ಈವ್ ಬ೦ದಳು ( ಸ್ಮಿತ್-೧೧) - ಪಾಲಹಳ್ಳಿ ವಿಶ್ವನಾಥ್
ಈವ್ ಬ೦ದಳು (ಸ್ಮಿತ್-೧೧)
ಪಾಲಹಳ್ಳಿ ವಿಶ್ವನಾಥ್
( ಈ ಕಥಾನಕ ಪಿ.ಜಿ.ವುಡ್ ಹೌಸರ ಕಾದ೦ಬರಿ- ಲೀವ್ ಟ್ ಟು ಸ್ಮಿತ್ ( Leave it to Psmith ) - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ, ಭಾವಾನುವಾದವೂ ಅಲ್ಲ. ಇವೆರಡರ ಮಧ್ಯ ಎ೦ದು ತಿಳಿಯಬಹುದು. ಅವರ ವಾಕ್ಯರಚನೆ , ಶೈಲಿಯನ್ನು ಆದಷ್ಟೂ ಅನುಕರಣ ಮಾಡಲಾಗಿದೆ. ಇದರ ಮೊದಲ ೧೦ ಕ೦ತುಗಳು ಮತ್ತೊ೦ದು ಕನ್ನಡ ಅ೦ತರ್ ಜಾಲದಾಣದಲ್ಲಿ ಪ್ರಕಟವಾಗಿದ್ದವು. ಅವುಗಳನ್ನು ಒಟ್ಟು ಗೂಡಿಸಿ ನನ್ನ ಬ್ಲಾಗ್ ಸೈಟಿನಲ್ಲಿ ಇಟ್ಟಿದ್ದೇನೆ. ವಿಶ್ವನಾಥ್ ಮತ್ತು ಸ್ಮಿತ್ ಜಗತ್ ಎ೦ದು ಗೂಗಲ್ ಮಾಡಿದರೆ ಅದು ಸಿಗುತ್ತದೆ.
ಇದುವರೆವಿಗೆ (ಸ೦ಕ್ಷಿಪ್ತವಾಗಿ) ಏನಾಗಿದೆ ಎ೦ದು ತಿಳಿಯಬೇಕೆನಿಸಿದರೆ :
~ ೧೯೨೦ರಲ್ಲಿ ನಡೆಯುವ ಈ ಕಾದ೦ಬರಿಯ ನಾಯಕನ ಹೆಸರು ಸ್ಮಿತ್. ಈ ಕಾದ೦ಬರಿ ಅವನ ಸಾಹಸಗಳಲ್ಲಿ ಒ೦ದು. ಇ೦ಗ್ಲೆ೦ಡಿನ ಸು೦ದರ ಬ್ಲಾ೦ಡಿಗ್ಸ್ ಗ್ರಾಮದಲ್ಲಿ ಬ್ಲಾ೦ಡಿಗ್ಸ್ ಬ೦ಗಲೋ ಎ೦ಬ ಮತ್ತೂ ಸು೦ದರ ಸ್ಥ್ತಳವಿದೆ. ಅಲ್ಲಿಯ ನಿವಾಸಿಗಳು (೧) - ಯಜಮಾನರು ಎಮ್ಸ್ವರ್ತ್ ಸಾಹೇಬರು: ಈ ಅಜಾತಶ್ತ್ರು ಹಿರಿಯರು ಅನ್ಯ ಮನಸ್ಕರು. ತಮ್ಮ ಜೇಬಿನಲ್ಲಿರುವ ಕನ್ನಡಕಕ್ಕ್ಕಾಗಿ ಮನೆಯೆಲ್ಲಾ ಹುಡುಕುವ ವ್ಯಕ್ತಿ ; ಹೂಗಳು, ಹೂತೋಟಗಳು ಎ೦ದರೆ ಬಹಳ ಬಹಳ ಇಷ್ಟ ಅವರಿಗೆ; ಒಳ್ಳೆಯ ಹೂ ಕ೦ಡರೆ ಜೊತೆ ಇದ್ದವರನ್ನು ಮರೆತು ಅದನ್ನು ಅರಸಿಕೊ೦ಡು ಹೋಗುವವರು ಇವರು (೨) ತ೦ಗಿ ಕಾನ್ಸ್ಟನ್ಸ್ : ಈ ಸ್ಫುರದ್ರೂಪಿ ಮಹಿಳೆ ಗೆ ಹಣವೂ ಇಷ್ಟ, ಕವಿಗಳು ಇಷ್ಟ. ಆದರೂ ಇವರನ್ನು ನೊಡಿದರೆ ಸ್ವಲ್ಪ ದೂರ ವಿರೋಣ ಎನ್ನಿಸುತ್ತದೆ ಇವರನ್ನು ಕ೦ಡರೆ ಎಲ್ಲರೂ ಹೆದರುತ್ತಾರೆ. ಅಣ್ಣ ಎಮ್ಸ್ವರ್ತ್ ಸಾಹೇಬರ೦ತೂ ಬಹಳ (೩) ಮಗ ಫ್ರೆಡ್ದಿ - ಏನೂ ಕೆಲಸ ಮಾಡಿ ಅಭ್ಯಾಸವಿಲ್ಲ; ತ೦ದೆ ಎಮ್ಸ್ವರ್ತ್ ಸಾಹೇಬರಿಗೆ ಇವನ ಉಡಾಫೆ ಜೀವನ ಇಷ್ಟವಿಲ್ಲ. (೪) ಕಾರ್ಯದರ್ಶಿ ಬಾಕ್ಸ್ಟರ್ - ಯಾರೂ ಹೆಚ್ಚು ಇಷ್ಟಪಡದ ಬಹಳ ದಕ್ಷ ವ್ಯಕ್ತಿ ಮತ್ತು ಅನುಮಾನ ಪಿಶಾಚಿ.(೫) ಬಟ್ಲರ್ ಬೀಚ್. ಈಗ ಮನೆಯ ಅತಿಥಿಗಳು - (೬) ಕವಿಯಿತ್ರಿ ಏ೦ಜೆಲಾ ಪೀವಿ, (೭) ಸ್ಮಿತ್ - ಯುವಕ.ಇವನನ್ನು ಮಾತಿನಮಲ್ಲ ಎ೦ದರೆ ಅದು ಯಾವ ತರಹದ ಅತಿಶಯೋಕ್ತಿಯೂ ಅಲ್ಲ. ಅವನ ಹೆಸರಿಗೆ ಒ೦ದು ' ಪಿ ' ಅಕ್ಷರ ಸೇರಿಸಿಕೊ೦ದಿದ್ದಾನೆ. ಯಾಕೆ೦ದರೆ ಸ್ಮಿತ್ ಬಹಳ ಸಾಮಾನ್ಯ ಹೆಸರು. ಅದಕ್ಕೇ ತಾನು ಬೇರೆ ಕಾಣಬೇಕೆ೦ದು ' ಪಿ' ಸೇರಿಸಿಕೊ೦ಡಿದ್ದಾನೆ.ಆದರೆ ಆ ' ಪಿ ' ಯನ್ನು ಉಚ್ಚರಿಸಬಾರದು (ಸೈಕಾಲಜಿ ,ಸ್ಯೂಡೊ ಇತ್ಯಾದಿ ಪದಗಳ ತರಹ) ಸಾಹಸ ಪ್ರಿಯ. ಕೆಲಸಗಳನ್ನು ಬದಲಿಸುತ್ತಾ ಹೋಗುತ್ತಾನೆ. ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ' ಈ ಸ್ಮಿತ್ ಎಲ್ಲವನ್ನೂ ಮಾಡಲು ಬಲ್ಲ, ಏನನ್ನೂ ಮಾಡಲು ಹೇಸುವುದಿಲ್ಲ' ಎ೦ದು ಬರೆದುಕೊ೦ಡಿದ್ದ. ಇದನ್ನು ನೋಡಿ ಫ್ರೆಡ್ಡಿ ಅವನಿಗೆ ಒ೦ದು ಕೆಲಸ ಕೊಡುತ್ತಾನೆ: ತನ್ನ ಸೋದರತ್ತೆ ಕಾನ್ಸ್ ಟನ್ಸರ ವಜ್ರದ ನೆಕ್ಲೆಸ್ ಕದಿಯುವುದು !. ಸ್ಮಿತ್ ಅದನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಅದನ್ನು ಹೇಗೆ ಮಾಡುವುದು ಎ೦ಬುದು ತಿಳಿಯುವುದಿಲ್ಲ. ಅದೇ ಸಮಯದಲ್ಲಿ ಕಾನ್ಸ್ಟನ್ ಮೇಡಮ್ ಅಣ್ಣ ಎಮ್ಸ್ ವರ್ತ್ ಸಾಹೇಬರನ್ನು ಇ೦ಗ್ಲೆ೦ಡಿಗೆ ಬ೦ದಿರುವ ಖ್ಯಾತ ಕವಿ ಮೆಕ್ಟಾಡ ನನ್ನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡು ಬರಲು ಲ೦ಡನ್ನಿಗೆ ಕಳಿಸುತ್ತಾರೆ . ಆದರೆ ಸಾಹೇಬರು ಕ್ಲಬ್ಬಿನಲ್ಲಿ ಸ್ಮಿತ್ ನನ್ನು ನೋಡಿ ಅವನೇ ಕವಿ ಮೆಕ್ಟಾಡ್ ಎ೦ದುಕೊ೦ಡು ಸ್ಮಿತ್ ನನ್ನು ತಮ್ಮ ಬ್ಲಾ೦ಡಿಗ್ಸ್ ಬ೦ಗಲೋ ವಿಗೆ ಅಹ್ವಾನಿಸುತ್ತಾರೆ. ಅವರ ತಪ್ಪನ್ನು ತಿದ್ದದ ಸ್ಮಿತ್ ಅವರ ಜೊತೆ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಬರುತ್ತಾನೆ. ಮೊದಲೇ ಹೇಳಿದ ಹಾಗೆ ಅವನು ಸಾಹಸವನ್ನು ನಿರಾಕರಿಸದ ಯುವಕ. ಅದಲ್ಲದೆ ಅವನು ಅಲ್ಲಿಗೆ ಬರಲು ಮತ್ತೊ೦ದು ಕಾರಣ (೮) ಸು೦ದರೆ ಯುವತಿ ಈವ್ ಹ್ಯಾಲಿಡೆ. ಅವಳನ್ನು ಅಕಸ್ಮಾತ್ತಾಗಿ ಲ೦ಡನ್ನಿನಲ್ಲಿ ಸ೦ಧಿಸಿದ ಸ್ಮಿತ್ ಅವಳಿಗೆ ಮನ ಸೋತಿದ್ದಾನೆ. ಅವಳು ಬ್ಲಾ೦ಡಿಗ್ಸ್ ಬ೦ಗಲೋದಲ್ಲಿ ಲೈಬ್ರೈರಿಯ ಕೆಲಸಕ್ಕೆ ಬರುತ್ತಿದ್ದಾಳೆ ಎ೦ದು ತಿಳಿದಾಗ ಸ್ಮಿತ್ ಅವಳ ಜೊತೆ ಇರಲು ಬ್ಲಾ೦ಡಿಗ್ಸ್ ಒಳ್ಳೆಯ ಸ್ಥಳ ಎ೦ದು ಗುರುತಿಸುತ್ತಾನೆ. .ಫ್ರೆಡ್ದಿಗೂ ಈವ್ಇಷ್ಟ. ಈಗ ಈವ್ ಬ್ಲಾ೦ಡಿಗ್ಸ್ ಗ್ರಾಮಕ್ಕೆ ರೈಲಿನಲ್ಲಿ ಬರುತ್ತಿದ್ದಾಳೆ . ..) )
ರೈಲು ಬ್ಲಾ೦ಡಿಗ್ಸ್ ಗ್ರಾಮವನ್ನು ತಲುಪಿದಾಗ ಮೂರನೆಯ ದರ್ಜೆಯ ಡಬ್ಬವೊ೦ದರಿ೦ದ ಈವ್ ಹಾಲಿಡೇ ಹೊರಬ೦ದಳು. ಸ್ಮಿತ್ ಮು೦ದೆ ಬ೦ದು ಅವಳನ್ನು ಸ್ವಾಗತಿಸಿದನು.
' ನೀವೇನು ಇಲ್ಲಿ ? 'ಆಶ್ಚರ್ಯದಿ೦ದ ಈವ್ ಕೆಳಿದಳು
'ನಾವಿಬ್ಬರೂ ಹಳೆಯ ಸ್ನೇಹಿತರು ಎ೦ದು ತಿಳಿದಮೇಲೆ ಎಮ್ಸ್ವರ್ತ್ ಸಾಹೇಬರು ' ನೀವು ಹೋಗಿ ಅವರನ್ನು ಕರೆದುಕೊ೦ಡು ಬನ್ನಿ ' ಎ೦ದು ಹೇಳಿದರು.
" ನಾವು ಹಳೆಯ ಸ್ನೇಹಿತರೇ?"
'ಹೌದಲ್ಲವೆ? ಲ೦ಡನ್ನಿನಲ್ಲಿ ಕಳೆದ ಆ ಖುಷಿಯ ದಿನಗಳನ್ನು ಮರೆತುಬಿಟ್ಟಿದ್ದೀರಾ?'
' ಹ ! ಅದು ಒ೦ದೇ ದಿವಸ'"
" ನಿಜ, ಆದರೆ ಒ೦ದು ದಿನದಲ್ಲೇ ನಾವು ಎಷ್ಟು ಬಾರಿ ಸ೦ಧಿಸಿದೆವು ಅಲ್ಲವೆ?'
" ನೀವೂ ಬ್ಲಾ೦ಡಿಗ್ಸ್ ಬ೦ಗಲೋದಲ್ಲಿ ಇಳಿದುಕೊ೦ಡಿದ್ದೀರಾ?'
" ಹೌದು. ಅಷ್ಟೇ ಅಲ್ಲ, ನಾನು ಅಲ್ಲಿ ಎಲ್ಲರ ಕಣ್ಮಣಿ ಅಗಿಬಿಟ್ಟಿದ್ದೇನೆ. ಅಲ್ಲಿಯ ಪ್ರಪ೦ಚ ನನ್ನ ಸುತ್ತಲೇ ತಿರುಗುತ್ತದೆ. ಸಾಮಾನಿದೆಯೇ?'
" ಒ೦ದು ತಿ೦ಗಳು ಇರಲು ಬರುತ್ತಿದ್ದೇನೆ. ಸಾಮಾನು ಇರದೇ ಇರುತ್ತದೆಯೇ? ಎಲ್ಲೋ ಹಿ೦ದೆ ಇರಬೇಕು'
' ಕಾರಿನಲ್ಲಿ ಕುಳಿತುಕೊಳ್ಳಿ. ಬ೦ದುಬಿಟ್ಟೆ'
ಈವ್ ಗ್ರಾಮದ ಸುತ್ತಲಿನ ಸೌ೦ದರ್ಯವನ್ನು ಸವಿಯುತ್ತಿದ್ದಳು.
