ಈಶ್ವರಚಂದ್ರರ ಸಾಹಿತ್ಯ ಸೇವೆ
ಈಶ್ವರಚಂದ್ರರು ಶಿವಮೊಗ್ಗ ಜಿಲ್ಲೆ, ಚನ್ನಗಿರಿ ತಾಲ್ಲೂಕು ಹೋದಿಗ್ಗೆರೆ ಗ್ರ್ರಾಮದಲ್ಲಿ (ಈಗಿನ ದಾವಣಗೆರೆ ಜಿಲ್ಲೆ) ಎಚ್.ಎನ್.ರಾಮರಾವ್ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರರಾಗಿ ೧೪-೭-೧೯೪೬ರಲ್ಲಿ ಜನಿಸಿದರು. ಅವರು ತಮ್ಮ ವಿದ್ಯಾಭ್ಯಾಸವನ್ನು ಹೋದಿಗ್ಗೆರೆ, ಚನ್ನಗಿರಿ, ಸಾಗರ, ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ನಡೆಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮೊ ಗಳಿಸಿ ಬೆಂಗಳೂರಿನ ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ರ್ಯಾಂಕ್ ಮತ್ತು ಆರು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನಗಳೊಂದಿಗೆ ಪಡೆದರು. ಈಗ ಬೆಂಗಳೂರು ವಿಮಾನ ಕಾರ್ಖಾನೆಯಲ್ಲಿ ಗುಣ ಮತ್ತು ವಿಶ್ವಾಸರ್ಹತೆ ವಿಭಾಗದಲ್ಲಿ ವರಿಷ್ಠ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ತಂದೆ ಎಚ್.ಎನ್. ರಾಮರಾಯರಿಂದ ಕೇಳಿದ ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಕಾವ್ಯಗಳ ಕಥೆಗಳಿಂದ ಪ್ರೇರಣೆಗೊಂಡು ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಈಶ್ವರಚಂದ್ರರು ೧೯೬೫ರಿಂದ ಪತ್ರಿಕೆಗಳಲ್ಲಿ ಸಣ್ಣಕಥೆ, ನಗೆಬರಹ ಮತ್ತು ಲಲಿತ ಪ್ರಬಂಧಗಳನ್ನು ಪ್ರಕಟಿಸಲು ಪ್ರಾರಂಭಿಸಿದರು. ಈವರೆಗೆ ಸುಮಾರು ೨೦೦ ಕತೆಗಳನ್ನು ಪ್ರಕಟಿಸಿದ್ದಾರೆ. ನಾಲ್ಕು ಕಥಾಸಂಕಲನಗಳು, ಎರಡು ಕಾದಂಬರಿಗಳು, ಹನ್ನೆರಡು ಮಕ್ಕಳ ಪುಸ್ತಕಗಳು, ಎರಡು ತಾಂತ್ರಿಕ ಪುಸ್ತಕಗಳು, ಮೂರು ಸಂಪಾದಿತ ಕೃತಿಗಳು ಮತ್ತು ಹನ್ನೆರಡಕ್ಕೂ ಹೆಚ್ಚು ಅನುವಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಏಳು ಕೃತಿಗಳು ಪ್ರಕಟಣೆಗೆ ಕಾದಿವೆ. ಆಂತರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಅನುವಾದ ಯೋಜನೆಗಳಲ್ಲಿ ಪಾಲ್ಗೊಂಡು ಶ್ರೀಮದ್ ಭಾಗವತ( ೧೩೦೦ ಪುಟಗಳು) ಮತ್ತು ಶ್ರೀ ಚೈತನ್ಯಚರಿತಾಮೃತ (೧೪೦೦ ಪುಟಗಳು) ಗ್ರಂಥಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾವಿಸಿದ್ದಾರೆ. ಒಟ್ಟು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಈಶ್ವರಚಂದ್ರರ 'ತೀರ' ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 'ಮಕ್ಕಳ ನರೇಂದ್ರ ವಿವೇಕಾನಂದ' ಕ್ಕೆ ಮಕ್ಕಳ ಸಾಹಿತ್ಯ ಸ್ಪರ್ಧೆಯ ವಿಶೇಷ ಪ್ರಶಸ್ತಿ, 'ಮುನಿತಾಯಿ' ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ ಹಾಗೂ 'ಮುನಿತಾಯಿ' ಕಥೆಗೆ ಚಿತ್ರಪೇಮಿಗಳ ಸಂಘದ ಪ್ರಶಸ್ತಿ ಬಂದಿವೆ. ಈಶ್ವರಚಂದ್ರರಿಗೆ ಹಿಂದೂಸ್ತಾನ್ ವಿಮಾನಕಾರ್ಖಾನೆ, ಏರೋಸ್ಪೇಸ್ ಕನ್ನಡ ಸಂಘ, ರಾಜಮಹಲ್ ವಿಲಾಸ್ ನಿವಾಸಿಗಳ ಕಲ್ಯಾಣಸಂಘಗಳು ರಾಜ್ಯೋತ್ಸವ ಸನ್ಮಾನ ಮಾಡಿವೆ. ಬಡಗನಾಡು ಸಂಘ, ಬೆಂಗಳೂರು ಇವರು ತಮ್ಮ ಸುವರ್ಣಮಹೋತ್ಸವ ವರ್ಷದಲ್ಲಿ ಸನ್ಮಾನಿಸಿದ್ದಾರೆ.
