದರೆ ಕ್ವಿಂಟಾಲಿಗೆ ಕನಿಷ್ಠ ೯,೦೦೦ದಿಂದ ೧೦,೦೦೦ ರೂಪಾಯಿ ಬೆಲೆ ಸಿಗಬೇಕು” ಎನ್ನುತ್ತಾರೆ ಸಂಘದ ಮಾಜಿ ಕಾರ್ಯದರ್ಶಿ ವಿ.ಕೆ. ರಾಜಮಣಿಕ್ಕಮ್. ಆದರೆ, ಈ ವರುಷ ಪೀಡೆಕೀಟಗಳ ಹಾವಳಿಯಿಂದಾಗಿ ಅರಿಶಿನ ಗೆಡ್ಡೆಗಳಿಗೆ ಹಾನಿಯಾಗಿ, ಬೆಲೆ ಕ್ವಿಂಟಾಲಿಗೆ ರೂ.೩,೦೦೦ದಿಂದ ರೂ.೬,೦೦೦ ಮಟ್ಟಕ್ಕೆ ಕುಸಿಯಿತು.
ಆದರೆ ರೈತರು ಅರಿಶಿನ ಕೃಷಿ ತೊರೆಯಲು ತಯಾರಿಲ್ಲ. ಕೃಷಿಕರಾದ ಎಸ್. ತಂಗರಾಜ್ ತಮ್ಮ ೧೨ ಎಕ್ರೆ ಜಮೀನಿನಲ್ಲಿ ಮೂರು ಎಕ್ರೆ ಅರಿಶಿನ ಕೃಷಿಗಾಗಿ ಮೀಸಲಿಟ್ಟಿದ್ದಾರೆ. ಪೀಡೆಕೀಟಗಳ ಹಾವಳಿಯಿದ್ದರೂ ಈರೋಡ್ ಅರಿಶಿನದ ದೇಸಿ ತಳಿಗೆ ತೊಂದರೆಯಾಗದು ಎಂಬುದವರ ಅಭಿಪ್ರಾಯ. ಅದು ಕನಿಷ್ಠ ಐದು ವರುಷ ಫಸಲು ಕೊಡುವ ತಳಿ; ಆದರೆ ಹೈಬ್ರಿಡ್ ಅರಿಶಿನ ತಳಿಗಳು ಮೂರೇ ವರುಷದಲ್ಲಿ ಸಾಯುತ್ತವೆ ಎಂದು ವಿವರಿಸುತ್ತಾರೆ ತಂಗರಾಜ್. ಅವರ ಖಡಕ್ ಮಾತು, “ಉಳಿದ ಎಲ್ಲದರಂತೆಯೇ ಅರಿಶಿನದಲ್ಲಿಯೂ ನಕಲಿ ತಳಿಗಳಿಗಿಂತ ಅಸಲಿ ತಳಿಯೇ ಉತ್ತಮ.”