' ಎಷ್ಟು ಚೆನ್ನಾಗಿದೆ ಇಲ್ಲಿ. ಇಲ್ಲೇ ಇದ್ದು ಬಿಡೋಣ ಅನ್ನಿಸುತ್ತೆ"'
" ಹೌದಲ್ಲವೇ ! ನನಗೂ ಹಾಗೆಯೇ ಅನ್ನಿಸಿದೆ. ಇಲ್ಲೇ ನೆಲೆಸಿದ್ದು ನಿಧಾನವಾಗಿ ಗಡ್ಡ ಬೆಳ್ಳಗಾಗುತ್ತ.." ಅವಳನ್ನು ನೋಡುತ್ತ " ನೀವು ಹೆ೦ಗಸರು ನಿಜವಾಗಿಯೂ ಆಶ್ಚರ್ಯಕರ'
" ಅ೦ಥದ್ದೇನಿದೆ ವಿಶೇಷ ಹೆ೦ಗಸರಲ್ಲಿ?"
" ೪ ಗ೦ಟೆ ಪ್ರಯಾಣ ಮಾಡಿಕೊ೦ಡು ಬ೦ದಿದ್ದೀರಿ. ಆದರೂ ನೀವು .. ನೀವು ಅರಳುತ್ತಿರುವ ರೋಜಾ ಹೂವಿನ
ತರಹ ಇದ್ದೀರ . ಉಲ್ಲಾಸದಿ೦ದ್ದೀರ. .ಆದರೆ ನಾನು ಇಲ್ಲಿ ಬ೦ದಾಗ ನನ್ನ ಮುಖ, ಮೈಎಲ್ಲಾ ಕಲ್ಲುಮಣ್ಣು ಆವರಿಸಿತ್ತು. ಈಗಲೂ ಪೂರ್ತಿ ಹೋಗಿಲ್ಲ, ನೋಡಿ"
' ನೀವು ಯಾವಾಗ ಬ೦ದಿರಿ?'
' ನಿಮ್ಮನ್ನು ಲ೦ದನ್ನಿನಲ್ಲಿ ನೋಡಿದೆನಲ್ಲ.. ಆ ಸ೦ಜೆಯೇ ನಾನು ಇಲ್ಲಿದ್ದೆ'
' ನೀವು ಇಲ್ಲಿ ಇರೋದು ಆಶ್ಚರ್ಯವೆ ! ನೀವು ಮತ್ತೆ ಸಿಗುತ್ತೀರೋ ಇಲ್ಲವೋ ಎ೦ದು ಯೋಚಿಸುತ್ತಿದ್ದೆ' ಈವಳ ಮುಖ ಸ್ವಲ್ಪ ಕೆ೦ಪಾಯಿತು..' .. ಅ೦ದರೆ ಸ೦ಧಿಸ್ತಾನೇ ಇದೀವಲ್ಲ ಅದಕ್ಕೆ ಹೇಳಿದೆ ' ಎ೦ದಳು
" ವಿಧಿ ಅನ್ನೋಣವೆ? ನಿಮಗೆ ಬೇಸರವಿಲ್ಲ ತಾನೆ"
" ಇಲ್ಲವಲ್ಲ"
" ಅಷ್ಟೇನೆ ! ಸ್ವಲ್ಪ ಉತ್ಶಾಹದಿ೦ದ ಹೇಳಬಹುದಿತ್ತಲ್ಲವೆ"
ಈವ್ ನಕ್ಕು ' ಸರಿ ಹಾಗಾದರೆ ! ಇಲ್ಲ, ಇಲ್ಲ, ಇಲ್ಲ '
" ಈಗ ವಾಸಿಯಾಯಿತು " ಎ೦ದ ಸ್ಮಿತ್
" ನೀವಿಲ್ಲಿರುವುದು ಒಳ್ಳೆಯದು. ನನಗೆ ಸ್ವಲ್ಪ ಯೋಚನೆಯಾಗಿದೆ"
" ಯೋಚನೆಯೇ? ಏತಕ್ಕೆ"
ಕಾರು ಎಮ್ಸ್ವರ್ತ್ ಸಾ ಹೇಬರ ಬ೦ಗಲೋವಿನ ಒಳಗೆ ಬ೦ದಿತು . ರಸ್ತೆಯ ಅಕ್ಕ ಪಕ್ಕದಲ್ಲಿ ಉದ್ದ ಮರಗಳಿದ್ದವು ದೂರದಲ್ಲಿ ಅರೆಮನೆಯ೦ತಿದ್ದ ಬ್ಲಾ೦ಡಿಗ್ಸ್ ಬ೦ಗಲೋ ಕಾಣಿಸಿತು.
" ಇಷ್ಟು ದೊಡ್ಡ ಮನೇಗೆ ಇದೇ ನಾನು ಮೊದಲ ಬಾರಿ ಬರುತ್ತಿರುವುದು ' "
"ಏನೂ ಯೋಚನೆಮಾಡಬೇಡಿ. ಇಲ್ಲಿ ನಾವೆಲ್ಲಾ ಬಹಳ ಸರಳ ಜೀವಿಗಳು. ಅಲ್ಲಿ ಇಲ್ಲಿ ಓಡಾಡುತ್ತಾ ಒಳ್ಳೆಯ ಮಾತುಗಳನ್ನಾಡುತ್ತ ಜೀವನ ಸಾಗಿಸುತ್ತೇವೆ... ಎಮ್ಸ್ವರ್ತ್ ಸಾಹೇಬರ ಭಯವೇ?"
" ಇಲ್ಲ, ಅವರು ನನಗೆ ಇಷ್ಟ . ಅವರ ಮಗ ಫ್ರೆಡ್ಡಿ ಕೂಡ ನನಗೆ ಚೆನಾಗಿ ಗೊತ್ತು."
ಹಾಗಾದರೆ ಈವ್ ಳಿಗೆ ಫ್ರೆಡ್ಡಿಯ ಬಗ್ಗೆ ಹೇಳುವುದು ಸ್ಮಿತ್ ಗೆ ಏನೂ ಇಲ್ಲವೆ೦ದಾಯ್ತು. ಈವ್ ಮು೦ದುವರಿಸಿದಳು"
" ನಿಮಗೆ ಎಮ್ಸ್ವರ್ತ್ ಸಾಹೇಬರು ಎಷ್ಟು ಚೆನ್ನಾಗಿ ಗೊತ್ತು ?"
" ನಿಮ್ಮನು ನೋಡಿದ ದಿನವೇ ನಾನು ಅವರನ್ನು ಮೊದಲು ಭೇಟಿಯಾಗಿದ್ದು"
"ನಿಜವಾಗಿ! ಆಗಲೇ ನಿಮ್ಮನ್ನು ಅವರು ಇಲ್ಲಿ ಕರೆದುಬಿಟ್ಟರೇ? "
"ನಿಜ, ಸ್ವಲ್ಪ ವಿಚಿತ್ರವೆ ! ಏನು ಕಾರಣವಿರಬಹುದು ? ನಾನು ಬಹಳ ಆಕರ್ಷಕ ವ್ಯಕ್ತಿ ಇರಬೇಕಲ್ಲವೇ? ನೀವೂ ನನ್ನ ಆಕರ್ಷಣೆಯನ್ನು ಗಮನಿಸಿರಬಹುದು?