ಈಶ್ವರಚಂದ್ರರ 'ಗುಂಪಿನಲ್ಲಿ ಕಂಡ ಮುಖ' ಕಥಾಸಂಕಲನವು ಪದವಿಪೂರ್ವ ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯ ದ್ವಿತೀಯ ವರ್ಷದ ಬಿ.ಕಾಂ ತರಗತಿಗಳಿಗೆ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಬಿ.ಎಸ್.ಸಿ ತರಗತಿಗೆ ಹೀಗೆ ಒಟ್ಟು ಮೂರು ಬಾರಿ ಪಠ್ಯಪುಸ್ತಕವಾಗಿದೆ.
ಈಶ್ವರಚಂದ್ರರ 'ಮುನಿತಾಯಿ' ಕಥೆಯನ್ನು ಆಧರಿಸಿ ದಿ.ಪುಟ್ಟಣ್ಣ ಕಣಗಾಲ್ ಅವರು 'ಕಥಾಸಂಗಮ' ಎಂಬ ಚಲನಚಿತ್ರ ಮಾಡಿದ್ದಾರೆ. 'ಹಬ್ಬಿದಾ ಮಲೆ ಮಧ್ಯೆದೊಳಗೆ' ಎಂಬ ಕಥೆಯು 'ಕಾಡಿಗೆ ಹೋದವರು' ಎಂಬ ಚಲನಚಿತ್ರವಾಗಿದೆ.
ಈಶ್ವರ ಚಂದ್ರರ ಕಥೆಗಳನ್ನು ಆಧರಿಸಿ 'ಸುಹಾಸಿನಿ' ಮತ್ತು 'ನವ್ಯ ಕಥಾಲೋಕ' ಎಂಬ ಎರಡು ಧಾರವಾಹಿಗಳನ್ನು ಬೆಂಗಳೂರು ದೂರದರ್ಶನವು ಪ್ರಸಾರ ಮಾಡಿದೆ. ಅನೇಕ ಬಿಡಿ ಕಥೆಗಳು ಬೇರೆ ಬೇರೆ ಧಾರವಾಹಿಗಳಲ್ಲಿ ಪ್ರಸಾರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡನುಡಿ' ಪಕ್ಷಪತ್ರಿಕೆಯಲ್ಲಿ ಎರಡು ವರ್ಷ ಗೌರವ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡಕಾರ್ಯಕರ್ತರಾಗಿಯು ಕೆಲಸ ಮಾಡಿದ್ದಾರೆ.
ಈಶ್ವರ ಚಂದ್ರರ ಅನೇಕ ಕಥೆಗಳು ಇಂಗ್ಲೀಷ್, ಹಿಂದಿ, ತೆಲಗು, ತಮಿಳು, ಮಲಯಾಳಂ, ಮರಾಠಿ ಮತ್ತು ಉರ್ದು ಭಾಷೆಗಳಿಗೆ ಅನುವಾದಗೊಂಡಿವೆ. ಇವರು ಅನೇಕ ತಾಂತ್ರಿಕ ಹಾಗೂ ಸಾಹಿತ್ಯಿಕ ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಈಶ್ವರ ಚಂದ್ರರ ವಿಳಾಸ: 'ಪಂಚವಟಿ', ೧೩೩/೨, ೧ನೇ ಮಹಡಿ, ೩ನೇ ಮುಖ್ಯರಸ್ತೆ, ಗೃಹಲಕ್ಷ್ಮಿ ಕಾಲೋನಿ, ೨ನೇ ಹಂತ, ಬಸವೇಶ್ವರನಗರ, ಬೆಂಗಳೂರು-೫೬೦ ೦೭೯
ಮಗು ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳಹೊರಗೆ ಆಡಿದರೆ ಬೀಸಣಿಗೆ ಗಾಳಿ ಸುಳಿದಾವು