ಈಸ್ವರಪ್ಪನವರ ಮನದಾಳದ ನೋವು

ಈಸ್ವರಪ್ಪನವರ ಮನದಾಳದ ನೋವು

ಬರಹ

(ನಗೆ ನಗಾರಿ ರಾಜಕೀಯ ಅನುಕಂಪ ಬ್ಯೂರೋ)

ಅಧಿಕಾರ ಮನುಷ್ಯನನ್ನು ಭ್ರಷ್ಟನಾಗಿಸುತ್ತದೆ, ಸರ್ವಾಧಿಕಾರ ಸಂಪೂರ್ಣ ಭ್ರಷ್ಠನಾಗಿಸುತ್ತದೆ ಎಂದ ಅಮೇರಿಕಾದ ಅಧ್ಯಕ್ಷನಾಗಿದ್ದ ಅಬ್ರಹಾಂ ಲಿಂಕನ್. ಆದರೆ ಅಧಿಕಾರ ಮನುಷ್ಯನನ್ನು ಬುದ್ಧಿ ಭ್ರಷ್ಟನನ್ನಾಗಿಸುತ್ತದೆ, ವಚನ ಭ್ರಷ್ಟನನ್ನಾಗಿಸುತ್ತದೆ ಎನ್ನುವ ಹೊಸ ವಿಚಾರವನ್ನು ಫ್ರಾಯ್ಡ್ ಹಿಂಬಾಲಕರು, ನೀಶೆ ಮುಂಬಾಲಕರು, ಶಾಲಾ ಕಾಲೇಜು ಬಾಲಕರು ಕರ್ನಾಟಕವನ್ನು ನೋಡಿ ತಿಳಿದುಕೊಳ್ಳಬೇಕಿದೆ.

ರಾಜಕಾರಣದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದು ಕ್ಲೀಶೆಯಾಗಿ ಹೋಗಿರುವ ಮಾತು. ಇಂದು ಶತ್ರುವಾದವ ಅನಾಯವಾಸವಾಗಿ ಒಂದು ಆಪರೇಶನ್ ಮಾಡಿಸಿಕೊಂಡು ಬಿಟ್ಟರೆ (ಅದೂ ಜೇಬು ಹಿಡಿಸದಷ್ಟು ಸಂಭಾವನೆಯನ್ನು ಪಡೆದುಕೊಂಡು) ಜೀವದ ಮಿತ್ರನಾಗಿಬಿಡುತ್ತಾನೆ. ಎರಡು ಕುರ್ಚಿಗಳ ನಡುವೆ ಕಡ್ಡಿ ಆಡಿದರೂ ಸಾಕು ಗಳಸ್ಯ ಕಂಠಸ್ಯರಾದ ಮಿತ್ರರೂ ದಾಯಾದಿಗಳಾಗಿ ಬಿಡುತ್ತಾರೆ. ಮಿತೃತ್ವ, ಶತೃತ್ವಗಳನ್ನು ಮರೆಸುವ, ಬೆನ್ನಿಗೆ ಚೂರಿ ಹಾಕಲು ಹೊಂಚಿದವನೊಂದಿಗೆ ಹಾಸಿಗೆ ಹಂಚಿಕೊಳ್ಳುವ, ತಟ್ಟೆಯಲ್ಲಿ ಅನ್ನ ಹಂಚಿಕೊಂಡವನ ಬೆನ್ನಿಗೆ ಚೂರಿ ಹಾಕುವಂತೆ ಮಾಡುವ ಮಹಾ ಮಾಯಾವಿ ರಾಜಕೀಯ.

ಇವೆಲ್ಲಾ ಬೊಗಳೆ ಬದಿಗಿರಲಿ, ಈಗ ಪ್ರಸ್ತುತ ಕರ್ನಾಟಕದ ರಾಜಕೀಯ ಚದುರಂಗದಾಟದಲ್ಲಿ ಕೋಲಾಹಲವನ್ನು ಮೂಡಿಸಿರುವ, ಮೂರನೆಯ ಕಣ್ಣು ತೆರೆದು ಯಡ್ಡಿಯ ನೆಮ್ಮದಿಗೆ ಅಡ್ಡಿಯಾಗಿರುವ ಈಸ್ವರಪ್ಪನವರ ಬಗ್ಗೆ 1 ಪತ್ರಿಕೆಗಳು ದಿನಕ್ಕೊಂದು ವರದಿಯನ್ನು ಮಾಡುತ್ತಿವೆ. ಟಿವಿಗಳು ಗಂಟೆಗೊಂದು ಸುದ್ದಿ ಬಿತ್ತರಿಸುತ್ತಿವೆ. ತನ್ನನ್ನು ಸಮರ್ಥಿಸಿಕೊಳ್ಳಲು ಅಸಹಾಕನಾದ ವ್ಯಕ್ತಿ ಕಟ್ಟ ಕಡಗೆ ಬಳಸುವ ಅಸ್ತ್ರ : ನಮ್ಮಪ್ಪನಾಣೆ, ನನ್ನಾಣೆ, ನನ್ನ ಮಕ್ಕಳಾಣೆ ಎಂಬ ಆಣೆ ಪ್ರಮಾಣವೆಂಬ ಕೆಲಸಕ್ಕೆ ಬಾರದ ತಂತ್ರದಂತೆ ‘ನನ್ನ ಹೇಳಿಕೆಯನ್ನು ಪತ್ರಿಕೆಗಳು ತಿರುಚಿವೆ’ ಎಂಬ ಹಳೇ ಸವಕಲು ತಂತ್ರವನ್ನು ಈಸ್ವರಪ್ಪ ಬಳಸಿ ಸುಸ್ತಾಗಿದ್ದಾರೆ.