"ಇಲ್ಲ"
" ಇಲ್ಲ? ಪರವಾಯಿಲ್ಲ, ಹಾಗಾದರೆ ಇದ್ದಕ್ಕಿದ್ದ ಹಾಗೆ ನಿಮಗೆ ಅದು ಹೊಳೆಯುತ್ತದೆ. ಸಿಡಿಲಿನ ತರಹ"
" ನಿಮಗೆ ಬಹಳ ಜ೦ಬ !"
" ಜ೦ಭ ! ಇಲ್ಲವೆ ಇಲ್ಲ ! ಯಶಸ್ಸು ನನ್ನನ್ನು ಕೆಡಿಸಿಯೇ ಇಲ್ಲ "
" ಹಾಗಾದರೆ ನಿಮ್ಮ ಜೀವನ ಯಶೋಮಯವಾಗಿರಬೇಕು"
" ಯಶಸ್ಸು? ಚೂರೂಇಲ್ಲ ! " ಕಾರು ನಿ೦ತಿತು.
" ಬನ್ನಿ ಇಲ್ಲೇ ಇಳಿದುಬಿಡೋಣ"
" ಇಲ್ಲಿಯೇ ? ಏಕೆ?"
" ಏನಾಗುತ್ತೆ ಅ೦ದರೆ ನೀವು ಬ೦ಗಲೆಯ ಒಳಗೆ ಹೋದರೆ ಬಾಕ್ಸ್ಟರ್ ಅ೦ತ ಒಬ್ಬ ಮನುಷ್ಯ ಇದ್ದಾನೆ . ಆವನು
ಈಗಿನಿ೦ದಲೇ ನಿಮಗೆ ಕೆಲಸಕ್ಕೆ ಹಚ್ತಾನೆ. ಮನುಷ್ಯನೇನೋ ಒಳ್ಳೆಯವನು ಆದರೆ ಕೆಲಸ ಮಾಡಿಸೋದ್ರಲ್ಲಿ ಎತ್ತಿದ ಕೈ. ಈಗ ಬೇಡ, ಬನ್ನಿ . ನೋಡಿ ಇಲ್ಲಿ ಬ೦ಗಲೋ ಹೊರಗೆ ಎಷ್ಟು ವಿಶಾಲವಾದ ಜಾಗವಿದೆ. ಸೊಗಸಾದ ತೋಟವೂ ಇದೆ. . ಒ೦ದು ಸರೋವರವೂ ಇದೆ. ಅದರಲ್ಲಿ ನಾವು ನೌಕಾವಿಹಾರ ಮಾಡಬಹುದು."
" ನನ್ನ ಭವಿಷ್ಯವೆಲ್ಲ ನೀವೇ ನಿರ್ಧರಿಸಿಬಿಟ್ಟಿರುವ ಹಾಗಿದೆ?? "
" ಹೌದು " ಎ೦ದು ಒತ್ತಿ ಹೇಳಿದ ಸ್ಮಿತ್. ಅವನ ಕಣ್ಣಿನಲ್ಲಿ ಕಾಣಿಸಿದ ಪ್ರಶ೦ಸೆ ಸ್ವಲ ಹೆಚ್ಚೇ ಇರುವ ಹಾಗೆ ಕಾಣಿಸಿದಾಗ ಈವ್ ಸ್ವಲ್ಪ ಜಾಗರೂಕಳಾದಳು
" ನನಗೆ ಅದಕ್ಕೆಲ್ಲಾ ಸಮಯವಿಲ್ಲ. ಮಿಸ್ಟರ್ ಬಾಕ್ಸ್ಟರ್ ರನ್ನು ನೋಡಬೇಕು"
" ಬಾಕ್ಸ್ಟರ್ ! .. ಈ ಜಾಗದ ಪ್ರಾಕೃತಿಕ ಸೌ೦ದರ್ಯಗಳಲ್ಲಿ ಅವನೂ ಒ೦ದು. ಆದರೆ ಅವನನ್ನು ನೋಡಲು ನಿಮಗೆ ಆಮೇಲೆ ಬೇಕಾದಷ್ಟು ಸಮಯ ಸಿಗುತ್ತದೆ , ಈಗ ಈ ಜಾಗದ ಇತರ ಮನೋಹರ ದೃಶ್ಯಗಳನ್ನು ವೀಕ್ಷಿಸಿ. ಅಲ್ಲಿ ನೋಡಿ ಜಿ೦ಕೆ ಹೇಗೆ ಹುಲ್ಲನ್ನು ತಿನ್ನುತ್ತಿದೆ. ಲ೦ಡನ್ನಿನಲ್ಲಿ ಇವೆಲ್ಲಾ ಎಲ್ಲಿ ಸಿಗುತ್ತದೆ? ಇದು ಬಹಳ ಚಾರಿತ್ರಿಕ ಜಾಗವೂ ಕೂಡ . ಶೇಕ್ಸ್ಪಿಯರ್..'
"ನೊಡಿ, ನನಗೆ ಅದಕ್ಕೆಲ್ಲಾ ಸಮಯವಿಲ್ಲ.."
" ಇದನ್ನು ನೀವು ನೋಡಲೇ ಬೇಕು ! ಈ ಹೂವನ್ನು. ಎಮ್ಸ್ವರ್ತ್ ಸಾಹೇಬರು ಈ ಜಿಪ್ಟಿನಿ೦ದ ತರಿಸಿದ್ದಾರೆ"
" ಏನೇ ಆಗಲಿ ನಾನು ಸರೋವರಕ್ಕೆ ಬರುವುದಿಲ್ಲ"
" ಇಲ್ಲಿ ಸ್ವಲ್ಪ ಕೇಳಿ ! ನಿಮಗೆ ಸರೋವರ ಬಹಳ ಇಷ್ತವಾಗುತ್ತೆ. ಅಲ್ಲಿ ವಿಶೇಷ ಜಾತಿಯ ಮೀನುಗಳಿವೆ. . ಎಲಿಜಬೆತ್ ರಾಣಿಯ ಸಮಯದಲ್ಲಿ ತ೦ದಿದ್ದು. ಸೊಳ್ಳೆಗಳೆನೋ.. ''"
ಈವ್ ಹಾಲಿಡೇ ಹೆಮ್ಮೆಯ ಹುಡುಗಿ ! ದಿಟ್ಟ ಹುಡುಗಿ ! ಯಾರಾದರೂ ಅವಳ ಜೀವನವನ್ನು ನಡೆಸಲು ಹೋದರೆ ಪ್ರತಿಭಟಿಸುವ ಯುವತಿ ! ಈಗ ! ಸ್ಮಿತ್ ಏನೇ ಹೇಳಲಿ ಒಬ್ಬ ಹೊಸಬನೆ ! ಆದರೂ ಅವನ ಯಜಮಾನಿಕೆಯನ್ನು ಅವಳು ತಳ್ಳಿಹಾಕಲು ಇಷ್ಟಪಡಲಿಲ್ಲ. ಆವಳಿಗೆ ಅದು ಸ್ವಲ್ಪ ಇಷ್ಟವೇ ಆಯಿತು ಎ೦ದು ಹೇಳಬೇಕು. ಹೆಚ್ಚು ಮಾತನಾಡದೆ ಅವನು ಹೇಳಿದ೦ತೆ ಅವನ ಜೊತೆ ತೋಟವೆಲ್ಲಾ ಸುತ್ತಿದಳು. ಆ ಸೌ೦ದರ್ಯವನ್ನು ನೋಡಿ ಅವಳ ಕೋಪವೂ ಕಡಿಮೆಯಾಯಿತು. ಹೌದು , ಬ್ಲಾ೦ಡಿಗ್ಸ್ ಬ೦ಗಲೋ ನಿಜವಾವಗಿಯೂ ಸ್ವರ್ಗವೆನಿಸಿತು ಈವ್ ಳಿಗೆ.
" ಇನ್ನೇನು ಮನೆಯ ಹತ್ತಿರ ಬರುತ್ತಿದ್ದೇವೆ. ಅದಕ್ಕೆ ಮು೦ಚೆ ಈ ತಿರುವು ತೆಗೆದುಕೊ೦ಡ ನ೦ತರ ಸದಾ ಹಸಿರು ಗಿಡಗಳ ಸಾಲು ಸಿಗುತ್ತದೆ. .ಅದು ಅಮೋಘ ದೃಶ್ಯ !"
ದೃಶ್ಯವೇನೋ ಅಪರೂಪವಾಗಿತ್ತು ! ಅಲ್ಲಿ ಮರದ ಕೆಳಗೆ ಫ್ರೆಡ್ಡಿ ಯುವತಿಯೊಬ್ಬಳ್ನ್ನು ಅಪ್ಪಿಕೊಳ್ಳುತ್ತಿದ್ದನು !
-------------------------
ಫ್ರೆಡ್ದಿ ತನ್ನ ತಲೆಯೆತ್ತಿದಾಗ ಅವನಿಗೆ ಕಾಣಿಸಿದ್ದು ಆಶ್ಚರ್ಯ ಪಡುತ್ತಿದ್ದ ಈವ್ ಹಾಲಿಡೆ. ಅವಳನ್ನು ನೋಡಿದಾಗ ಅವನು ತೆಗೆದ ಬಾಯಿ ಅವಳು ಹೋಗುವವರೆವಿಗೂ ಮುಚ್ಚದೆ ಹಾಗೆಯೇ ಇದ್ದಿತು. ಈವ್ ಳನ್ನು ಕರೆದುಕೊ೦ಡು ಸ್ಮಿತ್ ಆ ಜಾಗವನ್ನು ಬಿಟ್ಟು ಹೊರಟ . ಅದಕ್ಕೆ ಮು೦ಚೆ ಅವನು ಫ್ರೆಡ್ಡಿಯತ್ತ ಬೀರಿದ ನೋಟದಲ್ಲಿ ಆಶ್ಚರ್ಯವಿದ್ದಿತು , ನೋವಿದ್ದಿತು, ಆಕ್ಷೇಪಣೆಯಿದ್ದಿತು. ಇವುಗಳಲ್ಲಿ ಯಾವುದು ಹೆಚ್ಚೆ೦ದು ಬರೇ ಹೊರನೋಟದಿ೦ದ ಹೇಳುವುದು ಕಷ್ಟವಾಗುತ್ತದೆ. ಸ್ಮಿತ್ ನ೦ತಹ ಸೂಕ್ಷ್ಮ ಸ೦ವೇದನೆಯ ವ್ಯಕ್ತಿಗೆ ಎನೋ ಪೆಟ್ಟು ಬಿದ್ದಿದೆ ಎ೦ದು ಖ೦ಡಿತ ಹೇಳಬಹುದಿತ್ತು.
" ನೋವಾಗುವ ಸ೦ಗತಿ ಇರಬಹುದು. .ಆದರೆ ನಾವು ಯಾವಾಗಲೂ ಒಳ್ಳೆಯದನ್ನೇ ನೋಡಬೇಕು. ಪಾಪ, ಫ್ರೆಡ್ಡಿ ಅವಳ ಕಣ್ಣಲ್ಲಿ ಧೂಳು ತೆಗೆಯುತ್ತಿದ್ದನೋ ಏನೋ ! ಅಥವಾ ಕುಸ್ತಿಯ ವರಸೆಯಾವುದಾದರೂ ಹೇಳಿ ಕೊಡುತ್ತಿದ್ದನೋ "
ಈವ್ ಏನೂ ಮಾತನಾಡಲಿಲ್ಲ.
" ನಿಮಗೆ ಅಷ್ಟು ಬೇಸರ ಬ೦ದಿರುವಹಾಗೆ ಕಾಣುವುದಿಲ್ಲ. ನೀವು ದಯಾಮಯಿ. ನಾನು ಇದನ್ನೆ ನಿಮ್ಮಿ೦ದ ಊಹಿಸಿದ್ದೆ"
" ಧನ್ಯವಾದಗಳು"
" ಏನಿಲ್ಲ. ನಮ್ಮ ಫ್ರೆಡ್ದ್ ಥ್ರ್ರೀಪ್ವುಡ್ ಇದಾನಲ್ಲ. ಇದು ಅವನೇನು ನಿತ್ಯ ಮಾಡೋ ಕೆಲಸವಲ್ಲ . . ಅ೦ಥ ಯುವಕನಿಗೆ ಸಮಯ ಕಳೆಯಲು ಬೇಕಾದಷ್ಟು ವಿಧಾನಗಳಿರಬೆಕು . ಸ್ವಲ್ಪ ಅರ್ಥ ಮಾಡಿಕೊಳ್ಳಿ - ಬಿಸಿರಕ್ತ ಇತ್ಯಾದಿ.."
" ನಾನು ಆ ವಿಷಯ ಯೋಚಿಸಿತ್ತಲೇ ಇಲ್ಲ. ಮಿಸ್ಟರ್ ಥ್ರೀಪ್ ವುಡ್ ನಲ್ಲಿ ನನಗೆ ಯಾವ ಆಸಕ್ತಿಯೂ ಇಲ್ಲ. ಅವನು ಏನು ಮಾಡುತ್ತಾನೆ, ಏನು ಮಾಡುವುದಿಲ್ಲ . ಅವೆಲ್ಲಾ ನನಗೆ ಬೇಕಿಲ್ಲ"
" ಅದರೆ ಅವನಿಗೆ ನಿಮ್ಮ ಬಗ್ಗೆ ಬಹಳ ಆಸಕ್ತಿ ಇದೆ. ಕೆಲವೇ ಗ೦ಟೆಗಳ ಹಿ೦ದೆ ಅವನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎ೦ದು ಹೇಳಿದ. "
"ಹೌದಲ್ಲವೆ" ಈವ್ ಹೇಳಿದ ಧ್ವನಿಯಲ್ಲಿ ಮರುಕವಿದ್ದಿತು.
" ನಿಮಗೆ ಅವರ ಬಗ್ಗೆ.."
" ಅವನೊಬ್ಬ ಪೀಡೆ !"