ee ಸಲಿಗೆ ಈಸ್ವರಪ್ಪ ಅಂದದ್ದೇನು, ಅವರ ಮನದಾಳಾದ ಅಳಲೇನು ಎಂದು ಅರಿಯುವ ಒಂದು ಪ್ರಾಮಾಣಿಕ, ವಿಪಕ್ಷ ದಳ ಪ್ರಾಯೋಜಿತ ಪ್ರಯತ್ನ ಇಲ್ಲಿದೆ. ಈ ಈಸ್ವರಪ್ಪ ಅಂದದ್ದು:

ಶಿವಮೊಗ್ಗದಲ್ಲಿ ಕಡಿಮೆ ಮತ ಬಂದಿತ್ತು ಎಂಬ ತಮ್ಮ ಮೇಲಿನ ಆರೋಪ ನಿರಾಧಾರವಾದದ್ದು. ರಾಘಣ್ಣಂಗೆ ಬಿದ್ದ ಮತಗಳಲ್ಲಿ ಶಿವಮೊಗ್ಗದ ಪಾಲೇ ಹೆಚ್ಚು. ಚುನಾವಣೆಯಲ್ಲಿ ಹಣ, ಹೆಂಡ ವ್ಯಾಪಕವಾಗಿ ಹಂಚಿಕೆಯಾಯಿತು. ಇದರ ತನಿಖೆ ಶಿವಮೊಗ್ಗದಿಂದಲೇ ಆಗಬೇಕು ಎಂಬುದು ಅವರ ವಾದ.

ಅವರ ವಾದದಲ್ಲಿನ ತಿರುಳನ್ನು ಗಮನಿಸಿ, ಹಣ ಹೆಂಡದ ವ್ಯಾಪಕ ಹಂಚಿಕೆಯಿಂದ ಶಿವಮೊಗ್ಗದಲ್ಲಿ ಹೆಚ್ಚು ಮತ ಬಂದಿದೆ. ರಾಘಣ್ಣ ಗೆದ್ದಾಗಿದೆ. ಇದಕ್ಕೆ ತಮ್ಮನ್ನು ಅಭಿನಂದಿಸಿ, ರಾಜಕೀಯ ಚದುರಂಗದಾಟದ ಮೇಧಾವಿ ಎಂದು ಸನ್ಮಾನಿಸಬೇಕು. ಅದು ಬಿಟ್ಟು ಹಣ, ಹೆಂಡ ಖರ್ಚು ಮಾಡಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ ಮೇಲೂ ಕ್ರೆಡಿಟ್ ಕೊಡದೆ ಭಾರತಕ್ಕೆ ಆಸ್ಕರ್ ಬಂದದ್ದಕ್ಕೇ ತಾವೇ ಕಾರಣ ಎಂದು ಬೀಗುವ ಕಾಂಗ್ರೆಸ್ಸಿನವರ ಹಾಗೆ ಜಯದ ಶ್ರೇಯಸ್ಸನ್ನು ತಮ್ಮ ಮೇಲೆ ಹೇರಿಕೊಂಡಿದ್ದು ನ್ಯಾಯವೇ?

ಯಾವುದೋ ಉನ್ಮತ್ತ ದುರ್ಬಲ ಘಳಿಗೆಯಲ್ಲಿ ಈಸ್ವರಪ್ಪನವರು ಹೊರ ಹಾಕಿದ ಈ ಸತ್ಯ ಸಂಗತಿಗಳನ್ನು ಎಲ್ಲರೂ ಇಷ್ಟು ಗಂಭೀರವಾಗಿ ಪರಿಗಣಿಸಿರುವುದು ಸೋಜಿಗವಾಗಿ ಕಾಣುತ್ತದೆ. ಸತ್ಯವೆಂದರೇನೆಂದು ತಿಳಿಯದ ಅಧಿಕಾರರೂಢರು, ‘ಸತ್ಯ ಸತ್ತ ಮೇಲೆ ಜಯತೇ’ ಎಂದು ನಂಬಿಕೊಂಡ ವಿಪಕ್ಷಗಳು, ಮಿಥ್ಯವೇ ನಮ್ಮ ತಾಯಿ, ತಂದೆ, ಮಿಥ್ಯವೇ ನಮ್ಮ ಬಂಧು ಬಳಗವೆನ್ನುವ ಮಾಧ್ಯಮಗಳು ಅಪ್ಪಿ ತಪ್ಪಿ ಹೊರಬಿದ್ದ ಸತ್ಯಕ್ಕಾಗಿ ಇಷ್ಟು ತಲೆ ಕೆಡಿಸಿಕೊಂಡಿರುವುದು ಸರ್ವಥಾ ಬುದ್ಧಿವಂತಿಕೆಯ ಲಕ್ಷಣವಲ್ಲ.