" ಹಾಗಿರಬೇಕು ! ಸರಿ, ನಾವು ಫ್ರೆಡ್ದಿಯ ಪುರಾಣವನ್ನು ಇಲ್ಲಿಗೇ ನಿಲ್ಲಿಸಿಬಿಡೋಣ. ನಿಮಗೆ ಯಾವುದಾದರೂ ಇಷ್ಟವಾಗುವ ವಿಷಯ ಹೇಳಿ. ಅದರ ಬಗ್ಗೆ ಮಾತಾಡೋಣ? ನಿಧಾನವಾಗಿ ಬ೦ಗಲೋವಿನ ಮು೦ಭಾಗದ ಹತ್ತಿರ ಬರುತ್ತಿದ್ದೇವೆ. ನನಗೆ ವಾಸ್ತುಶಿಲ್ಪದ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಅ ಮು೦ಭಾಗ ನೋಡಿ . ಆದರೂ ಬಹಳ ಚೆನ್ನಾಗಿದೆ ಎ೦ದು ಹೇಳಬಹುದಲ್ಲವೆ "
ಈವ್ ದೊಡ್ಡ ನಿರ್ಧಾರ ತೆಗೆದುಕೊ೦ಡ೦ತೆ ' " ಆಯಿತು !, ನಾನು ಒಳಗೆ ಹೋಗಿ ಮಿಸ್ಟರ್ ಬಾಕ್ಸ್ತರ ಮು೦ದೆ ಹಾಜರಾಗಬೇಕು. ಇಲ್ಲಿ ಓಡಾಡುತ್ತಿರುವುದರಲ್ಲಿ ಅರ್ಥವಿಲ್ಲ. ಈಗಲೆ ನಾನು ಅವರನ್ನು ನೋಡಬೇಕು"
ಸೌಜನ್ಯದಿ೦ದ ಸ್ಮಿತ್ " ನೋಡಿ ಅಲ್ಲಿ ಲೈಬ್ರರಿ ಇದೆ. . ಅಲ್ಲಿ ಒ೦ದು ದೊಡ್ದ ಕಿಟಕಿ ಕಾಣಿಸ್ತಾ ಇದೆ ಅಲ್ಲವೆ? . ಅಲ್ಲಿ ಹಳೆಯ ಪುಸ್ತಕಗಳಲ್ಲಿ ಕಾಮ್ರೇಡ್ದ್ ಬಾಕ್ಸ್ಟರ್ ಮುಳುಗಿರುತ್ತಾನೆ "
" ಆದರೆ ಅವರನ್ನು ನಾನು ಹೇಗೆ ಪರಿಚಯ ಮಾಡಿಕೊಳ್ಳಲಿ? ಇಲ್ಲಿ೦ದ ಕೂಗಲು ಆಗುತ್ತದೆಯೇ ?"
' ಹೌದು, ಹಾಗೆ ಮಾಡಲಾಗುವುದಿಲ್ಲ. ಅದು ಬೇಕಿಲ್ಲ. ನನಗೆ ಬಿಡಿ '
ಅಲ್ಲೇ ನೆಲದ ಮೇಲಿದ್ದ ಹೂಕು೦ಡವೊ೦ದನ್ನು ತೆಗೆದುಕೊ೦ಡು ಈವ್ ಏನನ್ನಾದರೂ ಹೇಳುವ ಮೊದಲೇ ಸ್ಮಿತ್ ಅದನ್ನು ಆ ತೆರೆದ ದೊಡ್ಡ ಕಿಟಕಿಯೊಳಗೆ ಎಸೆದನು.
----------------------------------------
ಅದು ನೆಲದಮೇಲೆ ಬಿದ್ದಾಗ ಆದ ಶಬ್ದ ಮತ್ತು ಯಾರಿ೦ದಲೋ ಓ ಎ೦ಬ ಕೂಗು ಸ್ಮಿತ್ ನ ಮುಖದಲ್ಲಿ ನಗುವನ್ನು ತ೦ದಿತು
" ಒಳಗೇ ಇದ್ದಾರೆ !ನಾನು ಅ೦ದುಕೊ೦ಡಿದ್ದ ಹಾಗೆ " ಕಿಟಕಿಯಲ್ಲಿ ಕನ್ನಡಕ ಧರಿಸಿದ ಒ೦ದು ಮುಖ ಕಾಣಿಸಿತು
" ಹಲೋ ! ಬಾಕ್ಸ್ಟರ್ !ಒಳ್ಳೆಯ ಹವ ಅಲ್ಲವೇ ? ಚೆನ್ನಾಗಿದ್ದೀರ?'
ಬಾಕ್ಸ್ತರ್ ಬಾಯಿ ತೆಗೆದು ಏನೋ ಹೇಳುವ ಮು೦ಚೆ ಮತ್ತೆ ಸ್ಮಿತ್
" ದೇವಲೋಕದಿ೦ದ ಬ೦ದವರ ತರಹ ಇದ್ದೀರಿ ಬಾಕ್ಸ್ಟರ್ !ನೋಡಿ, ನಿಮಗೆ ಮಿಸ್ ಹಾಲಿಡೇ ರ ಪರಿಚಯ ಮಾಡಿಕೊಡ್ತಿದ್ದೀನಿ. ಅವರಿಗೆ ಪ್ರಯಾಣದಲ್ಲಿ ಸುಸ್ತಾಗಿತ್ತು ಅದರೆ ಈಗ ಸುರಕ್ಷಿತವಾಗಿ ಬ೦ದು ಸೇರಿದ್ದಾರೆ. ನಿಮಗೆ ಮಿಸ್ ಹಾಲಿಡೇ ಇಷ್ಟವಾಗುತ್ತಾರೆ. ಲೈಬ್ರರಿಯ ಎಲ್ಲ ವಿಷಯಗಳನ್ನು ಆಳವಾಗಿ ತಿಳಿದುಕೊ೦ಡಿದ್ದಾರೆ ಇವರು. ಇವರಿಗಿ೦ತ ಸಮರ್ಥರು ಇಲ್ಲ . "
ಈ ಶಿಫಾರಸು ಬಾಕ್ಸ್ತರನ ಮೇಲೆ ಯಾವ ಪ್ರಭಾವವನ್ನೂ ಬೀರಿದ ಹಾಗೆ ತೋರಲಿಲ್ಲ. .
' ನೀವು ಆ ಹೂ ಕು೦ಡವನ್ನು ಎಸೆದರಾ?' ಬಾಕ್ಸ್ಟರನ ಧ್ವನಿ ಸ್ವಲ್ಪ ಖಾರವಾಗಿಯೇ ಇದ್ದಿತು. .
" ಮಿಸ್ ಹ್ಯಾಲಿಡೇ ಅವರ ಜೊತೆ ಮಾತನಾಡಿ ಅವರು ಏನು ಕೆಲಸ ಮಾಡಬೇಕೆ೦ದು ಹೇಳಲು ಕಾತುರರಾಗಿದ್ದೀರಿ ಎ೦ದು ನನಗೆ ಗೊತ್ತು. ನಾನು ಅವರನ್ನು ಬ೦ಗಲೋವಿನ ಸುತ್ತ ಎಲ್ಲ ಓಡಾಡಿಸಿದ್ದೇನೆ. . ಈಗ ಅವರನ್ನು ಸರೋವರಕ್ಕೂ ಕರೆದುಕೊ೦ಡು ಹೋಗಬೇಕೆ೦ದಿದ್ದೆನೆ. ಅದರ ನ೦ತರ - ಅಲ್ಲವೆ ಮಿಸ್ ಹ್ಯಾಲಿಡೇ - - ನೀವು೦ಟು, ಅವರು೦ಟು'
" ನೀವು ಆ ಹೂಕು೦ಡವನ್ನು ಎಸೆದರೇ? " ಕೆಲವೇ ಪದಗಳ ಪರಿಚಯವಿದ್ದ ಗಿಣಿಯ೦ತಾಗಿದ್ದ ಬಾಕ್ಸ್ಟರ್
"ನನಗೆ ಗೊತ್ತು ನೀವು ಮತ್ತು ಮಿಸ್ ಹ್ಯಾಲಿಡೇ ಒಟ್ಟಿಗೆ ಚೆನ್ನಾಗಿ ಕೆಲಸ ಮಾಡುತ್ತೀರಿ .ಅವರು ಕೆಲಸದಲ್ಲಿ ಹಿ೦ದೇಟು ಹಾಕುವುದೇ ಇಲ್ಲ. ಅವರು ಕ್ರಮವಾಗಿ ಪುಸ್ತ್ಕಕ ಜೋಡಿಸುತ್ತಾ ಹೋಗುತ್ತಾರೆ...ಅಮೇಲೆ ಆ.."
" ನೀವು ಆ ಹೂಕು೦ಡವನ್ನು ......'" ಗಿಣಿ ಮತ್ತೆ ಶುರುಮಾಡಿತ್ತು
" ಅಯ್ತು, ನಾನು ಇನ್ನು ಹೊರಡುತ್ತೇನೆ. ಮಿಸ್ ಹಾಲಿಡೇ ಅವರನ್ನು ಕರೆತರಲು ನಾನು ಒಳ್ಲೆಯ ಸೂಟನ್ನು ಹಾಕಿಕೊ೦ಡಿದ್ದೆ. ಆದರೆ ಸರೋವರದ ಮೇಲೆ ನೌಕಾವಿಹಾರಕ್ಕೆ ಬೇರೆ ಬಟ್ಟೆಗಳೇ ಬೇಕಾಗುತ್ತಲ್ಲವೆ? .. ಇಲ್ಲೇ ಹೋಗಿ ಬ೦ದುಬಿಡುತ್ತೇನೆ.. ಮಿಸ್ ಹಾಲಿಡೇ , ಸರೋವರದ ಹತ್ತಿರ ಬರುತ್ತೀರಲ್ಲ. ?"
" ಇಲ್ಲ,ನಿಮ್ಮ ಜೊತೆ ನೌಕಾವಿಹಾರಕ್ಕೆ ನಾನು ಬರುವುದಿಲ್ಲ.
" ಸರೋವರದ ಹತ್ತಿರ ಇರುತ್ತೀನಿ. ಸ೦ಜೆ ೬ ಗ೦ಟೆ " - ಚಿಕ್ಕನಗೆಯೊ೦ದನ್ನು ಬೀರಿ ಸ್ಮಿತ್ ಸ೦ತೋಷದಿ೦ದ ಕುಪ್ಪಳಿಸಿಕೊ೦ಡು ಮನೆಯ ಒಳಗೆ ಹೋದನು .
ಈವ್ ಅಲ್ಲಿಯೆ ನಿ೦ತಿದ್ದಳು; ಅವಳಿಗೆ ನಗುವೂ ಬರುತ್ತಿತ್ತು,ಜೊತೆಯಲ್ಲಿ ಸ್ವಲ್ಪ ಸ೦ಕೋಚವೂ ಇತ್ತು ! ಬಾಕ್ಸ್ತರ್ ಕೋಪದಿ೦ದ ಇನ್ನೂ ಕಿಟಕಿಯಲ್ಲೇ ನಿ೦ತಿದ್ದ. ಅವನಿಗೆ ಏನು ಹೇಳುವುದು ಎ೦ದು ತಿಳಿಯುತ್ತಿಲ್ಲವಲ್ಲ ಎ೦ದು ಈವ್ ಯೋಚಿಸುತ್ತಿದ್ದಾಗ ಎಮ್ಸ್ವರ್ತ್ ಸಾಹೇಬರು ಪ್ರತ್ಯಕ್ಷವಾದರು. ಕೈನಲ್ಲಿ ಮಣ್ಣು ಕೆತ್ತುವ ಉಪಕರಣವನ್ನಿಟ್ಟುಕೊ೦ಡು ಈವ್ ಳನ್ನು ದಿಟ್ಟಿಸಿ ನೋಡಿದರು. ಅವರಿಗೆ ಮರೆವು ಸರ್ವೆ ಸಾಧಾರಣವಾಗಿದ್ದರೂ ಈವ್ ಳ ಸು೦ದರ ಮುಖವನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಸ೦ತೋಷದಿ೦ದ ಮು೦ದೆ ಬ೦ದು ಅವಳನ್ನು ಸ್ವಾಗತಿಸಿದರು
"ಬಾಮ್ಮ, ಬಾ.. ಏನು ಮಾಡೋಣ ಮರೆವು. ಜ್ಞಾಪಕ ಶಕ್ತಿ ನನಗೆ ಚೆನ್ನಾಗಿಯೇ ಇದೆ. ಆದರೆ ಹೆಸರುಗಳು ಮಾತ್ರ ನೆನಪಾಗುವುದಿಲ್ಲ. ನೀನು .. ಮಿಸ್ ಹಾಲಿಡೇ ಅಲ್ವಾ ! ನೋಡಯ್ಯ ಬಾಕ್ಸ್ತರ್, ಇವರು ಮಿಸ್ ಹ್ಯಾಲಿಡೇ "
" ಮಿಸ್ಟರ್ ಮೆಕ್ ಟಾಡ ಇವರನ್ನು ನನಗೆ ಆಗಲೇ ಪರಿಚಯಿಸಿದ್ದಾರೆ"-ಯಾವ ಉತ್ಸಾಹವೂ ಇಲ್ಲದೆ ಬಾಕ್ಸ್ಟರ್ ಹೇಳಿದ.
" ಹೌದೇ ? ಒಳ್ಳೆಯ ಕೆಲಸವನ್ನೆ ಮಾಡಿದ. ಆದರೆ ಈಗ ಅವನು ಎಲ್ಲಿ? '
"ಒಳಗೆ ಹೋದರು. ಅದಕ್ಕೆ ಮೊದಲು ಒ೦ದು ಹೂಕು೦ಡವನ್ನು ಎತ್ತಿ ನನ್ನತ್ತ ಎಸೆದು ಹೋದರು"
" ಏನೆ೦ದೆ"
" " ನನ್ನತ್ತ ಒ೦ದು ಹೂ ಕು೦ಡವನ್ನು ಎಸೆದರು" ಹೀಗೆ ಹೇಳಿ ಬಾಕ್ಸ್ಟರ್ ಮಾಯವಾದ ನು. .
ಎಮ್ಸ್ವರ್ತ್ ಸಾಹೇಬರಿಗೆ ಎನೂ ತಿಳಿಯಲಿಲ್ಲ. ಈವ್ ಳತ್ತ ತಿರುಗಿ"
" ಮೆಕ್ ಟಾಡ್ ಮೇಲೆ ಬಾಕ್ಸ್ಟರ್ ಏಕೆ ಹೂ ಕು೦ಡವನ್ನು ಎಸೆದ?.. ಇಲ್ಲಿ, ಲೈಬ್ರರಿಯಲ್ಲಿ ಒ೦ದು ಹೂಕು೦ಡವೂ ಇಲ್ಲವಲ್ಲ್ಲ"
ಈವ್ ಳಿಗೆ ಬೇರೆಯದ್ದೇ ವರ್ತಮಾನ ಬೇಕಾಗಿತ್ತು.
" ಅವರ ಹೆಸರು ಮೆಕ್ ಟಾಡ್ ಎ೦ದಿರಾ?"
" ಇಲ್ಲ,ಬಾಕ್ಸ್ಟರ್ , ಅವನು ನನ್ನ ಕಾರ್ಯದರ್ಶಿ"
" ಅಲ್ಲ, ಮಧ್ಯಾಹ್ನ ನನ್ನನ್ನು ಕರೆದುಕೊ೦ಡು ಬರಲು ಸ್ತೇಷನ್ನಿಗೆ ಬ೦ದಿದ್ದರಲ್ಲಾ ಅವರು?'
"ಬಾಕ್ಸ್ಟರ್ ಅಲ್ಲ ಮ್ಮ ನೀನು ಸ್ಟೇಷನ್ನಿನಲ್ಲಿ ನೋಡಿದ್ದು , . ಅದು ಮೆಕ್ಟಾಡ್ ! ಅವನು ನಮ್ಮ ಅತಿಥಿ. ಕಾನ್ಟನ್ಸ್ ಅವನು ಬರುತ್ತಾನೆ ಎ೦ದು ಹೇಳಿದಾಗ ನನಗೆ ಅದು ಇಷ್ಟವಾಗಲಿಲ್ಲ. ನನಗೆ ಕವಿಗಳು ಇಷ್ಟವಿಲ್ಲ. ಆದರೆ ಈತ ನಾನು ನೋಡಿರುವ ಕವಿಗಳಿಗಿ೦ತ ಬೇರೆ ! ನಿಜವಾಗಿಯೂ ಈತ ಬೇರೆ ! ಅದಿರಲಿ ಬಾಕ್ಸ್ಟರ್ ಆವನ ಮೇಲೆ ಹೂಕು೦ಡವನ್ನು ಏಕೆ ಎಸೆದ?. ಅದು ತಪ್ಪು. ! ನಮ್ಮ ಅತಿಥಿಗಳ ಬಗ್ಗೆ ಅವನ ವರ್ತನೆ ಬಹಳ ತಪ್ಪು'
ಒ೦ದೊ೦ದು ಬಾರಿ ಎಮ್ಸ್ವರ್ತ್ ಸಾಹೆಬರು ಈ ಲೋಕದಲ್ಲಿ ಇರದಿದ್ದರೂ ತಮ್ಮ ಕುಟು೦ಬದಲ್ಲಿ ಅತಿಥಿಗಳಿರುವ ಸ್ಥಾನ ದ ಬಗ್ಗೆ ಅವರಿಗೆ ಹೆಮ್ಮೆ ಇದ್ದಿತು.
" ಈ ಮೆಕ್ಟಾಡ್ ಮನುಷ್ಯ ! ಕವಿಯೇ?"
" ಹೌದು, ಹೌದು ! ಅದರಲ್ಲಿ ಯಾವ ಸ೦ದೇಹವೂ ಇಲ್ಲ. ಕೆನೆಡಾದವನ೦ತೆ. ಅಲ್ಲೂ ಕವಿಗಳು ಇದ್ದಾರ೦ತೆ. " ಬಹಳ ನ್ಯಾಯವಾದಿಯ೦ತೆ ಸಾಹೇಬರು ಮು೦ದುವರಿಸಿದರು " ತಪ್ಪೇನು ? ಅದೂ ಬೆಳೆಯುತ್ತಿರುವ ದೇಶವಲ್ಲವೆ ! ನಾನೂ ಅಲ್ಲಿ ಹೋಗಿದ್ದೆ. ೨೦ ವರ್ಷಗಳ ಹಿ೦ದೆ .. ಅಥವಾ ಹತ್ತು ವರ್ಷಗಳೋ .../ ಬಿಡಮ್ಮ ನನಗೆ ಇಸವಿಗಳೆಲ್ಲ ಸರಿಯಾಗಿ ಜ್ಞಾಪಕ ಇರುವುದಿಲ್ಲ. ,.,.. ಈಗ ಮಿಸ್ .. ಮಿಸ್ ಹಾಲಿಡೇ ನನಗೆ ಸ್ವಲ್ಪ ಕೆಲಸವಿದೆ .. ನೀನು ಏನೂ ತಿಳಿದುಕೊಳ್ಳಬಾರದು.. ನಮ್ಮ ಮಾಲಿ ಇದ್ದಾನಲ್ಲ . ಅ೦ಗಸ್ ಮೆಕಲಿಸ್ಟರ್ . ಬಹಳ ಹಠ. ಅವನದ್ದೇ ಮಾತು, ಅವನದ್ದೇ ಪ್ರತಿಷ್ಟೆ. ನೀನು ಮನೆ ಒಳಗೆ ಹೋಗು ನನ್ನ ತ೦ಗಿ ಕಾನ್ಸ್ಟನ್ಸ್ ಇರ್ತಾಳೆ .ಚಾಯ್ ಕೊಡ್ತಾಳೆ.. ಈಗ ಸಮಯ .. ಚಾಯ್ ಇರುತ್ತೆ ಅ೦ದುಕೊ೦ಡಿದ್ದೇನೆ"
" ಮಿಸ್ಟರ್ ಮೆಕ್ಟಾಡ್ ನನ್ನನ್ನು ನೌಕಾ ವಿಹಾರಕ್ಕೆ ಕರೆದಿದ್ದಾರೆ "
" ಸರೋವರದಲ್ಲಿ ? ಹೌದು, ಮತ್ತೆಲ್ಲಿ ನೌಕಾ ವಿಹಾರ ಸಾಧ್ಯ ! ನಿನಗೆ ಸರೋವರ ಇಷ್ಟವಾಗಬಹುದು. ನಾನೂ ಪ್ರತಿ ಬೆಳ್ಳಿಗ್ಗೆ ಒ೦ದು ಮುಳುಗು ಹಾಕಿ ಬರುತ್ತೇನೆ. ಆರೋಗ್ಯಕ್ಕೂ ಒಳೆಯದು, ಚೆನ್ನಾಗಿ ಹಸಿವೂ ಆಗುತ್ತದೆ. ಸ್ವಲ್ಪ ಈಜಿಯೂ ಬರ್ತೇನೆ. .. ನಾನು ಹೋಗಬೇಕು . ಮೆಕಲಿಸ್ಟರ್ ಕಾಯ್ಯುತ್ತಿರುತ್ತಾನೆ. ಒಳ್ಳೆಯದು. ಆಮೇಲೆ ನೊಡೋಣ. ಮಿಸ್.."
ಹಿ೦ದಿನ ಕಾಲದ ಯುದ್ಧಗಳಲ್ಲಿ ತಮಗೆ ತಕ್ಕ ಎದುರಾಳಿ ಸಿಕ್ಕಾಗ ಯೋಧರು ವರ್ತಿಸುತ್ತಿದ್ದ ಹಾಗೆ ಗ೦ಭೀರ ಮುಖವನ್ನಿಟುಕೊ೦ಡು ಎಮ್ಸ್ವರ್ತ್ಸ ಸಾಹೇಬರು ಮಾಲಿಯ ಜೊತೆ ಚರ್ಚೆಗೆ ಹೊರಟರು. ಆದರೆ ಸ್ವಲ್ಪ ಸಮಯದ ಹಿ೦ದೆ ಈವಳ ಮುಖದಲ್ಲಿ ತಾ೦ಡವವಾಡುತ್ತಿದ್ದ ನಗೆ ಈಗ ಪೂರ್ತಿ ಮಾಯವಾಗಿದ್ದಿತು...
-------------------------------------------------------------------------------------------
'